ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿಸಲು ಪ್ರಾಂತ ರೈತ ಸಂಘ ಆಗ್ರಹ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿ ಮತ್ತು ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆದು ಭತ್ತ, ಶೇಂಗಾ, ಈರುಳ್ಳಿ ಖರೀದಿಸಬೇಕು ಮತ್ತು ರೇಷ್ಮೇ ಗೂಡಿಗೆ ಸೂಕ್ತವಾದ ಬೆಂಬಲ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಕೆಪಿಆರ್‌ಎಸ್‌ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಕೂಡಲೇ ರೈತರ ಸಮಸ್ಯೆಗಳ ಕಡೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಕೋವಿಡ್‌ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ

ಕರ್ನಾಟಕ ರಾಜ್ಯವು ಕೋವಿಡ್ -19 ಬಿಕ್ಕಟ್ಟಿನಿಂದ ತೀವ್ರವಾಗಿ ಬಾದಿಸಲ್ಪಟ್ಟಿದೆ. ಈಗ ರಾಜ್ಯ ಸರಕಾರವು ಮತ್ತೊಮ್ಮೆ ಹದಿನೈದು ದಿನಗಳ ಕಾಲ ದಿಢೀರ್‌ ಎಂದು ಲಾಕ್‌ಡೌನ್ ಘೋಷಿಸಿರುವುದರಿಂದ ರೈತರು ಸಂಕಷ್ಠಕ್ಕೀಡಾಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಕಳೆದ ವರ್ಷದ ಮುಂಗಾರು ಬೆಳೆಗಳಿಗೆ ರಾಜ್ಯ ಸರಕಾರ ಕನಿಷ್ಟ ಬೆಂಬಲ ಬೆಲೆಗೆ ಯಾವುದೇ ಬೋನಸ್ ಘೋಷಿಸಲಿಲ್ಲ. ಮಾತ್ರವಲ್ಲಾ, ಕೇಂದ್ರ ಸರಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಗೂ ಖರೀದಿಸುವ ಕಾರ್ಯವನ್ನು ಮಾಡಲಿಲ್ಲ. ಹೀಗಾಗಿ ರಾಜ್ಯದ ಭತ್ತ, ತೊಗರಿ, ಜೋಳ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಹತ್ತಿ, ಒಣಮೆಣಸಿನ ಕಾಯಿ ಮುಂತಾದ ಬೆಳೆಗಾರರು ತಲಾ ಕ್ವಿಂಟಾಲ್ ಬೆಳೆಗೆ ಸರಾಸರಿ 1,000 ರೂ. ಗಳಿಗೂ ಅಧಿಕ ನಷ್ಠವನ್ನು ತಲಾ ಎಕರೆಗೆ ಕನಿಷ್ಠವೆಂದರೂ 15 ರಿಂದ 35 ಸಾವಿರ ರೂ. ಗಳ ನಷ್ಟ ಹೊಂದಿದ್ದಾರೆ.

ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

ಭತ್ತಕ್ಕೆ ಕೇಂದ್ರ ಸರಕಾರ 1880 ರೂಪಾಯಿಗಳನ್ನು ಘೋಷಿಷಿದೆ. ಕರ್ನಾಟಕ ಸರಕಾರ ಯಾವುದೇ ಬೋನಸ್ ಘೋಷಿಸಲಿಲ್ಲ. ಪಕ್ಕದ ಕೇರಳ ರಾಜ್ಯ ಪ್ರತಿ ಕ್ವಿಂಟಾಲ್ ಗೆ 900 ರೂ  ಬೋನಸ್ ಘೋಷಿಸಿದೆ. ಕರ್ನಾಟಕದಲ್ಲಿ ಮುಂಗಾರು ಹಾಗೂ ಈಗ ಹಿಂಗಾರುಗಳಲ್ಲಿ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸಿಕ್ಕಿರುವುದು ಮತ್ತು ಸಿಗುತ್ತಿರುವುದು ತಲಾ ಕ್ವಿಂಟಾಲ್‌ಗೆ  ಕೇವಲ 1200 ರೂ. ಗಳಿಂದ 1400 ರೂ. ಗಳು ಮಾತ್ರ.

ಕೇರಳ ಸರಕಾರ ಘೋಷಿಸಿದ ಬೋನಸ್ ಸೇರಿಸಿ ಲೆಕ್ಕಿಸಿದರೇ ಕರ್ನಾಟಕದ ಭತ್ತ ಬೆಳೆಗಾರರು ಪ್ರತಿ ಕ್ವಿಂಟಾಲ್‌ಗೆ ಕನಿಷ್ಟ 1400 ರೂ. ಗಳ ಮತ್ತು ತಲಾ ಎಕರೆಗೆ 1400×25=35,000 ರೂ. ನಷ್ಟ  ಹೊಂದಿದ್ದಾರೆ. ಕೇರಳ ಸರಕಾರ ಅಲ್ಲಿನ ಭತ್ತ, ತೊಗರಿ ಮತ್ತಿತರೇ ಬೆಳೆಗಾರರಿಗೆ ಪ್ರತಿ 2.5 ಎಕರೆಗೆ 20,000 ರಿಂದ 30,000 ರೂ. ಗಳ ನೆರವು ನೀಡುತ್ತಿದೆ. ಕರ್ನಾಟಕ ಇಂತಹ ಯಾವುದೇ ನೆರವನ್ನು ನೀಡುತ್ತಿಲ್ಲ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರಕಾರದ ನಿರ್ಲಕ್ಷ್ಯದ ಕಾರಣದಿಂದ ರಾಜ್ಯದಾದ್ಯಂತ ಹಲವು ದಶ ಸಾವಿರ ಕೋಟಿ ರೂ. ಗಳ ನಷ್ಟವನ್ನು ನಮ್ಮ ರೈತರು ಅನುಭವಿಸಿದ್ದಾರೆ ಎಂದು ಕೆಪಿಆರ್‌ಎಸ್‌ ಆರೋಪಿಸಿದೆ.

ಇದನ್ನು ಓದಿ: ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ

ಈಗಲೂ ಸಹ ಹಿಂಗಾರು ದಿನಗಳು ಆರಂಭವಾಗಿದ್ದು ರಾಜ್ಯದ ಭತ್ತ ಬೆಳೆಗಾರರು ಕೇಂದ್ರ ಸರಕಾರದ ಬೆಂಬಲ ಬೆಲೆಗಿಂತ ಪ್ರತಿ ಕ್ವಿಂಟಾಲ್ ಗೆ ಸುಮಾರು 500 ರೂ. ಗಳಷ್ಟು, ಶೇಂಗಾ ಬೆಳೆಗಾರರು 400 ರೂ. ಗಳಷ್ಠು ನಷ್ಠ ಅನುಭವಿಸುತ್ತಿದ್ದಾರೆ. ಈರುಳ್ಳಿ ಬೆಲೆಯು ತೀವ್ರವಾಗಿ ಕುಸಿದಿದೆ. ಕಳೆದ ಎರಡು ತಿಂಗಳ ಹಿಂದೆ 3,000 ರೂ. ಗಳಿಗೆ ಮಾರಾಟವಾದರೇ ಅದೀಗ ಕೇವಲ 950 ರೂ. ಗಳಿಗೆ ಮಾರಾಟವಾಗುತ್ತಿದೆ. ರೇಷ್ಮೇ ಗೂಡು 200 ರೂ. ಗಳಿಗೆ ಕುಸಿದಿದೆ.

ಆದ್ದರಿಂದ, ಈಗಲಾದರೂ ರಾಜ್ಯ ಸರಕಾರಕ್ಕೆ ನಿಜವಾಗಲೂ ರೈತರ ಕುರಿತು ಕಿಂಚಿತ್ತಾದರೂ ಕಾಳಜಿ ಇದ್ದರೇ, ಕೂಡಲೇ ಈ ನಾಲ್ಕು ಬೆಳೆಗಳಿಗೆ ಪ್ರೋತ್ಸಾಹ ಧನವನ್ನು ಘೋಷಿಸಬೇಕು ಮತ್ತು ತಕ್ಷಣವೇ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಂರಕ್ಷಣೆಗೆ ಕ್ರಮವಹಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *