ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಅತಿಹೆಚ್ಚು ಸಕ್ರೀಯ ಸೋಂಕಿತರನ್ನು ಹೊಂದಿದ ನಗರಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಬೆಂಗಳೂರಿನಲ್ಲಿ ಸಧ್ಯ ಸಕ್ರೀಯ ಪ್ರಕರಣಗಳ ಸಂಖ್ಯೆ 1,49,624 ಹೊಂದಿರುವುದರಿಂದ, ದೇಶದ ಹೆಚ್ಚು ಪ್ರಕರಣಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಪುಣೆಯಲ್ಲಿ 1.1 ಲಕ್ಷ ಸಕ್ರೀಯ ಪ್ರಕರಣಗಳಿವೆ. ದೆಹಲಿ 1 ಲಕ್ಷದ ಸಮೀಪದಲ್ಲಿದ್ದು, ಮುಂಬೈ 81,174 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
ಕರ್ನಾಟಕದಲ್ಲಿ ಬೆಂಗಳೂರು ಒಂದರಲ್ಲಿಯೇ 70% ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಪ್ರಕರಣಗಳಿಗಿಂತ ಸಕ್ರಿಯ ಪ್ರಕರಣಗಳು ಆರೋಗ್ಯ ವ್ಯವಸ್ಥೆಯ ಹೊರೆಯನ್ನು ತಿಳಿಸುತ್ತವೆ. ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ತಾತ್ಕಾಲಿಕ ಕೊರೊನಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸರಕಾರ ಹೇಳುತ್ತಿದೆ. ಆಸ್ಪತ್ರೆಯ ಬೆಡ್, ಆಕ್ಸಿಜನ್ ವಿಚಾರದಲ್ಲಿ ಸರಕಾರ ಅಂಕಿಅಂಶಗಳನ್ನು ಮುಚ್ಚಿಟ್ಟುಕೊಂಡು ಪ್ರಮಾಣಿಕರಂತೆ ನಾಟಕವಾಡುತ್ತಿದೆ. ಬೆಂಗಲೂರಿನಲ್ಲಿ ಬೆಡ್ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗಿದ್ದು, ಆಕ್ಸಿಜನ್ ಕೊರತೆ ಹೆಚ್ಚಾದರೆ ಕೆಲ ಆಸ್ಪತ್ರೆಗಳನ್ನು ಮುಚ್ಚಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಸಂಪುಟ ಸಚಿವರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಕೊರೊನಾ ನಿಯಂತ್ರನಕ್ಕಾಗಿ ಸರಕಾರ ಗಂಬೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಸೌಲಭ್ಯ ನೀಡುವ ಬದಲಾಗಿ ಆಕ್ಸಿಜನ್ ಕೊರತೆಯಾದ್ರೆ ಪ್ರಾಣಯಾಮ ಮಾಡಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ : ವೀಕೆಂಡ್ ಲಾಕ್ಡೌನ್ : ಜನಜೀವನ ಸ್ತಬ್ಧ, ರಸ್ತೆಗಳು ಖಾಲಿ ಖಾಲಿ
ಎಪಿಡೆಮಿಯಾಲಜಿಸ್ಟ್ ಹಾಗೂ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ ಆರ್ ಬಾಬು ಅವರು ಮುಂದಿನ ವಾರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಲಿವೆ ಎಂದಿದ್ದಾರೆ. ಮೇ 1ರ ವೇಳೆಗೆ ಬೆಂಗಳೂರಿನಲ್ಲಿ ದಿನನಿತ್ಯದ ಪ್ರಕರಣ 25 ಸಾವಿರವನ್ನೂ ಮುಟ್ಟಬಹುದು, ಇದರಲ್ಲಿ ಶೇ 5ರಷ್ಟು ಮಂದಿ ಗಂಭೀರ ಸ್ಥಿತಿ ತಲುಪಿದರೂ ಅವರಿಗೆ ಅಗತ್ಯ ಆರೋಗ್ಯ ಸೌಲಭ್ಯ ದೊರೆಯುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 90ರಿಂದ 92% ಕೊರೊನಾ ರೋಗಿಗಳು ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದಾರೆ. ಆದರೆ ಅವರ ಮೇಲೆ ನಿಗಾ ವಹಿಸುವುದೇ ಸದ್ಯದ ಸವಾಲಾಗಿದೆ. ಹೀಗಾಗಿ ಅರಮನೆ ಮೈದಾನ, ಕಲ್ಯಾಣ ಮಂಟಪಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ತೆರೆಯುವಂತೆ ತಜ್ಞರು ಸಲಹೆ ನೀಡಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರು ಮಾಹಿತಿ ನೀಡಿದ್ದಾರೆ. ಸರಕಾರ ಇನ್ನಾದರೂ ಎಚ್ಚುತ್ತು ಜನರ ಜೀವ ಉಳಿಸಲು ಮುಂದಾಗಬೇಕಿದೆ.