ಬೆಂಗಳೂರು: ನಗರದಲ್ಲಿ ಸುರಕ್ಷಿತ ರಸ್ತೆಗಳನ್ನು ನಿರ್ಮಿಸುವ ಉದ್ದೇಶದಿಂದ ಬಿಬಿಎಂಪಿಯಲ್ಲಿ ‘ನಮ್ಮ ರಸ್ತೆ’– ಪ್ರದರ್ಶನ ಮತ್ತು ಕಾರ್ಯಾಗಾರ ಆಯೋಜಿಸಿದ್ದು, ನಾಗರಿಕರಿಂದ ಸಲಹೆ ಸಂಗ್ರಹಿಸಲಾಗುತ್ತಿದೆ. ಬಿಬಿಎಂಪಿ
ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್‌ಬರ್ಗ್ ಫಿಲಾಂತ್ರಪಿಸ್ ಇನಿಷಿಯೇಟಿವ್ ಅಡಿಯಲ್ಲಿ ಜ್ಞಾನಪಾಲುದಾರ ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಇಂಡಿಯಾದ ಸಹಭಾಗಿತ್ವದಲ್ಲಿ ಬಿಬಿಎಂಪಿಯು ‘ನಮ್ಮ ರಸ್ತೆ’ ಪ್ರದರ್ಶನವನ್ನು ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಡಿ.9ರವರೆಗೆ ಆಯೋಜಿಸಿದೆ.
ರಸ್ತೆಗಳನ್ನು ನಾಗರಿಕರಿಗೆ ಸುರಕ್ಷಿತವಾಗಿರಿಸುವುದು, ಸ್ಥಿತಿಸ್ಥಾಪಕವಾಗಿಸಲು ಬೇಕಾದ ಎಲ್ಲಾ ಪರಿಹಾರಗಳನ್ನು ಆಲೋಚಿಸುವುದು ಹಾಗೂ ಸಲಹೆಗಳನ್ನು ಪಡೆಯುವುದು ಸೇರಿದಂತೆ ಹಲವು ಚರ್ಚೆಗಳು ಸಮಾವೇಶಗಳು ನಡೆಯುತ್ತಿವೆ.
ಇದನ್ನೂ ಓದಿ:ಜಯನಗರ ಬೀದಿಬದಿ ಅಂಗಡಿಗಳ ತೆರವು| ಬಿಬಿಎಂಪಿ ಬೆನ್ನಿಗೆ ನಿಂತ ಡಿಸಿಎಂ ಡಿ.ಕೆ.ಶಿವಕುಮಾರ್
ನಗರದಲ್ಲಿ ಸಕ್ರಿಯ ಸಾರಿಗೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಪಾದಚಾರಿ-ಸ್ನೇಹಿ ಬೀದಿಗಳು, ಸೈಕ್ಲಿಂಗ್‌ಗಾಗಿಯೇ ಮೀಸಲಾದ ಪ್ರತ್ಯೇಕ ಲೇನ್‌ಗಳು ಮತ್ತು ಹಸಿರುಮಯವಾದ ಸ್ಥಳಗಳನ್ನು ಸೃಷ್ಟಿಸುವಂತೆ ಪ್ರದರ್ಶನದಲ್ಲಿ ಸಲಹೆ ನೀಡಲಾಗಿದೆ. ಸುರಕ್ಷಿತ ರಸ್ತೆಗಳನ್ನು ಸಿದ್ಧಪಡಿಸುವ ಕುರಿತು ಅನುಭವಗಳನ್ನು ಹಂಚಿಕೊಳ್ಳಲು ನಾಗರಿಕರು, ನಾಗರಿಕ ಸಂಸ್ಥೆಗಳು, ವಿನ್ಯಾಸಕರು, ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ನಗರದಲ್ಲಿ ಮೆಟ್ರೊ ಜಾಲ, ಉಪನಗರ ರೈಲು ಸೌಲಭ್ಯಗಳು ಮತ್ತು ಬಸ್‌ಗಳ ಸೇವೆಗಳ ತ್ವರಿತ ವಿಸ್ತರಣೆಯೊಂದಿಗೆ ಸುರಕ್ಷಿತ ಸಂಪರ್ಕ ಜಾಲ ನಿರ್ಮಿಸುವುದು.
ಬಿಬಿಎಂಪಿ ‘ಸುರಕ್ಷಾ 75 ಮಿಷನ್ 2023’ ಅಡಿ ನಗರದ 75 ಜಂಕ್ಷನ್‌ಗಳ ಮರು ವಿನ್ಯಾಸ ಮಾಡುತ್ತಿದೆ. ಇದು ಜನ ಕೇಂದ್ರಿತ ಜಂಕ್ಷನ್ ವಿನ್ಯಾಸಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಇದರಿಂದ ಸುರಕ್ಷಿತ, ಪರಿಣಾಮಕಾರಿ ಮತ್ತು ಸುಲಲಿತ ಪ್ರವೇಶವನ್ನು ನಾಗರಿಕರಿಗೆ ಒದಗಿಸುವ ವಿವರವನ್ನೂ ಪ್ರದರ್ಶನದಲ್ಲಿ ನೀಡಲಾಗಿದೆ.
ಸಲಹೆ ಪರಿಗಣನೆ: ‘ನಮ್ಮ ರಸ್ತೆ’– ಪ್ರದರ್ಶನ ಹಾಗೂ ಕಾರ್ಯಾಗಾರದ ಮೂಲಕ ರಸ್ತೆ, ಪಾದಚಾರಿ ಮಾರ್ಗಗಳನ್ನು ನಾಗರಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರದ ