ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ರಾಜ್ಯದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಪ್ರೂವ್ ಮಾಡುವುದಾಗಿ ಹೇಳಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಜುಲೈ 25ರಂದು ಹೇಳಿದ್ದಾರೆ. ಲೋಕಸಭಾ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುವ ವೇಳೆ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಕ್ರಿಯಸಿದ ಪರಮೇಶ್ವರ್, ವಿಷಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ ಎಂದರು.
ಚುನಾವಣೆ ವೇಳೆ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಮತ್ತು ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ ಇದನ್ನು ಅವರು ಸಾಕ್ಷಿ ಸಮೇತ ಪ್ರೂವ್ ಮಾಡೋದಾಗಿಯೂ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ. ಮುಂದೆ ನಾವು ಇದರ ಬಗ್ಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈ ಬಗ್ಗೆ ದೂರು ನೀಡಿಲ್ಲ ಎಂದು ಚುನಾವಣಾ ಆಯೋಗ ಹೇಳಿದ್ದರೂ ಅದು ಹಂತ ಹಂತವಾಗಿ ನಡೆಯಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: 2.15 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ; 3 ಆರೋಪಿಗಳ ಬಂಧನ
ಈ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪರಮೇಶ್ವರ್ ಧರ್ಮಸ್ಥಳದಲ್ಲಿ ಅಸಹಜ ಸಾವು ಆರೋಪಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಎಸ್‌ಐಟಿ ತಂಡದಿಂದ ಯಾವ ಅಧಿಕಾರಿಗಳೂ ಕೂಡ ಹಿಂದೆ ಸರಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಸ್‌ಐಟಿ ತಂಡದಿಂದ ಕೆಲವು ಅಧಿಕಾರಿಗಳು ವೈಯಕ್ತಿಕ ಕಾರಣದಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆದರೆ ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದರು.
ಎಸ್‌ಐಟಿ ತಂಡದಲ್ಲಿರುವ ಎಲ್ಲಾ ಅಧಿಕಾರಿಗಳು ಜಬಾಬ್ದಾರಿಯುತ ಸ್ಥಾನದಲ್ಲಿರುವವರು, ಹಿರಿಯ ಅಧಿಕಾರಿಗಳು, ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ನನಗಾಗಲಿ, ಸರಕಾರವಾಗಲಿ ಇದಕ್ಕೆ ಬರುವುದಿಲ್ಲ.. ಅಲ್ಲದೇ ತಂಡದಲ್ಲಿ ಯಾರ ಹೆಸರು ಹೇಳಿದ್ದೆವೋ ಅವರು ತಂಡದಲ್ಲಿ ಇರುತ್ತಾರೆ ಎಂದು ಪರಂ ತಿಳಿಸಿದರು.
ಯಡಿಯೂರಪ್ಪ ಮತ್ತು ಬಿ.ವೈ ರಾಘವೇಂದ್ರ ಅವರು ತಪ್ಪೇ ಆಗಿಲ್ಲ ಎಂಬ ರೀತಿ ಮಾತಾಡಿದ್ದಾರೆ. ಆದರೆ ತನಿಖೆಗೆ ಒತ್ತಾಯಿಸಿದ್ದು ಯಾರು ಎಂದು ಪ್ರಶ್ನಿಸಿದ ಜಿ. ಪರಮೇಶ್ವರ್, ತನಿಖೆ ನಡೆಯದೇ ಈಗಲೇ ತೀರ್ಪು ನೀಡುವುದು ಸರಿಯಲ್ಲ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಇದೇ ವೇಳೆ ಎಸ್‌ಐಟಿ ಮುಖ್ಯಸ್ಥ ಮೊಹಾಂತಿ ಭೇಟಿ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ವಿಶೇಷವಾದ ಮಾತುಕತೆ ಏನೂ ನಡೆದಿಲ್ಲ. ತಮಗೆ ಜವಾಬ್ದಾರಿ ನೀಡಿರುವ ಬಗ್ಗೆ ಧನ್ಯವಾದ ಅರ್ಪಿಸಿದ್ಧಾರೆ. ಅವರಿಗೆ ಯಾವುದೇ ರೀತಿಯ ವಿಶೇಷ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಗೃಹಸಚಿವ ಜಿ. ಪರಮೇಶ್ವರ್, ಮೊಹಾಂತಿ ಭೇಟಿಯ ವೇಳೆ ಮತ್ತೇನೂ ನಡೆದಿಲ್ಲ ಎಂದರು.
ಇದನ್ನೂ ನೋಡಿ: ಮೋಸ ಮಾಡಿದ ಸರ್ಕಾರ | ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ Janashakthi Media
