ಕೇಂದ್ರ ಸರ್ಕಾರ ಸುಳ್ಳುಗಳ, ಲಜ್ಜೆಗೆಟ್ಟ ಖಾಸಗೀಕರಣದ ಮಾರಾಟವನ್ನು ಮುಂದುವರೆಸಿದೆ
2021-22ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್‌ನಲ್ಲಿ ಭಾರತೀಯ ಕೃಷಿಗೆ ಹೊಸತೆನ್ನುವಂತದ್ದು ಸುಮಾರಾಗಿ ಏನೂ ಇಲ್ಲ. ತಮ್ಮ ಬೆವರಿಗೆ ಮತ್ತು ಶ್ರಮಕ್ಕೆ ನ್ಯಾಯಯುತ ಪ್ರತಿಫಲವನ್ನು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅದು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎ.ಐ.ಕೆ.ಎಸ್.) ಬೇಸರ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರವು ರೈತರನ್ನು ಹಿಂಡುವ ಕಾರ್ಯತಂತ್ರವನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಕೃಷಿಯಲ್ಲಿ ಯಾವುದೇ ಪ್ರಮುಖ ಹೆಚ್ಚುವರಿ ಹಂಚಿಕೆಗಳು ಅಥವಾ ಪ್ರಮುಖ ಹೊಸ ಯೋಜನೆಗಳಿಲ್ಲ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತೀಯ ರೈತರು ತೋರಿದ ಬದ್ಧತೆ ಸಾಟಿಯಿಲ್ಲದ್ದು. ಆದರೂ ಸರ್ಕಾರವು ಅವರಿಗೆ ಪ್ರತಿಯಾಗಿ ಏನನ್ನೂ ಕೊಟ್ಟಿಲ್ಲ. ಕೃಷಿಗೆ ನೀಡುವ ಹಣದಲ್ಲಿ ಗಮನಾರ್ಹ ಏರಿಕೆ ನಿರೀಕ್ಷಿಸಲಾಗಿತ್ತು, ಆದರೆ ಸರ್ಕಾರ ರೈತರನ್ನು ನಿರಾಶೆಗೊಳಿಸಿದೆ ಎಂದು ಎ.ಐ.ಕೆ.ಎಸ್. ಹೇಳಿದೆ.
2020-21ರಲ್ಲಿ ಕೃಷಿಗೆ ಬಜೆಟ್ ನೀಡಿಕೆ 134349 ಕೋಟಿ ರೂ. ಇತ್ತು. ಇದು 2021-22 ರಲ್ಲಿ 122961 ಕೋಟಿ ರೂ.ಗೆ ಇಳಿದಿದೆ. ಅಂದರೆ ಹಣದುಬ್ಬರವನ್ನು ಲೆಕ್ಕಕ್ಕೆ ತಗೊಳ್ಳದಿದ್ದರೂ ಒಟ್ಟಾರೆ 8% ರಷ್ಟು ಕಡಿತ ಕಂಡುಬಂದಿದೆ. 2019-20 ಮತ್ತು 2020-21ರಲ್ಲಿ, ಅಕ್ಕಿ ಮತ್ತು ಗೋಧಿ ಸಂಗ್ರಹ ಖರೀದಿ ಹೆಚ್ಚಿತ್ತು. ಏಕೆಂದರೆ ಮುಕ್ತ ಮಾರುಕಟ್ಟೆ ಬೆಲೆಗಳು ತುಂಬಾ ಕಡಿಮೆಯಾಗಿದ್ದವು ಮತ್ತು ಸರಕಾರ ಹೆಚ್ಚಿನ ಧಾನ್ಯಗಳ ಖರೀದಿ ಮಾಡಬೇಕಾಗಿ ಬಂದಿತ್ತು, ಆದರೂ ಖರೀದಿ ಮಟ್ಟವು ಅವಶ್ಯಕತೆಗಿಂತ ಕಡಿಮೆ ಇತ್ತು, ಕೊನೆಯಲ್ಲಿ ಬಹುಪಾಲು ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿ ಬಂದಿತ್ತು.
ಇದನ್ನು ಓದಿ : “ಡಿಜಿಟಲ್” ಬಜೆಟ್ ಮಂಡನೆ : ಬಜೆಟ್ ಮುಖ್ಯಾಂಶಗಳು
ಮತ್ತೊಂದೆಡೆ, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2020-21ರಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಧಾನ್ಯಗಳ ವಿತರಣೆಯನ್ನು ಹೆಚ್ಚಿಸಬೇಕಾಗಿ ಬಂದಿತ್ತು. ಇವುಗಳನ್ನು ಬದಿಗಿಟ್ಟರೆ, ಕೃಷಿಯಲ್ಲಿನ ಹೆಚ್ಚಿನ ಯೋಜನೆಗಳಿಗೆ ಮಾಡಿದ ಖರ್ಚು 2020-21ರಲ್ಲಿ ಕುಸಿಯಿತು; 2021-22ರಲ್ಲಿಯೂ ಇದರಲ್ಲಿ ಏರಿಕೆಯಾಗುವ ಭರವಸೆಯನ್ನು ಬಜೆಟ್ ತೋರಿಸುವುದಿಲ್ಲ.
- ಉದಾಹರಣೆಗೆ, ಪಿಎಂ-ಕಿಸಾನ್ಯೋಜನೆಗೆ 2020-21ರಲ್ಲಿ 75,000 ಕೋಟಿ ರೂ.ಗಳ ಬಜೆಟ್ ಹಂಚಿಕೆಯನ್ನು ನೀಡಲಾಯಿತು, ಆದರೆ ನಿಜವಾದ ಖರ್ಚು ಕೇವಲ 65,000 ಕೋಟಿ ರೂ. ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಸಹಾಯ ಮಾಡಲು ಪಿಎಂ-ಕಿಸಾನ್ ಯೋಜನೆಯನ್ನು ಬಳಸಿದೆ ಎಂಬ ಸರ್ಕಾರದ ದಾವೆಯ ಟೊಳ್ಳುತನವನ್ನು ಇದು ತೋರಿಸುತ್ತದೆ. ಇದಲ್ಲದೆ, 2021-22ಕ್ಕೂ ಕೇವಲ 65,000 ಕೋಟಿ ರೂ. ನೀಡಲಾಗಿದೆ.
- ಇನ್ನೊಂದುಉದಾಹರಣೆ ನೀಡಬೇಕಾದರೆ, ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆ(ಪಿಎಂ-ಕೆ.ಎಸ್.ವೈ)ಯಲ್ಲಿ, 2019-20ರಲ್ಲಿ ನಿಜವಾದ ಖರ್ಚು 2700 ಕೋಟಿ ರೂ. ಮತ್ತು 2020-21ರ ಬಜೆಟ್ ವೆಚ್ಚ 4000 ಕೋಟಿ ರೂ. ಆದರೆ 2020-21ರಲ್ಲಿ ನಿಜವಾದ ಖರ್ಚು ಮಾಡಿದ್ದು 2563 ಕೋಟಿ ರೂ., ಅಂದರೆ 2019-20ರಲ್ಲಿ ನಿಜವಾದ ಖರ್ಚುಗಿಂತಲೂ ಕಡಿಮೆಯಾಗಿದೆ.
ಇದನ್ನು ಓದಿ : ಕೇಂದ್ರ ಬಜೆಟ್ 2021 : ಯಾವುದು ದುಬಾರಿ?! ಯಾವುದು ಅಗ್ಗ?!!
ಎಂ.ಎಸ್.ಪಿ-ಸುಳ್ಳುಗಳ ಮುಂದುವರಿಕೆ
ಈಗಾಗಲೇ ಉತ್ಪಾದನಾ ವೆಚ್ಚಕ್ಕಿಂತ 50% ಹೆಚ್ಚಿರುವ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಗಳನ್ನು ಕೊಡಲಾಗುತ್ತಿದೆ ಎಂಬ ಸುಳ್ಳನ್ನು ಹೇಳುವುದನ್ನು ಹಣಕಾಸು ಸಚಿವರು ಮುಂದುವರಿಸಿದ್ದಾರೆ. ಸತ್ಯ ಏನೆಂದರೆ, ಸರ್ಕಾರವು ಎ 2 + ಎಫ್ಎಲ್ ವೆಚ್ಚವನ್ನು ಉತ್ಪಾದನಾ ವೆಚ್ಚವೆಂದು ಪರಿಗಣಿಸುತ್ತದೆ. ಆದರೆ ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವುದು ಎಫ್.ಎಲ್.ನ್ನು ಅಲ್ಲ, ಸಿ 2 ವೆಚ್ಚವನ್ನು. ಭಾರತದಲ್ಲಿ ಬಹುಪಾಲು ರೈತರು ಇನ್ನೂ ಸರಕಾರದ ಬೆಳೆ ಖರೀದಿ ವ್ಯವಸ್ಥೆಯಿಂದ ಹೊರಗಿದ್ದಾರೆ, ಅವರಿಗೆ ಈ ಎಂ.ಎಸ್.ಪಿ.ಗಳು ಕೂಡ ಲಭ್ಯವಿಲ್ಲ. ಇದನ್ನು ಲಭ್ಯಗೊಳಿಸುವುದು ಹೇಗೆ ಎಂಬುದರ ಕುರಿತು ಯಾವುದೇ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ.
ವಾಸ್ತವವಾಗಿ, ಹಣಕಾಸು ಸಚಿವರು ಕಳೆದ ವರ್ಷದ ಬಜೆಟ್ ಭಾಷಣದಲ್ಲಿ ಕಳೆದ ವರ್ಷದ ಖರೀದಿಯನ್ನು 2013-14ರ ಖರೀದಿಯೊಂದಿಗೆ ಹೋಲಿಸುವ ಮೂಲಕ ದಾರಿತಪ್ಪಿಸಲು ಪ್ರಯತ್ನಿಸಿದ್ದರು. ಏಕಂದರೆ 2013-14ರಲ್ಲಿ ಬಹಿರಂಗ ಮಾರುಕಟ್ಟೆ ಬೆಲೆಗಳು ಅನೇಕ ಬೆಳೆಗಳಿಗೆ ಎಂಎಸ್‌ಪಿಗಿಂತ ಹೆಚ್ಚಾಗಿತ್ತು, ಅದರಿಂದಾಗಿ ರೈತರು ಅವನ್ನು ಸರ್ಕಾರಕ್ಕೆ ಮಾರಾಟ ಮಾಡುವ ಅಗತ್ಯವಿರಲಿಲ್ಲ.. 2020-21ರಲ್ಲಿ ಕೇವಲ 1.54 ಕೋಟಿ ರೈತರು ಮಾತ್ರ ಭತ್ತ ಮತ್ತು ಗೋಧಿಗಾಗಿ ಎಂಎಸ್‌ಪಿಗಳಿಂದ ಲಾಭ ಪಡೆದಿದ್ದಾರೆ ಎಂದು ಸ್ವತಃ ಹಣಕಾಸು ಸಚಿವರು ಹೇಳಿದ್ದಾರೆ. ಈ ಮೂಲಕ ಎಂ.ಎಸ್.ಪಿ. ಆಧಾರಿತ ಸರಕಾರೀ ಖರೀದಿಯಿಂದ ಬಹುಪಾಲು ರೈತರಿಗೆ ಪ್ರಯೋಜನವಾಗಿಲ್ಲ ಎಂದು ಅವರು ಒಪ್ಪಿಕೊಂಡಂತಾಗಿದೆ. ವಾಸ್ತವವಾಗಿ, ಇಂತಹ ಖರೀದಿಯನ್ನು ಕಡಿಮೆ ಮಾಡುವುದು ಅದರ ಮಧ್ಯಮ-ಅವಧಿಯ ಯೋಜನೆಯಾಗಿದೆ ಎಂಬುದು ಮೂರು ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಬೇಕೆಂಬ ಅದರ ಒತ್ತಾಯದಲ್ಲಿ ಗೋಚರಿಸುತ್ತದೆ ಎಂದು ಎ.ಐ.ಕೆ.ಎಸ್. ಹೇಳಿದೆ.
ಆಹಾರ ಸಬ್ಸಿಡಿ ಹೆಚ್ಚಳವೆಂಬ ಮತ್ತೊಂದು ಭ್ರಾಂತಿ
ಆಹಾರ ಸಬ್ಸಿಡಿಯನ್ನು ಹೆಚ್ಚಿಸಲಾಗಿದೆ ಎನ್ನುವುದು ಕೇವಲ ಭ್ರಾಂತಿಯಾಗಿದೆ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಸರ್ಕಾರವು ಭಾರತ ಆಹಾರ ನಿಗಮ(ಎಫ್.ಸಿ.ಐ)ಕ್ಕೆ ರೈತರಿಂದ ಖರೀದಿಗೆ ಕೊಡಬೇಕಾದ ಬಾಕಿ ಪಾವತಿಸಿಲ್ಲ, ಅದರಿಂದಾಗಿ ‘ರಾಷ್ಟ್ರೀಯ ಸಣ್ಣ ಉಳಿತಾಯಗಳ ನಿಧಿ’(ಎನ್‌ಸಿಎಸ್‌ಎಫ್)ಯಿಂದ ಹೆಚ್ಚಿನ ಬಡ್ಡಿ ತೆತ್ತು ಸಾಲವನ್ನು ಪಡೆಯುವಂತೆ ಎಫ್.ಸಿ.ಐ.ಯನ್ನು ಬಲವಂತ ಮಾಡಿತ್ತು. ಎಫ್.ಸಿ.ಐ.ಗೆ ಸಾಲದ ಹೊರೆ ಹಾಕಬಾರದು ಎಂಬ ಆಶಯವನ್ನು ಬಜೆಟ್ ಪ್ರಕಟಿಸಿರುವುದೇನೋ ಸ್ವಾಗತಾರ್ಹ, ಆದರೆ ಎಫ್‌ಸಿಐಗೆ ಪಾವತಿಸಬೇಕಾದ ಹಿಂದಿನ ಬಾಕಿಗಳ ಬಗ್ಗೆ ಅದು ಮೌನವಾಗಿದೆ. ಈ ಬಾಕಿಗಳನ್ನು ಪಾವತಿಸದಿದ್ದರೆ, ಎಫ್.ಸಿ.ಐ.ನ ಹಣಕಾಸು ಸಾಮರ್ಥ್ಯದ ಮೇಲೆ ಒತ್ತಡ ಮುಂದುವರೆಯುತ್ತದೆ ಎಂದಿರುವ ಎ.ಐ.ಕೆ.ಎಸ್. 2021-22ರಲ್ಲಿ ಈ ಬಾಧ್ಯತೆಯನ್ನು ಸರ್ಕಾರ ಪೂರೈಸುತ್ತದೆಯೇ ಎಂದು ಸಹ ನೋಡಬೇಕಾಗಿದೆ ಎಂದಿದೆ.
