ತೊಗರಿ ಒಕ್ಕಣಿ ಮಾಡುವ ವೇಳೆ ಮಷಿನ್ ಗೆ ಸಿಲುಕಿದ ರೈತ ಮಹಿಳೆ

ವಿಜಯಪುರ ಜ,8:  ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಇನ್ನೊಂದೆಡೆ ಹೆಚ್ಚು ಸಮಯ ತೆಗುದುಕೊಳ್ಳದೆ ಬೇಗನೆ ರಾಶಿಯ ಕೆಲಸ ಮುಗಿಯಬೇಕು ಎಂಬ ಧಾವಂತ ರೈತರ ತಲೆ ಹೊಕ್ಕುತ್ತಿದೆ. ಪರಿಣಾಮ ಒಕ್ಕಣೆ ಕಣದ ಕೆಲಸಕ್ಕೂ ಯಂತ್ರಗಳಿಗೆ ಭಾರಿ ಡಿಮಾಂಡ್​! ಆದರೆ ಸ್ವಲ್ಪ ಯಾಮಾರಿದ್ರೆ ಮನುಷ್ಯರೇ ಬಲಿಯಾಗ್ತಾರೆ.

ಒಕ್ಕಣೆ ಕಣದಲ್ಲಿನ ಕೆಲಸ ಮಾಡುವ ಅದೆಷ್ಟೋ ಕಾರ್ಮಿಕರು ನಿಯಂತ್ರಣ ತಪ್ಪಿ ಮಷಿನ್​ಗೆ ಸಿಲುಕಿ ಪ್ರಾಣಬಿಟ್ಟ ಒಂದಿಲ್ಲೊಂದು ಘಟನೆಗಳು ಪ್ರತಿ ಭಾರಿ ರಾಜ್ಯದಲ್ಲಿ ಸಂಭವಿಸುತ್ತಲೇ ಇದೆ. ಕಳೆದ ತಿಂಗಳು ಗದಗ್ ನಲ್ಲಿ ಇಂತಹದ್ದೆ ಘಟನೆ ನಡೆದಿತ್ತು. ಈಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ

ಚಿಕ್ಕಬೇವನೂರ ಗ್ರಾಮದಲ್ಲಿ ಒಣಗಿದ ತೊಗರಿ ಕಾಯನ್ನು ಸಿಪ್ಪೆ ಸಮೇತ ಹಾಕಿ ಮಷಿನ್​ ಮೂಲಕ ಕಾಳು ಮಾಡಲಾಗುತ್ತಿತ್ತು. ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ಬಿದ್ದ ಸುಜಾತಾ ಅಮಸಿದ್ಧ ಬಗಲಿ ಎಂಬಾಕೆ, ಮಷಿನ್​ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಜಾತ್ ಮಷಿನ್ ಗೆ ಸಿಲುಕಿದಾಗ ಏನು ಮಾಡಲಾಗದೆ ಅಸಹಾಕರಾಗಿ ನೋಡುತ್ತಾ ನಿಂತಿದ್ದ ಮೃತ ಸುಜಾತಾ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಈ ಹಿಂದೆ ಹೊಲದ ಒಂದು ಜಾಗದಲ್ಲಿ‌ ಕಣ ಮಾಡಿಸಿ, ಎತ್ತುಗಳ ಮೂಲಕ, ಇಲ್ಲವೆ ರೂಲರ್ ಮೂಲಕ ಒಕ್ಕಣಿ ಕೆಲಸ ಮಾಡುತ್ತಿದ್ದೆವು. ಈಗ ಮಷಿನ್ ಗಳು ಬಂದ ಪರಿಣಾಮ ಬೇಗ ಕೆಲಸವಾಗುತ್ತದೆ ಹಾಗೂ ಕಡಿಮೆ ಕೂಲಿಕಾರರನ್ನು ಬಳಸಿ ಕೆಲಸ ಮಾಡಿಸಬಹುದು ಎಂಬ ಕಾರಣಕ್ಕೆ ರೈತರು ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ತಂತ್ರಜ್ಞಾನ ಬೇಕು ಆದರೆ ಅಪಾಯಕಾರಿ ಯಂತ್ರಗಳಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇದನ್ನು ತಪ್ಪಿಸವಂತಹ ವ್ಯವಸ್ಥೆಯನ್ನು ಮಷಿನ್ ಗಳಿಗೆ ಅಳವಡಿಸಬೇಕು. ಇಲ್ಲವೆ ಹಳೆಯ ಒಕ್ಕಣಿ ಪದ್ದತಿಗೆ ರೈತರು ಜೀವ ತುಂಬಬೇಕು ಎಂದು ರೈತ ಶಿವಪ್ಪ ಅಡವಿಗೌಡ್ರ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *