ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಚೇಳೂರು ಹಟ್ಟಿ ರೈತ ರಂಗಸ್ವಾಮಿ ರವರ ಮೇಲೆ ಅಕ್ರಮ ಜಾನುವಾರು ಸಾಗಾಣಿಕೆ ಕೇಸು ದಾಖಲಿಸಿ ರೈತನ ಎಮ್ಮೆ ಜಪ್ತಿ ಮಾಡಿದ್ದಾರೆ. ಬಜರಂಗದಳದ ಒತ್ತಡಕ್ಕೆ ಮಣಿದು ರೈತನ ಮೇಲೆ ಕೇಸು ದಾಖಲಿಸಿ ಜಪ್ತಿ ಮಾಡಿರುವ ಗುಬ್ಬಿ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ : ಚೇಳೂರು ಹಟ್ಟಿ ಗ್ರಾಮದ ರಂಗಸ್ವಾಮಿಯವರು ಇಂದು ಬೆಳಗ್ಗೆ (ಜುಲೈ 04) 5 ಗಂಟೆಗೆ ಪರಿಚಯಸ್ಥರು ವಾಹನದ ಸಹಾಯದೊಂದಿಗೆ ಎಮ್ಮೆಯನ್ನು ಸಂತೆಗೆ ಮಾರಲು ಹೊರಟಿದ್ದರು. ಅದೇ ವೇಳೆ ಬಜರಂಗದಳ ಸಂಘಟನೆಗೆ ಸೇರಿದ ನಾಲ್ಕಾರು ಜನರ ಗುಂಪು ಇವರ ವಾಹನವನ್ನು ತಡೆದು ಗಲಾಟೆ ಮಾಡಿದ್ದಾರೆ. ನೀವು ಜಾನುವಾರಗಳನ್ನು ಕಟುಕರ ಮನೆಗೆ ಕಳುಹಿಸುತ್ತಿದ್ದೀರಿ ಎಂದು ಗಲಾಟೆ ನಡೆಸಿದ್ದಾರೆ. ರಂಗಸ್ವಾಮಿ ಮತ್ತು ವಾಹನ ಚಾಲಕ ಮನವಿ ಮಾಡಿದರೂ ಕೂಡಾ ಸ್ಪಂದಿಸದೆ ಪೊಲೀಸರನ್ನು ಕರೆಯಿಸಿ ದೂರು ದಾಖಲಿಸಿದ್ದಾರೆ.
ರೈತ ರಂಗಸ್ವಾಮಿ, ಜನಶಕ್ತಿ ಮೀಡಿಯಾ ಜೊತೆ ದೂರವಾಣಿಯಲ್ಲಿ ಮತನಾಡುತ್ತಾ, ನನ್ನ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ನಾನು ಬಡವ ನನ್ನ ಬಳಿ ಹಣ ಇರಲಿಲ್ಲ. ಮಕ್ಕಳನ್ನು ತೋರಿಸಲು ಹಣ ಬೇಕಿದ್ದ ಕಾರಣ ಎಮ್ಮೆಯನ್ನು ಸಂತೆಗೆ ಮಾರಲು ಹೊರಟಿದ್ದೆ, ಇದೇ ವೇಳೆ ಬಜರಂಗದಳದವರು ಬಂದು ತಡೆದು ಗಲಾಟೆ ಮಾಡಿದರು. ನನ್ನ ಮಕ್ಕಳು ಆಸ್ಪತ್ರೆಯಲ್ಲಿದ್ದಾರೆ, ಅವರ ಚಿಕಿತ್ಸೆಗೆ ಹಣ ಬೇಕಿದೆ, ಪೊಲೀಸರಲ್ಲಿ ಮನವಿ ಮಾಡಿದರು ಅವರು ದರ್ಪ ತೋರಿಸಿ ದೂರು ದಾಖಲಿಸಿದ್ದಾರೆ ಅಳಲು ತೋಡಿಕೊಂಡರು.
ಗೋ ಶಾಲೆಗೆ ಸಾಗಿಸಿರುವ ಎಮ್ಮೆಯನ್ನು ಬೇಷರತ್ತಾಗಿ ರೈತನ ಮನೆಗೆ ಸುರಕ್ಷಿತವಾಗಿ ಸಾಗಿಸಬೇಕು. ನೊಂದ ರೈತ ರಂಗಸ್ವಾಮಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕೇಸು ಹಾಕಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಕೂಡಲೇ ಅಮಾನತು ಮಾಡಬೇಕು. ರೈತರ ಮುಕ್ತ ಒಡಾಟಕ್ಕೆ ಅಡ್ಡಿಪಡಿಸಿ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿರುವ ಬಜರಂಗದಳ ಪುಂಡರ ಮೇಲೆ ಕೇಸು ದಾಖಲಿಸಿ ಬಂಧಿಸಬೇಕೆಂದು ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಆಗ್ರಹಿಸಿದೆ.
ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಕೂಡಲೇ ಕ್ರಮವಹಿಸದಿದ್ದಲ್ಲಿ, ತಮ್ಮ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟನೆಯು ಎಚ್ಚರಿಸಿದೆ.