ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಇಲ್ಲ: ನ್ಯಾಯಾಲಯಕ್ಕೆ ಲಿಖಿತ ಉತ್ತರ ನೀಡಿದ ಎಎಸ್ಐ

ನವದೆಹಲಿ: ಕುತುಬ್ ಮಿನಾರ್ 1914ರಿಂದಲೂ ಸಂರಕ್ಷಿತ ಸ್ಮಾರಕವಾಗಿದೆ. ಅಲ್ಲದೇ ಕುತುಬ್ ಮಿನಾರ್ ಸ್ಮಾರಕವನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ. ಸ್ಮಾರಕಕ್ಕೆ ಸಂರಕ್ಷಿತ ಸ್ಥಾನಮಾನ ನೀಡಿರುವ ಸಂದರ್ಭದಲ್ಲಿ ಸ್ಮಾರಕದೊಳಗೆ ಪೂಜೆ ಅಥವಾ ಉತ್ಖನನ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಲಿಖಿತ ಉತ್ತರ ನೀಡಿದೆ.

ದೆಹಲಿಯ ಜಗದ್ವಿಖ್ಯಾತ ಕುತುಬ್ ಮಿನಾರ್ ಕೂಡಾ ಹಿಂದೂ ಸ್ಮಾರಕ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಇಂದು(ಮೇ 24) ಸಾಕೇತ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ, ಕುತುಬ್ ಮಿನಾರ್ ಪ್ರದೇಶದಲ್ಲಿನ ದೇವಾಲಯ ಪುನರೂರ್ಜಿತಗೊಳಿಸುವುದಾಗಲಿ, ಉತ್ಖನನ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕುತುಬ್ ಮಿನಾರ್ “ಸಂರಕ್ಷಿತ” ಸ್ಥಾನಮಾನವನ್ನು ನೀಡುವ ಸಮಯದಲ್ಲಿ ಅಂತಹ ಆಚರಣೆಯು ಪ್ರಚಲಿತದಲ್ಲಿರಲಿಲ್ಲ. ಈಗ ಸ್ಮಾರಕದಲ್ಲಿ ಆರಾಧನೆಯ ಪುನರುಜ್ಜೀವನವನ್ನು ಅನುಮತಿಸಲಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯವು ತನ್ನ ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‍ಐಗೆ ಈ ಹಿಂದೆ ತಿಳಿಸಿತ್ತು. ಅಲ್ಲದೇ ಮಸೀದಿಯಿಂದ 15 ಮೀಟರ್ ದೂರದಲ್ಲಿ ಮಿನಾರ್‌ ನ ದಕ್ಷಿಣದಲ್ಲಿ ಉತ್ಖನನವನ್ನು ಪ್ರಾರಂಭಿಸಬಹುದು ಎಂದು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಮೇ 21 ರಂದು ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿದ್ದರು.

ಹಿಂದೂ ಪರ ಅರ್ಜಿದಾರರು, ಕಾನೂನು ಪ್ರಕಾರವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಕುತುಬ್ ಮಿನಾರ್ ಸಂಕೀರ್ಣವನ್ನು ಕಟ್ಟಲು ಪುರಾತನ ದೇವಾಲಯವನ್ನು ನಾಶಪಡಿಸಿರುವುದು ಐತಿಹಾಸಿಕ ಸತ್ಯವಾಗಿದೆ ಎನ್ನುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕು. ಇದು ಕೂಡಾ ಹಿಂದೂ ದೇವಾಲಯವಾಗಿರುವುದಾಗಿ ಪ್ರತಿಭಟನೆ ನಡೆಸಿದ್ದವು.

ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಧರಮ್ ವೀರ್ ಶರ್ಮಾ ಇದು ಕುತ್ಬುದ್ದೀನ್ ಐಬಕ್ ಕಟ್ಟಿಸಿದ ಮಿನಾರ್ ಅಲ್ಲ, ರಾಜಾ ವಿಕ್ರಮಾದಿತ್ಯ ಕಟ್ಟಿದ ಸೂರ್ಯ ಗೋಪುರ ಎಂದು ಹೇಳಿದ್ದರು.

ಈ ವಿವಾದದ ನಂತರ ಕೇಂದ್ರ ಸಂಸ್ಕೃತಿ ಸಚಿವಾಲಯ ಉತ್ಖನನ ನಡೆಸುವಂತೆ ಎಎಸ್‌ಐಗೆ ಸೂಚನೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *