ಲಂಚದ ಬೇಡಿಕೆ ಇಟ್ಟ ಆರೋಪ: ಆರೋಗ್ಯ ಸಚಿವರನ್ನು ವಜಾ ಮಾಡಿದ ಪಂಜಾಬ್ ಮುಖ್ಯಮಂತ್ರಿ

ಚಂಡೀಗಢ: ಪಂಜಾಬ್‌ ರಾಜ್ಯದ ಎಎಪಿ ಸರ್ಕಾರ ಸಂಪುಟದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಲಂಚ ಪಡೆದಿದ್ದಾರೆ ಎಂದು ದೃಢವಾದ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿ ಭಗವಂತ್ ಮಾನ್ ವಜಾಗೊಳಿಸಿದ್ದಾರೆ.

ಭ್ರಷ್ಟಾಚಾರದ ಆರೋಪದ ಮೇಲೆ ಇಂದು ವಿಜಯ್‌ ಸಿಂಗ್ಲಾ ಸಂಪುಟದಿಂದ ವಜಾಗೊಂಡಿದ್ದು, ಅವರು ಟೆಂಡರ್‌ಗಳಲ್ಲಿ 1 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ ಕೂಡಲೇ ಪಂಜಾಬ್ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ವಿಜಯ್ ಸಿಂಗ್ಲಾ ಅವರನ್ನು ಬಂಧಿಸಿದೆ.

10 ದಿನಗಳ ಹಿಂದಷ್ಟೇ ಸಚಿವ‌ ಸಿಂಗ್ಲಾ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಂಪುಟ ಸಹೋದ್ಯೋಗಿಯ ವಿರುದ್ಧ ತಕ್ಷಣದಲ್ಲೇ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2015ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ಸಚಿವರಲ್ಲಿ ಒಬ್ಬರನ್ನು ವಜಾಗೊಳಿಸಿದ್ದರು.

ವಿಜಯ್ ಸಿಂಗ್ಲಾ ಭ್ರಷ್ಟಾಚಾರದ ಕುರಿತು ಸರ್ಕಾರಿ ಅಧಿಕಾರಿಯೊಬ್ಬರು 10 ದಿನಗಳ ಹಿಂದೆ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಖುದ್ದಾಗಿ ಅಧಿಕಾರಿಗೆ ಭರವಸೆ ನೀಡಿದ್ದು, ನಾನು ಅವರೊಂದಿಗೆ ನಿಲ್ಲುತ್ತೇನೆ ಮತ್ತು ಯಾವುದೇ ಸಚಿವರಿಗೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಸೂಕ್ತ ತನಿಖೆಯೊಂದಿಗೆ ಅಧಿಕಾರಿಗಳ ಸಹಾಯದಿಂದ ಕಾರ್ಯಾಚರಣೆ ನಡೆದಿದೆ. ಇದರಲ್ಲಿ ಸಚಿವರು ಮತ್ತು ಅವರ ಆಪ್ತರು ಒಂದು ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು ಎಂದಿರುವ ಮುಖ್ಯಮಂತ್ರಿ ಭಗವಂತ್‌ ಮಾನ್‌ ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಮ್ಮ ಸರ್ಕಾರದಲ್ಲಿ 1 ಪರ್ಸೆಂಟ್ ಭ್ರಷ್ಟಾಚಾರವನ್ನು ಸಹ ನಾನು ಸಹಿಸುವುದಿಲ್ಲ. ಜನರು ಬಹಳಷ್ಟು ಭರವಸೆಯೊಂದಿಗೆ ಎಎಪಿ ಸರ್ಕಾರಕ್ಕೆ ಮತ ಹಾಕಿದ್ದಾರೆ. ನಾವು ಅದಕ್ಕೆ ತಕ್ಕಂತೆ ಬದುಕಬೇಕು. ಸಿಂಗ್ಲಾ ಅವರು ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಪಿ ಪಕ್ಷ ಹೇಳಿದೆ. ವಿಜಯ್ ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಭಗವಂತ್‌ ಮಾನ್‌ ಅವರ ನಿರ್ಧಾರ‌ ಪ್ರಶಂಶಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ನಿಮ್ಮ ಬಗ್ಗೆ ಹೆಮ್ಮೆ ಇದೆ ಭಗವಂತ್‌ ಮಾನ್. ನಿಮ್ಮ ಕಾರ್ಯ ನನ್ನ ಕಣ್ಣಲ್ಲಿ ನೀರು ತರಿಸಿದೆ. ಇಡೀ ರಾಷ್ಟ್ರ ಇಂದು ಎಎಪಿ ಬಗ್ಗೆ ಹೆಮ್ಮೆ ಪಡುತ್ತಿದೆ‌ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *