ದೆಹಲಿ; ಜ, 13 : ಸುಪ್ರಿಂ ಕೋರ್ಟ್ ಜನವರಿ 12ರಂದು ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವ ಮತ್ತು ಒಂದು ಸಮಿತಿಯನ್ನು ರಚಿಸುವ ಆದೇಶವನ್ನು ಕೊಟ್ಟಿದೆ. ಆದರೆ ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆಯುತ್ತದೆ. ಜನವರಿ 13, 18 ಮತ್ತು 23 ರ ಕಾರ್ಯಚರಣೆಗಳು ನಡೆಯುತ್ತವೆ, ಜನವರಿ 26 ರ ರೈತರ ಪರೇಡ್ ಕೂಡ ಶಾಂತಿಯುತವಾಗಿ ನಡೆಯುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿವೆ.
ಒಂದು ಮಧ್ಯಂತರ ಕ್ರಮವಾಗಿ ಮೂರು ಕಾಯ್ದೆಗಳ ಜಾರಿಯನ್ನು ಅಮಾನತಿನಲ್ಲಿಟ್ಟಿರುವುದು ಸ್ವಾಗತಾರ್ಹವಾದರೂ, ರೈತ ಸಂಘಟನೆಗಳು ಇದನ್ನು ಕೇಳಿಲ್ಲ, ಏಕೆಂದರೆ ಇದೇನೂ ಪರಿಹಾರವಲ್ಲ, ಜಾರಿಯನ್ನು ಯಾವಾಗ ಬೇಕಾದರೂ ಮತ್ತೆ ಆರಂಭಿಸಬಹುದು. ಇವನ್ನು ರದ್ದು ಮಾಡಲೇಬೇಕು, ಏಕೆಂದರೆ ರೈತರು ಮತ್ತು ಭಾರತದ ಜನತೆ ಇದಕ್ಕೆ ವಿರುದ್ಧವಾಗಿದ್ದಾರೆ ಎಂಬುದನ್ನು ಸರಕಾರ ಅರಿಯಬೇಕು ಎಂದು ರೈತ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.
ಇದನ್ನು ಓದಿ : “ಸುಪ್ರಿಂ ಕೋರ್ಟಿಗೆ ಕೃತಜ್ಞತೆ, ಆದರೆ ಅದರ ಮಧ್ಯಸ್ಥಿಕೆ ಬೇಡ, ಕಾಯ್ದೆಗಳ ರದ್ಧತಿಯಷ್ಟೇ ಬೇಕು”- ಸಂಯುಕ್ತ ಕಿಸಾನ್ ಮೋರ್ಚಾ
ಸುಪ್ರಿಂ ಕೋರ್ಟ್ ತಾನಾಗಿಯೆ ಒಂದು ಸಮಿತಿಯನ್ನು ರಚಿಸಿದೆ. ಈ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ, ತಾವು ಈ ಸಮಿತಿಯ ಕಲಾಪಗಳಲ್ಲಿ ಭಾಗವಹಿಸುವುದಿಲ್ಲಎಂದು ಈ ಮೊದಲು ಹೇಳಿರುವುದನ್ನು ರೈತರ ಸಂಘಟನೆಗಳು ಪುನರುಚ್ಚರಿಸಿವೆ. ಅಲ್ಲದೆ, ಈ ಸಮಿತಿಯ ಸದಸ್ಯರ ಹೆಸರುಗಳೇ ರೈತ ಸಂಘಟನೆಗಳ ಒಂದು ಸಂದೇಹವನ್ನು ಪುಷ್ಟೀಕರಿಸಿವೆ ಎಂದು ಅವು ಹೇಳಿವೆ. ಸಮಿತಿಯ ರಚನೆಯಲ್ಲೂ ಸುಪ್ರಿಂ ಕೋರ್ಟನ್ನು ವಿವಿಧ ಶಕ್ತಿಗಳು ದಾರಿ ತಪ್ಪಿಸುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಏಕೆಂದರೆ ಈ ಸಮಿತಿಯ ಸದಸ್ಯರೆಲ್ಲರೂ ಈ ಮೂರು ಕಾಯ್ದೆಗಳ ಬೆಂಬಲಿಗರು, ಅವನ್ನು ಸಕ್ರಿಯವಾಗಿ ಪ್ರತಿಪಾದಿಸುತ್ತಿರುವವರು. ಈ ಮೊದಲು ಸರಕಾರವೇ ಇಂತಹ ಒಂದು ಸಮಿತಿಯ ಪ್ರಸ್ತಾವವನ್ನು ಮುಂದಿಟ್ಟಾಗ ರೈತ ಸಂಘಟನೆಗಳು ಅದನ್ನು ತಿರಸ್ಕರಿಸಿದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ರೈತರ ಸಂವಾದ ಇರುವುದು ಒಂದು ಚುನಾಯಿತ ಸರಕಾರದೊಂದಿಗೆ, ಅದರ ಧೋರಣೆಯ ದಿಕ್ಕಿನ ಬಗ್ಗೆ ಮತ್ತು ಅದರಿಂದಾಗಿ ಬರುತ್ತಿರುವ ಕಾಯ್ದೆಗಳ ಬಗ್ಗೆ, ಎಂದು ರೈತ ಸಂಘಟನೆಗಳು ಹೇಳಿವೆ .
ಇದನ್ನು ಓದಿ : ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಿರತ 108 ರೈತರ ಮರಣ
ಈ ಮೂರು ಕಾಯ್ದೆಗಳು ಕೃಷಿ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಗಳ ಮೇಲೆ ಕಾರ್ಪೊರೇಟ್ ಹತೋಟಿಗೆ ದಾರಿ ಮಾಡಿಕೊಡುತ್ತವೆ, ಇದರಿಂದಾಗಿ ಕೃಷಿ ಲಾಗುವಾಡುಗಳ ವೆಚ್ಚಗಳು ಹೆಚ್ಚುತ್ತವೆ, ರೈತರ ಸಾಲದ ಹೊರೆಗಳು ಹೆಚ್ಚುತ್ತವೆ, ಬೆಳೆಗಳ ಬೆಲೆಗಳು ಇಳಿಯುತ್ತವೆ, ರೈತರ ನಷ್ಟಗಳು ಹೆಚ್ಚುತ್ತವೆ, ಸರಕಾರದ ಖರೀದಿ ಇಳಿಯುತ್ತದೆ, ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೊನೆಗೊಳಿಸುತ್ತದೆ, ಜನಗಳು ಆಹಾರಕ್ಕಾಗಿ ಮಾಡಬೇಕಾದ ವೆಚ್ಚಗಳನ್ನು ಹೆಚ್ಚಿಸುತ್ತದೆ, ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಗಳು ಹೆಚ್ಚುತ್ತವೆ, ಹಸಿವಿನಿಂದ ಸಾವುಗಳು ಹೆಚ್ಚುತ್ತವೆ, ಸಾಲಗಳನ್ನು ತೀರಿಸಲು ಜಮೀನಿನಿಂದ ಒಕ್ಕಲೆಬ್ಬಿಸುವುದು ಹೆಚ್ಚುತ್ತದೆ ಎಂಬುದೆಲ್ಲವನ್ನೂ ರೈತರು ಕೇಂದ್ರ ಸರಕಾರಕ್ಕೆ ವಿವರವಾಗಿ ತಿಳಿಸಿದ್ದಾರೆ. ಸರಕಾರ ಈ ಕಟು ಸಂಗತಿಗಳನ್ನೆಲ್ಲ ಜನಗಳಿಂದ ಮತ್ತು ನ್ಯಾಯಾಲಯಗಳಿಂದ ಮುಚ್ಚಿಟ್ಟಿದೆ ಎಂದು ಈ ಹೋರಾಟದಲ್ಲಿ ತೊಡಗಿರುವ ರೈತ ಸಂಘಟನೆಗಳು ಹೇಳಿವೆ
ಇದನ್ನು ಓದಿ : ಜನವರಿ 18-ಮಹಿಳಾ ರೈತ ದಿನಾಚರಣೆಗೆ ಮಹಿಳಾ ಸಂಘಟನೆಗಳ ಬೆಂಬಲ
ರೈತರ ಗಣತಂತ್ರ ದಿನದ ಪರೇಡ್ ಬಗ್ಗೆಯೂ ಸರಕಾರ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ತಾವು ಪ್ರಕಟಿಸಿರುವ ಕಾರ್ಯಕ್ರಮ ದಿಲ್ಲಿಯಲ್ಲಿ ಮತ್ತು ದೇಶಾದ್ಯಂತ ಶಾಂತಿಯುತವಾಗಿ ನಡೆಯುತ್ತದೆ ಎಂದು ಹೇಳಿರುವ ರೈತ ಸಂಘಟನೆಗಳು ಅದಕ್ಕೆ ಮೊದಲು ಜನವರಿ 13ರಂದು ಕಾಯ್ದೆಗಳ ಪ್ರತಿಗಳನ್ನು ಸುಡುವ ಕಾರ್ಯಕ್ರಮ, 18ರಂದು ರೈತ ಮಹಿಳಾ ದಿನಾಚರಣೆ, ಜನವರಿ 23ರಂದು ಆಝಾದ್ ಹಿಂದ್ ರೈತ ದಿನಾಚರಣೆ ಮತ್ತು ರಾಜ್ಯಗಳಲ್ಲಿ ಮಹಾಪಡಾವ್‌ಗಳ ಕಾರ್ಯಕ್ರಮಗಳೂ ಈ ಮೊದಲು ಪ್ರಕಟಿಸಿದಂತೆಯೇ ನಡೆಯುತ್ತವೆ ಎಂದು ಹೇಳಿವೆ.