– ಕೇಂದ್ರ ಸರಕಾರಕ್ಕೆ ಎ.ಐ.ಕೆ.ಎಸ್. ಎಚ್ಚರಿಕೆ
“ಕಾರ್ಪೊರೇಟ್‌ಗಳ ಬಿಗಿಮುಷ್ಠಿಯಲ್ಲಿ ಸಿಲುಕಿರುವ ನರೇಂದ್ರ ಮೋದಿ 8 ಡಿಗ್ರಿ ಕೊರೆಯುವ ಚಳಿಯಲ್ಲಿ ಕೂತಿರುವ ಲಕ್ಷಾಂತರ ರೈತರ ಸಂಘರ್ಷವನ್ನು ಪರಿಹರಿಸುವ ಸಾಮರ್ಥ್ಯವಿಲ್ಲದ ಒಬ್ಬ ದುರ್ಬಲ ಮತ್ತು ವಿಫಲ ಆಡಳಿತಗಾರ ಎಂಬುದನ್ನು ರೈತ ಚಳುವಳಿ ಸಾಬೀತು ಮಾಡಿದೆ.”
ರೈತರ ಒಗ್ಗಟ್ಟನ್ನು ಮುರಿಯುವ, ಅವರನ್ನು ವಿಭಜಿಸುವ ಕೇಂದ್ರ ಸರಕಾರದ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ, ದೇಶಿ-ವಿದೇಶಿ ಕಾರ್ಪೊರೇಟ್‌ಗಳಿಗಾಗಿ ತಂದಿರುವ ಕಾಯ್ದೆಗಳು ರದ್ದಾಗುತ್ತವೆ ಎಂಬುದನ್ನು ದೇಶಾದ್ಯಂತ ತೀವ್ರಗೊಳ್ಳುತ್ತಿರುವ ರೈತ ಆಂದೋಲನ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎ.ಐ.ಕೆ.ಎಸ್.)ದ ಅಧ್ಯಕ್ಷ ಅಶೋಕ ಧವಳೆ ಮತ್ತು ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಹೇಳಿದ್ದಾರೆ. ಅವರು ಎ.ಐ.ಕೆ.ಎಸ್. ದಿಲ್ಲಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.
ಜನಗಳನ್ನು ದಾರಿ ತಪ್ಪಿಸಲು ಮೋದಿ ಸರಕಾರ ಯಾವ ರೈತ ಮುಖಂಡರ ಬೆಂಬಲವನ್ನು ತೋರಿಸುತ್ತಿದೆಯೋ ಅವರ ಹಿಂದೆ ಐದು ರೈತರೂ ಇಲ್ಲ. ಇಂತಹ ಕಾಗದದ ಮೇಲೆ ಮಾತ್ರವೇ ಇರುವ ಸಂಘಟನೆಗಳನ್ನು ತೋರಿಸಿ ಸರಕಾರ ನಡೆಸುತ್ತಿರುವ ಕಸರತ್ತಿನ ಹಿಂದೆ ಅಡಗಿರುವ ಅದರ ದುರುದ್ದೇಶವನ್ನು, ಹತಾಶೆಯನ್ನು 19 ದಿನಗಳಿಂದ ದಿಲ್ಲಿಯ ಗಡಿಗಳಲ್ಲಿ ಶಾಂತಿಯುತವಾಗಿ ಕೂತಿರುವ ಲಕ್ಷಾಂತರ ರೈತರು ಈಗಾಗಲೇ ಜಗತ್ತಿನ ಎದುರು ಬಯಲಿಗೆಳೆದಿದ್ದಾರೆ ಎಂದು ಅಶೋಕ ಧವಳೆ ಹೇಳಿದರು.
ಅಶ್ರುವಾಯು, ಜಲಫಿರಂಗಿ, ಬಂಧನಗಳು ಸೇರಿದಂತೆ ದಮನದ ಎಲ್ಲ ಉಪಕರಣಗಳನ್ನು ಬಳಸಿ ವಿಫಲವಾದ ಮೋದಿ-ಷಾ, ನಂತರ ರೈತರನ್ನು ಖಲಿಸ್ತಾನಿಗಳು, ಪಾಕಿಸ್ತಾನಿಗಳು, ದೇಶದ್ರೋಹಿಗಳು ಎಂದೂ ಕರೆದು ಹೆಸರುಗೆಡಿಸುವ ತಮ್ಮ ಚಾಳಿಯನ್ನೂ ಪ್ರಯೋಗಿಸಿ ನೋಡಿದರು. ಆದರೆ ಅವುಗಳಿಂದಲೂ ಪ್ರಯೋಜನ ಸಿಗದಾಗ ಈಗ ರೈತ ಚಳುವಳಿಯಲ್ಲಿ ಬಿರುಕು ಉಂಟಾಗಿದೆ ಎಂಬ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ಗೇಲಿ ಮಾಡಿದರು.
ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮಾತಾಡುತ್ತ ಈ ರೈತ ಚಳುವಳಿ ಇತಿಹಾಸ ನಿರ್ಮಿಸಿದೆ ಎಂದು ಅಭಿನಂದಿಸಿದರು. ಇದು ರೈತ ಕೃಷಿಗೆ ಸಂಬಂಧಪಟ್ಟ ಎಲ್ಲರ ಅಭೂತಪೂರ್ವ ಐಕ್ಯತೆಯನ್ನು ದಾಖಲಿಸಿದೆ, ನವ-ಉದಾರವಾದಿ ಧೋರಣೆಗಳ ವಿರುದ್ಧ ಕೃಷಿ ಸಮುದಾಯದ ಒಗ್ಗಟ್ಟನ್ನೂ ಗಟ್ಟಿಗೊಳಿಸಿದೆ. ಕಾರ್ಪೊರೇಟ್-ಪರ ಕಾಯ್ದೆಗಳನ್ನು ತಂದು ದೇಶದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ ತಂದು ಈ ಸರಕಾರ ಬಂಡವಾಳಶಾಹಿಗಳು ಮತ್ತು ರೈತಾಪಿಗಳ ನಡುವಿನ ವೈರುಧ್ಯವನ್ನು ತೀಕ್ಷಗೊಳಿಸಿದೆ ಎಂದು ಮುಂದುವರೆದು ಅವರು ಹೇಳಿದರು. ದೊಡ್ಡ ರೈತರು ಮತ್ತು ಬಂಡವಳಿಗ ರೈತರ ಒಂದು ದೊಡ್ಡ ವಿಭಾಗ ಕೂಡ ಈ ಕಾಯ್ದೆಗಳ ವಿರುದ್ಧ ನಿಂತಿದ್ದಾರೆ. ಪ್ರಾದೇಶಿಕ ಪಕ್ಷಗಳೂ ಬಿಜೆಪಿಯ ವಿರುದ್ಧ ಸೆಟೆದು ನಿಂತಿವೆ. ಬಿಜೆಪಿ ಎಷ್ಟೊಂದು ಒಂಟಿಯಾಗಿ ಬಿಟ್ಟಿದೆ ಎಂಬುದನ್ನು ಡಿಸೆಂಬರ್ 8ರ ಅಸಾಧಾರಣ ಭಾರತ್ ಬಂದ್ ಸಾಬೀತು ಮಾಡಿದೆ ಎಂದು ಅವರು ಹೇಳಿದರು.
ಮತ್ತೊಂದು ವೈಶಿಷ್ಟ್ಯ: ರೈತ-ಕಾರ್ಮಿಕ ಐಕ್ಯತೆ
ಈ ನಡೆದಿರುವ ಸಂಘರ್ಷದ ಮತ್ತೊಂದು ವೈಶಿಷ್ಟ್ಯವೆಂದರೆ ರೈತರು ಮತ್ತು ಕಾರ್ಮಿಕರ ಒಗ್ಗಟ್ಟು. ಸಪ್ಟಂಬರ್‌ನಲ್ಲಿ ಸಂಸತ್ ಅಧಿವೇಶನದಲ್ಲಿ ಒಂದರ ಮೇಲೊಂದರಂತೆ ಕೃಷಿ ಮಸೂದೆಗಳನ್ನು ಪಾಸು ಮಾಡಿದಿಕೊಳ್ಳುವ ಜತೆಗೇ ಕಾರ್ಮಿಕ ಕಾನೂನುಗಳನ್ನೆಲ್ಲ ರದ್ದು ಮಾಡಿ ಕಾರ್ಮಿಕ ಸಂಹಿತೆಗಳನ್ನು ಪಾಸು ಮಾಡಿಸಿಕೊಂಡಿರುವುದು ಮೋದಿ ಸರಕಾರ ನಗ್ನ ಕಾರ್ಪೊರೇಟ್ ಪರ ಧೋರಣೆಗಳನ್ನು ತಳೆದಿದೆ ಎಂಬುದನ್ನು ಎತ್ತಿ ತೋರಿದೆ. ಸರಕಾರದ ಈ ನಡೆ ಎರಡೂ ದುಡಿಯುವ ವರ್ಗಗಳನ್ನು ನೇರ ಸಂಘರ್ಷಕ್ಕೆ ಇಳಿಯುವಂತೆ ಮಾಡಿದೆ. ಈ ಎರಡು ವರ್ಗಗಳ ನಡುವಿನ ಒಗ್ಗಟ್ಟು ರೈತ ಚಳುವಳಿಯಲ್ಲಿ ಮತ್ತು ನವಂಬರ್ 26ರ ಸಾರ್ವತ್ರಿಕ ಮುಷ್ಕರದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಹನ್ನನ್ ಮೊಲ್ಲ ಹೇಳಿದರು.
ಇಂತಹ ಸಂಘರ್ಷ ಈಗ ಜಗತ್ತಿನಾದ್ಯಂತ ಕೂಡ ಕಾಣ ಬರುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ಒಂದು ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಲುಪಿದೆ ಇದು ತೋರಿಸುತ್ತದೆ ಎಂದು ಇಬ್ಬರೂ ಎ.ಐ.ಕೆ.ಎಸ್. ನಾಯಕರು ಅಭಿಪ್ರಾಯ ಪಟ್ಟರು. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳು ಸಮಾಜದ ಈ ಎರಡು ಮೂಲ ವರ್ಗಗಳ ಆದಾಯಗಳ ಮೇಲೆ, ಜೀವನೋಪಾಯಗಳ ಮೇಲೆ ದಾಳಿ ಮಾಡುತ್ತಿವೆ. ಆದ್ದರಿಂದಲೇ ಈ ಚಳುವಳಿ ಕಾರ್ಪೊರೇಟ್‌ಗಳ ವಿರುದ್ಧ ದನಿ ಎತ್ತಿದೆ, ಅಂಬಾನಿ-ಅದಾನಿಗಳ ಉತ್ಪನ್ನಗಳ ಮತ್ತು ಸೇವೆಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ
‘ಮೋದಿ ದುರ್ಬಲ, ವಿಫಲ ಆಡಳಿತಗಾರ’
ಮೋದಿ ಸರಕಾರ ಈ ಮೂರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸುತ್ತ ಅಹಂಕಾರದ ಪ್ರದರ್ಶನ ಮಾಡಿರ‍್ರೆ ಅದರ ಪರಿಣಾಮಗಳನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಇಬ್ಬರೂ ರೈತ ನಾಯಕರು ಎಚ್ಚರಿಕೆ ನೀಡಿದರು. ಹೆಚ್ಚೆಚ್ಚು ಜನವಿಭಾಗಗಳು ಈ ಹೋರಾಟವನ್ನು ಸೇರಿಕೊಳ್ಳುತ್ತಾರೆ. ಕಾರ್ಪೊರೇಟ್‌ಗಳ ಬಿಗಿಮುಷ್ಠಿಯಲ್ಲಿ ಸಿಲುಕಿರುವ ನರೇಂದ್ರ ಮೋದಿ 8 ಡಿಗ್ರಿ ಕೊರೆಯುವ ಚಳಿಯಲ್ಲಿ ಕೂತಿರುವ ಲಕ್ಷಾಂತರ ರೈತರ ಸಂಘರ್ಷವನ್ನು ಪರಿಹರಿಸುವ ಸಾಮರ್ಥ್ಯವಿಲ್ಲದ ಒಬ್ಬ ದುರ್ಬಲ ಮತ್ತು ವಿಫಲ ಆಡಳಿತಗಾರ ಎಂಬುದನ್ನು ರೈತ ಚಳುವಳಿ ಸಾಬೀತು ಮಾಡಿದೆ.
ಮೋದಿ ಸರಕಾರ ತನ್ನ ಮೊಂಡುತನವನ್ನು ಬಿಟ್ಟು ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ನಿಭಾಯಿಸಬೇಕು ಎಂದು ಎ.ಐ.ಕೆ.ಎಸ್. ಆಗ್ರಹಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಎಐಕೆಎಸ್‌ನ ಇತರ ಕೇಂದ್ರ ಮುಖಂಡರಾದ ಪಿ.ಕೃಷ್ಣಪ್ರಸಾದ್, ಬಾದಲ್ ಸರೋಜ್ ಮತ್ತು ವಿಕ್ರಮ್ ಸಿಂಗ್ ಕೂಡ ಹಾಜರಿದ್ದರು.