ಪುಸ್ತಕ: ಜರ್ಮನ್ ರೈತ ಯುದ್ಧ (1524-25)
ಲೇಖಕರು: ಫ್ರೆಡೆರಿಕ್ ಎಂಗೆಲ್ಸ್
ಅನುವಾದ: ನಾ ದಿವಾಕರ
ಬೆಲೆ: ರೂ. 230
ಪ್ರಕಾಶನ: ಕ್ರಿಯಾ ಮಾಧ್ಯಮ
ಈ ಚಳುವಳಿಯ ಆರಂಭದಲ್ಲೇ ರೂಪಿತವಾಗಿದ್ದ “ರೈತರ ಹನ್ನೆರಡು ಕಟ್ಟಳೆಗಳ” ಜಾರಿಗಾಗಿ ಜರ್ಮನ್ ರೈತ ಯುದ್ಧ ಸಾರಲಾಯಿತು. ಇದು ರೈತ ಯುದ್ಧ ಹೂಡಿದ ರೈತ ಸಂಘಟನೆಗಳ ಒಕ್ಕೂಟದ ಪ್ರಣಾಳಿಕೆ, ಸಂವಿಧಾನ, ಹಕ್ಕೊತ್ತಾಯಗಳ ಪಟ್ಟಿ, ಗೆದ್ದರೆ ಮುಂಬರುವ ಆಡಳಿತದ ಕಾರ್ಯಸೂಚಿ – ಇವೆಲ್ಲವೂ ಆಗಿತ್ತು. ಇದನ್ನು ಮೊದಲ ಮಾನವ ಹಕ್ಕುಗಳ ಘೋಷಣೆ ಎಂದೂ ಪರಿಗಣಿಸಲಾಗಿದೆ. “ರೈತರ ಹನ್ನೆರಡು ಕಟ್ಟಳೆಗಳ” ಪೂರ್ಣ ಪಠ್ಯ.
ಸಮಸ್ತ ರೈತರು ಮತ್ತು ಧರ್ಮ ಪ್ರಚಾರಕ ದೊರೆಗಳಿಗೆ ಈಡಾಗಿದ್ದವರು ಸ್ವತಃ ಬಾಧೆಗೊಳಗಾದ ವಿಷಯಗಳ ಕುರಿತ, ಅವರ ಮೂಲಭೂತವಾದ ಮತ್ತು ಸರಿಯಾದ ಪ್ರಮುಖ ಕಟ್ಟಳೆಗಳು
ಕ್ರಿಶ್ಚಿಯನ್ ಓದುಗರಿಗೆ ದೇವರ ದಯೆಯಿಂದ ಕ್ರಿಸ್ತನ ಮೂಲಕ ಶಾಂತಿ ಮತ್ತು ಅನುಗ್ರಹಗಳು
ರೈತರು ಸಂಘಟಿತರಾಗಿರುವ ಸಂದರ್ಭವನ್ನೇ ಬಳಸಿಕೊಂಡು ಇತ್ತೀಚಿನ ದಿನಗಳಲ್ಲಿ ಕೆಲವು ಅನಪೇಕ್ಷಿತ ದುಷ್ಟ ಬರಹಗಳು ದೈವ ವಾಣಿಯನ್ನೇ ದೂಷಿಸಿರುವುದು ಕಂಡುಬಂದಿದೆ. ಯಾರೂ ವಿಧೇಯರಾಗಿ ಇರಕೂಡದು, ಎಲ್ಲರೂ ಎಲ್ಲೆಡೆಯೂ ಬಂಡಾಯ ಹೂಡಬೇಕು ಮತ್ತು ಸುಧಾರಣೆಯತ್ತ ಧಾವಿಸಬೇಕು ಅಥವಾ ಇರುವ ಧಾರ್ಮಿಕ ಮತ್ತು ರಾಜಕೀಯ ಅಧಿಕಾರ ಪೀಠಗಳನ್ನು ನಾಶಪಡಿಸಬೇಕು, ನಾಶಪಡಿಸಬೇಕು ಎನ್ನುವುದು ಹೊಸ ಬೋಧನೆಯ ಫಲವೇ ಎಂದು ಕೇಳಲಾಗುತ್ತಿದೆ. ಈ ಕೆಳಗೆ ನೀಡಲಾಗಿರುವ ಕಟ್ಟಳೆಗಳು ಇಂತಹ ದೈವಭಂಜಕ, ಶಂಕಿಸುವ ಅಪರಾಧಿಗಳಿಗೆ ಉತ್ತರವಾಗಿದ್ದು, ಇದು ಒಂದೆಡೆ ದೈವವಾಣಿಯಿಂದ ದೂಷಣೆಯನ್ನು ದೂರ ಮಾಡುತ್ತದೆ. ಮತ್ತು ಇನ್ನೊಂದೆಡೆ ಇಡೀ ರೈತಾಪಿಯ ಬಂಡಾಯಕ್ಕೆ ಮತ್ತು ಅವಿಧೇಯತನಕ್ಕೆ ಕ್ರೈಸ್ತ ಧರ್ಮದ ನೆಪವನ್ನೂ ಕೊಡುತ್ತದೆ. ಮೊದಲನೆಯದಾಗಿ ಇಡೀ ದಂಗೆಯ ಅಥವಾ ಪ್ರಕ್ಷುಬ್ಧತೆಗೆ ಕಾರಣ ದೈವವಾಣಿಯಲ್ಲ. ಏಕೆಂದರೆ ಪ್ರವಾದಿಯಾದ ಕ್ರೈಸ್ತನ ಸಂದೇಶ ಕೇವಲ ಪ್ರೀತಿ, ಶಾಂತಿ, ತಾಳ್ಮೆ ಮತ್ತು ಮೈತ್ರಿಯನ್ನೇ ಬೋಧಿಸುತ್ತದೆ. ಹಾಗಾಗಿ ಕ್ರೈಸ್ತನಲ್ಲಿ ನಂಬಿಕೆ ಇರುವವರೆಲ್ಲರೂ ಪ್ರೀತಿಯಿಂದ, ಶಾಂತಿಯುತವಾಗಿ, ಸೌಹಾರ್ದಯುತ ಬಾಳ್ವೆಯನ್ನೇ ನಡೆಸಬೇಕು. ದೈವವಾಣಿಯಲ್ಲಿ ವಿಶ್ವಾಸ ಇರುವ ಮತ್ತು ಅದರಂತೆಯೇ ನಡೆಯುವ ಸಮಸ್ತ ರೈತರ ಎಲ್ಲ ಕಟ್ಟಳೆಗಳ ಮೂಲ ಆಧಾರವೇ (ಇದನ್ನು ಮುಂದೆ ನೋಡಲಿದ್ದೇವೆ) ಈ ಸಂದೇಶವಾಗಿದೆ. ಹೀಗಿರುವಾಗ ದೈವವಾಣಿಯೇ ಅವಿಧೇಯತೆಗೆ, ದಂಗೆಗೆ ಕಾರಣ ಎಂದು ಈ ದುಷ್ಟ ವರದಿಗಳು ಹೇಗೆ ಹೇಳಲು ಸಾಧ್ಯ? ಈ ದುಷ್ಟ ವರದಿಗಳನ್ನು ಸಿದ್ಧಪಡಿಸಿದವರು ಮತ್ತು ದೈವವಾಣಿಯ ವಿರೋಧಿಗಳು ಈ ಬೇಡಿಕೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ದೈವವಾಣಿ ಅಲ್ಲ, ಬದಲಾಗಿ ಸೈತಾನನೇ ಕಾರಣ. ಕ್ರೈಸ್ತನ ವಿರೋಧಿಗಳ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುವ ಮೂಲಕ ಸೈತಾನ ಶಕ್ತಿಗಳು ದೈವವಾಣಿಯ ದುಷ್ಟ ವಿರೋಧಿಗಳಾಗಿರುತ್ತಾರೆ. ಇವರು ಕ್ರೈಸ್ತನ ಅನುಯಾಯಿಗಳ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕಿ, ಕ್ರೈಸ್ತನ ಬೋಧನೆಗಳಾದ ಶಾಂತಿ, ಸಹನೆ ಮತ್ತು ಸಹಬಾಳ್ವೆಯ ಚಿಂತನೆಗಳನ್ನು ಭಂಗಗೊಳಿಸುತ್ತಾರೆ. ಎರಡನೆಯದಾಗಿ, ಈ ದೈವವಾಣಿಯನ್ನು ತಮ್ಮ ಜೀವನದ ಮಾರ್ಗದರ್ಶಿಯಾಗಿ ತಮಗೆ ಬೋಧಿಸುವಂತೆಯೂ, ಅವರನ್ನು ಅವಿಧೇಯರೆಂದಾಗಲೀ, ಕ್ರಮರಹಿತರೆಂದಾಗಲೀ ಪರಿಗಣಿಸಬಾರದೆಂದು ರೈತರು ಕೋರಿದ್ದಾರೆ. ದೈವವಾಣಿಯಂತೆಯೇ ಬದುಕಲು ಸಿದ್ಧವಾಗಿರುವ ರೈತರ ಬೇಡಿಕೆಗಳನ್ನು ಭಗವಂತನು ಸಮ್ಮತಿಸುತ್ತಾನೋ ಇಲ್ಲವೋ, ಆ ಅತ್ಯುನ್ನತ ಶಕ್ತಿಯಲ್ಲಿ ತಪ್ಪು ಕಂಡುಹಿಡಿಯುವವರಾರು? ಅವನ ಅಧಿಕಾರವನ್ನು ವಿರೋಧಿಸುವವರಾರು ಅಥವಾ ಅವನ ನ್ಯಾಯತೀರ್ಮಾನದಲ್ಲಿ ಮಧ್ಯ ಪ್ರವೇಶಿಸುವವರಾರು? ಅವನಲ್ಲಿ ಮೊರೆ ಹೋದಾಗ ಭಗವಂತನು ಇಸ್ರೇಲಿನ ಮಕ್ಕಳ ಕರೆಗೆ ಓಗೊಡಲಿಲ್ಲವೇ? ಅವರನ್ನು ಫೇರೋನ ಕೈಗಳಿಂದ ರಕ್ಷಿಸಲಿಲ್ಲವೇ? ಇಂದು ಅವನ ಮಕ್ಕಳನ್ನೇ ಅವನು ರಕ್ಷಿಸುವುದಿಲ್ಲವೇ? ಅವನು ತನ್ನ ಮಕ್ಕಳನ್ನು ರಕ್ಷಿಸುತ್ತಾನೆ, ಶೀಘ್ರಗತಿಯಲ್ಲಿ ರಕ್ಷಿಸುತ್ತಾನೆ. ಆದ್ದರಿಂದ ಕ್ರೈಸ್ತ ಓದುಗರೇ, ಈ ಕೆಳಗಿನ ಕಟ್ಟಳೆಗಳನ್ನು ಒಮ್ಮೆ ಜಾಗರೂಕತೆಯಿಂದ ಓದಿ ತೀರ್ಮಾನಕ್ಕೆ ಬನ್ನಿ. ಇಲ್ಲಿವೆ ಹನ್ನೆರಡು ಕಟ್ಟಳೆಗಳು :
ಮೊದಲನೆಯ ಕಟ್ಟಳೆ : ಪ್ರಪ್ರಥಮವಾಗಿ ನಮ್ಮ ವಿನಮ್ರ ಮನವಿ ಮತ್ತು ಆಶಯ, ನಮ್ಮ ದೃಢ ನಿಶ್ಚಯ ಮತ್ತು ನಿರ್ಣಯ ಏನೆಂದರೆ ಭವಿಷ್ಯದಲ್ಲಿ ಪ್ರತಿಯೊಂದು ಸಮುದಾಯವೂ ತನ್ನದೇ ಆದ ಧರ್ಮಗುರುವನ್ನು ಆಯ್ಕೆ ಮಾಡಿ ನೇಮಿಸಿಕೊಳ್ಳಲು, ಮತ್ತು ಒಂದು ವೇಳೆ ಆಯ್ಕೆಯಾದ ಧರ್ಮಗುರುವಿನ ದುರ್ವರ್ತನೆ ಕಂಡುಬಂದಲ್ಲಿ ಕೂಡಲೇ ವಜಾಗೊಳಿಸುವ ಶಕ್ತಿ ಮತ್ತು ಅಧಿಕಾರ ನಮಗೆ ಇರಬೇಕು. ಆಯ್ಕೆಯಾದ ಧರ್ಮಗುರು ನಮಗೆ ದೈವವಾಣಿಯನ್ನು ಸರಳವಾಗಿ, ನಿಷ್ಠೆಯಿಂದ ಬೋಧಿಸಬೇಕು, ಮಾನವ ರೂಪಿತ ತತ್ವ ಅಥವಾ ಆಜ್ಞೆಯನ್ನು ಸೇರಿಸಿ ಬೋಧಿಸಕೂಡದು. ನಮಗೆ ಹೀಗೆ ನೈಜ ಮತಶ್ರದ್ಧೆಯನ್ನು ಬೋಧಿಸುವ ಮೂಲಕ ನಾವೂ ಸಹ ಭಗವಂತನಲ್ಲಿ ನೇರವಾಗಿ ಪ್ರಾರ್ಥನೆ ಸಲ್ಲಿಸಿ, ಈ ಮತಶ್ರದ್ಧೆ ಮತ್ತು ವಿಶ್ವಾಸ ನಮ್ಮಲ್ಲಿ ಇಮ್ಮಡಿಯಾಗಿ ನಮ್ಮ ಬದುಕಿನ ಭಾಗವಾಗುತ್ತದೆ. ಅವರ ಬೋಧನೆ ನಮ್ಮ ಮೇಲೆ ಪರಿಣಾಮ ಬೀರದಿದ್ದರೆ ನಾವು ಯಾವುದಕ್ಕೂ ಪ್ರಯೋಜನವಿಲ್ಲದ ಹುಲು ಮಾನವರಾಗಿಬಿಡುತ್ತೇವೆ, ಏಕೆಂದರೆ ನೈಜ ಮತಶ್ರದ್ಧೆಯ ಮೂಲಕ ಮಾತ್ರವೇ ನಾವು ಭಗವಂತನನ್ನು ಸಮೀಪಿಸಬಹುದು ಎಂದು ಗ್ರಂಥಗಳು ಹೇಳುತ್ತವೆ. ಅವನ ಕರುಣೆಯ ಮೂಲಕವೇ ನಾವು ಪವಿತ್ರರಾಗಲು ಸಾಧ್ಯ. ಆದ್ದರಿಂದ, ಈ ರೀತಿಯಲ್ಲಿ ಧರ್ಮ ಗ್ರಂಥದಲ್ಲಿ ನಂಬಿಕೆಯುಳ್ಳ, ಅಂತಹ ಮಾರ್ಗದರ್ಶಕ ಮತ್ತು ಧರ್ಮಬೋಧಕ ನಮಗೆ ಅವಶ್ಯವಾಗಿ ಬೇಕಾಗಿದ್ದಾರೆ.
ಎರಡನೆಯ ಕಟ್ಟಳೆ : ಹಳೆಯ ಒಡಂಬಡಿಕೆಯ ಅನುಸಾರ ನ್ಯಾಯಯುತವಾದ ದಶಾಂಶ ತೆರಿಗೆಯನ್ನು ನಿಗದಿಪಡಿಸಿ ಹೊಸ ಒಡಂಬಡಿಕೆಯಲ್ಲಿ ಸಾಕಾರಗೊಳಿಸಿದಂತೆಯೇ ನಾವು ಧಾನ್ಯದ ಮೂಲಕ ನ್ಯಾಯಯುತವಾದ ದಶಾಂಶ ತೆರಿಗೆಯನ್ನು ಪಾವತಿಸಲು ಸಿದ್ಧರಿದ್ದೇವೆ. ದೈವವಾಣಿಯೇ ಹೇಳುವಂತೆ, ದೇವರಿಗೆ ನಮ್ಮ ಹಕ್ಕುಗಳ ಅನುಸಾರ ಅರ್ಪಿಸಲು ಮತ್ತು ಜನತೆಗೆ ವಿತರಣೆ ಮಾಡಲು ಧರ್ಮಬೋಧಕರು ಬೇಕಾಗುತ್ತಾರೆ. ಇನ್ನು ಮುಂದೆ ಸಮುದಾಯ ನೇಮಕ ಮಾಡುವ ಚರ್ಚ್‌ನ ಉನ್ನತ ಅಧಿಕಾರಿಯು ದಶಾಂಶ ತೆರಿಗೆಯನ್ನು ಸಂಗ್ರಹಿಸಿ ಸ್ವೀಕರಿಸುತ್ತಾರೆ. ನಾವು ಸಮಸ್ತ ಸಮುದಾಯವೂ ಸೇರಿ ಆಯ್ಕೆ ಮಾಡಿದ ಧರ್ಮಬೋಧಕರಿಗೆ ಅವರಿಗೆ ಅಗತ್ಯವಿರುವ ಗೌರವಯುತ ಮೊತ್ತವನ್ನು, ಸಮುದಾಯಕ್ಕೆ ಒಪ್ಪಿತವಾದ ರೀತಿಯಲ್ಲಿ ನೀಡುತ್ತೇವೆ (ಇಲ್ಲವಾದಲ್ಲಿ ಸಮುದಾಯದ ಗಮನಕ್ಕೆ ತಂದು ಪಾವತಿಸುತ್ತೇವೆ). ಉಳಿದಿರುವುದರಲ್ಲಿ, ಪರಿಸ್ಥಿತಿಗೆ ಅನುಗುಣವಾಗಿ, ಎಲ್ಲರ ಸಮಾನ ಅಭಿಪ್ರಾಯದಂತೆ, ಸಮಾಜದ ಬಡ ಜನತೆಗೆ ನೀಡುತ್ತೇವೆ. ಇನ್ನೂ ಹೆಚ್ಚುವರಿಯಾಗಿ ಉಳಿದಲ್ಲಿ ಅದನ್ನು ಯಾರೂ ಸಹ ದಾರಿದ್ರ್ಯಕ್ಕೊಳಗಾಗಿ ದೇಶ ತೊರೆಯದಂತೆ ಬಳಸುತ್ತೇವೆ. ಬಡವರ ಮೇಲೆ ಯಾವುದೇ ಭೂ ತೆರಿಗೆ ವಿಧಿಸುವುದನ್ನು ತಪ್ಪಿಸಲು ಈ ಉಳಿಕೆಯನ್ನು ಬಳಸುತ್ತೇವೆ.
ಒಂದು ವೇಳೆ ಒಂದೆರಡು ಗ್ರಾಮಗಳು ತಮ್ಮ ಅವಶ್ಯಕತೆಗಳಿಗಾಗಿ ಸ್ವತಃ ದಶಾಂಶವನ್ನು ಮಾರಾಟ ಮಾಡಿದ್ದರೆ, ಪ್ರತಿಯೊಂದು ಗ್ರಾಮವೂ ಒಟ್ಟಾರೆಯಾಗಿ ಈ ಕ್ರಮ ಕೈಗೊಂಡಿದ್ದರೆ, ಕೊಳ್ಳುವವರು ನಷ್ಟ ಅನುಭವಿಸದಂತೆ ನೋಡಿಕೊಳ್ಳುತ್ತೇವೆ. ಅಂಥವರೊಡನೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಗ್ರಾಮದಿಂದಲೇ ಬಾಕಿ ಬಡ್ಡಿಯೊಂದಿಗೆ ಮರುಪಾವತಿ ಮಾಡುವಂತೆ ಮಾಡುತ್ತೇವೆ. ಆದರೆ ಯಾರ ಬಳಿಯಾದರೂ ಗ್ರಾಮಗಳಿಂದ ಖರೀದಿಸದೆ ಇರುವ ದಶಾಂಶ ತೆರಿಗೆ ಇದ್ದರೆ, ಅವರ ಪೂರ್ವಿಕರು ಅದನ್ನು ಬಳಸಿಕೊಂಡಿದ್ದರೆ, ಅಂಥವರಿಗೆ ಗ್ರಾಮಗಳು ಮತ್ತೇನನ್ನೂ ಪಾವತಿ ಮಾಡುವಂತಿರುವುದಿಲ್ಲ. ಈ ಗ್ರಾಮಗಳು ತಮ್ಮ ದಶಾಂಶ ತೆರಿಗೆಗಳನ್ನು ಚುನಾಯಿತ ಧರ್ಮಬೋಧಕರಿಗೆ ನೀಡಬಹುದು. ಅಥವಾ ಧರ್ಮ ಗ್ರಂಥಗಳಲ್ಲಿ ಹೇಳಿರುವಂತೆ ಬಡ ಜನತೆಗೆ ನೀಡಬಹುದು. ಸಣ್ಣ ಪ್ರಮಾಣದ ದಶಾಂಶ ತೆರಿಗೆಗಳು, ಧರ್ಮಕ್ಕೆ ಸಂಬಂಧಿಸಿದ್ದರಲಿ ಅಥವಾ ಸಾಮಾನ್ಯರದ್ದೇ ಆಗಿರಲಿ, ಯಾರಿಗೂ ನೀಡುವಂತಿರುವುದಿಲ್ಲ. ಏಕೆಂದರೆ ಜಾನುವಾರುಗಳನ್ನು ಭಗವಂತನು ಮನುಷ್ಯನಿಗಾಗಿಯೇ ಸೃಷ್ಟಿಸಿದ್ದಾನೆ. ಆದ್ದರಿಂದ ನಾವು ಮನುಷ್ಯನ ಹಸ್ತಕ್ಷೇಪದಿಂದ ಸೃಷ್ಟಿಯಾದ ದಶಾಂಶ ತೆರಿಗೆಯನ್ನು ಪಾವತಿಸುವುದಿಲ್ಲ.
ಮೂರನೆಯ ಕಟ್ಟಳೆ : ನಮ್ಮನ್ನು ಮನುಷ್ಯರು ತಮ್ಮ ಆಸ್ತಿ ಎಂದೇ ಪರಿಗಣಿಸುವುದು ದುರದೃಷ್ಟಕರ. ಏಕೆಂದರೆ ಕ್ರಿಸ್ತನು ನಮ್ಮೆಲ್ಲರನ್ನೂ ಸೃಷ್ಟಿಸಿ ಪೋಷಿಸಿದ್ದಾನೆ, ಯಾವುದೇ ತಾರತಮ್ಯವಿಲ್ಲದೆ ಪೋಷಿಸಿದ್ದಾನೆ, ತನ್ನ ಅಮೂಲ್ಯ ನೆತ್ತರು ಸುರಿಸಿ ನಮ್ಮನ್ನು ಸಾಧಾರಣ ಮನುಷ್ಯರನ್ನಾಗಿ, ಮಹನೀಯರನ್ನಾಗಿ ಮಾಡಿದ್ದಾನೆ. ಅಂತೆಯೇ, ಧರ್ಮಗ್ರಂಥದ ಅನುಸಾರ ನಾವು ಸ್ವತಂತ್ರರಾಗಿರಬೇಕು, ಸ್ವತಂತ್ರರಾಗಿರಲು ಬಯಸುತ್ತೇವೆ. ನಾವು ಪರಿಪೂರ್ಣ ಸ್ವಾತಂತ್ರ್ಯ ಪಡೆದಿರಬೇಕು ಎಂದಾಗಲೀ, ಯಾವುದೇ ಅಧಿಕಾರದ ಅಧೀನರಾಗಿ ಇರಕೂಡದು ಎಂದಾಗಲೀ ಭಾವಿಸುವುದಿಲ್ಲ. ದುರಾಸೆಯಿಂದ ನಾವು ಅಶಿಸ್ತಿನ ಬದುಕು ನಡೆಸಬೇಕು ಎಂದು ಭಗವಂತನು ನಮಗೆ ಬೋಧಿಸುವುದಿಲ್ಲ. ಆದರೆ ನಾವು ನಮ್ಮ ಪ್ರಭು ಭಗವಂತನನ್ನು ಪ್ರೀತಿಸಬೇಕು, ಆರಾಧಿಸಬೇಕು ಮತ್ತು ನಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು ಎಂದು ಬಯಸುತ್ತಾನೆ. ನಾವು ಈ ಎಲ್ಲ ನಿಯಮಗಳನ್ನೂ ಅನುಸರಿಸಬೇಕು. ಏಕೆಂದರೆ ಭಗವಂತನು ನಮಗೆ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಬೋಧಿಸಿದ್ದಾನೆ. ಮೇಲಧಿಕಾರಿಗಳನ್ನು ಧಿಕ್ಕರಿಸಿ ಎಂದು ಭಗವಂತನು ನಮಗೆ ಆಜ್ಞಾಪಿಸಿಲ್ಲ ನಾವು ವಿನಮ್ರರಾಗಿರಬೇಕು ಎಂದು ಹೇಳಿದ್ದಾನೆ. ಮೇಲಧಿಕಾರಿಗಳ ಬಗ್ಗೆ ಮಾತ್ರವೇ ಅಲ್ಲದೆ ಎಲ್ಲರೊಡನೆಯೂ ವಿನಮ್ರತೆಯಿಂದಿರಲು ಬೋಧಿಸಿದ್ದಾನೆ. ಹಾಗಾಗಿ ನಾವು ಭಗವಂತನ ಅಣತಿಯಂತೆ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ, ಸರಿಯಾದ ಮೇಲಧಿಕಾರಿಗಳಿಗೆ ವಿನಮ್ರತೆಯಿಂದ ಒಬ್ಬ ಕ್ರೈಸ್ತನಿಗೆ ತಕ್ಕಂತೆ ಇರುತ್ತೇವೆ. ಆದ್ದರಿಂದ ನಮ್ಮನ್ನು ನೈಜ ಕ್ರೈಸ್ತರಂತೆ ಪರಿಗಣಿಸಿ, ದೈವವಾಣಿಯಲ್ಲಿ ನಾವು ಜೀತಗಾರರು ಎಂದು ಗುರುತಿಸಲ್ಪಡದಿದ್ದರೆ, ಜೀತಗಾರಿಕೆಯಿಂದ ವಿಮುಕ್ತಗೊಳಿಸುತ್ತೀರಿ ಎಂದು ನಂಬಿರುತ್ತೇವೆ.
ನಾಲ್ಕನೆಯ ಕಟ್ಟಳೆ : ನಾಲ್ಕನೆಯದಾಗಿ, ಯಾವುದೇ ಬಡವನು ಹರಿವ ನೀರಿನಲ್ಲಿ ಮೀನು ಹಿಡಿಯುತ್ತಾ, ಹಕ್ಕಿಗಳನ್ನು ಬೇಟೆಯಾಡುತ್ತಾ, ಜಿಂಕೆ ಮಾಂಸವನ್ನು ಶೋಧಿಸುತ್ತಾ ಬದುಕು ಸವೆಸಬಾರದು ಎನ್ನುವುದು ಇಲ್ಲಿನ ಸಾಂಪ್ರದಾಯಿಕ ನಿಲುವು ಆಗಿದ್ದು, ಇದು ಭ್ರಾತೃಘಾತುಕವಷ್ಟೇ ಅಲ್ಲದೆ ದೈವವಾಣಿಗೆ ವಿರುದ್ಧವಾದುದು ಎಂದೇ ನಂಬಿದ್ದೇವೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು, ಭಗವಂತನ ಕೃಪೆಯಿಂದ, ಮನುಷ್ಯರ ಬಳಕೆಗಾಗಿಯೇ ಬೆಳೆಯಲಾಗುವ ಧಾನ್ಯಗಳನ್ನು ಪ್ರಾಣಿಗಳ ಪಾಲಾಗಲು ಮುಕ್ತ ಅವಕಾಶ ನೀಡಿರುವುದು ನಮ್ಮಲ್ಲಿ ಆಕ್ರೋಶ ಹುಟ್ಟಿಸುತ್ತದೆ. ಆದರೂ ನಾವು ಅಸಹಾಯಕರಾಗಿ ಇರಬೇಕಾಗಿದೆ. ಇದು ನ್ಯಾಯಯುತವೂ ಅಲ್ಲ, ಸ್ನೇಹಪೂರ್ವಕವೂ ಅಲ್ಲ. ಭಗವಂತನು ಮಾನವನನ್ನು ಸೃಷ್ಟಿಸಿದಾಗ ಎಲ್ಲ ಪ್ರಾಣಿಗಳ ಮೇಲೆಯೂ ಅಧಿಕಾರವನ್ನು ನೀಡಿದ್ದಾನೆ. ಬಾನಲ್ಲಿ ಹಾರುವ ಹಕ್ಕಿಗಳ ಮೇಲೆಯೂ, ನೀರಿನಲ್ಲಿರುವ ಮೀನಿನ ಮೇಲೆಯೂ ಅಧಿಪತ್ಯ ಸಾಧಿಸಲು ಕರುಣಿಸಿದ್ದಾನೆ. ಹಾಗಾಗಿ ಮನುಷ್ಯನು ನೀರಿನ ಮೇಲೆ ಒಡೆತನ ಸಾಧಿಸುವುದೇ ಆದರೆ ಸೂಕ್ತ ದಾಖಲೆಗಳ ಮೂಲಕ ಅದನ್ನು ಖರೀದಿಸಿರುವುದಕ್ಕಾಗಿ ಸಾಕ್ಷಿ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಅವನಿಂದ ನಾವು ಬಲಾತ್ಕಾರ ಮಾಡಿ ಇದನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ಅವನ ಹಕ್ಕುಗಳನ್ನು ಸ್ನೇಹಪೂರ್ವಕವಾಗಿ ಚಲಾಯಿಸಲು ಅವಕಾಶ ನೀಡಬೇಕು. ಹೀಗೆ ಸಾಕ್ಷಿ ನೀಡಲು ವಿಫಲರಾದ ಯಾವುದೇ ವ್ಯಕ್ತಿ ವಿನಮ್ರತೆಯಿಂದ ತನ್ನ ಹಕ್ಕುಗಳನ್ನು ಬಿಟ್ಟುಕೊಡುವುದು ನ್ಯಾಯಯುತವಾದುದು.
ಐದನೆಯ ಕಟ್ಟಳೆ : ಐದನೆಯದಾಗಿ, ಮರಗಳ ಕೊಯ್ಲು ಮಾಡುವುದಕ್ಕೆ ಸಂಬಂಧಿಸಿದಂತೆ ನಮಗೆ ಅನ್ಯಾಯವಾಗಿದೆ. ಕುಲೀನ ವರ್ಗಗಳು ಎಲ್ಲ ಅರಣ್ಯಗಳನ್ನೂ ತಾವೇ ವಶಪಡಿಸಿಕೊಂಡಿದ್ದಾರೆ. ಒಬ್ಬ ಬಡವನಿಗೆ ಸೌದೆ ಬೇಕಾದರೆ ಅವನು ಎರಡರಷ್ಟು ಬೆಲೆ ತೆರಬೇಕಾಗಿದೆ. ಆಧ್ಯಾತ್ಮಿಕವಾಗಿ ಆಗಲೀ, ಲೌಕಿಕವಾಗಿ ಆಗಲೀ ಈ ಅರಣ್ಯ ಸಂಪತ್ತು ಒಡೆಯರ ಪಾಲಾಗಿದ್ದರೆ, ಒಂದು ವೇಳೆ ಇದನ್ನು ನ್ಯಾಯಯುತವಾಗಿ ಖರೀದಿಸದೆ ಇದ್ದಲ್ಲಿ, ಅದು ಸಮುದಾಯಕ್ಕೆ ಸೇರಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ಮನೆಗೆ ಅಗತ್ಯವಾದಷ್ಟು ಸೌದೆಯನ್ನು ಸ್ವತಃ ಸಂಗ್ರಹಿಸುವ ಹಕ್ಕು ನೀಡಬೇಕು. ಯಾವುದೇ ವ್ಯಕ್ತಿಗೆ ಪೀಠೋಪಕರಣಗಳಿಗಾಗಿ ಮರದ ಅವಶ್ಯಕತೆ ಇದ್ದರೆ ಅದನ್ನು ಉಚಿತವಾಗಿ ಒದಗಿಸಬೇಕು. ಈ ಮಾಹಿತಿಯನ್ನು ಸಮುದಾಯವೇ ನೇಮಿಸಿದ ವ್ಯಕ್ತಿಯೊಬ್ಬರಿಗೆ ತಿಳಿಸಿ ನಂತರ ಒದಗಿಸಬೇಕು. ಒಂದು ವೇಳೆ ಸಮುದಾಯದ ನಿಯಂತ್ರಣದಲ್ಲಿ ಯಾವುದೇ ಅರಣ್ಯ ಇಲ್ಲದೆ ಹೋದಲ್ಲಿ, ನ್ಯಾಯಯುತವಾಗಿ ಖರೀದಿಸಲಾಗಿರುವ ಅರಣ್ಯವನ್ನು ಕ್ರೈಸ್ತ ನಿಯಮಗಳ ಅನುಸಾರ, ಸ್ನೇಹಪೂರ್ವಕವಾಗಿ ನಿರ್ವಹಿಸತಕ್ಕದ್ದು. ಒಂದು ವೇಳೆ ಅರಣ್ಯವನ್ನು ಅನ್ಯಾಯವಾಗಿ ಅತಿಕ್ರಮಿಸಿಕೊಂಡಿದ್ದು ನಂತರ ಮಾರಾಟ ಮಾಡಿದ್ದರೆ, ಅದನ್ನು ಸ್ನೇಹ ಭಾವದಿಂದ ಇತ್ಯರ್ಥ ಮಾಡಿ, ಧರ್ಮಗ್ರಂಥಗಳಿಗೆ ಅನುಸಾರವಾಗಿ ನ್ಯಾಯ ತೀರ್ಮಾನ ಮಾಡತಕ್ಕದ್ದು.
ಆರನೆಯ ಕಟ್ಟಳೆ : ನಮ್ಮ ಆರನೆಯ ದೂರು ಎಂದರೆ, ನಮ್ಮಿಂದ ಹೆಚ್ಚಿನ ಸೇವೆಯನ್ನು ಬಯಸುತ್ತಿರುವುದು ಮತ್ತು ಇದು ದಿನೇ ದಿನೇ ಹೆಚ್ಚಾಗುತ್ತಲೇ ಇರುವುದು. ಈ ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಲು ಕೋರುತ್ತಲೇ ನಮ್ಮನ್ನು ಈ ರೀತಿ ಶೋಷಣೆಗೊಳಪಡಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಲಿಚ್ಚಿಸುತ್ತೇವೆ. ನಮ್ಮ ಪೂರ್ವಿಕರು ಭಗವಂತನ ಅಣತಿಯಂತೆ ಮಾತ್ರವೇ ಸೇವೆ ಸಲ್ಲಿಸುತ್ತಿದ್ದುದರಿಂದ ಈ ನಿಟ್ಟಿನಲ್ಲಿ ನಮಗೆ ಅನುಕಂಪ ತೋರಿ ನ್ಯಾಯ ಒದಗಿಸಬೇಕೆಂದು ಕೋರುತ್ತೇವೆ.
ಏಳನೆಯ ಕಟ್ಟಳೆ : ಏಳನೆಯದಾಗಿ, ನಮ್ಮ ಮಾಲೀಕರು ಇನ್ನೂ ಹೆಚ್ಚಿನದಾಗಿ ನಮ್ಮನ್ನು ಶೋಷಿಸಲು ಅವಕಾಶ ನೀಡುವುದಿಲ್ಲ. ಯಾವುದು ನ್ಯಾಯಯುತವಾದುದೋ ಅದನ್ನು ಮಾತ್ರವೇ ಅವರು ಆಗ್ರಹಿಸತಕ್ಕದ್ದು. ಭಗವಂತನ ಮತ್ತು ರೈತರ ನಡುವೆ ಏರ್ಪಟ್ಟಿರುವ ಒಪ್ಪಂದದ ಅನುಸಾರ ನ್ಯಾಯಯುತವಾದ ಬೇಡಿಕೆಗಳನ್ನಷ್ಟೇ ಅವರು ಮುಂದಿಡಬೇಕು. ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತೆ ಮಾಲೀಕರು ನಮ್ಮ ಮೇಲೆ ಒತ್ತಡ ಹೇರುವಂತಿಲ್ಲ. ಕೂಲಿ ನೀಡದೆ ರೈತರಿಂದ ಇತರ ಬಾಕಿ ವಸೂಲಿ ಮಾಡುವಂತಿಲ್ಲ. ರೈತರು ತಮ್ಮ ಸ್ವತ್ತನ್ನು ನೆಮ್ಮದಿಯಿಂದ ಹೊಂದಿರಲು ಅನುಮತಿಯನ್ನು ಕೋರುತ್ತೇವೆ. ಆದರೆ ಅವಶ್ಯಕತೆ ಇದ್ದಾಗ ರೈತರು ಮಾಲೀಕರಿಗೆ ನೆರವಾಗಬೇಕು ಮತ್ತು ರೈತರಿಗೆ ಅನಾನುಕೂಲವಾಗದೆ ಇರುವಂತಹ ಸಂದರ್ಭಗಳಲ್ಲಿ, ಸೂಕ್ತ ಕೂಲಿ ನೀಡುವ ಮೂಲಕ ಸೇವೆಯನ್ನು ಪಡೆಯಬೇಕು.
ಎಂಟನೆಯ ಕಟ್ಟಳೆ : ಎಂಟನೆಯದಾಗಿ, ನಮ್ಮ ಬಳಿ ಇರುವ ಹಿಡುವಳಿಯು, ನಾವು ಅದರಿಂದ ಗಳಿಸುವ ಬಾಡಿಗೆಯನ್ನು ಪೂರೈಸಲೂ ಸಾಲದೆ ಹೊರೆಯಾಗುತ್ತಿದೆ. ಈ ರೀತಿಯಾಗಿ ರೈತರು ನಾಶವಾಗುತ್ತಿದ್ದಾರೆ. ಈ ಹಿಡುವಳಿಗಳನ್ನು ಪರೀಕ್ಷಿಸಲು ವಿಶ್ವಾಸಾರ್ಹ ವ್ಯಕ್ತಿಗಳನ್ನು ನೇಮಿಸುವಂತೆ ನಾವು ಮಾಲೀಕರನ್ನು ಕೋರುತ್ತೇವೆ. ನ್ಯಾಯಯುತವಾದ ಬಾಡಿಗೆಯನ್ನು ನಿಗದಿಪಡಿಸಲು ಕೋರುತ್ತೇವೆ. ತನ್ಮೂಲಕ ರೈತರು ಯಾವುದೇ ಆದಾಯವೂ ಇಲ್ಲದೆ ದುಡಿಯುವುದನ್ನು ತಪ್ಪಿಸಿದಂತಾಗುತ್ತಾದೆ. ಶ್ರಮಿಕನು ಅವನಿಗೆ ನೀಡಲಾಗುವ ಕೂಲಿಗೆ ತಕ್ಕುದಾಗಿರುತ್ತಾನೆ.
ಒಂಬತ್ತನೆಯ ಕಟ್ಟಳೆ : ಒಂಬತ್ತನೆಯ ಅಂಶವೆಂದರೆ, ಹೊಸ ಕಾನೂನುಗಳನ್ನು ನಿರಂತರವಾಗಿ ಜಾರಿಮಾಡುತ್ತಿರುವುದು ನಮಗೆ ಹೊರೆಯಾಗಿ ಪರಿಣಮಿಸಿದೆ. ನಮ್ಮ ತಪ್ಪಿಗೆ ಅನುಗುಣವಾಗಿ ನ್ಯಾಯ ತೀರ್ಮಾನವಾಗುತ್ತಿಲ್ಲ. ಕೆಲವೊಮ್ಮೆ ಅತಿಯಾದ ಔದಾರ್ಯ ತೋರಲಾಗುತ್ತಿದ್ದರೆ, ಕೆಲವೊಮ್ಮೆ ದುರಾಲೋಚನೆಯಿಂದ ನ್ಯಾಯ ನೀಡಲಾಗುತ್ತಿದೆ. ನಮ್ಮ ಅಭಿಪ್ರಾಯದಲ್ಲಿ, ಹಳೆಯ ಲಿಖಿತ ಕಾನೂನಿನ ಅನ್ವಯವೇ ನ್ಯಾಯ ನಿರ್ಣಯ ಆಗಬೇಕಿದೆ. ಆಗ ಪ್ರಕರಣಗಳು ತಾರತಮ್ಯವಿಲ್ಲದೆ ನ್ಯಾಯಯುತವಾಗಿ ನಿಷ್ಕರ್ಷೆಗೊಳಗಾಗುತ್ತವೆ.
ಹತ್ತನೆಯ ಕಟ್ಟಳೆ : ಹತ್ತನೆಯ ಅಂಶವೆಂದರೆ, ಒಂದು ಕಾಲದಲ್ಲಿ ಸಮುದಾಯಕ್ಕೆ ಸೇರಿದ್ದ ಹುಲ್ಲುಗಾವಲುಗಳನ್ನು ಮತ್ತು ಬಯಲುಗಳನ್ನು ಕೆಲವೇ ವ್ಯಕ್ತಿಗಳು ಅತಿಕ್ರಮಿಸುತ್ತಿದ್ದಾರೆ. ಇವುಗಳನ್ನು ನಾವು ಪುನಃ ನಮ್ಮ ವಶಕ್ಕೆ ಪಡೆಯುತ್ತೇವೆ. ಭೂಮಿಯನ್ನು ನ್ಯಾಯಯುತವಾಗಿಯೇ ಖರೀದಿಸಿರುವ ಸಾಧ್ಯತೆಗಳೂ ಇವೆ. ಒಂದು ವೇಳೆ ಈ ರೀತಿಯಲ್ಲಿ ಅಕ್ರಮವಾಗಿ ಖರೀದಿಸಲ್ಪಟ್ಟಿದ್ದರೆ, ಸನ್ನಿವೇಶಕ್ಕೆ ಅನುಗುಣವಾಗಿ ಸ್ನೇಹಮಯಿ ಒಪ್ಪಂದದ ಮೂಲಕ ವಿಷಯವನ್ನು ಇತ್ಯರ್ಥ ಮಾಡಬೇಕು.
ಹನ್ನೊಂದನೆಯ ಕಟ್ಟಳೆ : ಹನ್ನೊಂದನೆಯ ಅಂಶವೆಂದರೆ, ಹಿಡುವಳಿದಾರನು ಸತ್ತಾಗ ಅವನ ಸ್ವತ್ತನ್ನು ಅವನ ದಣಿಗೆ ಒಪ್ಪಿಸಲಾಗುವ ಪದ್ಧತಿಯನ್ನು ನಾವು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ದೈವೇಚ್ಚೆಗೆ ವಿರುದ್ಧವಾಗಿ ವಿಧವೆಯರ ಮತ್ತು ಅನಾಥರ ಸ್ವತ್ತನ್ನು ಅತಿಕ್ರಮಿಸಿ ವಶಪಡಿಸಿಕೊಳ್ಳುವುದಕ್ಕೂ ನಾವು ಅವಕಾಶ ನೀಡುವುದಿಲ್ಲ. ಅನೇಕ ಪ್ರದೇಶಗಳಲ್ಲಿ ಈ ವಿಧವೆಯರನ್ನು ಮತ್ತು ಅನಾಥರನ್ನು ರಕ್ಷಿಸಬೇಕಾದವರೇ ಹೀಗೆ ಅನ್ಯಾಯ ಎಸಗುತ್ತಿರುವುದನ್ನು ನಿಷೇಧಿಸುತ್ತೇವೆ. ಈ ಜನರು ನಮ್ಮನ್ನು ಕೊಳ್ಳೆಹೊಡೆಯುತ್ತಿದ್ದು ಅವಮಾನಿಸುತ್ತಿದ್ದು ತಮ್ಮ ಅಲ್ಪ ಅಧಿಕಾರವನ್ನು ಬಳಸಿ ಅತಿಕ್ರಮಿಸುತ್ತಿದ್ದಾರೆ. ಭಗವಂತನು ಇನ್ನು ಇದನ್ನು ಸಹಿಸುವುದಿಲ್ಲ. ಇದನ್ನು ಕೂಡಲೇ ಹೋಗಲಾಡಿಸುತ್ತಾನೆ. ಭವಿಷ್ಯದಲ್ಲಿ ಯಾವುದೇ ಮನುಷ್ಯನೂ ಹೀಗೆ ಸಲ್ಲಿಸಬೇಕಾಗುವುದಿಲ್ಲ.
ಅಂತಿಮವಾಗಿ; ಹನ್ನೆರಡನೆಯ ಮತ್ತು ಕೊನೆಯ ಅಂಶ ನಮ್ಮ ಅಂತಿಮ ತೀರ್ಮಾನ ಮತ್ತು ನಿರ್ಣಯವಾಗಿದೆ. ಈ ಮೇಲಿನ ಎಲ್ಲ ಅಥವಾ ಒಂದೆರಡು ಕಟ್ಟಳೆಗಳು ದೈವವಾಣಿಗೆ ವ್ಯತಿರಿಕ್ತವಾಗಿರಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಅಭಿಪ್ರಾಯದಲ್ಲಿ ಈ ಕಟ್ಟಳೆಗಳು ಹಾಗೊಮ್ಮೆ ವ್ಯತಿರಿಕ್ತವಾಗಿದ್ದಲ್ಲಿ ನಾವು ಅದನ್ನು ಹಿಂಪಡೆಯುತ್ತೇವೆ. ಆದರೆ ಧರ್ಮಗ್ರಂಥದ ವಿವರಣೆಯ ಅನುಸಾರ ಇವು ದೈವವಾಣಿಗೆ ವ್ಯತಿರಿಕ್ತವಾಗಿವೆ ಎಂದು ನಿರೂಪಿತವಾಗಬೇಕು. ಒಂದು ವೇಳೆ ಈ ಕಟ್ಟಳೆಗಳಿಗೆ ಈಗ ಸಮ್ಮತಿ ನೀಡಿ ನಂತರ ಅವುಗಳು ವ್ಯತಿರಿಕ್ತವಾಗಿವೆ ಎಂದು ಕಂಡುಬಂದರೆ, ಆ ಕ್ಷಣದಿಂದಲೇ ಅವುಗಳನ್ನು, ಯಾವುದೇ ಬಲಾತ್ಕಾರ ಇಲ್ಲದೆಯೇ, ಅನೂರ್ಜಿತಗೊಳಿಸುತ್ತೇವೆ. ಹಾಗೆಯೇ ನ್ಯಾಯ ಮತ್ತು ಧರ್ಮಗ್ರಂಥಗಳಿಗೆ ಅನುಸಾರವಾಗಿ ಹೊಸ ದೂರುಗಳನ್ನೇನಾದರೂ ಗುರುತಿಸಿದ ಪಕ್ಷದಲ್ಲಿ, ಭಗವಂತನ ವಿರುದ್ಧ ಮತ್ತು ನಮ್ಮ ಸಹೋದರರ ವಿರುದ್ಧ ಎಸಗಲಾಗುವ ಅಪರಾಧಗಳಿಗೆ ಸಂಬಂಧಿಸಿದ್ದರೆ, ನಾವು ಅವುಗಳನ್ನೂ ಮಂಡಿಸುವ ಅಧಿಕಾರವನ್ನು ಹೊಂದಿರುತ್ತೇವೆ. ಎಲ್ಲ ಕ್ರೈಸ್ತ ಬೋಧನೆಗಳಲ್ಲೂ ಇದನ್ನು ಅನುಸರಿಸುತ್ತೇವೆ. ಇದಕ್ಕಾಗಿ ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ, ಏಕೆಂದರೆ ಅವನು ಮಾತ್ರ ಇವೆಲ್ಲವನ್ನೂ ಕರುಣಿಸಲು ಸಾಧ್ಯ. ಕ್ರಿಸ್ತನ ಶಾಂತಿಮಂತ್ರ ನಮ್ಮೆಲ್ಲರನ್ನೂ ಬಂಧಿಸುತ್ತದೆ.