ಕರ್ನಾಟಕ ರಾಜ್ಯೋತ್ಸವ: ಕನ್ನಡ, ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆ

ಆರ್. ರಾಮಕೃಷ್ಣ

ಕರ್ನಾಟಕ ಏಕೀಕರಣದ ಅರವತ್ತೆಂಟನೇ ವಾರ್ಷಿಕೋತ್ಸವನ್ನು ಆಚರಿಸುವ ಸಂದರ್ಭದಲ್ಲಿ ಕನ್ನಡ ಭಾಷೆಯ ಅಳಿವು-ಉಳಿವಿನ ಪ್ರಶ್ನೆಗೆ ನೇರವಾಗಿ ಸಂಬಂಧಿಸಿದ ಒಂದು ನಿರ್ಣಾಯಕ ಪ್ರಶ್ನೆಯಾದ ‘ಶಾಲಾ ಶಿಕ್ಷಣ ಮಾಧ್ಯಮ’ದ ಸ್ಥಿತಿಗತಿಯ ಕುರಿತು ಒಂದು ಪರಿಶೀಲನೆ ನಡೆಸುವ ಪ್ರಯತ್ನ ಇದು. ಇಂಗ್ಲೀಷ್ ಮಾಧ್ಯಮ ಎಂಬುದು ಕನ್ನಡ ಮಾಧ್ಯಮವನ್ನು ಹೇಗೆ ತಳದಿಂದ ಇಡಿ, ಇಡಿಯಾಗಿ ನುಂಗುತ್ತಾ ಬರುತ್ತಿದೆ ಎಂಬ ಆತಂಕಕಾರಿ ಚಿತ್ರಣ ಇಲ್ಲಿದೆ.

ಮುಂಬೈ, ಹೈದರಾಬಾದ್, ಮದ್ರಾಸ್, ಮೈಸೂರು ಮುಂತಾದ ವಿವಿಧ ಪ್ರಾಂತಗಳಲ್ಲಿ ಹಂಚಿ ಹೋಗಿದ್ದ, ಪ್ರಧಾನವಾಗಿ ಕನ್ನಡ ಮಾತನಾಡುವ ನಾನಾ ಪ್ರದೇಶಗಳು ಒಂದುಗೂಡಿ ಏಕೀಕೃತಗೊಂಡ ಒಂದು ರಾಜ್ಯವು ಉದಿಸಿ ಈ ನವೆಂಬರ್ ಒಂದಕ್ಕೆ ೬೮ ವರ್ಷಗಳು ತುಂಬುತ್ತವೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಉದ್ದೇಶ-ಒಂದುಗೂಡುವುದರ ಹಿಂದಿದ್ದ ಆಶೋತ್ತರಗಳು ಎಷ್ಟರ ಮಟ್ಟಿಗೆ ಈಡೇರಿವೆ ಅಥವಾ ಈ ಆಶೋತ್ತರಗಳು ಈಡೇರುವ ದಾರಿಯಲ್ಲಿ ನಾವು ಹಂತ ಹಂತವಾಗಿಯಾದರೂ ನಡೆಯುತ್ತಿದ್ದೇವಾ ಎಂದು ಪರಿಶೀಲಿಸಿಕೊಳ್ಳಬೇಕಾದ ತುರ್ತು ಅಗತ್ಯ ಇದೆ.

ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ಒರಿಸ್ಸಾ, ಬಂಗಾಳ, ಅಸ್ಸಾಂ, (ಹಿಂದಿನ ಅವಿಭಜಿತ ಆಂಧ್ರ ಪ್ರದೇಶ) ಹೀಗೆ ಭಾರತವು ಪ್ರಧಾನವಾಗಿ ವಿವಿಧ ಭಾಷಾವಾರು ರಾಜ್ಯಗಳ ಒಂದು ವಿಶಾಲವಾದ ಒಕ್ಕೂಟ. ಕೆಲವು ಅಪವಾದಗಳಿದ್ದರೂ ರಾಜ್ಯಗಳು ಇಲ್ಲಿ ಪ್ರಮುಖವಾಗಿ ಭಾಷೆಗಳ ಆಧಾರದಲ್ಲಿ ಒಂದೊಂದು ಘಟಕವಾಗಿ ರೂಪುಗೊಂಡಿವೆ. ಒಂದು ಭಾಷೆಯನ್ನು ಆಡುವ ಮತ್ತು ಒಂದು ಭಾಷೆಯನ್ನು ಬಲ್ಲ ಜನರು ಒಂದು ಘಟಕದಲ್ಲಿ ಒಂದುಗೂಡಿದ್ದರೆ, ಆ ಜನ ಸಮುದಾಯದ ಸಾಂಸ್ಕೃತಿಕ-ಸಾಮಾಜಿಕ ವಿಕಾಸಕ್ಕೆ ಮತ್ತು ಆರ್ಥಿಕ ಪ್ರಗತಿಗೆ ಅದು ಪೂರಕವಾಗಿರುತ್ತದೆ, ಆಡಳಿತ ಸರಾಗವಾಗಿರುತ್ತದೆ ಎಂದು ಸರಿಯಾಗಿಯೇ ಭಾವಿಸಲಾಗಿತ್ತು.

ಜಗತ್ತಿನ ಯಾವುದೇ ಒಂದು ಭಾಷೆಯು ಬರಿಯ ವಿಚಾರ-ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಭಾವನೆ-ಮಾಹಿತಿ ತಿಳಿಸುವ ಮಾಧ್ಯಮ ಮಾತ್ರವಲ್ಲ. ಅದು ಒಂದು ಜೀವಂತ ಸಂಸ್ಕೃತಿಯ ವಾಹಕವೂ ಆಗಿರುತ್ತದೆ. ಭಾಷೆ ಯಾವುದೇ ಸಮಾಜದ ಒಂದು ವಿಶೇಷ ಅಸ್ಮಿತೆ. ಭಾಷೆ ಎಂದಾಗ ಅದರ ಜೊತೆಗೆ ಕೇವಲ ಭಾವನಾತ್ಮಕ ಕಾರಣಗಳು ಮಾತ್ರ ಇಲ್ಲ. ಭಾಷಾವಾರು ರಾಜ್ಯಗಳ ರಚನೆಯ ಹಿಂದೆ ಒಂದು ವೈಜ್ಞಾನಿಕ ತರ್ಕ ಮತ್ತು ಪ್ರಜಾಪ್ರಭುತ್ವದ ತತ್ವಗಳ ತಳಹದಿಯೂ ಇದೆ. ಜನಸಾಮಾನ್ಯರ ಭಾಷೆಯಲ್ಲಿ ಆಡಳಿತ ಇದ್ದರೆ ಜನರಿಗೆ ಅನುಕೂಲ. ಕರ್ನಾಟಕದಲ್ಲಿರುವ ಸರಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳು, ಅಂಚೆ ಕಚೇರಿ ಮುಂತಾದವುಗಳಲ್ಲಿ ಸಾಧ್ಯವಾದಷ್ಟೂ ಕನ್ನಡದಲ್ಲಿ ಆಡಳಿತ ಇರಬೇಕು ಮತ್ತು ಸಾರ್ವಜನಿಕರಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಸಂಪೂರ್ಣವಾದ ಅವಕಾಶ ಇರಬೇಕು. ಆಗ ಮಾತ್ರ ಪ್ರಜ್ಞಾಪ್ರಭುತ್ವ ವ್ಯವಸ್ಥೆ ಎಂಬುದಕ್ಕೆ ಅರ್ಥ ಬರುತ್ತದೆ. ಎಷ್ಟೇ ಶ್ರೇಷ್ಠ ಎಂದು ಯಾರು ಎಷ್ಟೇ ವಾದಿಸಿದರೂ ಭಾರತದಲ್ಲಿ ಸಂಸ್ಕೃತ ಭಾಷೆಯನ್ನು ಆಡಳಿತ ಭಾಷೆ ಮಾಡಲಾಗದು. ಜನರಿಗೆ ಆರ್ಥವಾಗದ ಯಾವುದೇ ಭಾಷೆಯಲ್ಲಿ ಆಡಳಿತ ಎಂದರೆ ಅದು ಹೇರಿಕೆಯಾಗುತ್ತದೆ. ಅಲ್ಲಿ ಪ್ರಜಾಪ್ರಭುತ್ವದ ಮೂಲ ತತ್ವ ಉಲ್ಲಂಘನೆಯಾಗುತ್ತದೆ.

ತಾಯಿ ನುಡಿಯಲ್ಲಿ ಶಿಕ್ಷಣ

ಇನ್ನು ಶಿಕ್ಷಣದ ವಿಷಯಕ್ಕೆ ಬಂದಾಗ, ಎಲ್ಲ ಹಂತಗಳಲ್ಲೂ ಮಗುವಿಗೆ ತನ್ನ ತಾಯಿ ನುಡಿಯಲ್ಲಿ ಶಿಕ್ಷಣ ದೊರಕಬೇಕು. (ಅದು ಅತಿ ಕಡಿಮೆ ಜನರು ಮಾತನಾಡುವ ಭಾಷೆಯ ಕುಟುಂಬದ ಮಗುವಾದಲ್ಲಿ, ಆಗ ಪರಿಸರದ ನುಡಿಯಲ್ಲಿ ಶಿಕ್ಷಣ ದೊರಕಬೇಕು.) ಈ ಆಶಯದ ಹಿಂದೆ ಒಂದು ವೈಜ್ಞಾನಿಕ ತತ್ವ ಇದೆ. ತನ್ನ ಮನೆಯಲ್ಲಿ ಅಥವಾ ಪರಿಸರದಲ್ಲಿ ಪ್ರಚಲಿತದಲ್ಲಿರುವ ಭಾಷೆಯಲ್ಲಿ ಮಗುವು ಯಾವುದೇ ವಿಚಾರವನ್ನು ಕಲಿತಾಗ ಅದು ಮಗುವಿಗೆ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಚೆನ್ನಾಗಿ ಮನದಟ್ಟಾಗುತ್ತದೆ.

ಕಳಿತ ಬಾಳೆಹಣ್ಣು..

ಒಂದು ಸಾಮಾನ್ಯ ಕುಟುಂಬದ ಮಗುವು ಹಣಕಾಸು ಲೆಕ್ಕಾಚಾರಗಳನ್ನು ರೂಪಾಯಿಗಳ ಲೆಕ್ಕದಲ್ಲಿ ಕಲಿತಿದೆ ಎಂದು ಭಾವಿಸೋಣ. ಅದೇ ಮಗುವಿಗೆ ನಾವು ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಹಣದ ಮೊತ್ತವನ್ನು ಹೇಳಿದಾಗ ಆ ಮಗು ಹಣದ ಮೊತ್ತವನ್ನು ಡಾಲರ್ ಮೌಲ್ಯದ ಆಧಾರದಲ್ಲಿ ರೂಪಾಯಿಗೆ ಪರಿವರ್ತಿಸಿಕೊಂಡು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದಷ್ಟು ಸಮಯ ಬೇಕಾಗುತ್ತದೆ ಮತ್ತು ಮಿದುಳಿನಲ್ಲಿ ಒಂದಷ್ಟು ಲೆಕ್ಕಾಚಾರದ ಕಸರತ್ತುಗಳು ನಡೆಯಬೇಕಾಗುತ್ತದೆ. ಹಾಗೆಯೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಪರಿಸರದಲ್ಲಿ ಬಾಳುತ್ತಿರುವ ಮಗುವಿಗೆ, ವಿಷಯವನ್ನು ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದನ್ನು ಕಲಿತ ಮಗುವಿಗೆ ಇಂಗ್ಲೀಷ್ ಭಾಷೆಯಲ್ಲಿ ಏನನ್ನಾದರೂ ಹೇಳಿದಾಗ ಮಗುವಿನ ಮೆದುಳು ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದಿಸಿಕೊಂಡು ಮನನ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕ-50ರ ಸಂಭ್ರಮ | ಕನ್ನಡ ರಾಜ್ಯೋತ್ಸವದಲ್ಲಿ ಈ 5 ಹಾಡುಗಳು ಕಡ್ಡಾಯ!

ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಸುಲಭವಾಗಿ ಸಿಪ್ಪೆ ಸುಲಿದು ತಿನ್ನುವುದಕ್ಕೂ ಹಾಗೂ ಹಲಸಿನ ಹಣ್ಣನ್ನು ಅದರ ಸಿಪ್ಪೆ ತೆಗೆದು ತಿನ್ನುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಹಾಗೆ. ಹೀಗಾಗಿ ತನ್ನ ಕುಟುಂಬದಲ್ಲಿ ಇಲ್ಲದ, ತನ್ನ ಪರಿಸರದಲ್ಲಿಲ್ಲದ ಒಂದು ಭಾಷೆಯಲ್ಲಿ ವಿಚಾರಗಳನ್ನು ಕಲಿಯಬೇಕಾದ ಮಗುವು ಕಲಿಕೆಯಲ್ಲಿ ಸಹಜವಾಗಿಯೇ ಹಿಂದುಳಿಯುತ್ತದೆ. ಇಂತಹ ಕಾರಣಕ್ಕಾಗಿ ಕರ್ನಾಟಕದಲ್ಲಿ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿ ಇರಬೇಕು (ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಸಾಧ್ಯತೆ ಇರುವ ಕಡೆ ಉರ್ದು, ತೆಲುಗು, ತಮಿಳು, ತೆಲುಗು ಮುಂತಾದ ತಾಯಿನುಡಿಗಳಲ್ಲಿ ಸಹ ಇರಬೇಕು.)ಎಂದು ಕೇಳುವುದು ಒಂದು ವೈಜ್ಞಾನಿಕವಾದ ಮತ್ತು ಜನಪರವಾದ ಹಾಗೂ ಪ್ರಜ್ಞಾಸತ್ತಾತ್ಮಕವಾದ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಕನ್ನಡದಂತಹ ಯಾವುದೇ ಭಾಷೆಯ ಉಳಿವು ಬೆಳವಣಿಗೆ ಒಟ್ಟು ಸಮಾಜದ ಪ್ರಗತಿ ದೃಷ್ಟಿಯಿಂದ, ಆರೋಗ್ಯಕರ ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳ ಮಹತ್ವದ್ದಾಗುತ್ತದೆ.

ಆದರೆ ಭಾರತದಲ್ಲಿ ಕನ್ನಡ ಮತ್ತು ಕನ್ನಡದಂತಹ ಜನ ಭಾಷೆಗಳಿಗೆ, ಈ ಭಾಷೆಗಳ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಕಷ್ಟ ಎನ್ನುವಂತಹ ಬಹಳ ಗಂಭೀರ ಅಪಾಯಗಳು ಎದುರಾಗುತ್ತಿವೆ. ಈ ಬೆಳವಣಿಗೆ ಎಷ್ಟೆಲ್ಲಾ ಕಣ್ಣು ಕುಕ್ಕುವಂತೆ ಕಾಣುತ್ತಿದ್ದರೂ ಈ ವಿಷಯದಲ್ಲಿ ನಮ್ಮ ಸಮಾಜದಲ್ಲಿ ಎಚ್ಚರ ಮತ್ತು ಜಾಗೃತಿ, ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಪ್ರಯತ್ನಗಳು ಕಾಣದಿರುವುದು ಆಶ್ಚಯಕರವೂ ಆಘಾತಕರವೂ ಆಗಿದೆ.

ಶಾಲಾ ಶಿಕ್ಷಣವನ್ನು ಮಗುವಿನ ತಾಯಿ ನುಡಿಯಲ್ಲಿ ಅಥವಾ ಪರಿಸರದ ಭಾಷೆಯಲ್ಲಿ ಕೊಡುವುದು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾದ ಒಂದು ಅಂಶ. ಈ ವಿಷಯದಲ್ಲಿ ಏನಾಗುತ್ತಿದೆ ಎಂದು ಕೆಲವು ನಿರ್ದಿಷ್ಟ ಉದಾಹರಣೆಗಳೊಂದಿಗೆ ಪರಿಶೀಲಿಸೋಣ.

ಈ ಕನ್ನಡ ಶಾಲೆಗೆ ಒಂದು ಮಗುವೂ ಸೇರಲಿಲ್ಲ

ಕರ್ನಾಟಕದ ದಕ್ಷಿಣದ ತುದಿ ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ, ಎಂಟು ಜನ ಶಿಕ್ಷಕರಿರುವ ಹಳೇ ಮಾರಟಳ್ಳಿಯ ಕನ್ನಡ ಮಾಧ್ಯಮದ ಸರಕಾರಿ ಪ್ರಾಥಮಿಕ ಶಾಲೆೆಗೆ ೨೦೨೩-೨೪ ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಒಂದೇ ಒಂದು ಮಗುವೂ ಸಹ ದಾಖಲಾಗಲಿಲ್ಲ. ಈ ಶಾಲೆಗೆ ಒಂದನೇ ತರಗತಿಗೆ ೩೦ ಮಕ್ಕಳನ್ನು ಸೇರಿಸಿಕೊಳ್ಳುವ ಅವಕಾಶ ಇತ್ತು. ಮೂರು ವರ್ಷಗಳ ಹಿಂದೆ ಇಲ್ಲಿ ಸರಕಾರದ್ದೇ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ ಆಗಿದೆ. ಮೂರೇ ಮೂರು ವರ್ಷಗಳಲ್ಲಿ ಕನ್ನಡ ಮಾಧ್ಯಮ ವಿಭಾಗವನ್ನೇ ಮುಚ್ಚಬೇಕಾದ ಪರಿಸ್ಥಿತಿ ಬರುತ್ತಿದೆ. ಈಗ ಅಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಗಿಂತ ಮೇಲಿನ ತರಗತಿಗಳಲ್ಲಿ ಓದುತ್ತಿರುವವರು ಎಂದರೆ, ಸುತ್ತ ಮುತ್ತಲ ದೊಡ್ಡಾಣೆ, ತೋಕೆರೆ ಮುಂತಾದ ಗುಡ್ಡಗಾಡು ಪ್ರದೇಶದ ಗ್ರಾಮಗಳಿಂದ ಬರುವ ಮಕ್ಕಳು ಮಾತ್ರ. ಈ ಕನ್ನಡ ಮಾಧ್ಯಮದಲ್ಲಿ 7-8 ನೇ ತರಗತಿಯವರೆಗೆ ಓದಿದರೂ ಸಹ ಮುಂದೆ ಆ ಮಕ್ಕಳಲ್ಲಿಯೂ ಹೆಚ್ಚಿನವರು ಪ್ರೌಢಶಾಲೆಗೆ ಖಾಸಗಿ ಶಾಲೆಯ ಇಂಗ್ಲೀಷ್ ಮಾಧ್ಯಮಕ್ಕೆ ಹೋಗುತ್ತಾರೆ. ಅಂದರೆ ಒಟ್ಟಾರೆ ಎಲ್ಲ ಹಂತಗಳಲ್ಲಿ ಸರಕಾರಿ ಶಾಲೆಗಳು ಮತ್ತು ಕನ್ನಡ ಮಾಧ್ಯಮದ ಶಾಲೆಗಳಿಗೆ ಧಕ್ಕೆ ಬರುತ್ತಿದೆ ಎನ್ನುವುದು ಇಲ್ಲಿ ಎದ್ದು ಕಾಣುತ್ತದೆ.

ಕೋಲಾರ-ವಿದ್ಯಾರ್ಥಿ ಕೊರತೆ ಎಷ್ಟೆಂದರೆ ಮುಖ್ಯ ಶಿಕ್ಷಕರೇ ಇಲ್ಲ

ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕಿನ ಐತರಹಳ್ಳಿ ಕ್ಲಸ್ಟರ್‌ನಲ್ಲಿ ವಿಚಾರಿಸಿದಾಗಲೂ ಕೆಲವು ಶಿಕ್ಷಕರ ವೈಯುಕ್ತಿಕವಾದ ವಿಶೇಷ ಪ್ರಯತ್ನಗಳಿಂದ ಕನ್ನಡ ಮಾಧ್ಯಮಕ್ಕೆ ಸರಕಾರಿ ಶಾಲೆಗೆ ಸೇರುತ್ತಿರುವುದು ಬಿಟ್ಟರೆ, ಎಲ್ಲ ಕಡೆ ಗಣನೀಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಆಗುತ್ತಿರುವ ಚಿತ್ರಣವೇ ಸಿಗುತ್ತದೆ. ಯಾವುದೇ ಸರಕಾರಿ ಶಾಲೆಗೆ 6೦ ಕ್ಕಿಂತ ಹೆಚ್ಚಿನ ಮಕ್ಕಳು ಇದ್ದರೆ ಮಾತ್ರವೇ ಸರಕಾರ ಆ ಶಾಲೆಗೆ ಮುಖ್ಯ ಶಿಕ್ಷಕರನ್ನು ಕೊಡುವುದು. ಇಲ್ಲವಾದರೆ ಇರುವ ಸಹ ಶಿಕ್ಷಕರಲ್ಲೆ ಒಬ್ಬರು ಮುಖ್ಯ ಶಿಕ್ಷಕರ ಜವಾಬ್ದಾರಿ ಹೊರಬೇಕಾಗುತ್ತದೆ. (ಇರುವ ಶಿಕ್ಷಕರಲ್ಲೇ ಒಬ್ಬ ಶಿಕ್ಷಕರು ಆಡಳಿತಾತ್ಮಕ ಕೆಲಸಗಳಿಗೆ ನಿಗದಿಯಾದರೆ, ಪಾಠ ಮಾಡಲು ಒಬ್ಬರು ಕಡಿಮೆಯಾಗುತ್ತಾರೆ.) ಈ ಕ್ಲಸ್ಟರ್(ಶಾಲೆಗಳ ಗುಂಪು)ನ 11 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯಾವ ಶಾಲೆಗೂ ಸರಕಾರ ಮುಖ್ಯ ಶಿಕ್ಷಕರನ್ನು ಕೊಟ್ಟಿಲ್ಲ. ಏಕೆಂದರೆ ಈ ಎಲ್ಲ ಶಾಲೆಗಳಲ್ಲಿಯೂ ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ಕಡಿಮೆಯಾಗುತ್ತಿದೆ.

ಬೀದರ್-ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ಕುಸಿತ

ಕರ್ನಾಟಕದ ಉತ್ತರದ ತುತ್ತ ತುದಿಯ ಬೀದರ್ ಜಿಲ್ಲೆಯ ಹಳೆಯ ಹುಮ್ನಾಬಾದ್(ಈಗ ಚಿಟಗುಪ್ಪ ತಾ.) ತಾಲ್ಲೂಕಿನ ಚಾಂಗ್ಲೇರಾ ಪಂಚಾಯತ್ ವ್ಯಾಪ್ತಿಯ ಕನ್ನಡ ಮಾಧ್ಯಮದ ಸರಕಾರಿ ಪ್ರೌಢಶಾಲೆಯಲ್ಲಿಯು ಇದೇ ರೀತಿಯ ಪ್ರವೃತ್ತಿ ಕಂಡು ಬರುತ್ತಿದೆ. ಕಳೆದ ವರ್ಷ 35೦ ಮಕ್ಕಳು ಸೇರಿದ್ದ ಸರಕಾರಿ ಶಾಲೆಗೆ ಈ ವರ್ಷ 321ಮಕ್ಕಳು ಮಾತ್ರ ಸೇರಿದ್ದಾರೆ. ಅಂದರೆ 29 ಮಕ್ಕಳು ಕಡಿಮೆಯಾಗಿದ್ದಾರೆ. ವಿದ್ಯಾರ್ಥಿಗಳ ಹರಿವು ಇಂಗ್ಲೀಷ್ ಮಾಧ್ಯಮದ ಕಡೆಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಕರಾವಳಿಯಲ್ಲಿಯೂ ‘ಇಂಗ್ಲೀಷ್ ಮಾಧ್ಯಮ’ದ ಹಾವಳಿ

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡದ ವಿಟ್ಲದಲ್ಲಿರುವ ಇಂಗ್ಲೀಷ್ ಮಾಧ್ಯಮದ ಸರಕಾರಿ ಶಾಲೆಯೊಂದನ್ನು ಉದಾಹರಣೆಗಾಗಿ ನೋಡುವುದಾದರೆ, ಸು. 15-2೦ ಕಿ.ಮಿ.ಗಳಿಂದಲೂ ಈ ಶಾಲೆಗೆ ಮಕ್ಕಳು ಬರುತ್ತಾರೆ. ಆ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ಸು. 1,5೦೦ ಇದೆ, ಇದೇ ಕಾರಣಕ್ಕಾಗಿ ಸುತ್ತಮುತ್ತಲ ಕನ್ನಡ ಮಾಧ್ಯಮದ ಶಾಲೆಗಳು ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿವೆ ಎನ್ನುವ ಮಾಹಿತಿ ಕೊಡುತ್ತಾರೆ ಸ್ಥಳೀಯರು.

ನವೋದಯ ಶಾಲೆ, ರಾಣಿ ಚೆನ್ನಮ್ಮ, ಮುರಾರ್ಜಿ, ಏಕಲವ್ಯ ಮುಂತಾದ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ವಸತಿ ಶಾಲೆಗಳು ಸಹ ಕನ್ನಡ ಮಾಧ್ಯಮದ ಸರಕಾರಿ ಶಾಲೆಯಿಂದ ಮಕ್ಕಳನ್ನು ಸಾಕಷ್ಟು ಸೆಳೆಯುತ್ತಿರುವುದು ಕಂಡು ಬರುತ್ತದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಸಾಧಕರಿಗೆ,10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ವಿಜೇತರ ವಿವರ

