ಬೆಂಗಳೂರು : ರಾಜ್ಯದಾದ್ಯಂತ ಜನತೆಯ ತೀವ್ರ ಒತ್ತಾಯದ ನಂತರವೂ ಗ್ರಾಮೀಣ ಪ್ರದೇಶದ ಕೋವಿಡ್ ಪರಿಹಾರ ನೀಡಿಕೆಯಲ್ಲಿ ಯಾವುದೇ ಹೆಚ್ಚಳ ಮಾಡದೇ ರಾಜ್ಯ ಸರಕಾರ ಅಸಹ್ಯ ಮೌನ ವಹಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ತಕ್ಷಣವೇ ಕೃಷಿ ಹಾಗೂ ಗ್ರಾಮೀಣ ಸಂಕಷ್ಠಕ್ಕೆ ಮತ್ತಷ್ಟು ಹೆಚ್ಚಿನ ಪರಿಹಾರವನ್ನು ಘೋಷಿಸಲು ಒತ್ತಾಯಿಸಿರುವ ಕೆಪಿಆರ್‌ಎಸ್ ಸಂಘಟನೆಯು ರಾಜ್ಯ ಸರಕಾರದ ಪರಿಹಾರ ಘೋಷಣೆಯು ಅದು ರೈತ ಹಾಗೂ ಕೂಲಿಕಾರರನ್ನು ಅಪಹಾಸ್ಯಕ್ಕೀಡು ಮಾಡುವ ಕುಹಕದಂತಿದೆ. ಇದು ಜನತೆಗೆ ಕನಿಷ್ಠ ನೆರವನ್ನೂ ನೀಡದು ಎಂದು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆಯನ್ನು ನೀಡಿರುವ ಕೆಪಿಆರ್‌ಎಸ್ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಅವರು ʻʻಕೋವಿಡ್-19 ಕಳೆದ 2020 ಮಾರ್ಚ್ ನಿಂದಲೇ ಜನತೆಯನ್ನು ತೀವ್ರವಾಗಿ ಬಾಧಿಸುತ್ತಿದೆ. ಈಗಲೂ ಅದರ ಬಾಧೆ ಮುಂದುವರೆದಿದೆ ಮಾತ್ರವಲ್ಲಾ ತಜ್ಞರು ಹೇಳುವ ಪ್ರಕಾರ ಸೆಪ್ಟಂಬರ್ ನಂತರ ಅದು ಮೂರನೇ ಅಲೆಯಾಗಿ ಬಾಧಿಸಲಿದೆ. ಹೀಗಾಗಿ, ಈ ಅವಧಿಯಲ್ಲಿ, ರಾಜ್ಯದ ಬಹುತೇಕ ರೈತರು, ತಮ್ಮ ಕೃಷಿ ಉತ್ಪನ್ನಗಳನ್ನು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಮತ್ತು ಸಗಟು ವರ್ತಕರು ಕೃಷಿ ಉತ್ಪನ್ನಗಳ ಬೆಲೆಗಳನ್ನು ಕೃತಕವಾಗಿ ಕುಸಿಯುವಂತೆ ಮಾಡಿದ ಲೂಟಿಗೆ ಒಳಗಾಗಿದ್ದಾರೆ. ಈ ಲೂಟಿಕೋಟಿ ಕೋರ ಕಂಪನಿಗಳು ರಾಜ್ಯದ ರೈತರಿಂದ ಲಕ್ಷಾಂತರ ಕೋಟಿ ರೂಗಳನ್ನು ಲೂಟಿ ಮಾಡಿವೆ ಎಂದು ತಿಳಿಸಿದರು.
ಇದನ್ನು ಓದಿ: ಹಳ್ಳಿಗಳಿಗೆ ಕೊರೊನಾ ಹಬ್ಬಲು ಸರಕಾರದ ಲಾಕ್‌ಡೌನ್ ಕಾರಣವೆ?
ರಾಜ್ಯದ ಬಿಜೆಪಿ ಸರಕಾರವು ಈ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಹಾಗೂ ಸಗಟು ವರ್ತಕರ ಮತ್ತು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು, ಈ ಬಾರಿ ಯಾವುದೇ ಕೃಷಿ ಉತ್ಪನ್ನಗಳಿಗೆ, ಕೇಂದ್ರ ಸರಕಾರ ನಿಗದಿಸಿದ ಮೋಸದ ಕನಿಷ್ಟ ಬೆಂಬಲ ಬೆಲೆಗೆ, ಇದುವರೆಗೆ ರಾಜ್ಯ ಸರಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಘೋಷಿಸಲಿಲ್ಲ. ಮಾತ್ರವಲ್ಲಾ, ಕೃಷಿ ಮಾರುಕಟ್ಟೆಯಲ್ಲಿ ಕೊನೆಯ ಪಕ್ಷ ಕೇಂದ್ರ ಸರಕಾರ ನಿಗದಿಸಿದ ಕನಿಷ್ಠ ಬೆಂಬಲ ಬೆಲೆಗೂ ರಾಜ್ಯ ಸರಕಾರ ಖರೀದಿಸಲು ಕ್ರಮವಹಿಸಲಿಲ್ಲ. ಇದೊಂದು ನಾಚಿಕೆಗೇಡಿನ ರೈತ ವಿರೋಧಿ ದುಷ್ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವು ರಾಜ್ಯದ ಜನತೆಯ ಸಂಕಷ್ಠವನ್ನು ಬಳಸಿಕೊಂಡು, ರಾಜ್ಯದ ರೈತರ ವ್ಯಾಪಕ ವಿರೋಧದ ನಡುವೆಯೂ, ಮರೆ ಮೋಸದ ಮೂಲಕ, ರೈತ ಹಾಗೂ ಕೃಷಿ ಮತ್ತು ದೇಶ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಕ್ರಮಕ್ಕೆ ಮುಂದಾಗಿದ್ದಾರೆ.
ಇದರಿಂದ ರಾಜ್ಯದಾದ್ಯಂತ ಹಲವು ದಶ ಲಕ್ಷಾಂತರ ಭತ್ತ, ತೊಗರಿ, ಶೇಂಗಾ, ಮೆಕ್ಕೆಜೋಳ, ಒಣಮೆಣಸಿನಕಾಯಿ, ರಾಗಿ, ಜೋಳ, ರೇಷ್ಮೆ, ಆಲುಗೆಡ್ಡೆ, ಈರುಳ್ಳಿ ಮುಂತಾದ ಬೆಳೆಗಾರರು ಲೂಟಿಗೊಳಗಾಗಿ ತೀವ್ರ ಸಾಲಬಾಧಿತರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಆತಂಕ ಹೆಚ್ಚಳಗೊಂಡಿದ್ದರಿಂದ ಮತ್ತು ಮುಂಜಾಗರೂಕ ಕ್ರಮವಹಿಸದ ಸರಕಾರದ ಬೇಜವಾಬ್ದಾರಿಯುತ ಲಾಕ್‌ಡೌನ್ ಗಳ ಕಾರಣಗಳಿಂದ ಈ ಎಲ್ಲರ ಜೊತೆ, ದಶ ಲಕ್ಷಾಂತರ ಎಕರೆ ಪ್ರದೇಶದ ಮಲ್ಲಿಗೆ ಮುಂತಾದ ಹೂಗಳ ಹಾಗೂ ಅಂಜೂರಾ, ದ್ರಾಕ್ಷಿ, ದಾಳಿಂಬೆ ಮುಂತಾದ ಹಣ್ಣುಗಳ ಮತ್ತು ವಿವಿಧ ತರಕಾರಿಗಳ ಬೆಳೆಗಾರರೂ, ಮಾರುಕಟ್ಟೆಯ ತೀವ್ರ ಕೊರತೆಯಿಂದ, ಅವುಗಳನ್ನು ಹೊಲ ಗದ್ದೆಗಳಲ್ಲಿಯೇ ಕೊಳೆಯಲು ಬಿಡುವಂತಾಗಿದೆ. ಈ ಬೆಳೆಗಳಿಗಾಗಿ ತಲಾ ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ರೈತರು ವೆಚ್ಚಿಸಿದ್ದರೇ, ಕೇವಲ ಕೆಲವರಿಗೆ ಎಂಬಂತೆ ತಲಾ ಎಕರೆಗೆ 4,000 ರೂ ಘೋಷಿಸಿದ್ದಾರೆ? ಇದೀಗ ಹಾಲು ಉತ್ಪಾದಕರೂ ಪ್ರೋತ್ಸಾಹ ಧನವಿಲ್ಲದೇ ನಷ್ಟಕ್ಕೆ ಮಾರಾಟ ಮಾಡಿಕೊಳ್ಳತ್ತಿದ್ದಾರೆ ಎಂದು ಜಿ ಸಿ ಬಯ್ಯಾರೆಡ್ಡಿರವರು ವಿವರಿಸಿದರು.
ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಅವರು ʻʻರಾಜ್ಯದಲ್ಲಿ ಅಂದಂದೇ ದುಡಿದು, ಅಂದಂದಿನ ಆದಾಯದಿಂದಲೇ ಜೀವನ ನಡೆಸುವ, ಕೋಟ್ಯಾಂತರ ಕೃಷಿ ಕೂಲಿಕಾರರು, ಬಡ ರೈತರು, ಕಸುಬುದಾರರು, ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪ ಸಂಖ್ಯಾತರುಗಳು, ಇರುವ ಕೂಲಿಕೆಲಸವನ್ನು ಕಳೆದುಕೊಂಡು ಹಸಿವಿನಿಂದ ನಲುಗುತ್ತಿದ್ದಾರೆ. ಅಪೌಷ್ಠಿಕತೆಯ ಸಾವುಗಳಿಗೆ ತುತ್ತಾಗುತ್ತಿದ್ದಾರೆ. ಜಾನುವಾರು ಹತ್ಯೆ ನಿಷೇಧದ ತಿದ್ದುಪಡಿ ಕಾಯ್ದೆ ಹೆಸರಿನಲ್ಲಿ ಕಡಿಮೆ ಬೆಲೆಯ ಪೌಷ್ಟಿಕ ಆಹಾರ ದೊರೆಯದಂತೆ ಕ್ರಮವಹಿಸಿದ್ದೀರಿ ? ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿಲ್ಲ ಎಂದು ತಿಳಿಸಿದರು.
ಇದನ್ನು ಓದಿ: ಮೇ 26: “ಕರಾಳ ದಿನ” ಆಚರಣೆಗೆ ಐತಿಹಾಸಿಕ ಜನಸ್ಪಂದನೆ
ಇಂತಹ ಸಂಕಷ್ಠದ ಕಾಲದಲ್ಲಿ ಬಡವರಿಗೆ ನೀಡುವ ಪಡಿತರದಲ್ಲಿ ಅಕ್ಕಿಯ ಪ್ರಮಾಣವನ್ನು ಎರಡು ಕೇಜಿಗೆ ಇಳಿಸಿದ್ದು, ಇಂದಿರಾ ಕ್ಯಾಂಟೀನ್ ಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಿಂದಲೇ ಶುರುವಾದ ಈ ಸಂಕಷ್ಟಕ್ಕೆ ಕೇಂದ್ರ ಸರಕಾರ ತನ್ನ ಬಳಿ ಗೋಡೌನ್ ಗಳಲ್ಲಿ ಕೋಟ್ಯಾಂತರ ಟನ್ ಧಾನ್ಯ ಕೊಳೆಯುತ್ತಾ ಬಿದ್ದಿದ್ದರೂ ಅದು ಘೋಷಿಸಿರುವುದು ಕೇವಲ ತಲಾ 10 ಕೇಜಿ ಅಕ್ಕಿ ಮಾತ್ರ?.
ಈ ಬಾರಿ ಅತಿ ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೆ ದಾಳಿ ಇಟ್ಟ ಕೋವಿಡ್-19 ರಿಂದ ಈ ಜನತೆ ತಮಗಿರುವ ಗುಡಿಸಲು ಅಥವಾ ಚಿಕ್ಕ ಚಿಕ್ಕ ಮನೆಗಳೆಂಬ ಒಂದೆರಡು ಕೋಣೆಗಳಲ್ಲಿ ಮನೆ ಆರೈಕೆ ಸೌಲಭ್ಯವಿಲ್ಲದೇ, ಇಡೀ ಕುಟುಂಬಗಳೇ ಸಾವಿನ ಸಂಕಟಕ್ಕೀಡಾಗಿವೆ. ಈ ಎಲ್ಲರ ಆರೋಗ್ಯ ರಕ್ಷಣೆಗೂ ಮತ್ತು ಹಸಿವಿಗೂ ಸೂಕ್ತವಾದ ಪರಿಹಾರಗಳನ್ನು ನೀಡಲಿಲ್ಲ ಎಂದು ತಿಳಿಸಿದರು.
ಕಳೆದ ಬಜೆಟ್‌ನಲ್ಲಿ 70, 000 ಕೋಟಿ ರೂ.ಗಳ ಸಾಲ ಪಡೆಯುವುದಾಗಿ ಘೋಷಿಸಿದ್ದ ರಾಜ್ಯ ಸರಕಾರವು ಕೋವಿಡ್ ತುರ್ತು ಪರಿಸ್ಥಿತಿಯಂತೆ ಅದನ್ನು ಬಳಸಿಕೊಂಡು ಜನತೆಗೆ ನೆರವು ನೀಡಲು ಯಾಕೆ ಕ್ರಮವಹಿಸುತ್ತಿಲ್ಲ? ಜನತೆಯನ್ನು ಸಂಕಷ್ಢಕ್ಕೀಡು ಮಾಡುವುದೇ ಮತ್ತು ಲೂಟಿಗೊಳಪಡಿಸುವುದೇ ನಿಮ್ಮ ಆಡಳಿತದ ಉದ್ದೇಶವೇ? ಎಂಬ ಪ್ರಶ್ನೆಗಳಿಗೆ ಆಳುವ ಸರಕಾರವು ಸಾರ್ವಜನಿಕವಾಗಿ ಉತ್ತರಿಸಬೇಕಾಗಿದೆ ಎಂದು ಆಗ್ರಹಿಸಿದರು.
ಇದನ್ನು ಓದಿ: ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಮೇಲೆ ಪ್ರಕೃತಿಯ ದಾಳಿ
ಆದ್ದರಿಂದ, ಆಹಾರ ಒದಗಿಸುವ ಅನ್ನದಾತರ ಕುರಿತಂತೆ ಕಿಂಚಿತ್ತಾದರೂ ಕಾಳಜಿ ಎಂಬುದು ಈಗಲೂ ಎಲ್ಲಾದರೂ ಇದ್ದರೇ, ಸರಕಾರದ ಲೂಟಿಕೋರರ ಪರವಾದ ನೀತಿಗಳ ಕಾರಣದಿಂದ ಮತ್ತು ಕೊಲೆಪಾತಕ ಉದಾಸೀನದಿಂದ ಉಂಟಾದ ಈ ದುಸ್ಥಿತಿಯನ್ನು ತಕ್ಷಣವೇ ನಿವಾರಿಸಲು ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಹರಿಸಿರಿ ಎಂದು ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಕ್ಕೊತ್ತಾಯಗಳು:
1) ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
2) ಕೋವಿಡ್ ಪರಿಹಾರ ಆಗಿ ಯಥಾಸ್ಥಿತಿ ನಿರ್ಮಾಣವಾಗುವವರೆಗೆ, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಧಾನ್ಯಗಳ ಪೊಟ್ಟಣವನ್ನು ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು. ಪ್ರತಿ ಗ್ರಾಮ/ ನಗರಗಳ ದಲಿತರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ವಿಸ್ತರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು. ಅದೇ ರೀತಿ, ಕೇಂದ್ರ ಸರಕಾರದ ಸಹಾಯದೊಂದಿಗೆ ಈ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000 ರೂಗಳ ನೆರವು ನೀಡಬೇಕು.
3) ವೃದ್ಧಾಪ್ಯ, ಅಂಗವಿಕಲ, ವಿಧವಾ, ದೇವದಾಸಿ ಮಹಿಳೆಯರು ಮುಂತಾದವರಿಗೆ ನೀಡುವ ಮಾಸಿಕ ಸಹಾಯಧನ ಅಥವಾ ಪಿಂಚಣಿಯನ್ನು ಕನಿಷ್ಟ 3,000 ರೂಗಳಿಗೆ ಹೆಚ್ಚಿಸಿ, ಹಳೇ ಬಾಕಿಯೂ ಸೇರಿದಂತೆ ಮುಂದಿನ ಮೂರು ತಿಂಗಳ ನೆರವನ್ನು ಮುಂಗಡವಾಗಿ ನೀಡಬೇಕು. ಎಲ್ಲಾ ಶಿಕ್ಷಣಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಆಹಾರಧಾನ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು.
4) ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020, ವಿದ್ಯುತ್ ತಿದ್ದುಪಡಿ ಮಸೂದೆ- 2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಇವುಗಳನ್ನು ತಕ್ಷಣವೇ ವಾಪಾಸು ಪಡೆಯಬೇಕು.
5) ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಮನದ ರೈತರನ್ನು ಸಂರಕ್ಷಿಸಲು ಕೇರಳ ಮಾದರಿಯ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು.
ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಬಡ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ಮಾಡಿ ಬಡ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿರುತ್ತಾರೆ.