ಸೌಮ್ಯ ಹೆಗ್ಗಡಹಳ್ಳಿ
ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿ 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಲು ಮಸೂದೆಯನ್ನು ಸರ್ಕಾರ ಕೆಲವು ದಿನಗಳ ಹಿಂದೆಯಷ್ಟೇ ಅಂಗೀಕಾರಗೊಳಿಸಿದೆ.
ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿದ ಈ ಆದೇಶದ ಪ್ರಕಾರ ಕೆಲಸದ ಅವಧಿ 3 ಗಂಟೆ ಹೆಚ್ಚಳ ಮಾಡಿದ್ದು, ಅವಧಿ ಮೀರಿ ಕೆಲಸ ಮಾಡುವ ಕೆಲಸಗಾರನಿಗೆ ದುಪ್ಪಟ್ಟು ದರ ಮಜೂರಿ ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಮಹಿಳೆಯರು ಕಾರ್ಖಾನೆಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿದೆ. ದಿನದ 24 ಗಂಟೆಯ ಅವಧಿಯಲ್ಲಿ ಯಾವ ಹೊತ್ತಿನಲ್ಲಾದರೂ ಕೆಲಸ ಮಾಡುವ ಅನುಮತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಕಾನೂನು ರೂಪಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ತಿದ್ದುಪಡಿ ಮಾಡಲಾದ ಮಸೂದೆಯ ಪ್ರಕಾರ ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ. ಹೊಸ ಕಾಯ್ದೆ ಜಾರಿಯ ನಂತರ ವಾರದಲ್ಲಿ ಗರಿಷ್ಠ 48 ಗಂಟೆಗಳಿಗೆ ಒಳ ಪಟ್ಟು, ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ ಕೆಲಸದ ಅವಧಿ (ದೈನಂದಿನ ಗರಿಷ್ಠ) 9 ರಿಂದ 12 ಗಂಟೆಗೆ ಹೆಚ್ಚಲಿದೆ. ಇದಕ್ಕೆ ಕೆಲಸಗಾರನ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿ 12 ಗಂಟೆಗಳಿಗೆ ವಿಸ್ತರಿಸಬಹುದು’ ಎನ್ನಲಾಗಿದೆ.
‘ಕಾರ್ಖಾನೆಗಳಲ್ಲಿ ಕೆಲಸಗಾರ ಯಾವುದೇ ಮಧ್ಯಂತರವಿಲ್ಲದೇ, ಕೆಲಸದ ಅವಧಿ 6 ಗಂಟೆಗಳವರೆಗೆ ವಿಸ್ತರಣೆ ನೀಡಲಾಗಿದೆ. ಈ ಆಯ್ಕೆಯು ಕೆಲಸಗಾರನಿಂದ ಒಪ್ಪಿಗೆ ಇರಬೇಕಾಗಿದೆ. 6 ಗಂಟೆ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಮಜೂರಿ ನೀಡಬೇಕಾಗುತ್ತದೆ.
ವಾರದ ಐದು ದಿನಗಳು ಕೆಲಸ ಮಾಡುವಾಗ, ಯಾವುದೇ ದಿನದಲ್ಲಿ 10 ಗಂಟೆಗಳಿಗಿಂತ ಹೆಚ್ಚು ಅಥವಾ ಯಾವುದೇ ವಾರದಲ್ಲಿ 48 ಗಂಟೆಗಳಿಂತ ಹೆಚ್ಚು ಕೆಲಸ ಮಾಡಿದರೆ, ಯಾವುದೇ ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡುವಾಗ ಅಥವಾ ಪಾವತಿ ರಜಾ ದಿನಗಳಲ್ಲಿ ಕೆಲಸ ಮಾಡುವಾಗ ಹನ್ನೊಂದುವರೆ ಗಂಟೆಗಳಿಗಿಂತ ಹೆಚ್ಚಾದಲ್ಲಿ ಕೆಲಸಗಾರ ದುಪ್ಪಟ್ಟು ಮಜೂರಿಗೆ ಅರ್ಹನಾಗುತ್ತಾನೆ ಎಂದು ಹೇಳಿದೆ.
ಸರ್ಕಾರದ ಈ ಕಾಯ್ದೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಕಾಯ್ದೆ ಬಂಡವಾಳಗಾರರನ್ನು ಮತ್ತಷ್ಟು ಬೆಳೆಸುತ್ತಾ ಅವರನ್ನು ಓಲೈಸುವತ್ತ ಸರ್ಕಾರ ಮುಂದಾಗುತ್ತಿದೆ ಎಂದು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದು, ಹಲವೆಡೆ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ.
ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿ ಗರಿಷ್ಠ 9 ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡಿರುವುದು ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ನಿರ್ಧರಿಸಿರುವುದನ್ನು ವಾಪಸ್ಸು ಪಡೆಯಬೇಕು, ಪ್ರಸ್ತುತ ಕಾಯ್ದೆಯಲ್ಲಿ ದಿನದ ಕೆಲಸದ ಆರಂಭದ ಅವಧಿಯಿಂದ ಗರಿಷ್ಠ 5 ಗಂಟೆಗೆ 30 ನಿಮಿಷ ವಿರಾಮವನ್ನು ನೀಡಬೇಕು. ಆದರೆ ಈ ತಿದ್ದುಪಡಿ ವಿದೇಯಕದಲ್ಲಿ ವಿರಾಮವಿಲ್ಲದೆ ದುಡಿಮೆ ಮಾಡುವ ಅವಧಿ ಗರಿಷ್ಠ 5 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಿರುವುದು ಹಾಗೂ ಕಾರ್ಮಿಕರ ದಿನದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಿಸಿರುವುದು ಕಾರ್ಮಿಕರ ಶೋಷಣೆಗೆ ರಾಜ್ಯ ಸರ್ಕಾರ ದಾರಿ ಮಾಡಿಕೊಡುತ್ತಿದೆ ಎಂದು ಹೇಳಲಾಗುತ್ತಿದೆ.
– : ಸರ್ಕಾರದ ಈ ಕಾಯ್ದೆಯ ಕುರಿತು ಹಲವರ ಅಭಿಪ್ರಾಯ ಹೀಗಿದೆ ನೋಡಿ : –
ಸರ್ಕಾರದ ಈ ಕಾಯ್ದೆ ಕಾರ್ಮಿಕ ವಿರೋಧಿ, ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ಓಲೈಸುವ ಕ್ರಮವಾಗಿದೆ
ಜನಸಾಮಾನ್ಯರ ಬದುಕಿನ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ರಾಜ್ಯದ ಬಿಜೆಪಿ ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳ ಮಾಡುವ ಮೂಲಕ ತಾನು ಬಂಡವಾಳಿಗರ, ಮಾಲಕರ ಪರವೆಂದು ಸಾಬೀತುಪಡಿಸಿದೆ.ಇತ್ತೀಚೆಗೆ ಮಂಡಿಸಿದ ಬಜೆಟ್ ಕೂಡಾ ದುಡಿಯುವ ವರ್ಗದ ವಿರುದ್ದವಾಗಿದ್ದು ಯಾವುದೇ ಆಶಾಭಾವನೆ ಇಲ್ಲವಾಗಿದೆ. ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ – 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿರುವುದು ಕಾರ್ಮಿಕ ವಿರೋಧಿಯಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ಓಲೈಸುವ ಕ್ರಮವಾಗಿದೆ.
ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ರವರು ಸ್ವತಃ ಕೈಗಾರಿಕೋದ್ಯಮಿಯಾಗಿದ್ದು, ಸಾವಿರಾರು ಕಾರ್ಮಿಕರನ್ನು ಯಾವುದೇ ಸವಲತ್ತುಗಳನ್ನು ನೀಡದೆ ಸತಾಯಿಸುತ್ತಿರುವ ಕಾರ್ಮಿಕ ವಿರೋಧಿ ವ್ಯಕ್ತಿಯಿಂದ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಹೇಗೆ ಸಾದ್ಯ ಎಂದು ಪ್ರಶ್ನಿಸಿರುವ ಅವರು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮಾಲಿಕ ವರ್ಗದಿಂದ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೋಚಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಹೂಡಿರುವ ಕುತಂತ್ರವಾಗಿದೆ. ಇಂತಹ ಕಾರ್ಮಿಕ ವಿರೋಧಿ ಸರಕಾರವನ್ನು ಮತ್ತೆ ಅಧಿಕಾರಕ್ಕೇರದಂತೆ ರಾಜ್ಯದ ಕಾರ್ಮಿಕ ವರ್ಗ ಒಂದಾಗಿ ತಡೆಯಬೇಕಾಗಿದೆ.
ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ, ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಕಿರುಕುಳ ಹೆಚ್ಚಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೆಲಸದ ಅಭದ್ರತೆಯಿಂದಾಗಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಕೊಳ್ಳಲು ಕಾರ್ಖಾನೆ ಮಾಲಿಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವಾಗಿದೆ.
ಜಗದೀಶ್ ಸೂರ್ಯ
ಮೈಸೂರು ಜಿಲ್ಲಾ ಕಾರ್ಯದರ್ಶಿ
ಕರ್ನಾಟಕ ಪ್ರಾಂತ ರೈತ ಸಂಘ
ಬಿಜೆಪಿ ಸರ್ಕಾರಕ್ಕೆ ಕಾರ್ಮಿಕರ ಕುರಿತು ಕಾಳಜಿಯೇ ಇಲ್ಲ
ಸರ್ಕಾರದ ಈ ಕ್ರಮ ಸರಿ ಇಲ್ಲ. ಈ ಕಾಯ್ದೆಯಿಂದಾಗಿ ಕಾರ್ಖಾನೆಗಳ ಮಾಲೀಕರುಗಳ ಕೈಗೆ ಅಸ್ತ್ರ ನೀಡಿದಂತಾಗಿದೆ. ನನ್ನ ಗಮನಕ್ಕೆ ಬಂದಂತೆ ಬಟ್ಟೆ ಕಾರ್ಖಾನೆಗಳಲ್ಲಿ ಬಹುಪಾಲು ಹೆಣ್ಣು ಮಕ್ಕಳೇ ದುಡಿಯುತ್ತಿದ್ದಾರೆ. ಇಲ್ಲಿ ಇವರ ದೈನಂದಿನ ಚಟುವಟಿಕೆಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ. ಕುಟುಂಬ, ಮಕ್ಕಳ ಲಾಲನೆ ಪಾಲನೆಗೆ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಬರುವ ಮಹಿಳೆಯರಿಗೆ ಇದು ಮತ್ತಷ್ಟು ಹೊರೆಯಾಗಿ ಹೋಗುತ್ತದೆ. ಜೊತೆಗೆ ಹೆಚ್ಚುವರಿ ಕೆಲಸ (ಓಟಿ) ಅವಧಿಯೂ ಕೂಡ ಕೆಲಸ ಮಾಡಲು ಇಲ್ಲಿ ಅವಕಾಶವಿಲ್ಲದಂತಾಗುತ್ತದೆ ಹೀಗಾದರೆ ಆರೋಗ್ಯದ ಸ್ಥಿತಿ ಏನಾಗಬೇಡ ? 8 ಗಂಟೆಗಳ ಅವಧಿಯ ಕೆಲಸಕ್ಕೆ ತಾತ್ವಿಕವಾದ ವೈಜ್ಞಾನಿಕ ಹಿನ್ನೆಲೆ ಇದೆ. ಇವೆಲ್ಲವನ್ನು ಮರೆತು ಕಾರ್ಪೋರೇಟ್ ಗಳ ಪರವಾಗಿ ಸರ್ಕಾರ ನಿಂತಿರುವುದು ಬೇಸರದ ಸಂಗತಿ. ಮುಖ್ಯವಾಗಿ ಇಲ್ಲಿ ಕಾರ್ಮಿಕರ ಕಾಳಜಿಯೇ ಈ ಸರ್ಕಾರಕ್ಕೆ ಇಲ್ಲವಾಗಿದೆ. ವಿರೋಧ ಪಕ್ಷಗಳು ಈ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ.
ಪ್ರತಿಭಾ
ಗಾರ್ಮೆಂಟ್ಸ್ ಯೂನಿಯನ್
ನಾನು ಬಟ್ಟೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ. ನಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ವಿಶ್ರಾಂತಿಯ ಅಗತ್ಯ ಬಹಳಷ್ಟು ಬೇಕಾಗುತ್ತದೆ. ಕುಟುಂಬ, ಮಕ್ಕಳು ಹೀಗೆ ಎಲ್ಲವನ್ನೂ ನಿಭಾಯಿಸಿಕೊಂಡು ಹೆಚ್ಚುವರಿ ಕೆಲಸ ಮಾಡುವುದು ಕಷ್ಟವೇ ಹೌದು.
ಸವಿತಾ
ಗಾರ್ಮೆಂಟ್ಸ್ ಉದ್ಯೋಗಿ
ಸರ್ಕಾರದ ಈ ನಡೆ ಮಹಿಳೆಯರಿಗೆ ಸುರಕ್ಷಿತವಲ್ಲ
ಕೆಲಸದ ಅವಧಿಯನ್ನು ಸರ್ಕಾರ 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಅದರಲ್ಲಿಯೂ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವವರು ಬಹುಪಾಲು ಮಹಿಳೆಯರೇ ಇರುತ್ತಾರೆ. ಸಾಮಾನ್ಯ ದಿನಗಳಲ್ಲಿಯೇ ಮಹಿಳಾ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಲು ಸಮರ್ಪಕವಾದ ವಾಹನಗಳ ವ್ಯವಸ್ಥೆಯನ್ನು ಸರ್ಕಾರ ನೀಡಲಾಗುತ್ತಿಲ್ಲ.ಅಂತದ್ದರಲ್ಲಿ ದುಡಿಯುವ ಕೈಗಳಿಗೆ ಹೆಚ್ಚಿನ ಪಾಲು ಕೆಲಸ ನೀಡಿತ್ತಾದರೂ ಪ್ರಸ್ತುತ ದಿನಮಾನಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಇದೆಲ್ಲ ಕಷ್ಟಸಾಧ್ಯ ಎಂದೇ ಹೇಳಬಹುದು.
ವರಲಕ್ಷೀ
ಟಿ.ನರಸೀಪುರ
ಗಾರ್ಮೆಂಟ್ಸ್ ನೌಕರರು