ಹೆಚ್ಚಿನ ಖಾಸಗೀಕರಣದ ಮಾರ್ಗ-ನಕಾಶೆಯನ್ನು ಕೊಟ್ಟಿದೆ, ಆದಕ್ಕೆ ‘ನಾಣ್ಯೀಕರಣ’(monetisation) ಎಂಬ ವೇಷ ತೊಡಿಸಿದೆ. ಇದು NAFED (ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ) ನಡೆಸುವ ದಾಸ್ತಾನು ಮಳಿಗೆಗಳೂ ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳ ಖಾಸಗೀಕರಣವನ್ನು ಒಳಗೊಂಡಿದೆ. ಇದು ಹಗೇವುಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಭಾರತದ ಆಹಾರ ನಿಗಮ ಮತ್ತು ಅದಾನಿ ಲಾಜಿಸ್ಟಿಕ್ಸ್ ನಡುವೆ ಈಗಾಗಲೇ ಅಸ್ತಿತ್ವದಲ್ಲಿರುವ ಒಪ್ಪಂದಗಳ ಮುಂದುವರಿಕೆಯಾಗಿ ಬರುತ್ತಿದೆ.. ಇದಲ್ಲದೆ, ಕೇಂದ್ರ ಸರ್ಕಾರವು ‘ಆಪರೇಷನ್ ಗ್ರೀನ್ಸ್’ ಯೋಜನೆಯನ್ನು 22 ಬೇಗ ಕೆಟ್ಟು ಹೋಗುವ ಸರಕುಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಕೃಷಿ-ಸಾಗಾಟವನ್ನು ಉತ್ತೇಜಿಸಲು ಈ ಯೋಜನೆಯು ಸಾಲ ನೆರವುಗಳನ್ನು ಒದಗಿಸುತ್ತದೆ, ಇದನ್ನು ಪ್ರಸ್ತುತ ಬಹುಪಾಲು ದೊಡ್ಡ ಕೃಷಿ ಆಧಾರಿತ ಕಂಪನಿಗಳೇ ನಿಯಂತ್ರಿಸುತ್ತವೆ. ಆದ್ದರಿಂದ ಈ ಕೇಂದ್ರ ಬಜೆಟ್ ಒದಗಿಸುತ್ತಿರುವುದು ಕೃಷಿ-ವ್ಯಾಪಾರಸ್ಥರ ನೇತೃತ್ವದ ಮೂಲಸೌಕರ್ಯ ಅಭಿವೃದ್ಧಿಯ ಕಣ್ನೋಟವನ್ನೇ ಎಂದು ಎ.ಐಕೆ.ಎಸ್. ವಿಶ್ಲೇಷಿಸಿದೆ.
ಮೂಲರಚನೆ ಅಭಿವೃದ್ಧಿ-ಸುಳ್ಳು ದಾವೆ
ಬಜೆಟ್ ಭಾಷಣವು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ ಇದು ಕೂಡ ಒಂದು ಟೊಳ್ಳು ದಾವೆ ಎಂದು ಎ.ಐ.ಕೆ.ಎಸ್. ಟೀಕಿಸಿದೆ. ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನಾ(ಗ್ರಾಮಿಣ ರಸ್ತೆ ಯೋಜನೆ) ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನಾ(ಗೃಹ ಯೋಜನೆ)ಗಾಗಿ ನಿಜವಾದ ಬಜೆಟ್‍ನೀಡಿಕೆಗಳು ಈಗ ಸುಮಾರು ಎರಡು ವರ್ಷಗಳಿಂದ ಸ್ಥಗಿತವಾಗಿದ್ದು, ಹೆಚ್ಚಳವಾಗುತ್ತಿಲ್ಲ. ಖಾಸಗಿ ಸಹಭಾಗಿತ್ವದ ಮೂಲಕ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಕೃಷಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಭೂಸ್ವಾಧೀನಗೊಳಿಸುವ ಅಗತ್ಯ ಬರುತ್ತದೆ. ಆದರೆ ಬಜೆಟ್ ಭೂಸ್ವಾಧೀನ ಮತ್ತು ಪರಿಹಾರದ ಬಗ್ಗೆ ಬಜೆಟ್ ಮೌನವಾಗಿದೆ!
ಮನರೇಗಾದ ಬಗ್ಗೆ ಮೌನ
ಸಿ.ಎಮ್.ಐ.ಇ. ಸರ್ವೆ ಪ್ರಕಾರ 2020 ರ ಡಿಸೆಂಬರ್‌ನಲ್ಲಿಯೂ ಸಹ ಗ್ರಾಮೀಣ ಭಾರತದ ನಿರುದ್ಯೋಗ ಶೇಕಡಾ 9 ರಷ್ಟಿತ್ತು. ಆದರೂ ಹಣಕಾಸು ಸಚಿವರ ಭಾಷಣದಲ್ಲಿ ಮನರೇಗಾದ ಬಗ್ಗೆ ಒಂದೇ ಒಂದು ಉಲ್ಲೇಖ ಇರಲಿಲ್ಲ ಎಂಬುದು ಅಕ್ಷಮ್ಯ ಎಂದು ಎ.ಐ.ಕೆ.ಎಸ್. ಹೇಳಿದೆ. ಈ ಯೋಜನೆಯು ಗ್ರಾಮೀಣ ಬಡವರಿಗೆ ಮತ್ತು ಲಾಕ್‍ಡೌನಿನಿಂದಾಗಿ ತಂತಮ್ಮ ಊರುಗಳಿಗೆ ಮರಳಿದ ವಲಸೆ ಕಾರ್ಮಿಕರಿಗೂ ಅತ್ಯಗತ್ಯ ಜೀವಸೆಲೆ ಎಂದು ಸಾಬೀತಾಗಿದೆ. ಆದರೂ ಇದಕ್ಕೆ ಈ ಬಜೆಟಿನಲ್ಲಿ 2020-21ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಶೇಕಡಾ 34 ರಷ್ಟು ಗಮನಾರ್ಹವಾಗಿ ಕಡಿತ ಮಾಡಲಾಗಿದೆ. ವಾಸ್ತವವಾಗಿ, ನಾವು 2019-20ರಲ್ಲಿನ ನಿಜವಾದ ವೆಚ್ಚವನ್ನು(71686 ಕೋಟಿ ರೂ.) 2021-22ರ ಬಜೆಟ್ ವೆಚ್ಚದೊಂದಿಗೆ (73000 ಕೋಟಿ ರೂ.) ಹೋಲಿಸಿದರೆ, ನಿಜಮೌಲ್ಯದಲ್ಲಿ ಇಳಿಕೆ ಕಂಡುಬರುತ್ತದೆ. ಈಗಿನ ನಿರುದ್ಯೋಗದ ಸನ್ನಿವೇಶದಲ್ಲಿ ಈ ಕಾಯ್ದೆಯ ಅಡಿಯಲ್ಲಿ ಉದ್ಯೋಗದ ದಿನಗಳ ಸಂಖ್ಯೆಯನ್ನು 150 ದಿನಗಳಿಗೆ ಹೆಚ್ಚಿಸಬೇಕಾಗಿತ್ತು. ಆದರೆ ಅಂತಹ ವಿಚಾರವೇನೂ ಈ ಸರಕಾರಕ್ಕೆ ಇಲ್ಲ ಎಂಬುದನ್ನು ಈ ಬಜೆಟ್ ತೋರಿಸಿದೆ. ಇದು ಖಂಡಿತವಾಗಿಯೂ ಗ್ರಾಮೀಣ ಉದ್ಯೋಗದ ನಿರ್ಮಾಣ, ಸಾರ್ವಜನಿಕ ಮೂಲಸೌಕರ್ಯಗಳ ನಿರ್ಮಾಣ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಒಟ್ಟಾರೆ ಬೇಡಿಕೆಯ ನಿರ್ಮಾಣದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬಜೆಟ್ ಕ್ರಮಗಳು ಪಶುಸಾಕಣೆ ಮಾಡುವ ರೈತರ ಮೇಲೂ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಇದು ಸರ್ಕಾರದ ಸಂಪೂರ್ಣ ಇಬ್ಬಂದಿತನವನ್ನು ತೋರಿಸುತ್ತದೆ. ಅವರ ವಕ್ತಾರರು ಜಾನುವಾರುಗಳ ಪಾತ್ರವನ್ನು “ಗೌ-ಮಾತಾ” ಎಂದು ಹೊಗಳುತ್ತಾರೆ. ಆದರೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗೆ ಬಜೆಟ್ ಕೊಡಬೇಕೆಂದಿರುವುದು 3057 ಕೋಟಿ ರೂ. ಮಾತ್ರ. 2019-20ರಲ್ಲೇ ಈ ಬಾಬ್ತು 2706 ಕೋಟಿ ರೂ. ನೀಡಲಾಗಿತ್ತು. ಹಣದುಬ್ಬರವನ್ನು ಪರಿಗಣಿಸಿದರೆ ಇದು ಏರಿಕೆಯಂತೂ ಅಲ್ಲ ಎಂದು ಎ.ಐ.ಕೆ.ಎಸ್. ಅಭಿಪ್ರಾಯ ಪಟ್ಟಿದೆ.