‘ಇಂಗೀಷ್ ವ್ಯಾಮೋಹ’ ಮಾತ್ರವಲ್ಲ

ಕನ್ನಡ ಮಾಧ್ಯಮದ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ಕಡಿಮೆ ಆಗುತ್ತಿರುವುದು, ಕೇವಲ ಇಂಗ್ಲೀಷ್ ಮಾಧ್ಯಮ ಮತ್ತು ಇಂಗ್ಲೀಷ್ ಭಾಷೆಯ ಬಗೆಗಿನ ವ್ಯಾಮೋಹದಿಂದಲ್ಲ. ಇದು ಬಹಳ ಸಂಕೀರ್ಣವಾದ ಸಮಸ್ಯೆ. ಸರಕಾರಿ ಶಾಲೆಗಳಿಂದ ಮಕ್ಕಳು ಇಂಗ್ಲೀಷ್ ಮಾಧ್ಯಮದ ಶಾಲೆಗಳ ಕಡೆಗೆ ಪೋಷಕರು ವಲಸೆ ಹೋಗಲು ಬಹುಮುಖ್ಯವಾದ ಒಂದು ಕಾರಣ, ಸರಕಾರಿ ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಇಲ್ಲದಿರುವುದು. ಪ್ರಾಥಮಿಕ ಹಂತದಲ್ಲಿ ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕನಿಷ್ಟ ತರಗತಿಗೆ ಒಬ್ಬರು ಶಿಕ್ಷಕರು ಇರುತ್ತಾರೆ, ಆ ನಂತರದ ಹಂತದಲ್ಲಿ ಕನಿಷ್ಟ ವಿಷಯಕ್ಕೊಬ್ಬರು ಶಿಕ್ಷಕರು ಇರುತ್ತಾರೆಂದು ಕಾಣುವ ಖಾಸಗಿ ಶಾಲೆಯ ಚಿತ್ರಣ. ಪೋಷಕರು ಈ ಶಾಲೆಗಳಲ್ಲಿ ತಮ್ಮ ಮಗುವಿಗೆ ಶಿಕ್ಷಕರು ವೈಯುಕ್ತಿಕ ಗಮನ ಕೊಡಲು ಸಾಧ್ಯವಾಗುತ್ತದೆ ಎಂದು ಸಹಜವಾಗಿಯೇ ಭಾವಿಸುತ್ತಾರೆ. ಸರಕಾರಿ ಶಾಲೆಗಳಲ್ಲಿ ಮೂರು ನಾಲ್ಕು ತರಗತಿಗಳನ್ನು ಒಬ್ಬರೇ ಶಿಕ್ಷಕರು ನೋಡಿಕೊಳ್ಳಬೇಕಾದ ಗಂಭೀರ ಸವಾಲು ಶಿಕ್ಷಕರ ಮೇಲಿರುವಾಗ ಪೋಷಕರಿಗೆ ಆ ಶಾಲೆಗೆ ಕಳಿಸಲು ಖಂಡಿತ ಧೈರ್ಯ ಬರುವುದಿಲ್ಲ. ಕೆಲವೆಡೆ ಖಾಸಗಿ ಶಾಲೆಯಲ್ಲೇ ಕನ್ನಡ ಮಾಧ್ಯಮದ ವಿಭಾಗ ಅಗತ್ಯ ಶಿಕ್ಷಕರೊಂದಿಗೆ ಉತ್ತಮವಾಗಿ ಸಜ್ಜುಗೊಂಡಿದ್ದರೆ ಅಲ್ಲಿಗೆ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು ಸೇರಿರುವ ಉದಾಹರಣೆಗಳೂ ಇವೆ.

ವಿದ್ಯಾರ್ಥಿ ಶಿಕ್ಷಕರ ನಡುವೆ ಇರಬೇಕಾದ ವೈಜ್ಞಾನಿಕ ಅನುಪಾತ, ಕನಿಷ್ಟ ವಿಷಯಕ್ಕೊಬ್ಬರು ಶಿಕ್ಷಕರು ಎಂಬ ಅಗತ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡು ಯೋಚಿಸಿದರೆ, ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಶಿಕ್ಷಕ ಹುದ್ದೆಗಳನ್ನು ತುಂಬಬೇಕಾದ ಅಗತ್ಯವಿದೆ. ಆದರೆ ಸರಕಾರಗಳು ಈ ಬಗೆಗೆ ಅಗತ್ಯ ಗಮನ ನೀಡುತ್ತಿಲ್ಲ. ಪ್ರತಿ ವರ್ಷವೂ ಸುಮಾರು 3,೦೦೦ ಶಿಕ್ಷಕರು ನಿವೃತ್ತರಾಗುತ್ತಾರೆ. ಎಷ್ಟೋ ಜನ ಶಿಕ್ಷಕರು ಇರುವ ಕಡೆಯಿಂದ ಬೇರೆ ಶಾಲೆಗೆ ವರ್ಗಾವಣೆ ಆಗಿ ಹೋಗುತ್ತಾರೆ. ಹೀಗೆ ಶಾಲೆಯಲ್ಲಿ ಖಾಲಿಯಾಗುವ ಹುದ್ದೆಗಳಿಗೂ ಸಹ ಅಗತ್ಯ ನೇಮಕಾತಿಗಳನ್ನು ಮಾಡದೇ ಸರಕಾರವು ವರ್ಷಗಟ್ಟಲೆ ವಿಳಂಬ ಮಾಡುತ್ತಿರುವುದರಿಂದ ಸರಕಾರಿ ಶಾಲೆಗಳು ಪೋಷಕರ ವಿಶ್ವಾಸವನ್ನು ಕಳೆದುಕೊಂಡು ಒಟ್ಟು ಶಿಕ್ಷಣ ಕ್ಷೇತ್ರವೇ ಸೊರಗುವಂತಾಗಿದೆ. ಈ ವಿಷಯದಲ್ಲಿ ಕನ್ನಡ ಭಾಷೆಯ ಉಳಿವಿನ ಪ್ರಶ್ನೆಯು ಶಿಕ್ಷಣದ ಗುಣಮಟ್ಟದೊಂದಿಗೆ ತಳುಕು ಹಾಕಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಅನ್ನದ ಭಾಷೆ ಮತ್ತು ಉನ್ನತ ಶಿಕ್ಷಣದಲ್ಲಿನ ಮಾಧ್ಯಮದ ಪ್ರಶ್ನೆ

ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಿದ ಪೋಷಕರೆಲ್ಲರೂ ಕನ್ನಡ ಭಾಷೆಗೆ ವಿರುದ್ಧ ಇದ್ದಾರೆಂದು ಅರ್ಥವಲ್ಲ. ತಮ್ಮ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಪೂರಕವಾದ ರೀತಿಯ ಶಿಕ್ಷಣ ಕೊಡಿಸಲು ಪ್ರಯತ್ನಿಸುವುದು ತೀರಾ ಸಹಜ. ಕನ್ನಡ ಮಾಧ್ಯಮದಲ್ಲಿಯೇ ತಾಂತ್ರಿಕ-ವಿಜ್ಞಾನ-ವಾಣಿಜ್ಯ ಇತ್ಯಾದಿ ಉನ್ನತ ಶಿಕ್ಷಣವನ್ನು ಕಲಿಯುವ ಉತ್ತಮ ಅವಕಾಶಗಳಿದ್ದು, ಶಿಕ್ಷಣ ಪಡೆದ ಮೇಲೆ ಅದರಿಂದಲೇ ಉತ್ತಮ ಉದ್ಯೋಗ ಗಳಿಸಿಕೊಳ್ಳುವುದು ಮತ್ತು ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದು ಸಾಧ್ಯವಾದರೆ ಪೋಷಕರು ತಮ್ಮ ಮಕ್ಕಳನ್ನು ಖಂಡಿತ ಕನ್ನಡ ಮಾಧ್ಯಮಕ್ಕೇ ಸೇರಿಸುತ್ತಾರೆ. ಇವತ್ತು ಇಂಗ್ಲೀಷ್ ಕಲಿಯುವುದರಿಂದ ನಮ್ಮ ಸಮಾಜದಲ್ಲಿ ಹೇಗಾದರೂ ಅನ್ನ ಸಂಪಾದನೆಗೆ ದಾರಿಯಾಗುತ್ತದೆ ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ.

ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಯ ತಾಯಿ ನುಡಿ ಅಥವಾ ಪರಿಸರದ ಭಾಷೆಯಲ್ಲಿ ಶಿಕ್ಷಣ ಸಿಗಬೇಕು ಎನ್ನುವುದು ಒಂದು ಆದರ್ಶದ ಕನಸು. ಆದರೆ ಯಾವುದೇ ಮಗು ಉನ್ನತ ಶಿಕ್ಷಣ, ಅದರಲ್ಲಿಯೂ ತಾಂತ್ರಿಕ ಮತ್ತು ವೈದ್ಯಕೀಯ, ವಾಣಿಜ್ಯ ವ್ಯವಹಾರಗಳಂತಹ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕಾದರೆ ಅದು ಬಹುತೇಕ ಇಂಗ್ಲೀಷ್ ಮಾಧ್ಯಮದಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ ಎನ್ನುವುದೇ ಈಗಿರುವ ಕಠೋರ ವಾಸ್ತವ. ಏಕೆಂದರೆ ತಾಂತ್ರಿಕ, ವೈದ್ಯಕೀಯ, ವಾಣಿಜ್ಯ, ಆಡಳಿತಾತ್ಮಕ ಪಾರಿಭಾಷಿಕ ಪದಗಳನ್ನು ಜನಭಾಷೆಯಲ್ಲಿ ಉನ್ನತ ಶಿಕ್ಷಣದ ಪಠ್ಯಪುಸ್ತಕಗಳನ್ನು ರೂಪಿಸುವ ಕೆಲಸವು ದೇಶ ಸ್ವಾತಂತ್ರ್ಯ ಕಂಡು ಎಪ್ಪತೈದು ವರ್ಷ ದಾಟಿದರೂ ಆಗಿಲ್ಲ. ಇದನ್ನು ಸಾಧಿಸುವ ಇಚ್ಚಾಶಕ್ತಿ ನಮ್ಮನ್ನು ಆಳುವ ಸರಕಾರಗಳಿಗೆ ಇಲ್ಲ.

ಒಂದು ಭಾಷೆಯಾಗಿ ಇಂಗ್ಲೀಷನ್ನು ಚೆನ್ನಾಗಿ ಕಲಿಸುವುದು

ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಪಡೆದುಕೊಳ್ಳುವುದು, ಜೊತೆಗೆ ಒಂದು ಭಾಷೆಯಾಗಿ ಇಂಗ್ಲೀಷನ್ನು ಉತ್ತಮವಾಗಿ ಕಲಿಸುವುದು…. ಈ ಒಂದು ಸೂತ್ರವನ್ನು ಹಲವು ತಜ್ಞರು ಸೂಚಿಸುತ್ತಾರೆ. ತಾತ್ವಿಕವಾಗಿ ಇದು ಸರಿಯಿದೆ. ಇರುವ ಸಮಸ್ಯೆಗೆ ಅದೊಂದು ಉತ್ತಮ ಪರಿಹಾರ. ಆದರೆ ಈ ನೀತಿಯ ಜಾರಿಯಲ್ಲಿ ಗಂಭೀರ ಸಮಸ್ಯೆಗಳಿವೆ.

ಸರಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಇಂಗ್ಲೀಷನ್ನು ಚೆನ್ನಾಗಿ ಕಲಿಸಬಲ್ಲ ಶಿಕ್ಷಕರು ಅಗತ್ಯ ಸಂಖ್ಯೆಯಲ್ಲಿ ಇಲ್ಲ. ಕೆಲ ವರ್ಷಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರವೇ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಎಂಬ ಹೆಸರಿನ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸಿತು. ದುರಂತವೆಂದರೆ ಈ ಶಾಲೆಗಳಲ್ಲೂ ಸಹ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸಲು ಅಗತ್ಯ ಅರ್ಹತೆ ಇರುವ ಶಿಕ್ಷಕರಿಲ್ಲ. ಸರಕಾರವು ಇಂಗ್ಲೀಷ್ ಭಾಷಾ ಶಿಕ್ಷಕರಿಗೆ ಅಲ್ಪಾವಧಿಯ ತರಬೇತಿಯನ್ನು ನೀಡಿ, ಇಂಗ್ಲೀಷ್ ಮಾಧ್ಯಮದಲ್ಲಿ ವಿವಿಧ ವಿಷಯಗಳನ್ನು ಬೋಧಿಸಲು ನೇಮಿಸಿದೆ. ಅಂದರೆ ಇಲ್ಲಿಯೂ ಸರಕಾರವು ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡಿರುವುದೇ ಕಾಣುತ್ತಿದೆ. ಸಿದ್ದರಾಮಯ್ಯ ನೇತೃತ್ವದ ನೂತನ ರಾಜ್ಯ ಸರಕಾರವು ಸಹ ತನ್ನ ಮೊದಲ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೊದಲಿಗಿಂತಲೂ ಕೊಂಚ ಕಡಿಮೆ ಹಣ ಕೊಡುವ ಮೂಲಕ ಶಿಕ್ಷಣ ಪ್ರೇಮಿಗಳಿಗೆ ನಿರಾಶೆಯನ್ನೇ ಉಂಟು ಮಾಡಿದೆ.
ಇಂತಹ ಒಟ್ಟು ಪರಿಸ್ಥಿತಿಯನ್ನು ನೋಡಿದಾಗ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಅಮೂಲಾಗ್ರ ಬದಲಾವಣೆ ಈ ಸದ್ಯಕ್ಕೆ ಆಗುವ ಲಕ್ಷಣಗಳೇನೂ ಕಾಣುವುದಿಲ್ಲ. ಇರುವ ಸಮಸ್ಯೆಗಳು ಮುಂದುವರಿಯುತ್ತವೆ ಮತ್ತು ಹೊಸ ಸಮಸ್ಯೆ ಸೃಷ್ಟಿಯಾಗುತ್ತವೆ.

ತ್ರಿಶಂಕು ಸ್ವರ್ಗದಂತಹ ಅತಂತ್ರ ವಿದ್ಯಾರ್ಥಿ ಸಮೂಹದ ಸೃಷ್ಟಿ

ಒಂದು ಮಗುವು ತನ್ನ ತಾಯಿನುಡಿ ಅಥವಾ ಪರಿಸರದ ಭಾಷೆಯಲ್ಲಿ, ಅಂದರೆ ಕನ್ನಡದಂತಹ ಜನಭಾಷೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರೆ ಅದು ತನಗೆ ಆಪ್ತವಾದ ಭಾಷೆಯಲ್ಲಿ ಸಾಹಿತ್ಯ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹೀಗೆ ವಿಷಯಗಳನ್ನು ಚೆನ್ನಾಗಿ ಕಲಿಯಲು ಅವಕಾಶವಾಗುತ್ತದೆ. ಮತ್ತು ಕನ್ನಡದಂತಹ ಒಂದು ಭಾಷೆಯನ್ನಾದರೂ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಯಾವುದೇ ಮಗು ಕನಿಷ್ಟ ಒಂದು ಭಾಷೆಯಲ್ಲಿಯಾದರೂ ಪ್ರಭುತ್ವ ಸಾಧಿಸುವುದು ಅನಿವಾರ್ಯ ಅಗತ್ಯ. ಹೀಗೆ ಒಂದಾದರೂ ಭಾಷೆಯನ್ನು, ಆ ಭಾಷೆಯ ಮೂಲಕ ಒಂದಷ್ಟು ವಿಚಾರಗಳನ್ನು ಚೆನ್ನಾಗಿ ಕಲಿತಿದ್ದರೆ, ಮುಂದೆ ಕಾಲೇಜು ಶಿಕ್ಷಣ, ಉನ್ನತ ಶಿಕ್ಷಣದ ಹಂತದಲ್ಲಿ ಮತ್ತೊಂದು ಭಾಷೆಯನ್ನು ಕಲಿತುಕೊಳ್ಳಲು ಸಹಾಯವಾಗುತ್ತದೆ.

ಆದರೆ ಶಿಕ್ಷಣ ಮಾಧ್ಯಮದ ವಿಷಯದಲ್ಲಿನ ಗೋಜಲುಗಳು ಮತ್ತು ಗೊಂದಲಗಳಿಂದ ಮತ್ತು ಶಿಕ್ಷಕರ ಕೊರತೆಯಂತಹ ನಾನಾ ಕೊರತೆಗಳಿಂದ ಗುಣಾತ್ಮಕ ಶಿಕ್ಷಣ ಇಲ್ಲದಂತಾಗಿರುವುದರಿಂದ ಆ ಕಡೆ ಇಂಗ್ಲೀಷೂ ಬಾರದ, ಈ ಕಡೆ ಕನ್ನಡವೂ ಬಾರದ ಅತಂತ್ರ ಸ್ಥಿತಿಯಲ್ಲಿರುವ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿದ್ದಾರೆ. ತಮ್ಮ ತಾಯಿ ನುಡಿಯಲ್ಲಿ ಕಲಿತಾಗ ಮಕ್ಕಳಲ್ಲಿ ಹೊರಹೊಮ್ಮಬಹುದಾದ ಸೃಜನಶೀಲತೆಗೆ ಗಂಭೀರ ಹಾನಿಯಾಗಿದೆ. ಆಗುತ್ತಿದೆ.
ಮನೆಯಲ್ಲಿ, ತಮ್ಮ ಪರಿಸರದಲ್ಲಿ ಇಂಗ್ಲೀಷ್ ಕಲಿಕೆಗೆ ಸೂಕ್ತವಾದ ವಾತಾವರಣ, ಅನುಕೂಲ ಇಲ್ಲದ ಎಷ್ಟೋ ಬಡ ಕುಟುಂಬಗಳ ಮಕ್ಕಳು, ಗ್ರಾಮಾಂತರದ ಮಕ್ಕಳು, ತಳ ಸಮುದಾಯಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಶಾಲಾ ಶಿಕ್ಷಣವನ್ನು ಪಡೆದು ಕಾಲೇಜು ಶಿಕ್ಷಣಕ್ಕೆ ಬಂದರೂ ಬಹಳಷ್ಟು ಮಕ್ಕಳು ಕನ್ನಡದಲ್ಲಿಯಾಗಲಿ, ಇಂಗ್ಲೀಷನಲ್ಲೇ ಆಗಲಿ ಸರಳವಾದ ನಾಲ್ಕು ವಾಕ್ಯಗಳನ್ನು ತಪ್ಪಿಲ್ಲದಂತೆ ಬರೆಯಲಾರದ ಅತಂತ್ರ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ.
ಇದರ ಅರ್ಥ ಬಡವರು, ಗ್ರಾಮಾಂತರದ ಮಕ್ಕಳು, ತಳ ಸಮುದಾಯದ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಅವಕಾಶ ಇರಬಾರದು ಎಂದಲ್ಲ. ಶ್ರೀಮಂತರು, ನಗರದ ಪ್ರದೇಶ ಮಕ್ಕಳು, ಮೇಲ್ಜಾತಿಯ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಅವಕಾಶ ಸಿಗುತ್ತಿದೆ ಎಂದಾದರೆ ಅದು ಬಡವರು, ಗ್ರಾಮಾಂತರದ ಮಕ್ಕಳು, ತಳ ಸಮುದಾಯದ ಮಕ್ಕಳಿಗೂ ಸಿಗಬೇಕು.

ಆಳುವ ಸರಕಾರಗಳು ಶಿಕ್ಷಣಕ್ಕೆ ಅಗತ್ಯ ಹಣಕಾಸನ್ನು ಕೊಡುವುದು, ರಾಜ್ಯ ಕೇಂದ್ರ ಸರಕಾರಗಳು ಒಟ್ಟು ಸೇರಿ ಶಿಕ್ಷಣಕ್ಕೆ ಒಟ್ಟು ರಾಷ್ಟ್ರೀ ಯ ಉತ್ಪನ್ನ (ಜಿ.ಡಿ.ಪಿ.)ಯ ಶೇ.೬ ರಷ್ಟು ನೀಡುವುದು. ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಗ್ರಂಥಾಲಯ-ಪ್ರಯೋಗಶಾಲೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದು, ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುವುದು, ಜೊತೆಗೆ ಒಂದು ಭಾಷೆಯಾಗಿ ಇಂಗ್ಲೀಷನ್ನು ಅತ್ಯುತ್ತಮವಾಗಿ ಕಲಿಸುವ ವ್ಯವಸ್ಥೆ ಮಾಡುವುದು ಹೀಗೆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಶಿಕ್ಷಣ ಮಾಧ್ಯಮದ ಪ್ರಶ್ನೆ ನೇರವಾಗಿ ಕನ್ನಡ ಅಳಿವು ಉಳಿವಿಗೆ ಸಂಬಂಧಿಸಿದೆ. ಹಾಗೂ ಕನ್ನಡದಂತಹ ಒಂದು ಜನ ಭಾಷೆ ಉಳಿಯುವಂತಹ ನೀತಿ ನಾವೆಲ್ಲಾ ದನಿ ಎತ್ತಬೇಕಾಗಿದೆ.

