ಬೆಂಗಳೂರು: ರೈತರ ಸಮರಶೀಲ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರವು ರದ್ದುಪಡಿಸಿದ ಕೃಷಿ ಕಾಯ್ದೆಗಳ ಮುಂದುವರೆದ ಭಾಗವಾಗಿ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಡಿಸೆಂಬರ್ 12ರಂದು ರಾಜ್ಯಮಟ್ಟದ ರೈತರ ಸಮಾವೇಶವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಜಿ.ಸಿ. ಬಯ್ಯಾರೆಡ್ಡಿ ತಿಳಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ 13, 2021 ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಜಾರಿಗೊಳಸಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದಲ್ಲದೆ, ಬೆಳೆ ನಷ್ಟ ಪರಿಹಾರ, ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು.
ರಾಜ್ಯದ ಸುಮಾರು 50 ರೈತರು, ದಲಿತರು, ಕಾರ್ಮಿಕರು, ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟಿಸುತ್ತಿರುವ ಈ ‘ರೈತರ ಅಧಿವೇಶನ’ದ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿಗಳಾದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ವಹಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ದ ರಾಷ್ಟ್ರೀಯ ನಾಯಕ ಯೋಗೇಂದ್ರ ಯಾದವ್ ಅಧಿವೇಶನವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಜ್ಯದ ಎಲ್ಲೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದರೆ ಎಂದು ತಿಳಿಸಿದರು.
ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟಿ, ಇತ್ಯಾದಿ ಕೃಷಿ ಸಂಬಂಧಿತ ಎಲ್ಲಾ ಕ್ಷೇತ್ರಗಳನ್ನು ಜಗತ್ತಿನ, ದೇಶದ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲು ರೂಪಿಸಲಾಗಿದ್ದ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಶತಮಾನದ ಚಾರಿತ್ರಿಕ ರೈತರ ಹೋರಾಟಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕಾಯ್ದೆಗಳನ್ನು ಹಿಂತೆಗೆದುಕೊಂಡಿದೆ.
ಹೀಗಾಗಿ ಡಿಸೆಂಬರ್ 13ರಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೂಡಲೇ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು, ಅಲ್ಲದೆ ವಿಪರೀತವಾದ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, ಆಹಾರ ಧಾನ್ಯ ಬೆಳೆಗಳ ಎಕರೆಗೆ ಕನಿಷ್ಠ 25,000 ರೂ, ತರಕಾರಿ, ತೋಟಗಾರಿಕೆ ಬೆಳೆಗಳ ಎಕರೆಗೆ ಕನಿಷ್ಟ 1 ಲಕ್ಷ ರೂ. ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಸಂಕಷ್ಟದಲ್ಲಿ ಇರುವ ಹೈನುಗಾರಿಕೆ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರಿಂದ 15 ರೂ.ಗೆ ಏರಿಸಬೇಕು ಎಂದು ಆಗ್ರಹಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಚಾಲಕ ಬಡಗಲಪುರ ನಾಗೇಂದ್ರ ಮಾತನಾಡಿ ʻʻ ರಾಜ್ಯದ ಬಿಜೆಪಿ ಸರ್ಕಾರ ಕಾಯ್ದೆಗಳನ್ನು ವಾಪಸ್ಸು ಪಡೆಯಲು ಹಿಂದೇಟು ಹಾಕುತ್ತಿದೆ. ರೈತ ವಿರೋಧಿ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗಳನ್ನು ರದ್ದು ಮಾಡಬೇಕು ಅದರೊಂದಿಗೆ, ಬಗರ್ ಹುಕ್ಕಂ, ಅರಣ್ಯ ಭೂಮಿ ಸಕ್ರಮಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿಗಳನ್ನು ರೂಪಿಸಬೇಕು. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೃಷಿ ಭೂಮಿ ಖರೀದಿ ಮಾಡಲು ರಾಜ್ಯದ ಬಜೆಟ್‌ನಲ್ಲಿ ಕನಿಷ್ಠ 2000 ಕೋಟಿ ರೂ. ಗಳನ್ನು ಮೀಸಲಿಡಬೇಕು, ಗ್ರಾಮೀಣ ಬಡವರ ಮನೆ ನಿವೇತನದ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಬಿ.ಡಿ.ಎ. ಮಾದರಿಯಲ್ಲಿ ಭೂ ಸ್ವಾಧೀನ ಮಾಡಿ, ಉಚಿತವಾಗಿ ನಿವೇಶನ, ವಸತಿ ನೀಡಬೇಕುʼʼ ಎಂದು ತಿಳಿಸಿದರು.
ಹೆಚ್.ವಿ.ದಿವಾಕರ್ ಜಾನುವಾರು ಹತ್ಯೆ ಕಾಯ್ದೆಯ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವರಿಗೆ ವಯಸ್ಸಾದ, ಕೃಷಿಗೆ ಯೋಗ್ಯವಲ್ಲದ ದನ, ಕರುಗಳನ್ನು ಮಾರುಕಟ್ಟೆ ದರದಲ್ಲಿ ರಾಜ್ಯ ಸರ್ಕಾರವೇ ಖರೀದಿ ಮಾಡಬೇಕು, ವ್ಯಾಪಕ ಕೃಷಿ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾದಂತಹ ಅಂಶಗಳಿಗೆ ಸಂಬಂಧಿಸಿದ “ಋಣ ಮುಕ್ತ ಕಾಯ್ದೆ” ಯನ್ನು ಜಾರಿಗೆ ತರಬೇಕು, ರೈತರ ಆತ್ಮಹತ್ಯೆಗಳನ್ನು ತಡೆಯಲು ‘ಕನಿಷ್ಠ ಬೆಂಬಲ ಬೆಲೆ ಕಾನೂನು’ನ್ನು ರಚನೆ ಮಾಡಬೇಕು, ಜನವಿರೋಧಿ ಹೊಸ ಶಿಕ್ಷಣ ನೀತಿ (ಎನ್.ಇ.ಪಿ) ಹಿಂತೆಗೆದುಕೊಳ್ಳಬೇಕು, ಅಸಂಘಟಿತ ಕಾರ್ಮಿಕರಿಗೆ ಮಾಸಿಕ 21,000 ರೂ. ಕನಿಷ್ಟ ವೇತನ ಜಾರಿ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಮಾರಾಟ ನಿಲ್ಲಿಸಬೇಕು, ಸಾಮಾನ್ಯ ಜನರನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಕ್ಷಿಸಲು, ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು 600 ಕ್ಕೆ ಹೆಚ್ಚಳ ಮಾಡಿ, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಇತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ಬೆಳಗಾವಿಯ “ರೈತರ ಅಧಿವೇಶನ” ಸಂಘಟಿಸಲಾಗುತ್ತಿದ್ದು, ಕೂಡಲೇ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹತ್ತಾರು “ಕಿಸಾನ್ ಮಹಾ ಪಂಚಾಯತ್”ಗಳನ್ನು ಸಂಘಟಿಸಿ, “ದೆಹಲಿ ಮಾದರಿ”ಯ ಹೋರಾಟಗಳನ್ನು ಹಮ್ಮಿಕೊಳ್ಳಲು ಸಂಯುಕ್ತ ಹೋರಾಟ-ಕರ್ನಾಟಕ ನಿರ್ಧರಿಸಿದೆ ಎಂದು ಹೇಳಿದರು.
ರೈತರು, ಶೋಷಿತರ ಈ ಹೋರಾಟವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಎಚ್ಛರಿಕೆ ನೀಡುತ್ತೇವೆ. ಈ ರೈತ ಆಂದೋಲನದಲ್ಲಿ ರೈತರು ಮಾತ್ರವಲ್ಲದೆ, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಸೇರಿದಂತೆ ಎಲ್ಲಾ ವಿಭಾಗದ ಜನತೆ ಭಾಗವಹಿಸಲಿದ್ದಾರೆ.
ಸಂಚಾಲನಾ ಸಮಿತಿಯಲ್ಲಿ ಕವಿತಾ ಕುರುಗಂಟೆ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ ಕೆರಗೊಡು, ಮಾವಳ್ಳಿ ಶಂಕರ್, ಕೆ.ವಿ.ಭಟ್, ಪಿಆರ್‌ಎಸ್ ಮಣಿ, ನೂರ್ ಶ್ರೀಧರ್, ದೇವಿ, ವಾಸುದೇವರೆಡ್ಡಿ, ಜಯಣ್ಣ ಇದ್ದಾರೆ.