ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಿದ್ಧತೆ- ರಾಕೇಶ್‌ ಟಿಕಾಯತ್‌ ಭಾಗವಹಿಸುವ ನಿರೀಕ್ಷೆ

ನರಗುಂದ: ಗದಗ ಜಿಲ್ಲೆಯ ನರಗುಂದ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಜುಲೈ ೨೧ರಂದು ನರಗುಂದ ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು ಸೇರಿ ಒಂದೇ ವೇದಿಕೆಯಲ್ಲಿ ರೈತರ ಸಮಾವೇಶ ನಡೆಸಲು ನಿರ್ಧರಿಸಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿವೆ ಎಂದು ಮಹದಾಯಿ ಮಹಾ ವೇದಿಕೆ ಸಂಚಾಲಕ ಶಂಕ್ರಣ್ಣ ಅಂಬಲಿ ಹೇಳಿದ್ದಾರೆ.

ನರಗುಂದ ಪಟ್ಟಣದಲ್ಲಿ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಹುತಾತ್ಮ ರೈತ ದಿನಾಚರಣೆಯ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರತಿ ವರ್ಷ ಪ್ರತ್ಯೇಕ ವೇದಿಕೆಯಲ್ಲಿ ರೈತರು ಸಭೆ ನಡೆಸುತ್ತಿದ್ದರು. ಅದಕ್ಕೆ ಬದಲಾಗಿ ಈ ಬಾರಿ ಒಂದೇ ವೇದಿಕೆಯಲ್ಲಿ ಎಲ್ಲ ಸಂಘಟನೆಗಳ ರೈತರು ಭಾಗವಹಿಸಿ, ಒಗ್ಗಟ್ಟಾಗಿ ಸಮಸ್ಯೆಗಳನ್ನು ಚರ್ಚಿಸಿ ಸರ್ಕಾರಗಳ ಮೇಲೆ ಒತ್ತಡ ಹೇರುವುದರೊಂದಿಗೆ ಹುತಾತ್ಮ ರೈತ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಇದನ್ನು ಓದಿ: ಮೂರು ಕಾಯ್ದೆಗಳನ್ನು ರದ್ದು ಮಾಡದಿದ್ದರೆ ತೀವ್ರತಮ ರೈತ ಹೋರಾಟ

‘ಈಗಾಗಲೇ ರಾಷ್ಟ್ರೀಯ ರೈತ ಕಿಸಾನ್ ಮೋರ್ಚಾದ ಅಧ್ಯಕ್ಷ ರಾಕೇಶ್ ಟಿಕಾಯತ್, ಕಾರ್ಯದರ್ಶಿ ಯುದ್ಧವೀರ ಸಿಂಗ್, ಸದಸ್ಯ ಡಾ.ಸಕ್ಪಾಲ್ ಸಿಂಗ್, ಸ್ವರಾಜ್ ಇಂಡಿಯಾದ ಸಂಚಾಲಕ ಯೋಗೇಂದ್ರ ಯಾಧವ್, ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಸೇರಿದಂತೆ‌ ಮತ್ತಿತರರನ್ನು ಆಹ್ವಾನಿಸಲಾಗಿದೆʼ ಎಂದು ತಿಳಿಸಿದರು.

‘ಕೃಷಿ ಇಲಾಖೆ ಕಚೇರಿ ಸಮೀಪ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೃಹತ್ ವೇದಿಕೆಯಲ್ಲಿ ಈ ಸಮಾವೇಶ ನಡೆಯಲಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿವಿಧ ರೈತ ಸಂಘಟನೆಗಳ ಸದಸ್ಯರು ಸಹ ಭಾಗವಹಿಸುವರು’ ಎಂದರು.

‘ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘ, ಮಹದಾಯಿ ಮಹಾವೇದಿಕೆ ಕರ್ನಾಟಕ ರೈತ ಸೇನೆ, ರೈತ ಸೇನಾ ಕರ್ನಾಟಕ, ಕರ್ನಾಟಕ ಪ್ರಾಂತ ರೈತ ಸಂಘ, ಉತ್ತರ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಪರ ಸಂಘಟನೆಗಳ ಸದಸ್ಯರು ಒಟ್ಟಾಗಿ ಆಚರಿಸಲಾಗುತ್ತಿದೆ. ಸಮಾವೇಶ ಯಶಸ್ಸಿಗೆ ಸ್ವಯಂ ಸೇವಕ ಸಮಿತಿ, ಸ್ವಾಗತ ಸಮಿತಿ, ಉಪಾಹಾರ ಸಮಿತಿ, ಪ್ರಚಾರ ಸಮಿತಿಯನ್ನು ರಚಿಸಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಇದನ್ನು ಓದಿ: ರೈತರ ಹೋರಾಟದ ಬಗ್ಗೆ ಅಪಪ್ರಚಾರ ಅಡ್ಡದಾರಿಗೆಳೆಯುವ ಅಪಾಯಕಾರಿ ಪ್ರಯತ್ನ

ಸಮಾವೇಶಕ್ಕೆ 10 ಸಾವಿರಕ್ಕೂ ಹೆಚ್ಚಿನ ರೈತರು ಭಾಗವಹಿಸಲಿದ್ದಾರೆ. ಕೋವಿಡ್ ನಿಯಮ ಪಾಲಿಸಲಾಗುವುದು. ಮಹದಾಯಿ ಕಾಮಗಾರಿ ಆರಂಭಕ್ಕೆ ಒತ್ತಾಯ, ಕೃಷಿ ವಿರೋಧಿ ಕಾನೂನು ರದ್ಧತಿಗೆ ಆಗ್ರಹ, ಕಬ್ಬು ಬೆಳೆಗಾರರ ಬಾಕಿ ಹಣ ಭರಿಸುವುದು, ಶಾಶ್ವತ ಬೆಂಬಲ ಬೆಲೆ ಕೇಂದ್ರ ಆರಂಭಿಸುವುದು, ಬೆಳೆ ವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಂಬಲಿ ಹೇಳಿದರು.

ಸಭೆಯಲ್ಲಿ ರೈತ ಸಂಘದ ವಿ.ವೈ.ಹರ್ಲಾಪುರ, ಅಂದಾನೆಪ್ಪ ಚಿಂಚಲಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಶಂಕ್ರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ವೀರಬಸಪ್ಪ ಹೂಗಾರ, ಚನ್ನು ನಂದಿ, ನಬೀಸಾಬ ಕಿಲ್ಲೆದಾರ, ಶಿವಾಜಿ ಬೋಸಲೆ, ಮಹಾಗುಂಡಪ್ಪ ಅಂಗಡಿ, ರೇವಣಪ್ಪ ಹೈಗರ, ಮಲ್ಲಣ್ಣ ಅಲೇಕಾರ, ವೆಂಕನಗೌಡ ಪಾಟೀಲ, ವೀರಣ್ಣ ಸೊಪ್ಪಿನ, ಎಸ್.ಬಿ.ಜೋಗಣ್ಣವರ, ಜಗದೀಶ ಬೆಳವಟಗಿ ಉಪಸ್ಥಿತರಿದ್ದರು.

ಶಂಕ್ರಣ್ಣ ಅಂಬಲಿ, ಮಹದಾಯಿ ಮಹಾ ವೇದಿಕೆ ಸಂಚಾಲಕ ʻʻರೈತ ಬಂಡಾಯ ನಡೆದ ಈ ಭೂಮಿಯಲ್ಲಿಯೇ ಮೊದಲ ಬಾರಿಗೆ ರೈತರ ಸಂಘಟನೆ ಉದಯವಾಯಿತು. ಅದೇ ರೀತಿಯಲ್ಲಿ ಮತ್ತೆ ಈ ಭೂಮಿಯಲ್ಲಿ ರೈತ ಸಂಘಟನೆಗಳು ಒಂದಾಗುತ್ತಿವೆʼʼ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *