ಬಿಜೆಪಿಯೇತರ ದಕ್ಷಿಣದ ಮೂರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರು ತಮ್ಮ ಅಧಿಕಾರವನ್ನು ಮೀರಿ ಸರ್ಕಾರದೊಂದಿಗೆ ಹಸ್ತಕ್ಷೇಪಕ್ಕೆ ಇಳಿದಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರದ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಏರ್ಪಟ್ಟಿದೆ. ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ಎಡರಂಗ, ಡಿಎಂಕೆ, ಟಿಆರ್‌ಎಸ್ ಅಧಿಕಾರವನ್ನು ನಡೆಸುತ್ತಿದೆ.
ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ನಡುವಿನ ಕಿತ್ತಾಟ ತಾರಕಕ್ಕೇರಿರುವ ಸಂದರ್ಭದಲ್ಲಿಯೇ, ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ರಾಜ್ಯಪಾಲರ ವಿರುದ್ಧವು ಅಲ್ಲಿನ ಆಡಳಿತರೂಢ ರಾಜ್ಯ ಸರ್ಕಾರಗಳು ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯಪಾಲರು ಮತ್ತು ಆಡಳಿತ ಸರ್ಕಾರಗಳ ಕಿತ್ತಾಟ ರಾಜ್ಯಗಳ ಆಂತರಿಕ ವಿಚಾರವಾಗಿದ್ದರೂ, ಪಕ್ಷಭೇದ ಮತ್ತು ರಾಜ್ಯಗಳ ಗಡಿಯನ್ನು ಮೀರಿ ಬೆಂಬಲ ಕ್ರೋಡೀಕರಿಸುವ ಪ್ರಯತ್ನ ಆರಂಭವಾಗಿದೆ.
ತೆಲಂಗಾಣ, ಕೇರಳ ಮತ್ತು ತಮಿಳುನಾಡುಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ಮಧ್ಯೆ ಅನೇಕ ವಿಚಾರಗಳ ಬಗ್ಗೆ ಪ್ರತಿರೋಧ ಕಾರ್ಯನಿರ್ವಹಣೆಯಿಂದಾಗಿ ರಾಜ್ಯಪಾಲರ ಕ್ರಮಗಳ ವಿರುದ್ಧ ಹಲವು ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ರಾಜ್ಯಪಾಲರುಗಳ ವಿರುದ್ಧ ನಡೆಯುತ್ತಿವೆ.
ದಕ್ಷಿಣದ ಮೂರು ರಾಜ್ಯಗಳ ರಾಜ್ಯಪಾಲರು “ಕೇಂದ್ರ ಸರ್ಕಾರ ಆಡಿಸುವ ಗೊಂಬೆಗಳಂತೆ” ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರಗಳು ಆರೋಪಿಸಿವೆ. ಈ ಮೂರು ರಾಜ್ಯಗಳಲ್ಲಿನ ಆಡಳಿತ ಸರ್ಕಾರಗಳು ಅಂಗೀಕರಿಸುವ ಮಹತ್ವದ ಮಸೂದೆಗಳಿಗೆ ಅಂಕಿತ ಹಾಕದೆ ರಾಜ್ಯಪಾಲರು ಸತಾಯಿಸುತ್ತಿದ್ದಾರೆ. ಹೀಗಾಗಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿರುವ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆಡಳಿತಾರೂಢ ಪಕ್ಷಗಳು ರಾಜ್ಯಪಾಲರ ಹುದ್ದೆಗೆ ಇರುವ ಸಾಂವಿಧಾನಿಕ ಸವಲತ್ತು, ಅಧಿಕಾರಗಳನ್ನೇ ಪ್ರಶ್ನಿಸುತ್ತಿವೆ.
ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಪಿಣರಾಯಿ ವಿಜಯನ್ ಸರ್ಕಾರದ ನಡುವಿನ ಸಂಘರ್ಷ ತೀವ್ರಮಟ್ಟಕ್ಕೆ ತಲುಪಿದೆ. ಎರಡು ದಿನದ ಹಿಂದೆ ಎರ್ನಾಕುಲಂ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ವೇಳೆ ಎರಡು ಮಲಯಾಳಂ ಸುದ್ದಿವಾಹಿನಿಗಳನ್ನು ನಿರ್ಬಂಧಿಸಿರುವ ಖಾನ್ ನಡೆ, ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಖಾನ್ ನಡೆ ಪ್ರಜಾಪ್ರಭುತ್ವ ವಿರೋಧಿ ವರ್ತನೆ ಎಂದು ಪತ್ರಕರ್ತರ ಸಂಘಟನೆ ಕಿಡಿಕಾರಿದೆ. ಈ ಹಿಂದೆಯೂ ಖಾನ್ ಅವರು ಕೆಲವು ಮಾಧ್ಯಮಗಳನ್ನು ನಿಷೇಧಿಸಿದ್ದರು.
ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ವಿರುದ್ಧ ಆಡಳಿತರೂಢ ಡಿಎಂಕೆ ಪಕ್ಷದ ನಡುವೆ ಹಸ್ತಕ್ಷೇಪ ಏರ್ಪಟ್ಟಿದೆ. ಆರ್‌ಎನ್ ರವಿ ಅವರು ತಮ್ಮ ಮಿತಿಗಳನ್ನು ಮೀರಿದ್ದಾರೆ ಮತ್ತು ಗೊಂದಲ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಡಿಎಂಕೆ ಪಕ್ಷವು ಎಲ್ಲ ಸಮಾನ ಮನಸ್ಕ ಸಂಸದರಿಗೆ ಪತ್ರ ಬರೆದು ‘ಸಂವಿಧಾನದ ವಿರುದ್ಧ’ ಕೆಲಸ ಮಾಡುತ್ತಿರುವ ಆರ್‌ಎನ್ ರವಿ ಅವರನ್ನು ಕಿತ್ತುಹಾಕುವ ಪ್ರಸ್ತಾವಕ್ಕೆ ಬೆಂಬಲ ಕೋರಿತ್ತು. ಅವರ ಕ್ರಮಗಳು ಮತ್ತು ಹೇಳಿಕೆಗಳು, ಅವರು ಈ ಹುದ್ದೆಗೆ ‘ಅನರ್ಹ’ ಎನ್ನುವುದನ್ನು ತೋರಿಸಿವೆ. ಎಲ್ಲ ಸಮಾನಮನಸ್ಕ ಸಂಸದರು ಈ ಮನವಿಗೆ ಸಹಿ ಹಾಕಬೇಕು ಎಂದು ಹೇಳಿತ್ತು.
ತಮಿಳುನಾಡಿನಲ್ಲಿ ಸುಮಾರು 20 ಮಸೂದೆಗಳು ರಾಜ್ಯಪಾಲರ ಅನುಮೋದನೆಗೆ ಬಾಕಿ ಇವೆ. ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ಅಂಗೀಕಾರವಾದರೂ ರಾಷ್ಟ್ರಪತಿಗಳ ಅನುಮೋದನೆಗೆ ನೀಟ್ ವಿನಾಯಿತಿ ಮಸೂದೆಯನ್ನು ರವಾನಿಸದ ಆರ್‌ಎನ್ ರವಿ ವಿರುದ್ಧ ಏಪ್ರಿಲ್ ತಿಂಗಳಿನಲ್ಲಿ ಡಿಎಂಕೆ ಪ್ರತಿಭಟನೆ ನಡೆಸಿತ್ತು.
ತೆಲಂಗಾಣ ರಾಜ್ಯಪಾಲೆ ತಮಿಳ್ ಸಾಯಿ ಸೌಂದರ್‌ರಾಜನ್ ತಮಿಳುನಾಡು ರಾಜಕಾರಣದಲ್ಲಿ ಪದೇ ಪದೇ ಮಧ್ಯಪ್ರವೇಶಿಸುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ತಮಿಳುನಾಡಿನ ಪ್ರಮುಖ ರಾಜಕೀಯ ಕುಟುಂಬ ಡಿಎಂಕೆ ತೆಲುಗು ಬೇರು ಹೊಂದಿದೆ ಎಂದು ತಮಿಳ್‌ಸಾಯಿ ನೀಡಿದ್ದ ಹೇಳಿಕೆಗೆ ಡಿಎಂಕೆ ಮುಖವಾಣಿ ‘ಮುರಸೋಳಿ’ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತ್ತು.
“ತೆಲಂಗಾಣ ರಾಜ್ಯಪಾಲರು ತಮಿಳುನಾಡಿನಲ್ಲಿ ರಾಜಕಾರಣ ಮಾಡಬಾರದು. ಇದು ಅವರ ಕೆಲಸವಲ್ಲ. ಹಾಗಿದ್ದರೆ ಅವರು ರಾಜೀನಾಮೆ ನೀಡಲಿ ಮತ್ತು ತಮಿಳುನಾಡಿನಲ್ಲಿ ರಾಜಕಾರಣ ಮಾಡಲಿ” ಅವರು ರಾಜಕೀಯ ಮತ್ತು ಕಾನೂನು ಪರಿಮಿತಿಗಳಲ್ಲಿ ಕೆಲಸ ಮಾಡಬೇಕು ಹಾಗೂ ಸರ್ಕಾರಗಳನ್ನು ಗೌರವಿಸಬೇಕು ಎಂದು ಮುರುಸೋಳಿ ಹೇಳಿದೆ. ರಾಜ್ಯ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ತಮ್ಮ ಮೂಗು ತೂರಿಸುತ್ತಿದ್ದಾರೆ ಎಂದು ತಮಿಳ್‌ಸಾಯಿ ವಿರುದ್ಧ ಡಿಎಂಕೆ ಕಿಡಿಕಾರಿದೆ.
ತೆಲಂಗಾಣದಲ್ಲಿ ರಾಜ್ಯಪಾಲೆ ತಮಿಳ್‌ಸಾಯಿ ಸೌಂದರರಾಜನ್ ರಾಜ್ಯ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಗಳಿಗೆ ಅನುಗುಣವಾಗಿ ಎಲ್ಲ 15 ರಾಜ್ಯಗಳಿಗೆ ಸಾಮಾನ್ಯ ನೇಮಕಾತಿ ಮಂಡಳಿ ರೂಪಿಸುವ ಸಂಬಂಧ ಚರ್ಚಿಸಲು ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದಿರಾ ರೆಡ್ಡಿ ಅವರನ್ನು ತಮಿಳ್‌ಸಾಯಿ ಕರೆಸಿಕೊಂಡಿದ್ದರು. ಮೂರು ವರ್ಷಗಳಿಂದ ಅನೇಕ ಬಾರಿ ಜ್ಞಾಪನೆ ಕಳುಹಿಸಿದ್ದರೂ ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.
ತಮಿಳ್‌ಸಾಯಿ ಅವರ ಬಳಿ ತೆಲಂಗಾಣ ಸರ್ಕಾರದ ಎಂಟು ಮಸೂದೆಗಳು ಅನುಮೋದನೆಗೆ ಬಾಕಿ ಇವೆ. ಅವುಗಳಲ್ಲಿ ಒಂದು- ವೈದ್ಯಕೀಯ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇರ ನೇಮಕಾತಿ ಮಸೂದೆಗೆ ಸಹಿ ಹಾಕದ ರಾಜ್ಯಪಾಲರ ವಿರುದ್ಧ ರಾಜ್ಯದ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.