ಬೆಂಗಳೂರು ಜ 22: ಅಪಾಯಕಾರಿ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಜನ ಜಾಗೃತಿ ಜಾಥಾಕ್ಕೆ ಪೊಲೀಸರು ಅಡ್ಡಿಪಡಿಸಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ರೈತ ಮುಖಂಡ ಟಿ.ಯಶವಂತ ಜಾಥಾ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬೇಗೂರು ಠಾಣೆ ಪೊಲೀಸರು, ರೈತರ ಜಾಥಾವನ್ನು ತಡೆದು, ಜಾಥಾವನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಧಮಕಿ ಹಾಕಿದರು. ಈ ವೇಳೆ ಜಾಥಾದ ಪ್ರಮುಖರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.
ಈ ವೇಳೆ ಪೊಲೀಸರು ರೈತ ಮುಖಂಡ ಟಿ.ಯಶವಂತ, ಸಿಪಿಐ(ಎಂ) ಮುಖಂಡರಾದ ಡಾ. ಕೆ.ಪ್ರಕಾಶ್ ಹಾಗೂ ಲಿಂಗರಾಜು ಅವರನ್ನು ಎಳೆದಾಡಿ, ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಈ ಬೆದರಿಕಗೆ ನಾವು ಹೆದರುವುದಿಲ್ಲ, ಜಾಥಾವೂ ಏರಿಯಾಗಳಲ್ಲಿ ಸಂಚರಿಸಿ ಮನೆ ಮನೆಗೆ ಕರಪತ್ರ ವಿತರಿಸಲಾಗುವುದು ಎಂದು ಡಾ. ಕೆ.ಪ್ರಕಾಶ್ ತಿಳಿಸಿದ್ದಾರೆ.