ಸಬ್ಸಿಡಿ ಕಡಿತ ಮಾಡಿ ರೈತ-ಕಾರ್ಮಿಕರ-ಕೂಲಿಕಾರರೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ; ಮೀನಾಕ್ಷಿ ಸುಂದರಂ

ಬೆಂಗಳೂರು: ಜನರು ಸೋಮಾರಿಗಳಾಗುತ್ತಾರೆ ಎಂದು ಸಬ್ಸಿಡಿಗಳನ್ನು ಕಡಿತ ಮಾಡಿ ರೈತ – ಕಾರ್ಮಿಕ – ಕೂಲಿಕಾರರ ಬದುಕಿನ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಎಸ್‌ ಮೀನಾಕ್ಷಿ ಸುಂದರಂದು ಹೇಳಿದರು.

ಸಿಐಟಿಯು, ಕೆಪಿಆರ್‌ಎಸ್‌, ಎಐಎಡಬ್ಲ್ಯೂಯು ಸಂಘಟನೆಗಳ ವತಿಯಿಂದ ರಾಷ್ಟ್ರ ವಿರೋಧಿ, ಕಾರ್ಪೊರೇಟ್ ಪರ – ಬಿಜೆಪಿ ಸರ್ಕಾರದ ಕೋಮುವಾದಿ ನೀತಿಗಳ ವಿರುದ್ಧ ಕಾರ್ಮಿಕರು ಮತ್ತು ರೈತರ ಹಕ್ಕುಗಳಿಗಾಗಿ ಸಮಾವೇಶ ಇಂದು ಬೆಂಗಳೂರಿನ ಸಚಿವಾಲಯ ನೌಕರರ ಕ್ಲಬ್‌ ನ ಸಭಾಂಗಣದಲ್ಲಿ ಇಂದು(ಮಾರ್ಚ್‌ 04) ನಡೆಯಿತು.

ಇದನ್ನು ಓದಿ: ರಾಜ್ಯ ಸರ್ಕಾರದ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಂ ಎಸ್‌ ಮೀನಾಕ್ಷಿ ಸುಂದರಂ, ಶ್ರೀಮಂತರನ್ನು ಶ್ರೀಮಂತರಾಗಿಸುವ ನೀತಿಗಳು ಹೆಚ್ಚಾಗುತ್ತಿವೆ. ಅವರಿಗೆ ಸಾಲ ಸೌಲಭ್ಯ, ತೆರಿಗೆ ವಿನಾಯ್ತಿ, ಸಬ್ಸಿಡಿ ಮೂಲಕ ಅವರನ್ನು ಶ್ರೀಮಂತರನ್ನಾಗಿ ಮಾಡಿ. ಬಡವರನ್ನು ಶೋಷಿಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ವಿತ್ತ ಸಚಿವರು ಕಂಪನಿಗಳು ಬಂಡವಾಳ ಹೂಡುತ್ತಿಲ್ಲ ಎಂದು ಹೇಳುತ್ತಾರೆ, ಇನ್ನೊಂದೆಡೆ ಬಜೆಟ್ ನಲ್ಲಿ ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದೆನ್ನುತ್ತಾರೆ ಯಾವುದನ್ನು ನಂಬಬೇಕು? ಜನರಿಗೆ ಗೊಂದಲ ಸೃಷ್ಟಿಸುವುದು ಬಿಜೆಪಿಯ ಕೆಲಸವಾಗಿದೆ ಎಂದರು.

ಇದನ್ನು ಓದಿ: ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿದ ರಾಜ್ಯ ಸರಕಾರದ ವಿರುದ್ಧ ಸಿಐಟಿಯು ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ

ವಲಸೆ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರಿಗೆ ಹೆಚ್ಚು ಕೂಲಿ ಕೊಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.  ಕೋವಿಡ್ ನಂತರದಲ್ಲಿ ಅನೇಕರು ಉದ್ಯೋಗವಂಚಿತರಾಗುತ್ತಿದ್ದಾರೆ. ದುಡಿಯವ ಜನರ ಬದುಕನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡುತ್ತಿದ್ದಾರೆ. ಇವುಗಳು ಗೊತ್ತಾಗಬಾರದು ಎಂದು ಜನರನ್ನು ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಕಚ್ಚಾಡಿಕೊಳ್ಳುವಂತೆ ಮಾಡಿ, ತಮ್ಮ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿದೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ಒಂದೆಡೆ ಬೆಲೆ ಕುಸಿತ ಮತ್ತೊಂದೆಡೆ ಸಾಲಬಾಧೆಯಿಂದ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಇದನ್ನು ಪರಿಹರಿಸಿ ರೈತರನ್ನು ರಕ್ಷಿಸುವ ಕೆಲಸಗಳು ಆಳುವ ಸರಕಾರಗಳಿಂದ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಒತ್ತಾಯವಾಗಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ದೇವನಹಳ್ಳಿಯ ಸುತ್ತಮುತ್ತಲಿನ ಭೂಮಿಯ ಬೆಲೆ 8 ಕೋಟಿ ಇದೆ. ಆದರೆ 50 ಲಕ್ಷಕ್ಕಿಂತ ಕಡಿಮೆ ದರ ನಿಗದಿಪಡಿಸಿ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದರು.

ಇದನ್ನು ಓದಿ: ಆಯುಷ್ಯವಿಲ್ಲದ ಬಜೆಟ್‌ ನಲ್ಲಿ ಭರಪೂರ ಯೋಜನೆಗಳು

ಬಿಜೆಪಿ ಸರಕಾರದಲ್ಲಿ ರೈತರು ಅತೀ ಹೆಚ್ಚು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಾವೇಶದ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸರಕಾರಗಳನ್ನು ಸೋಲಿಸಲು ಕರೆ ನೀಡುತ್ತಿದ್ದೇವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಧೃಡ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಕೃಷಿಕೂಲಿಕಾರರನ್ನು ಸರಕಾರ ಅತೀಹೆಚ್ಚು ಕಡೆಗಣಿಸಿದೆ. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕೆಲಸಗಳನ್ನು ಯಂತ್ರಗಳ ಮೂಲಕ ನಿರ್ದಯವಾಗಿ ಕಸಿದುಕೊಳ್ಳುತ್ತಿದ್ದಾರೆ. ಪರಿಣಾಮ ಉದ್ಯೋಗ ಅರೆಸಿ ಊರೂರು ತಿರುಗುವ ಸ್ಥಿತಿ ಈಗ ನಿರ್ಮಾಣವಾಗಿದೆ. ಅನೇಕರು ಬೀದಿಪಾಲಾಗಿದ್ದಾರೆ ಎಂದು ತಿಳಿಸಿದರು.

ಮೋದಿ ಸರಕಾರದ ನೀತಿಗಳು ಜನವಿರೋಧಿಯಾಗಿವೆ. ಈ ನೀತಿಗಳ ವಿರುದ್ಧ ವ್ಯಾಪಕ ಹೋರಾಟ ನಡೆಸಬೇಕಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ, ವಿಶಾಲ ಜನಸಮೂಹಕ್ಕೆ ತಿಳಿಸುವ ಕೆಲಸಗಳು ಚಳಿವಳಿಗಳ ಮೂಲಕ ನಡೆಯಬೇಕಿದೆ ಎಂದು ಕರೆ ನೀಡಿದರು.

ಮನೆ ಮನೆಗೆ ವಿಚಾರಗಳನ್ನು ತಿಳಿಸಲು ಚಳುವಳಿಯ ಕಾರ್ಯಕರ್ತರು ಶ್ರಮಿಸಬೇಕು. ಜನಾಭಿಪ್ರಾಯವನ್ನು ರೂಪಿಸುವ ಕೆಲಸಗಳು ಹೆಚ್ಚಾಗಬೇಕು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್)ದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ವೇದಿಕೆಯ ಮೇಲಿದ್ದರು. ಸಿಐಟಿಯು ರಾಜ್ಯ ಮುಖಂಡ ಎಚ್. ಎನ್. ಗೋಪಾಲಗೌಡ ಕರಡು ನಿರ್ಣಯ ಮಂಡಿಸಿದರು. ರೈತ – ಕಾರ್ಮಿಕ – ಕೃಷಿಕೂಲಿಕಾರರ ವಿಭಾಗವನ್ನು ಪ್ರತಿನಿಧಿಸಿ ವಿವಿಧ ಜಿಲ್ಲೆಗಳಿಂದ ನೂರಾರು ಜನ ಸಮಾವೇಶದಲ್ಲಿ ಭಾಗವಹಿಸಿದ್ದರು.

 

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *