ರೈತರ ಚಳುವಳಿಯ ವಿರುದ್ದ ಬಿಜೆಪಿ ಮತ್ತು ಸಂಘಪರಿವಾರದ ಹಲವು ಸುಳ್ಳು ಪ್ರಚಾರಗಳು

ರೈತರ ಚಳುವಳಿಯ ವಿರುದ್ದ ಬಿಜೆಪಿ ಮತ್ತು ಸಂಘಪರಿವಾರದ ಹಲವು ಸುಳ್ಳುಪ್ರಚಾರಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವು ವಾದಗಳನ್ನು ಬಯಲಿಗೆಳೆದು ವಾಸ್ತವ ಏನಿದೆ ಎಂಬುದನ್ನು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಮುಖಂಡರಾದ ಟಿ.ಯಶವಂತ್ ವಿವರಿಸಿದ್ದಾರೆ.

1. APMC ನಿಷೇಧವಿಲ್ಲವೆಂದರೂ ಪ್ರತಿಭಟನೆ ಏಕೆ?

ರೈತರ ಉತ್ಪನ್ನಗಳ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಕಾಯ್ದೆ 2020 ಹಾಗೂ ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಈ ಎರಡೂ ಕಾಯ್ದೆಗಳು ಎಪಿಎಂಸಿ ಯ ಹೊರಗಡೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪೂರ್ಣ ಕಾನೂನಿನ ರಕ್ಷಣೆ ಒದಗಿಸಿವೆ.ಹೊರಗಡೆ ನಡೆಯುವ ಯಾವುದೇ ವಹಿವಾಟನ್ನು ಎಪಿಎಂಸಿ ಸೆಸ್ ನಿಂದ ಮುಕ್ತಿಗೊಳಿಸಿವೆ ಮಾತ್ರವಲ್ಲ ಎಪಿಎಂಸಿ ಪ್ರಾಂಗಣದ ಒಳಗಡೆಯೂ ಗಣನೀಯ ಪ್ರಮಾಣದಲ್ಲಿ ಸೆಸ್ ಅನ್ನು ಇಳಿಕೆ ಮಾಡಿದೆ.(2% ಯಿಂದ 35 ಪೈಸೆ %)

ರೈತರ ಉತ್ಪನ್ನಗಳನ್ನು ಖರೀದಿಸಬೇಕಿದ್ದರೆ ಆಯಾ ವ್ಯಾಪ್ತಿಯ, ಎಪಿಎಂಸಿ ಸಮಿತಿಗಳ ಹಾಗೂ ಕೃಷಿ ಮಾರುಕಟ್ಟೆ ನಿರ್ಧೆಶನಾಲಯದ ಲೈಸೆನ್ಸ್ ಹೊಂದಬೇಕಾದ ಅಗತ್ಯ ಈ ಹೊಸ ಕಾಯ್ದೆಗಳಿಂದಾಗಿ ಇಲ್ಲ. ಕೇವಲ ಪಾನ್ ಕಾರ್ಡ್ ಇರುವ ವಿಳಾಸ ಸ್ಪಷ್ಟಪಡಿಸಬೇಕಾದ ಯಾವುದೇ ಅಗತ್ಯ ಇಲ್ಲದ ಯಾರೂ ಬೇಕಾದರೂ ಖರೀದಿ ವ್ಯವಹಾರಕ್ಕೆ ಪ್ರವೇಶ ಪಡೆಯಬಹುದು. ಮತ್ತು ಕನಿಷ್ಠ ಬೆಂಬಲ ಬೆಲೆ ಯನ್ನು ಪಾವತಿಸಬೇಕಾದ ಯಾವುದೇ ಹೊಣೆಗಾರಿಕೆ ಮತ್ತು ನಿಯಂತ್ರಣ ವನ್ನು ಈ ಹೊಸ ಕಾಯ್ದೆಗಳು ಕಿತ್ತು ಹಾಕಿವೆ.

ಸಾಲು ಸಾಲಾಗಿ ಖಾಸಗಿ ಮಾರುಕಟ್ಟೆಗಳು ಹಾಗೂ ಅವುಗಳ ದಲ್ಲಾಳಿಗಳು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ರಕ್ಷಣೆ ಇಲ್ಲದ ಹಾಗೂ ಸ್ಪರ್ದಾತ್ಮಕ ಪೈಪೋಟಿಯೇ ಇರದ ಹೊಸ ವ್ಯವಸ್ಥೆ ಯಲ್ಲಿ ಸಹಜವಾಗಿ ಖರೀದಿಸಲು ಬಯಸುತ್ತವೆ. ಒಂದು ಕಡೆ ಖಾಸಗಿ ಮಾರುಕಟ್ಟೆ ಗಳಿಗೆ ಪ್ರೋತ್ಸಾಹ, ಉತ್ತೇಜನ ಬಲ ನೀಡುತ್ತಾ ಇನ್ನೊಂದು ಕಡೆ ಎಪಿಎಂಸಿ ಗಳ ನಿರ್ವಹಣೆಗೂ ತೊಂದರೆ ಆಗುವಂತೆ ಸೆಸ್ ನ ಇಳಿಕೆ ಮಾಡಿರುವುದರಿಂದ ಯಾವುದೇ ವಹಿವಾಟು ಇಲ್ಲದೇ ಮತ್ತು ಕಡ್ಡಾಯ ಖರೀದಿಯ ಯಾವುದೇ ಒತ್ತಡ ಇಲ್ಲದೇ ಎಪಿಎಂಸಿ ಗಳು ಪಾಳು ಬೀಳುತ್ತವೆ. ಎಪಿಎಂಸಿ ಯಲ್ಲಿ ನೋಂದಾಯಿಸಿಕೊಂಡ ವರ್ತಕರೂ ಕೂಡ ತಮ್ಮ ಲೈಸೆನ್ಸ್ ಅನ್ನು ನವೀಕರಿಸುವುದಿಲ್ಲ.

ಇದು ಸರ್ಕಾರಿ ಶಾಲೆ ಮುಚ್ಚದೇ ಖಾಸಗಿ ಶಾಲೆಗಳಿಗೆ ಎಲ್ಲಾ ರಕ್ಷಣೆ ನೀಡಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳೇ ಇಲ್ಲದೇ ಇರುವ ಪರಿಸ್ಥಿತಿ ನಿರ್ಮಾಣ ಮಾಡಿದಂತೆ.

ಈ ಎರಡೂ ಎಪಿಎಂಸಿ ಕಾಯ್ದೆಗಳಲ್ಲಿ ಎಪಿಎಂಸಿಗಳು ತನ್ನಿಂದ ತಾನೇ ಮುಚ್ಚಿಹೋಗುವ ಅಂಶಗಳು ಸ್ಪಷ್ಟವಾಗಿ ಇವೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಮೇಲೆ ರೈತರ ಹಿತ ಕಾಪಾಡಲು ನಿಯಂತ್ರಣ ಸಾಧಿಸುವುದಕ್ಕೆ ಎಪಿಎಂಸಿ ವ್ಯವಸ್ಥೆ ಬೇಕಿರುತ್ತೆ. ಮಾರುಕಟ್ಟೆಯನ್ನು ಅನಿಯಂತ್ರಿತಗೊಳಿಸಿದಾಗ ಎಪಿಎಂಸಿ ವ್ಯವಸ್ಥೆಯ ಅಗತ್ಯ ಬರುವುದೇ ಇಲ್ಲ ಎಂಬುದು ಸ್ವಯಂ ವೇದ್ಯ .ಎಪಿಎಂಸಿ ನಿಷೇಧವಿಲ್ಲ ಎನ್ನುವುದು ಒಂದು ದೊಡ್ಡ ಸುಳ್ಳು.
ಹಾಗಾಗಿಯೇ ರೈತರು ಪ್ರತಿಭಟಿಸುತ್ತಿದ್ದಾರೆ.

ಎಪಿಎಂಸಿಗೆ ಸಂಬಂಧಿಸಿದ ಹೊಸ ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕಡ್ಡಾಯ ಎಂಬುದನ್ನು ಖರೀದಿದಾರರಿಗೆ ಕಡ್ಡಾಯಗೊಳಿಸಿಲ್ಲ ಏಕೆ? ವರ್ತಕರು ತೂಕ ಮತ್ತು ದರದಲ್ಲಿ ಮೋಸ ಮಾಡಿದರೆ ಹಾಗೂ ಹಣ ಪಾವತಿಸದಿದ್ದರೆ ಮತ್ತು ಈ ಸಂಬಂಧ ಯಾವುದೇ ವಿವಾದ ಬಂದರೆ ಕೋರ್ಟ್ ಗೆ ಹೋಗುವಂತಿಲ್ಲ ಮತ್ತು ಅಧಿಕಾರಶಾಹಿಯ ತೀರ್ಮಾನವನ್ನು ಒಪ್ಪಲೇಬೇಕು ಎಂದು ಏಕೆ ಈ ಕಾಯ್ದೆ ನಿರ್ಬಂಧ ವಿಧಿಸಿದೆ? ಇದಕ್ಕೆ ಸರ್ಕಾರದ ಹತ್ತಿರ ಹಾಗೂ ಬಿಜೆಪಿ ಬಾಯಿಬಡುಕರ ಹತ್ತಿರ ಉತ್ತರವಿಲ್ಲ.

2) ತನಗಿಷ್ಟ ಬಂದವರಿಗೆ ಮಾರಾಟ ಮಾಡುವುದು ತಪ್ಪೇ?

