12 ವರ್ಷಕ್ಕೊಮ್ಮೆ ಅರಳುವ ನೀಲಕುರುಂಜಿ – ನೋಡಬನ್ನಿ ಸೌಂದರ್ಯದ ಕಣಿ

ಕೊಡಗು :  ಕೊಡಗಿನ ಪ್ರವಾಸಿ ತಾಣ ಮಾಂದಲಪಟ್ಟಿ ಸಂಪೂರ್ಣ ನೀಲಿಮಯವಾಗಿದೆ. ಬೆಟ್ಟದ ತುಂಬಾ ಅಪರೂಪದ ಕುರುಂಜಿ ಹೂವು ಅರಳಿರುವುದರಿಂದ ಇಲ್ಲಿಯ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದೆ.

ನೀಲಗಿರಿ ಬೆಟ್ಟಗಳಿಗೆ ಆ ಹೆಸರು ಬರಲು ಕಾರಣವಾದ ನೀಲಕುರುಂಜಿ ಹೂವು, ಈ ಬಾರಿಯೂ ಕೊಡಗಿನಲ್ಲಿ ಅರಳಿ ನಗುತ್ತಿದೆ. ಪ್ರಕೃತಿ ಸೌಂದರ್ಯದಿಂದ ತನ್ನತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಮಾಂದಲಪಟ್ಟಿ, ಕಳೆದ ಒಂದು ವಾರದಿಂದ ಪರಿಸರ ಪ್ರಿಯರನ್ನು ಆಕರ್ಷಿಸುತ್ತಿದೆ.

ಹೂ ಚೆಲುವೆಲ್ಲಾ ನನ್ನದೆಂದಿತು ಎನ್ನೋ ಹಾಡು ಕೊಡಗಿನ ಮಾಂದಲಪಟ್ಟಿಯಲ್ಲಿ ಅಕ್ಷರಶಃ ಸತ್ಯವಾಗಿಸಿದೆ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದ ಎದುರು ಉಳಿದೆಲ್ಲವು ನಶ್ವರವೇ ಸರಿ. ನೀಲಿ ಕುರುಂಜಿ‍ ಎಂಬ ಹೆಸರಿನ ಅಪರೂಪದ ಹೂವೊಂದು ಅರಳಿ ನಿಂತು ಇಡೀ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. ಅದ್ರಲ್ಲೂ ಕಣ್ಣಾಯಿಸಿದಷ್ಟು ದೂರದವರೆಗೂ ಬೆಟ್ಟವೇ ಹೂಬಿಟ್ಟಂತೆ ಕಾಣುವ ವಿಸ್ಮಯದ ದೃಶ್ಯಕಾವ್ಯವದು. ಮಾಂದಲಪಟ್ಟಿಯ ಮೋಡಗಳ ನೋಡಲು ಬರುವ ಪ್ರವಾಸಿಗರನ್ನು ಈ ನೀಲಿ ಕುರುಂಜಿ ಹೂವುಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಹೀಗಾಗಿ ಮಾಂದಲಪಟ್ಟಿಗೆ ಬಂದೊಡನೆ ಪ್ರವಾಸಿಗರು ಮೂಕವಿಸ್ಮಿತರಾಗಿ ಹೂವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೂವುಗಳ ಮಧ್ಯೆ ನಿಂತು ಫೋಟೋಕೆ ಫೋಸ್ ಕೊಟ್ಟು ತಮ್ಮ ಕಣ್ಮನಗಳ ತಣಿಸಿಕೊಳ್ಳುತ್ತಿದ್ದಾರೆ. ಹೂವುಗಳನ್ನೇ ತಬ್ಬಿ ಮುದ್ದಾಡಿ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಕಾವೇರಿ ನದಿ ನೀರಿನ ಸ್ವಚ್ಛತೆಯೇ ಕಾಯಕವಾಗಿಸಿಕೊಂಡ ಫ್ಲಾಂಟರ್‌ ಹಸೈನರ್

ಸಾವಿರಾರು ಎಕರೆಯಷ್ಟು ವಿಸ್ತಾರವಾದ ಈ ಬೆಟ್ಟದಲ್ಲಿ ಅರಳಿರುವ ಹೂಗಳು ಇಡೀ ಪರಿಸರವನ್ನು ನೀಲವರ್ಣಕ್ಕೆ ತಿರುಗಿಸಿವೆ. ಇದರಿಂದ ಮುಗಿಲಪೇಟೆಯಲ್ಲಿ ಹಬ್ಬದ ವಾತಾವರಣವೇ ಮನೆಮಾಡಿದೆ. ಹಲವು ವರ್ಷಗಳ ಬಳಿಕ ಅರಳಿರುವ ಹೂವುಗಳು ದೇಶ ವಿದೇಶಗಳಿಂದ ಬರುತ್ತಿರುವ ಪ್ರವಾಸಿಗರನ್ನು ಕಣ್ಮನ ಕೋರೈಸಿ ತಮ್ಮತ್ತ ಸೆಳೆಯುತ್ತಿವೆ. ಈ ಹೂವುಗಳು ಅರಳಿದಾಗ ಗಿಡದ ಕಾಂಡದಲ್ಲಿ ಅಪಾರ ಪ್ರಮಾಣದ ಔಷಧಿಯ ಗುಣ ಅಡಗಿರುತ್ತದೆಯಂತೆ.  ಹೀಗಾಗಿ ನಾನಾ ಕಾಯಿಲೆಗೂ ಇದನ್ನು ಔಷಧಿಯಾಗಿ ಬಳಸುತ್ತಾರೆ.

12 ವರ್ಷಗಳ ನಂತರ ಇಲ್ಲಿ ನೀಲಕುರುಂಜಿ ಹೂವು ಅರಳಿದೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂವುಗಳು ಅರಳುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ 5, 7, 12, 14 ಹಾಗೂ 16 ವರ್ಷಕ್ಕೆ ಒಮ್ಮೆ ಅರಳುವ ಪ್ರಭೇದದ ಹೂವುಗಳೂ ಇದೆ.

ಸ್ಟ್ರೊಬಿಲಂಥೆಸ್ ಕುಂತಿಯಾನ ಎನ್ನುವ ಸಸ್ಯ ಶಾಸ್ತ್ರೀಯ ಹೆಸರು ಇರುವ ಈ ಹೂವನ್ನು ಗುರ್ಗಿ ಹೂವು ಎಂದು ಕೂಡ ಕರೆಯಲಾಗುತ್ತದೆ. ಸುಮಾರು 2 ತಿಂಗಳು ಈ ಹೂವು ಅರಳಿರುತ್ತದೆ. ಮತ್ತೆ ಇದನ್ನು ನೋಡ ಬೇಕಾದರೆ ಹನ್ನೆರೆಡು ವರ್ಷ ಕಾಯಬೇಕು.

250 ಜಾತಿಯ ಕುರುಂಜಿ ಹೂವುಗಳಿದ್ದು, ಭಾರತದಲ್ಲಿ 46 ಜಾತಿಯ ಹೂವುಗಳು ಕಂಡುಬರುತ್ತದೆ. ಹೂವಿನ ಗಿಡ ಮೂವತ್ತರಿಂದ ಅರವತ್ತು ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ. 2006 ರಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ, 2018ರಲ್ಲಿ ಕುಮಾರಪರ್ವತದಲ್ಲೂ ಕುರುಂಜಿ ಹೂವು ಅರಳಿತ್ತು.

ಕರ್ನಾಟಕದಲ್ಲಿ ಹೂ ಪಶ್ಚಿಮಘಟ್ಟಗಳಲ್ಲಿ ಕಾಣಸಿಗುತ್ತದೆ. ವಿಶ್ವದಾದ್ಯಂತ ಸುಮಾರು 240 ಹೆಚ್ಚು ಬಗೆಗಳಲ್ಲಿ ಈ ಹೂ ಕಂಡು ಬರುತ್ತದೆ. ಭಾರತದಲ್ಲಿ ತಮಿಳುನಾಡು, ಕೇರಳಾ, ಊಟಿ, ಮನ್ನಾರ್‌ನಲ್ಲಿ ಈ ಹೂ ಕಂಡು ಬರುತ್ತದೆ. ಸಂಡೂರ್‌ನಲ್ಲಿ ಹಸಿರು, ಬಿಳಿ, ಕೆಂಪು, ನೀಲಿ ಬಣ್ಣದ ಹೂಗಳು ಕಂಡು ಬಂದಿದೆ. ಅದರಲ್ಲೂ ನೀಲಿ ಬಣ್ಣದ ಹೂಗಳು ಅತಿ ಹೆಚ್ಚಾಗಿ ಕಂಡು ಬಂದಿವೆ.

ಮಳೆಗಾಲದಲ್ಲಿ ನೆಲತಂಪಾಗಿ ಗಿಡಗಳು ಬಲಿತು ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುತ್ತವೆ. ಈ ಹೂ ನೋಡಲು ಬಲು ಸುಂದರ. ಮಣ್ಣಿನ ಸವಕಳಿ ತಡೆಯಲು ಗಿಡಗಳು ಸಹಕಾರಿ ಎಂದು ತಜ್ಞರು ಹೇಳುತ್ತಿದ್ದಾರೆ. ಒಟ್ಟಾರೆ ಈ ಸೊಬಗನ್ನು ನೋಡಲು ಆ ಪ್ರದೇಶಕ್ಕೆ ಭೇಟಿಕೊಟ್ಟು ಸಂಭ್ರಮಿಸಿದಾಗಲೇ ಅದರ ರುಚಿ ಗೊತ್ತಾಗುತ್ತದೆ.

 

ವರದಿ : ಆರ್. ವಿ.ಹಾಸನ & ಗುರುರಾಜ್

Donate Janashakthi Media

Leave a Reply

Your email address will not be published. Required fields are marked *