- ಡಾ.ಕೆ.ಷರೀಫಾ
ಸತ್ಯ ಬಿಚ್ಚಿಡಲು ಎಂಟೆದೆಯ ಛಾತಿ
ಅನ್ಯಾಯದ ವಿರುದ್ಧ ನ್ಯಾಯದ ಹೋರಾಟ
ಕೋಮುವಾದಿ ಬೆಂಕಿ ಆರಿಸುವ
ಸಂವಿಧಾನದ ಕಾಲಾಳುವೇ.
ಅಗ್ನಿಜ್ವಾಲೆಗಳು ದೇಶ ವ್ಯಾಪಿಸಿ,
ರಾಜಿಯಿಲ್ಲದ ಪುಟ್ಟ ಹಕ್ಕಿಯೇ
ಪುಕ್ಕ ತೊಯಿಸಿ ಬೆಂಕಿ ನಂದಿಸುವಾಸೆ
ಸಂವಿಧಾನದ ಪುಟ್ಟ ಕಾಲಾಳುವೆ.
ಧ್ಯಾನಸ್ಥ ಗುಬ್ಬಿಯ ಹೋರಾಟ
ಅನುದಿನವೂ ಹನಿ ಹನಿ ನೀರಾಟ
ರಾಜಿಯಿಲ್ಲದೇ ಹೋರಾಟ ಮಾಡಿದೆ
ನ್ಯಾಯಪಥದ ಪಯಣಿಗ ಗುಬ್ಬಿಯೇ.
ನಿನ್ನ ಬಂಧಿಸಲು ಸರಪಳಿ ಸಿಕ್ಕದು
ದಿಟ್ಟ ನ್ಯಾಯದ ಹೋರಾಟದಲ್ಲಿ
ಸತ್ಯಕ್ಕೆ ಯಾವತ್ತೂ ಗೆಲುವು ಕಟ್ಟಿಟ್ಟದ್ದು
ಸುಳ್ಳಿಗೆ ಇಂದಲ್ಲ ನಾಳೆ ಸೋಲು, ಸೋಲು, ಸೋಲು.
ಗುಜರಾತ್ ದಂಗೆಗಳಲ್ಲಿ ನೊಂದ ಸಂತ್ರಸ್ತರ ಪರವಾಗಿ ನಿಂತು ಅವರ ಹೊರಾಟದ ಕಿಡಿ ಆರದಂತೆ ನೋಡಿಕೊಂಡು ಸಂತ್ರಸ್ತರ ಸಂಗಾತಿಯಾಗಿ ನಿಂತವರು ತೀಸ್ತಾ ಸೆತಲ್ವಾಡ್. ವಿಶ್ವಸಂಸ್ಥೆಯ ಅಧಿಕಾರಿಯವರು ತೀಸ್ತಾರವರ ಬಂಧನದ ಬಗ್ಗೆ ಸರ್ಕಾರದ ಕ್ರಮವನ್ನು ಖಂಡಿಸಿ “ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಕ ವಿಶೇಷ ವರದಿಗಾರ್ತಿ ಮೇರಿ ಲಾಲರ್ ತೀಸ್ತಾ ಅವರ ಬಂಧನದ ಕುರಿತು ಆಳವಾದ ಕಳವಳ ವ್ಯಕ್ತಪಡಿಸುತ್ತಾ “ತೀಸ್ತಾ ದ್ವೇಷ ಮತ್ತು ತಾರತಮ್ಯದ ವಿರುದ್ಧ ಬಲವಾದ ಧ್ವನಿಯಾಗಿದ್ದಾರೆ” ಎಂದು ಹೇಳಿದ್ದಾರೆ. ರೋಮಿಲಾ ಥಾಪರ್ ರವರು “ನಿಮ್ಮಂತವರ ಸಂತತಿ ಹೆಚ್ಚಲಿ” ಎಂದು ಹಾರೈಸಿದ್ದಾರೆ. ಈ ರೀತಿಯ ಬಂಧನಗಳಿಗೆ ಹೆದರಿ ಪ್ರತಿಭಟನೆಗಳು ನಿಲ್ಲುವುದಿಲ್ಲ. ಅನ್ಯಾಯದ ವಿರುದ್ದ ನ್ಯಾಯದ ಹೋರಾಟ ಬಹಳ ಹಿಂದಿನದು. ತೀಸ್ತಾ ಅವರ ತಾತ ಭಾರತದ ಮೊಟ್ಟ ಮೊದಲ ಅಟಾರ್ನಿ ಜನರಲ್ ಆಗಿದ್ದರು. ಮತ್ತು ತೀಸ್ತಾರವರ ಮುತ್ತಾತ ಜಲಿಯನವಾಲಾ ಬಾಗ್ ಹತ್ಯಾಕಾಂಡದ ವಿಚಾರಣೆ ನಡೆಸಿದ ಆಯೋಗದ ಸದಸ್ಯರಾಗಿದ್ದರು.
ಭಾರತದ ಆಳುವ ಸರ್ಕಾರ ಒಂದು ಕಡೆ ನಾಗರೀಕ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಪರ ಮಾತನಾಡುತ್ತಲೇ ಯಾವ ರೀತಿ ಸತ್ಯವನ್ನು ಮರೆಮಾಚುತ್ತಿದೆ ಮತ್ತು ಹತ್ತಿಕ್ಕುತ್ತಿದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಜರ್ಮನಿಯಲ್ಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ಮೋದಿ ಒಂದು ಕಡೆಗೆ “ನಾಗರಿಕ ಸಮಾಜದ ಸ್ವಾತಂತ್ರ್ಯ ಮತ್ತು ಸಮಾಜದ ವಿವಿಧತೆಗೆ ಕಾವಲಾಗಿರಲು ಹಾಗೂ ಆನ್ ಲೈನ್, ಆಫ್ ಲೈನ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಕರೆ ನೀಡಿರುವ ಹೇಳಿಕೆಗೆ ಭಾರತವೂ ಜಿ7 ದೇಶಗಳು ಮತ್ತು ಇತರೆ ದೇಶಗಳೊಂದಿಗೆ ಸಹಿ ಹಾಕುತ್ತಲೇ “ದಬ್ಬಾಳಿಕೆ ಮತ್ತು ಹಿಂಸಾಚಾರದ ವಿರುದ್ಧ ನಿಂತಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಎಲ್ಲ ಧೈರ್ಯಶಾಲಿ ರಕ್ಷಕರನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಜಾಗತಿಕವಾಗಿ ಪ್ರಜಾಸತ್ತಾತ್ಮಕ ಸಮಾಜಗಳ ಸುಸ್ಥಿರತೆಯನ್ನು ಉತ್ತಮಗೊಳಿಸಲು ಅಂತರ್ ರಾಷ್ಟ್ರೀಯ ಸಹಕಾರವನ್ನು ನಾವು ಹೆಚ್ಚಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತೀಸ್ತಾ, ಸುಧಾ ಭರದ್ವಾಜ, ಸ್ಟ್ಯಾನ್ ಸ್ವಾಮಿ, ಉಮರ್ ಖಾಲಿದ್, ಆನಂದ್ ತೇಲ್ತುಂಬ್ಡೆ, ಸಂಜೀವಕುಮಾರ, ಶ್ರೀಕುಮಾರ್, ಮತ್ತು ಇತ್ತಿಚಿಗೆ ಪತ್ರಕರ್ತ ಝುಬೈರ್ ಬಂಧಿತರಾಗಿದ್ದಾರೆ. ಇವರಾರೂ ಬಂಧನಕ್ಕೆ ಹೆದರುವವರಲ್ಲ.
2002ರ ಗುಜರಾತ ದಂಗೆಗಳ ಬಗ್ಗೆ ಎಸ್ಐಟಿ ಯಿಂದ ಮೋದಿಗೆ ಕ್ಲೀನ್ ಚೀಟ್ ಸಿಕ್ಕಿದೆ. ತೀಸ್ತಾ ಸೆತಲ್ವಾಡ್ ಎಂಭತ್ತೈದು ವರ್ಷದ ಝಕೀಯಾ ಜಾಫ್ರೀಯವರಿಗೆ ಮೋದಿಯ ವಿರುಧ್ಧ ಉತ್ತೇಜಿಸಿದ್ದಾರೆಂದು ಕ್ಲೀನ್ ಚೀಟ್ ಬಂದ ಕೂಡಲೇ ಅಮಿತ್ ಷಾ ಸಂದರ್ಶನದಲ್ಲಿ ಹೇಳುತ್ತಾರೆ. ಆ ಕೂಡಲೇ ತೀಸ್ತಾ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಪಕ್ಷದ ಪಾರ್ಲಿಮೆಂಟ್ ಸದಸ್ಯರಾದ ಎಹೆಸಾನ್ ಜಾಫ್ರಿಯವರನ್ನು ಭೀಕರವಾಗಿ ಹಾಡುಹಗಲೇ, ಗುಜರಾತಿನ ದಂಗೆಗಳಲ್ಲಿ ಕೊಂದು ಹಾಕಲಾಗಿತ್ತು. ಈ ಪ್ರಕರಣದಲ್ಲಿಸರಿಯಾದ ದಾಖಲೆಗಳಿಲ್ಲವೆಂದು ಆಪಾದಿತರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಇದರ ವಿರುದ್ಧ ಜಾಫ್ರೀಯವರ ಮಡದಿ 85 ವರ್ಷದ ಝಾಕಿಯಾ ಜಾಫ್ರೀ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅದರ ಬಗ್ಗೆ ನ್ಯಾಯಮೂರ್ತಿ ಕನ್ವಲಕರ್ ನೇತೃತ್ವದ ಮೂರು ಸದಸ್ಯರ ಪೀಠ ಮೋದಿ ಮತ್ತವರ ಸಂಗಡಿಗರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಎತ್ತಿ ಹಿಡಿದಿದೆ. ಹಾಗಾದರೆ 2002ರಲ್ಲಿ ಕೊಲೆಯಾದ 2000ಕ್ಕಿಂತ ಹೆಚ್ಚಿನ ಜನರ ಸಾವು ಸಂಭವಿಸಲೇ ಇಲ್ಲವೇ? ಹಾಗಾದರೆ ಅಪರಾಧಿಗಳಾರು? ಗರ್ಭಿಣಿಯರ ಮೇಲೆ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಗರ್ಭಿಣಿಯರ ಹೊಟ್ಟೆ ಸೀಳಿ ಲೋಕವನ್ನೇ ಕಾಣದ ಮಗುವಿಗೂ ಚುಚ್ಚಿ ಚುಚ್ಚಿ ಸಾಯಿಸಿ, ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದವರೆಲ್ಲ ಅಪರಾಧಿಗಳಲ್ಲವೆ? ಪತ್ರಕರ್ತರು ಮಾನವ ಹಕ್ಕುಗಳ ಹೋರಾಟಗಾರರು ಜೈಲಿನಲ್ಲಿ ಅಪರಾಧಿಗಳಾಗಿರಬೇಕೆ?
ತೀಸ್ತಾ ಭಯೋತ್ಪಾದನೆಯ ಯಾವ ಕೆಲಸವನ್ನೂ ಮಾಡಿರಲಿಲ್ಲ. ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ರನ್ನು ಗುಜರಾತಿನ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದನೆ ನಿಗ್ರಹ ದಳದವರು(ಎಟಿಎಸ್)ರವರು ದಿನಾಂಕ 25-6-2022 ರಂದು ಅವರನ್ನು ಬಂಧಿಸಿ ಅಹಮದಾಬಾದ್ಗೆ ಕರೆತಂದಿದ್ದಾರೆ. ಸುಪ್ರಿಂ ಕೋರ್ಟಿನ ಈ ತೀರ್ಮಾನವೂ ಸುಪ್ರಿಂ ಕೋರ್ಟ್ ತೀರ್ಮಾನಗಳಲ್ಲಿಯೇ ತಲೆತಗ್ಗಿಸುವ ತೀರ್ಮಾನವಾಗಿದೆ. ಇದು ಪ್ರಜಾಸತ್ತೆಗೊಂದು ದೊಡ್ಡ ಕಳಂಕವಾಗಿದೆ. ಇಂದಿನ ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದು ದುಸ್ತರವಾಗುತ್ತಿದೆ.
“ಬೆಸ್ಟ್ ಬೇಕರಿ” ಪ್ರಕರಣದಲ್ಲಿ ಬಿಲ್ಖಿಸ್ ಬಾನು ಮೇಲೆ ಸಾಮೂಹಿಕ ಬಲತ್ಕಾರ ಮಾಡುತ್ತಾರೆ. ದಿನಾಂಕ 2002ರ ಫೆಬ್ರುವರಿ 28ರಂದು ಗುಲ್ಬರ್ಗ ಸೂಸ್ಶೆಟಿಯಲ್ಲಿ ಕಾಂಗ್ರೆಸಿನ ಸಂಸದರಾದ ಎಹೆಸಾನ್ ಜಾಫ್ರಿಯವರು ಬಹುದೊಡ್ಡ ಮುಸ್ಲಿಂ ನಾಯಕರು. ಸುಮಾರು 69 ಜನರು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. “ಅವರನ್ನು ಬಿಟ್ಟು ಬಿಡಿ ನನಗೆ ಬೇಕಾದರೆ ಕೊಂದು ಬಿಡಿ” ಎಂದು ಯೆಹ್ಸಾನ್ ಜಾಫ್ರಿಯವರು ನಿಂತಾಗ ಅವರನ್ನು ಅವರ ಪತ್ನಿ ಝಕಿಯಾ ಜಾಫ್ರಿಯವರ ಮುಂದೆಯೇ ಕೊಚ್ಚಿ ಕೊಚ್ಚಿ ಕೊಂದು ಸಾಯಿಸಿ, ಮನೆಗೆ ಬೆಂಕಿ ಹಚ್ಚಲಾಗಿತ್ತು. ತನ್ನ ಸಹಾಯಕ್ಕೆ ನಿಂತಿದ್ದ ತೀಸ್ತಾರವರಿಗೆ ಝಕೀಯಾ ಜಾಫ್ರೀಯವರು “ನಿಮಗೆ ನನ್ನ ಸಲಾಂ” ಎನ್ನುತ್ತಾರೆ. ಆಗ ವಾಜಪೇಯಿಯವರು ಸಹ ಬೇಸರದಿಂದ “ಜಾತಿ, ಮತ, ಧರ್ಮಗಳ ಭೇದವಿಲ್ಲದೆ ರಾಜಧರ್ಮವನ್ನು ಪಾಲಿಸಿ” ಎಂದು ಸೂಚ್ಯವಾಗಿ ಹೇಳಿದ್ದರು. ಗಲಭೆ, ದಂಗೆಗಳ ಸಮಯದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಏನು? ಎಂಬುದನ್ನು ಸುಪ್ರೀ ಕೊರ್ಟು ಪ್ರಶ್ನಿಸುತ್ತಿಲ್ಲ. ಬದಲಾಗಿ ಸಂತ್ರಸ್ತರೊಂದಿಗೆ ಸಹಾಯಕ್ಕೆ ನಿಂತವರನ್ನೇ ಪ್ರಶ್ನಿಸುವುದು ಯಾವ ನ್ಯಾಯ? ಸರ್ಕಾರಿ ಅಂಕಿ ಸಂಖ್ಯೆಗಳ ಪ್ರಕಾರವೇ 1200 ಮುಸಲ್ಮಾನರನ್ನು ಹತ್ಯೆಗೈಯಲಾಗಿದೆ. ಜನಾಭಿಪ್ರಾಯದ ಪ್ರಕಾರ 3000 ಜನರನ್ನು ಹತ್ಯೆ ಮಾಡಲಾಗಿದೆ.
ನಮ್ಮ ಪ್ರಧಾನಿ 25ನೇ ಜೂನ್ 2022ರಂದು ಜರ್ಮನಿಯಲ್ಲಿ “ಇಂದಿರಾಗಾಂಧಿಯವರು ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿ, ಪ್ರಜಾಸತ್ತೆಯನ್ನು ಸಾಯಿಸಿದ್ದರು. ಆದರೆ ಈಗ ಭಾರತದಲ್ಲಿ ಪ್ರಜಾಸತ್ತೆಯು ನಳನಳಿಸುತ್ತಿದೆ” ಎಂದು ಹೇಳುತ್ತಿರುವಾಗಲೇ ಭಾರತದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತ್ ಸೆಟಲ್ವಾಡ್ರನ್ನು ಅವರ ಮೇಲೆ ಸೆಕ್ಷನ್ 194, 211, 218, 120(ಬಿ) ಗಳನ್ನು ಹೊರಿಸಿ ಬಂಧಿಸಲಾಗಿರುತ್ತದೆ. ಈ ಮೂಲಕ ಪ್ರಜಾಸತ್ತೆಗೆ ಇನ್ನೂ ದೊಡ್ಡ ಕಳಂಕ ತರುವ ನಡೆಯನ್ನು ಈ ಮೋದಿ ಸರ್ಕಾರ ಮಾಡಿದೆ. ಇಂತಹ ಬಹುದೊಡ್ಡ ಕಳಂಕಕ್ಕೆ ಕೋರ್ಟುಗಳೂ ಪಾತ್ರವಾಗಿವೆ. ಗುಜರಾತ್ ದಂಗೆಗೆ ಒಂದು ದಿನ ಮುಂಚೆ ಪೊಲೀಸ್ ಅಧಿಕಾರಿಗಳ ಸಭೆ ಕರೆದು “ಹಿಂದುಗಳು ತಮ್ಮ ಕೋಪವನ್ನು ಹೊರ ಹಾಕಲಿ” ಎಂದು ಗೋದ್ರಾದ ಸುಟ್ಟ ಶವಗಳ ಯಾತ್ರೆ ನಡೆಸಿ ಹಿಂದೂಗಳನ್ನು ಕೆರಳಿಸಿ, ಪೊಲೀಸರ ಕೈ ಬಾಯಿಗಳನ್ನು ಕಟ್ಟಿಹಾಕಿತು, ಎಂದು ಮೋದಿ ಹೇಳಿದ್ದರು ಎಂದು ಹೇಳಿಕೆ ನೀಡಿದ ಶ್ರೀಕುಮಾರ ಮತ್ತು ಸಂಜೀವ್ ಭಟ್ರವರನ್ನು ಜೈಲಿಗೆ ತಳ್ಳಿತು. ಈಗ ಪತ್ರಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಹಾಗೂ ಒಂದು ಟ್ವೀಟ್ನ ಕಾರಣಕ್ಕೆ ಪತ್ರಕರ್ತ ಝುಬೈರ್ರನ್ನು ಬಂಧಿಸಲಾಗಿದೆ. ಇದು ನೀಡುವ ಸಂದೇಶವೇನು? ಅದು ಸಂಜಿವ್ ಭಟ್ ಆಗಲಿ, ಶ್ರೀಕುಮಾರ್ ಆಗಲಿ ಅಥವಾ ತೀಸ್ತಾರೇ ಆಗಲಿ; ಸತ್ಯ ನುಡಿಯದಿರಿ. ಸತ್ಯ ನುಡಿದವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಎಂಬುದೇ ಸಂದೇಶ ಎಂದು ಜನ ಅರ್ಥ ಮಾಡಿಕೊಳ್ಳಬೇಕಾಗಿದೆ.
ಶಬನಮ್ ಹಾಷ್ಮಿಯರು ಹೇಳುವ ಪ್ರಕಾರ “ಜನರ ಗೆಳತಿಯಾಗಿ ಅವರಿಗೆ ನ್ಯಾಯಕ್ಕಾಗಿ ಹೋರಾಡುವ ತೀಸ್ತಾರವರಿಗೆ ಅಪರಾಧಿಯನ್ನಾಗಿಸುವ ಮತ್ತು ನಿಜವಾದ ಕ್ರ್ರಿಮಿನಲ್ ವ್ಯಕ್ತಿಗಳಿಗೆ ಕ್ಲೀನ್ ಚಿಟ್ ನೀಡುವ ನ್ಯಾಯಾಲಯದ ನೈತಿಕತೆ ಪ್ರಶ್ನಾರ್ಹವಾಗಿದೆ.”