ಖಂಡಿತವಾಗಿ ತಪ್ಪಿಲ್ಲ. ಆದರೆ ಪ್ರತಿಯೊಬ್ಬ ರೈತನೂ ತನಗಿಷ್ಟ ಬಂದವರಿಗೆ ಮಾರಾಟ ಮಾಡಲು ಅಥವಾ ಉಚಿತವಾಗಿ ವಿತರಿಸಲು ಇಲ್ಲಿಯವರೆಗೆ ಯಾವುದೇ ಅಡ್ಡಿ ಇರಲಿಲ್ಲ. ರೈತರು ಉತ್ಪಾದಿಸುವ ಒಟ್ಟು ಉತ್ಪನ್ನಗಳಲ್ಲಿ ಸುಮಾರು ಶೇಕಡಾ 20 ರಿಂದ 25 ರಷ್ಟು ಪ್ರಮಾಣ ಮಾತ್ರ ಎಪಿಎಂಸಿಗಳಲ್ಲಿ ಮಾರಾಟ ಆಗುತ್ತಿರುವುದು. ಅಂದರೆ ಶೇಕಡಾ 75 ರಿಂದ 80 ರಷ್ಟು ರೈತರ ಉತ್ಪನ್ನಗಳು ಈಗಲೂ ಎಪಿಎಂಸಿಗಳ ಹೊರಗಡೆಯೇ ಮಾರಾಟ ಆಗುತ್ತಿವೆ. ಎಪಿಎಂಸಿ ಮಾರುಕಟ್ಟೆಯ ದರ ಹೊರಗಡೆ ದರವನ್ನು ಪ್ರಭಾವಿಸುತ್ತಿದೆ. ಎಪಿಎಂಸಿಯೇ ಇಲ್ಲದೇ ಇದ್ದರೆ ಆಧಾರಿತ ಬೆಲೆಯೇ ಇರುವುದಿಲ್ಲ ಹಾಗೂ ಬೆಂಬಲ ಬೆಲೆಗೆ ಆಗ್ರಹಿಸಿ ಕಡ್ಡಾಯ ಖರೀದಿಗೆ ಒತ್ತಾಯಿಸುವ ಅವಕಾಶವೇ ಇರುವುದಿಲ್ಲ.

ಹಿಂದಿನ ಎಪಿಎಂಸಿ ಕಾಯ್ದೆಯಲ್ಲೇ ತನ್ನ ವ್ಯಾಪ್ತಿಯಲ್ಲಿ ಅಲ್ಲದ ಮತ್ತೊಂದು ಎಪಿಎಂಸಿಯಲ್ಲಿ ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಬೇಕಿದ್ದರೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಸಾಗಾಣಿಕೆಗೆ ಒಂದು ರಹದಾರಿ ಪತ್ರ ಬೇಕಿತ್ತು. ಏಕೆಂದರೆ ವರ್ತಕ ಸೆಸ್ ಪಾವತಿಸದೇ ಖರೀದಿಸಿದ್ದರೆ ಅದು ಅಪರಾಧವಾಗಿದ್ದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ ಆಗದೇ ಇರುವುದನ್ನು ಖಾತರಿ ಪಡಿಸಲು ಈ ಪದ್ದತಿ ಇತ್ತು. ಸೆಸ್ ಇಲ್ಲದೇ ಇದ್ದ ಮೇಲೆ ಸಾಗಾಣಿಕೆ ಚೆಕ್ ಮಾಡುವ ಅಗತ್ಯವೇ ಇಲ್ಲ .ಇದನ್ನು ಸಾಗಾಣಿಕೆ ಸ್ವಾತಂತ್ರ್ಯ ಎಂದರೆ ಅದಕ್ಕಿಂತ ಅಪಹಾಸ್ಯ ಇದೆಯೇ.

3) ದಲ್ಲಾಳಿ ಮುಕ್ತ ಮಾರುಕಟ್ಟೆ ಸೃಷ್ಟಿಯಾದರೆ ನಿಮಗ್ಯಾಕೆ ನೋವು?

ಎಪಿಎಂಸಿಯಲ್ಲಿ ಮಾತ್ರ ದಲ್ಲಾಳಿ ಇರುತ್ತಾರೆ ಖಾಸಗಿ ಮಾರುಕಟ್ಟೆಗಳಲ್ಲಿ ಇರುವುದಿಲ್ಲ ಎಂಬುದು ವಾಸ್ತವಾಂಶ ಅಲ್ಲ. ಯಾವುದೇ ಎರಡು ಪಾರ್ಟಿಗಳ ನಡುವೆ ಸಂಬಂಧ ಕುದುರಿಸಲು ಮಧ್ಯವರ್ತಿಗಳು ಬಂದೇ ಬರುತ್ತಾರೆ. ಎಪಿಎಂಸಿಯಲ್ಲಿ ದಲ್ಲಾಳಿಗಳಿದ್ದರೆ ಖಾಸಗಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಸರಣಿಯೇ ಇರುತ್ತದೆ. ಒಂದೊಂದು ಬೆಳೆಗೂ ಆ ಬೆಳೆಗಳ ವಿವಿಧ ತಳಿವಾರು ದಲ್ಲಾಳಿಗಳೂ ಸೃಷ್ಟಿಯಾಗುತ್ತಾರೆ. ನಿಯಂತ್ರಿತ ವ್ಯವಸ್ಥೆಯಲ್ಲಿ ಕೇವಲ ಲಕ್ಷ ಅಥವಾ ಕೆಲವು ಕೋಟಿಗಳಷ್ಟು ವ್ಯವಹರಿಸುವ ದಲ್ಲಾಳಿಗಳನ್ನು ನಿಯಂತ್ರಿಸಲು ಸಾಧ್ಯವಾಗದ ಮತ್ತು ರೈತರ ಅಸಹಾಯಕತೆಯನ್ನು ನಿವಾರಿಸಲಾಗದೆ ಬಿಜೆಪಿ ಸರ್ಕಾರ ವಿಫಲವಾಗಿದೆ. ಇನ್ನು ನೂರಾರು ಸಾವಿರಾರು ಕೋಟಿ ರೂಗಳ ಹೊಸ ದಲ್ಲಾಳಿಗಳನ್ನು ಹೇಗೆ ನಿಯಂತ್ರಿಸುತ್ತದೆ?

ಯಾವುದೇ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಇರದೇ ಇರಲು ಸಾಧ್ಯವೇ ಇಲ್ಲ. ಏನಿದ್ದರೂ ಈ ದಲ್ಲಾಳಿಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಬಲಗೊಳಿಸಬೇಕು. ಅದಕ್ಕಾಗಿ ಎಪಿಎಂಸಿ ಮತ್ತಷ್ಟು ರೈತ ಸ್ನೇಹಿಯಾಗಿ ಬಲಗೊಳ್ಳಬೇಕೇ ಹೊರತು ಮುಚ್ಚುವುದು ಪರಿಹಾರ ಅಲ್ಲ. ದಲ್ಲಾಳಿಗಳು ಇದ್ದೇ ಇರುತ್ತಾರೆ, ಅವರನ್ನು ನಿಯಂತ್ರಿಸಬೇಕೇ ಬೇಡವೇ ಎಂಬುದೇ ಎಪಿಎಂಸಿ ಬೇಕೇ ಬೇಡವೇ ಎಂಬ ಪ್ರಶ್ನೆಯಲ್ಲಿ ಅಡಗಿರುವುದು.

ದಲ್ಲಾಳಿ ಇಲ್ಲದೇ ಇರುವ ಒಂದು ವ್ಯವಸ್ಥೆ ಅಥವಾ ಒಂದು ವ್ಯಾಪಾರವನ್ನು ಮೋದಿ ಸರ್ಕಾರಕ್ಕೆ ತೋರಿಸಲು ಸಾಧ್ಯವೇ? ಅಸಲಿಗೆ ಬಿಜೆಪಿ ಪಕ್ಷವೇ ಮೂಲತಃ ದಲ್ಲಾಳಿಗಳ ಪಕ್ಷವಲ್ಲವೇ? ಆರಂಭದಲ್ಲಿ ಸಣ್ಣಪುಟ್ಟ ದಲ್ಲಾಳಿಗಳಿಗೆ ಸೇವೆ ಸಲ್ಲಿಸುತ್ತಿದ್ದ ಬಿಜೆಪಿ ಈಗ ಬೃಹತ್ ಕಾರ್ಪೊರೇಟ್ ಬಂಡವಾಳದಾರರ ಸೇವೆ ಸಲ್ಲಿಸಲು ಗುಣವನ್ನು ಬದಲಾಯಿಸಿಕೊಳ್ಳುತ್ತಿದೆ.

4) ‘ ಗುತ್ತಿಗೆ’ ಕೃಷಿ ಹಲವು ದಶಕಗಳಿಂದ ನಡೆಯುತ್ತಿರುವಾಗ ಮಾಡದ ಪ್ರತಿಭಟನೆ ಈಗ್ಯಾಕೆ?

‘ಗುತ್ತಿಗೆ’ ಕೃಷಿ ಹಲವು ದಶಕಗಳಿಂದ ನಡೆಯುತ್ತಿದೆ. ಕರ್ನಾಟಕ ಭೂ ಸುಧಾರಣಾ ಕಾನೂನಿನಲ್ಲಿ 2020 ರ ತಿದ್ದುಪಡಿ ಕಾಯ್ದೆ ಬರುವವರೆಗೂ ಕಾನೂನಿನಲ್ಲಿ ‘ಗುತ್ತಿಗೆ’ ಕೃಷಿಗೆ ಅವಕಾಶ ಇರಲಿಲ್ಲ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದಾಗಿ ಕರ್ನಾಟಕ ಭೂ ಸುಧಾರಣಾ ಕಾನೂನನ್ನು ಗೇಣಿ ನಿಷೇಧ ಕಾನೂನು ಎಂದೇ ಗುರುತಿಸಲಾಗುತ್ತಿತ್ತು.

ಈಗ ಚಾಲ್ತಿಯಲ್ಲಿರುವ ಬಾಯಿ ಮಾತಿನ ರೈತ – ರೈತರ ನಡುವಿನ ಗುತ್ತಿಗೆ ಕೃಷಿಯಲ್ಲಿ ಜಮೀನು ಕಳೆದುಕೊಳ್ಳುವ ಆತಂಕ ಇರಲಿಲ್ಲ.

ಆದರೆ ಹೊಸ ಕೃಷಿ ಕಾಯ್ದೆಗಳಿಂದಾಗಿ ದೊಡ್ಡ ದೊಡ್ಡ ಕಂಪನಿಗಳೂ ಕೂಡ ಗುತ್ತಿಗೆ ಕೃಷಿಗೆ ರೈತರ ಕೃಷಿ ಭೂಮಿ ಪಡೆಯಲು ಕಾನೂನಿನ ರಕ್ಷಣೆ ಸಿಕ್ಕಿದೆ. ಕಂಪನಿಗಳು ಗೇಣಿ ಪಾವತಿಸದಿದ್ದರೆ ಅಂದರೆ ಭೂಮಿ ಬಾಡಿಗೆ ಅಥವಾ ಜಮೀನು ವಾಪಸ್ಸು ಕೊಡದಿದ್ದರೆ, ಇಂತಹ ಯಾವುದೇ ವಿವಾದಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶದಿಂದ ರೈತರನ್ನು ನಿರ್ಬಂಧಿಸಲಾಗಿದೆ.

ಹೊಸ ಕಾಯ್ದೆಗಳಿಂದ ರಕ್ಷಣೆ ಪಡೆದ ‘ಗುತ್ತಿಗೆ’ ಕೃಷಿಯಿಂದ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳುವ ಅಪಾಯ ಹಾಗೂ ಆತಂಕವನ್ನು ಸೃಷ್ಟಿಸಿದೆ.

ಸರ್ಕಾರಿ ಭೂಮಿಯನ್ನು ಈಗಾಗಲೇ ಗುತ್ತಿಗೆಗೆ ಎಂದು ದೀರ್ಘಾವಧಿಗೆ ಕಂಪನಿಗಳು ಪಡೆದಿರುವ ಉದಾಹರಣೆಗಳಲ್ಲಿ ಭೂಮಿಯು ಕಂಪನಿಗಳ ಮಾಲೀಕತ್ವಕ್ಕೆ ವರ್ಗಾವಣೆ ಆಗಿರುವುದನ್ನು ನೋಡುತ್ತಿದ್ದೇವೆ.

ಕಂಪನಿಗಳು ದೀರ್ಘಾವಧಿ ಗುತ್ತಿಗೆ ಕರಾರನ್ನು ಬಯಸುತ್ತದೆ ಮತ್ತು ಈ ಹೊಸ ಕಾಯ್ದೆಗಳು ಇಂತಹ ಕರಾರಿಗೆ ರಕ್ಷಣೆ ನೀಡಿವೆ. ಹಾಗಾಗಿ ಈಗ ಈ ಪ್ರಮಾಣದ ಪ್ರತಿಭಟನೆ ನಡೆಯುತ್ತಿವೆ.

5) ಮಾರುಕಟ್ಟೆಯ ಬೆಲೆಯು ಗುತ್ತಿಗೆ ಬೆಲೆಗಿಂತ ಹೆಚ್ಚಾದಾಗ ಬೋನಸ್ ನೀಡಲು ಒಪ್ಪಿಕೊಂಡರೂ ಯಾಕೆ ತಕರಾರು?

ಈ ಪ್ರಶ್ನೆ ಕೇಳಿರುವವರಿಗೆ ಗುತ್ತಿಗೆಗೂ ಒಪ್ಪಂದಕ್ಕೂ ಇರುವ ವ್ಯತ್ಯಾಸ ತಿಳಿದಿಲ್ಲ. ಗುತ್ತಿಗೆ ಎಂದರೆ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ಹಿಡುವಳಿ ಸ್ವಾಧೀನ ಪಡೆಯುವುದು, ಒಪ್ಪಂದ ಅಂದರೆ ಭೂಮಿ ರೈತನ ಸ್ವಾಧೀನದಲ್ಲಿದ್ದು ಬೆಳೆ ನಿರ್ಧಾರ ಹಾಗೂ ಬೆಳೆ ಖರೀದಿಗೆ ಸಂಬಂಧಿಸಿ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವುದು. ಇದರಲ್ಲಿ ಬೋನಸ್ ಕೊಡುವುದಕ್ಕೆ ಯಾರು ಒಪ್ಪಿದ್ದಾರೆ? ಎಲ್ಲಿ ಒಪ್ಪಿದ್ದಾರೆ? ಎಲ್ಲಿಯಾದರೂ ಕಾಯ್ದೆಯಲ್ಲಿ ಕಂಪನಿಯ ಲಾಭಾಂಶದಲ್ಲಿ ಕಡ್ಡಾಯವಾಗಿ ಇಂತಿಷ್ಟು ಪ್ರಮಾಣ ಬೋನಸ್ ಕೊಡಬೇಕೆಂದು ಹೇಳಲಾಗಿದೆಯೇ?

6) ನೂತನ ಕಾಯ್ದೆಯನ್ನು 18 ತಿಂಗಳು ಮುಂದೂಡಿದರೂ ಯಾಕೆ ಪ್ರತಿಭಟನೆ?

ಸಂಸತ್ತಿನ ಎರಡು ಸದನದಲ್ಲಿ ಅಂಗೀಕಾರ ಆಗಿ ರಾಷ್ಟ್ರಪತಿಗಳ ಅಂಕಿತ ಬಿದ್ದ ಮೇಲೆ ಸರ್ಕಾರಕ್ಕೆ ಕಾಯ್ದೆಗಳ ಜಾರಿ ಮುಂದೂಡುವ ಅಧಿಕಾರವೇ ಇಲ್ಲ ‌.

ಏನಿದ್ದರೂ ಕಾಯ್ದೆ ರದ್ದುಮಾಡಬೇಕು ಅಷ್ಟೇ. ಆದರೆ ಸರ್ಕಾರ ರೈತರ ಬೆಂಬಲಕ್ಕೆ ಸಾಮಾನ್ಯ ಜನ ನಿಲ್ಲದಂತೆ ಮಾಡಲು ಇಂತಹ ಸುಳ್ಳುಗಳನ್ನು ಹರಿಯಬಿಡುತ್ತಿದೆ.

ಮುಂದೂಡಿದರು ಎಂದೇ ಭಾವಿಸೋಣ. ಯಾಕೆ ಮುಂದೂಡುತ್ತಿದ್ದಾರೆ? ರೈತರಿಗೆ ಈ ಬಗ್ಗೆ ಆಕ್ರೋಶ ಇದೆ ಎಂದು ತಾನೇ? ಮುಂದೂಡಿರುವ ಈ ಸಮಯದಲ್ಲಿ ಈ ಕಾಯ್ದೆಗೆ ಸಂಬಂಧಿಸಿ ಸರ್ಕಾರ ಏನು ಮಾಡಲಿದೆ. ಈಗಾಗಲೇ ರೈತರ ಜೊತೆ ಮಾತುಕತೆಗಳಲ್ಲಿ ರೈತರು ಎತ್ತಿ ತೋರಿರುವ ಕಾಯ್ದೆಯ 18 ದೋಷಗಳಿಗೆ ಸರ್ಕಾರ ಮರುಮಾತಾಡದೇ ದೋಷ ಇರುವುದನ್ನು ಒಪ್ಪಿಕೊಂಡಿದೆ. ಇವುಗಳು ಅಷ್ಟು ನಗ್ನವಾಗಿ ರೈತ ವಿರೋಧಿಯಾದ ಕಾಯ್ದೆಗಳಾಗಿವೆ. ಆದ್ದರಿಂದ ಇವುಗಲಕನ್ನು ರದ್ದು ಮಾಡಿ ಮತ್ತು ಕೃಷಿ ಕಾಯ್ದೆಗೆ ಸಂಬಂಧಿಸಿದ ಎಲ್ಲರ ಜೊತೆ ಮುಖ್ಯವಾಗಿ ರೈತರ ಜೊತೆ ವಿವರವಾಗಿ ಚರ್ಚಿಸಿದ ನಂತರವೇ ಸಂವಿಧಾನದ ಚೌಕಟ್ಟಿನಲ್ಲಿ ಕಾಯ್ದೆಗಳು ರೂಪಗೊಳ್ಳಲಿ. ಅದು ಬಿಟ್ಟು ಮುಂದೂಡಿದ್ದೇವೆ ಎನ್ನುವುದು ವಂಚಿಸುವ ಉದ್ದೇಶದ ಕುಟಿಲ ತಂತ್ರವಷ್ಟೆ.

7) ಇದುವರೆಗೆ ಎಷ್ಟು ಎಕರೆ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಅಕ್ರಮವಾಗಿ ವಶಪಡಿಸಿಕೊಂಡಿವೆ?

ಈ ಬಗ್ಗೆ ಪ್ರಾಮಾಣಿಕವಾಗಿ ತಿಳಿಯಬೇಕೆಂದು ಬಯಸಿದರೆ ನೈಸ್ ಕಂಪನಿ ಭೂಮಿ ಅಕ್ರಮವಾಗಿ ವಶ ಪಡೆದುಕೊಂಡಿರುವ ಕುರಿತ ವಿವರವಾದ ಕರ್ನಾಟಕ ವಿಧಾನ ಮಂಡಲದ ಸದನ ಸಮಿತಿಯ ವರದಿಯನ್ನು ನೋಡಲಿ.

ಎಟಿ ರಾಮಸ್ವಾಮಿ ನೇತೃತದ ಭೂ ಕಬಳಿಕೆ ಅಧ್ಯಯನ ತಂಡದ ವರದಿಯನ್ನು ನೋಡಲಿ.

ಇಂತಹ ಚರಿತ್ರೆಯ ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ಕಬಳಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟರೇ ಬಡ ರೈತರ ಭೂಮಿಯನ್ನು ನುಂಗದೇ ಬಿಡುವರೇ? ಆಹಾರ ಭದ್ರತೆ ಉಳಿಯುವುದೇ?

ಭಾರತದ ಚರಿತ್ರೆ ಅಥವಾ ಇಡೀ ಮಾನವ ಕುಲದ ಚರಿತ್ರೆಯೇ, ಬಡವರು ಮತ್ತು ದುರ್ಬಲರ ಭೂಮಿಗಳನ್ನು ಬಲಿಷ್ಟರು ಕಬಳಿಸುವುದೇ ಆಗಿಲ್ಲವೇ?

8) ಎರಡು ದಶಕಗಳಿಂದ ಟಾಟ ,ಐಟಿಸಿ ಸಂಸ್ಥೆಗಳು ರೈತರಿಂದ ಖರೀದಿ ಮಾಡುತ್ತಿಲ್ಲವೇ?

ಟಾಟ ಸಂಸ್ಥೆ ಕೃಷಿ ಉಪಕರಣಗಳು ಹಾಗೂ ಯಂತ್ರೋಪಕರಣಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಇನ್ನು ಐಟಿಸಿ ರೈತರಿಂದ ತಂಬಾಕು ಖರೀದಿ ಮಾಡುವಾಗ ರೈತರ ರಕ್ಷಣೆಗೆ ಹಾಗೂ ಐಟಿಸಿಯಂತಹ ಕಂಪನಿಗಳ ಮಾರುಕಟ್ಟೆ ಕುತಂತ್ರಗಳ ವಿರುದ್ಧ ರಕ್ಷಣೆಗಾಗಿ ತಂಬಾಕು ಮಂಡಳಿಯಂತಹ ನಿಯಂತ್ರಣ ಸಂಸ್ಥೆಗಳಿವೆ.

ಇದೇ ರೀತಿ ಹಲವಾರು ಮಂಡಳಿಗಳು, ಉದಾಹರಣೆಗೆ; ಕಾಫಿ ಮಂಡಳಿ, ಸಾಂಬಾರ್ ಪದಾರ್ಥಗಳ ಮಂಡಳಿ, ಇತ್ಯಾದಿ., ತಮ್ಮ ಸೀಮಿತ ವ್ಯಾಪ್ತಿಯಲ್ಲಾದರೂ ರೈತರ ಉತ್ಪನ್ನಗಳಿಗೆ ರಕ್ಷಣೆ ನೀಡುತ್ತಿದ್ದವು.

ಈಗ ಅವುಗಳನ್ನೂ ಸಹ ಕೃಷಿ ಕಾರ್ಪೊರೇಟ್ ಕಂಪನಿಗಳ ಲಾಬಿಗೆ ಮಣಿದು ದುರ್ಬಲಗೊಳಿಸಲಾಗಿದೆ. ರೈತರಿಗೆ ರಕ್ಷಣೆ ನೀಡಬಹುದಾದ ಅವುಗಳ ಖರೀದಿ ವ್ಯವಸ್ಥೆಯನ್ನೇ ನಾಶ ಮಾಡಲಾಗಿದೆ.

9) ಹಾಲು, ಕುರಿ, ಕೋಳಿ, ಮೇಕೆಯನ್ನು ರೈತ ತನಗಿಷ್ಟ ಬಂದವರಿಗೆ ಮಾರಿದರೆ ತಕರಾರಿಲ್ಲವೇ? ಯಾಕೆಂದರೆ ಅಲ್ಲಿ ದಲ್ಲಾಳಿಗಳಿಲ್ಲ.

ಹಾಲು, ಕುರಿ, ಕೋಳಿ, ಮೇಕೆಗಳೂ ಕೂಡ ವಿಶಾಲ ಅರ್ಥದಲ್ಲಿ ಕೃಷಿ ಉತ್ಪನ್ನಗಳೇ. ಆದರೆ ಯಾರಿಗೆ ಬೇಕಾದರೂ ಮಾರಾಟ ಮಾಡುವ ರೈತರ ಹಕ್ಕಿಗೆ ಈಗ ಬಿಜೆಪಿ ಸರ್ಕಾರದ ಹೊಸ ಕಾಯ್ದೆಗಳಿಂದ ತಕಾರರು ಬಂದಿದೆ. ಕೋಳಿ ಸಾಕಾಣಿಕೆಗೆ ಒಪ್ಪಂದ ಕೃಷಿ ಕಾಲಿಟ್ಟು ದಶಕಗಳೇ ಆಗಿ ಈಗ ಸ್ವತಂತ್ರ ಕೋಳಿ ಸಾಕಾಣಿಕೆಯ ರೈತರೇ ಇಲ್ಲವೆನ್ನುವಷ್ಟು ಸುಗುಣ, ವೆಂಕೊಬ್ ಮುಂತಾದ ಕೆಲವು ಕೋಳಿ ಮಾಂಸ ಮಾರಾಟದ ಕಂಪನಿಗಳು ಏಕಸ್ವಾಮ್ಯ ಸಾಧಿಸಿವೆ.

ಈಗಾಗಲೇ ಇಂತಹ ಕಂಪನಿಗಳ ಶೋಷಣೆಯಿಂದ ಜರ್ಜರಿತರಾಗಿರುವ ರೈತರನ್ನು ಮತ್ತಷ್ಟು ಹೀನಾಯ ಶೋಷಣೆಗೆ ಗುರಿಪಡಿಸಲು ನೂತನ ಕೃಷಿ ಕಾಯ್ದೆಗಳು ಇಂತಹ ಕಂಪನಿಗಳಿಗೆ ಕಾನೂನು ರಕ್ಷಣೆಯ ಬಲ ತಂದುಕೊಟ್ಟಿದೆ. ರೈತ ತನ್ನ ಜಾನುವಾರುಗಳನ್ನು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕರ್ನಾಟಕದ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಮೂಲಕ ಕಿತ್ತುಕೊಂಡಿದೆ. ಹಾಲು ಹಾಗೂ ಕುರಿ ,ಮೇಕೆಗಳಿಗೂ ಇಂತಹದ್ದೇ ಆತಂಕ ಎದುರಾಗಿದ್ದು ಈಗಾಗಲೇ ಈ ಕ್ಷೇತ್ರಗಳಲ್ಲೂ ಹಲವು ಕೃಷಿ ಕಂಪನಿಗಳು ಬಂಡವಾಳ ಹೂಡಲು ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿವೆ.

ಹೈನುಗಾರಿಕೆಯಂತೂ ಆರ್.ಸಿ.ಇ.ಪಿ ಒಪ್ಪಂದದಿಂದ ದೊಡ್ಡ ಆತಂಕವನ್ನು ಎದುರಿಸುತ್ತಿದೆ. ಮೋದಿ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕುವುದನ್ನು ಮುಂದೂಡಿದೆಯೇ ಹೊರತು ಒಪ್ಪಂದವನ್ನು ಧಿಕ್ಕರಿಸಿಲ್ಲ.

10) ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಲ್ಲಿ ದಲ್ಲಾಳಿಗಳು ತಮಗೂ ಜಾಗ ಬೇಕೆಂದು ಕೇಳಿದ್ದಾರೆ .ಇದಕ್ಕೆ ನಿಮ್ಮ ಸಮ್ಮತಿಯಿದೆಯೇ?

ಸುಪ್ರೀಂಕೋರ್ಟ್‌

ಸುಪ್ರೀಂ ಕೋರ್ಟ್ ಸಮಿತಿ ರಚಿಸುವಂತೆ ಯಾರೂ ಕೇಳಿರಲಿಲ್ಲ. ಪಾರ್ಲಿಮೆಂಟ್ ಅಂಗೀಕರಿಸಿರುವ ಕೃಷಿ ಕಾಯ್ದೆಗಳು ಸಂವಿಧಾನ ಬದ್ದವೇ ಎಂಬುದನ್ನು ಪರಿಶೀಲಿಸಬೇಕಾದ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟ್ ಮೇಲೆ ಸಂವಿಧಾನ ವಿಧಿಸಿದೆ. ಈ ಕರ್ತವ್ಯಕ್ಕೆ ವ್ಯತಿರಿಕ್ತವಾಗಿ ಸಂವಿಧಾನಾತ್ಮಕ ವಿಷಯವೊಂದನ್ನು ಸಿವಿಲ್ ವ್ಯಾಜ್ಯದ ರೀತಿ ಪರಿಗಣಿಸಿ ಸರ್ಕಾರ ಹಾಗೂ ಸರ್ಕಾರದ ಕಾನೂನು ಸಂವಿಧಾನ ಬಾಹಿರ ಎಂದು ಟೀಕಿಸಿ ಹೋರಾಟ ಮಾಡುತ್ತಿರುವವರ ನಡುವೆ ರಾಜಿ ಸಂಧಾನ ಮಾಡುತ್ತಿರುವುದನ್ನು ಸುಪ್ರೀಂ ನ್ಯಾಯದ ವ್ಯಂಗ್ಯವೇ ಸರಿ.

ಕೃಷಿ ವ್ಯಾಪಾರ ಸಂಸ್ಥೆಗಳೂ ಸಮೃದ್ಧಿಯನ್ನು ತರುತ್ತವೆ ಎಂದು ಈಗಾಗಲೇ ಕಂಪನಿ ಬೇಸಾಯದ ಪರ ಅಭಿಪ್ರಾಯ ಪಟ್ಟವರೇ ಸಮಿತಿಯಲ್ಲಿ ಸ್ಥಾನ ಪಡೆದಿರುವಾಗ ದಲ್ಲಾಳಿಗಳು ಈಗಾಗಲೇ ಯಶಸ್ವಿಯಾಗಿ ಸುಪ್ರೀಂ ಸಮಿತಿಯಲ್ಲಿ ಸ್ಥಾನ ಪಡೆದಂತೆಯೇ ಆಗಿದೆ. ಇನ್ಯಾವ ದಲ್ಲಾಳಿಗಳನ್ನು ಹೊರಗಿಟ್ಟಿದ್ದಾರೆ ಮತ್ತು ಸಮಿತಿ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಪ್ರಶ್ನೆ ಮಾಡಿರುವ ವಿದ್ವಾಂಸರೇ ಉತ್ತರಿಸಬೇಕು.

Donate Janashakthi Media

Leave a Reply

Your email address will not be published. Required fields are marked *