ಶಿಕ್ಷಣ ಮಾಧ್ಯಮದ ವಿಷಯದಲ್ಲಿನ ಗೋಜಲುಗಳು ಮತ್ತು ಗೊಂದಲಗಳಿಂದ ಮತ್ತು ಶಿಕ್ಷಕರ ಕೊರತೆಯಂತಹ ನಾನಾ ಕೊರತೆಗಳಿಂದ ಗುಣಾತ್ಮಕ ಶಿಕ್ಷಣ ಇಲ್ಲದಂತಾಗಿರುವುದರಿಂದ ಆ ಕಡೆ ಇಂಗ್ಲೀಷೂ ಬಾರದ, ಈ ಕಡೆ ಕನ್ನಡವೂ ಬಾರದ ಅತಂತ್ರ ಸ್ಥಿತಿಯಲ್ಲಿರುವ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿದ್ದಾರೆ.

‘ಎಲ್ಲ ಹಂತಗಳಲ್ಲೂ ಇಂಗ್ಲೀಷ್ ಮಾಧ್ಯಮ ಮಾತ್ರ’ ಆಂಧ್ರ ಪ್ರದೇಶದ ಅನಾಹುತಕಾರಿ ನೀತಿ

ಕರ್ನಾಟಕದ ನೆರೆ ರಾಜ್ಯವಾದ ಆಂಧ್ರಪದೇಶ ಸರಕಾರವು ೨೦೧೯ ರಲ್ಲಿ ಭಾಷಾ ಮಾಧ್ಯಮದ ವಿಷಯದಲ್ಲಿ ಒಂದು ಅನಾಹುತಕಾರಿ ನೀತಿಯನ್ನು ಘೋಷಿಸಿತು. 2020-21ನೇ ಶೈಕ್ಷಣಿಕ ವರ್ಷದಿಂದ ಆಂಧ್ರ ಪ್ರದೇಶದ ಸರಕಾರಿ, ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಅವಕಾಶ ಮಾತ್ರ ಇರುತ್ತದೆ. ತೆಲುಗು ಮತ್ತಿತರ ಯಾವುದೇ ಭಾಷೆಯ ಮಾಧ್ಯಮದ ಅವಕಾಶ ಇರುವುದಿಲ್ಲ ಎಂಬುದೇ ಆ ನೀತಿ. ಈ ನೀತಿ ಅವೈಜ್ಞಾನಿಕ ಮತ್ತು ಇಂತಹ ದೊಡ್ಡ ಬದಲಾವಣೆಗೆ ಪೂರಕವಾದ ತಯಾರಿ, ಶಿಕ್ಷಕರ ತರಬೇತಿ ಇತ್ಯಾದಿ ಯಾವುದೂ ಆಗಿಲ್ಲ, ಹೀಗಾಗಿ ಈ ನೀತಿಯನ್ನು ಕೈಬಿಡಬೇಕೆಂದು ಆಂಧ್ರ ಪ್ರದೇಶದ ಶಿಕ್ಷಕರ ಸಂಘಟನೆಗಳು, ವಿರೋಧ ಪಕ್ಷಗಳು ಈ ನೀತಿಯನ್ನು ವಿರೋಧಿಸಿವೆ. ಕೆಲವರು ಈ ನೀತಿಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಯಾವುದೇ ಮಧ್ಯಂತರ ಅದೇಶಗಳನ್ನು ನೀಡಲು ನಿರಾಕರಿಸಿರುವುದರಿಂದ ಸದ್ಯಕ್ಕೆ ಅಧಿಕೃತವಾಗಿ ಸರಕಾರ ನೀತಿಯೇ ಜಾರಿಯಲ್ಲಿದೆ.

ಸೂಕ್ತ ಸಿದ್ದತೆ, ತರಬೇತಿ ಹೊಂದಿದ ಸಮರ್ಥ ಶಿಕ್ಷಕರಿಲ್ಲದೇ ಈ ನೀತಿಯು ಹೇಗೆ ಜಾರಿಯಾಗುತ್ತಿದೆ ಎಂದು ಯಾರಾದರೂ ಊಹಿಸಬಹುದು. ಆದರೆ ಇದೊಂದು ಅನಾಹುತಕಾರಿ ನೀತಿ ಎಂಬುದು ಮಾತ್ರ ನಿಜ. ಸರಕಾರವು, ತೆಲುಗು-ಇಂಗ್ಲೀಷ್ ಎರಡೂ ಭಾಷೆಯಲ್ಲಿರುವ ದ್ವಿಭಾಷಾ ಪಠ್ಯ ಪುಸ್ತಕವನ್ನು ಶಾಲೆಗಳಿಗೆ ಒದಗಿಸಲಾಗುವುದು, ಪಠ್ಯ ಪುಸ್ತಕದೊಳಗೆ ಪಠ್ಯವನ್ನು ಧ್ವನಿರೂಪದಲ್ಲಿ ಕೇಳಲು ಅನುಕೂಲವಾಗುವಂತೆ ಕ್ಯೂಆರ್. ಕೋಡ್ ಅನ್ನು ನೀಡಲಾಗುವುದು ಎಂದು ಹೇಳಿ ತನ್ನ ದುಡುಕಿನ ನಿರ್ಧಾರವನ್ನು ವಾಪಾಸ್ ಪಡೆಯಲು ನಿರಾಕರಿಸಿದೆ ಮತ್ತು ಕಾಲೇಜು ಶಿಕ್ಷಣದಲ್ಲಿಯೂ ಇದೇ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಮುಂದೇನಾಗುವುದೋ ಕಾದು ನೋಡಬೇಕಿದೆ. ಆಂಧ್ರಪ್ರದೇಶದ ಈ ನೀತಿಯು ಕರ್ನಾಟಕಕ್ಕೆ ಮತ್ತು ದೇಶದ ಯಾವುದೇ ರಾಜ್ಯಗಳಿಗೆ ಆದರ್ಶವಾಗದಂತೆ ಶಿಕ್ಷಣ ಪ್ರೇಮಿಗಳೆಲ್ಲರೂ ಎಚ್ಚರವಹಿಸಬೇಕಿದೆ.

ವಿಡಿಯೋ ನೋಡಿ: ಬಾರಿಸು ಕನ್ನಡ ಡಿಂಡಿಮವ – ಕುವೆಂಪು – ಹಾಡಿದವರು : ಶ್ವೇತಾ ಮೂರ್ತಿ Janashakthi Media

Donate Janashakthi Media

Leave a Reply

Your email address will not be published. Required fields are marked *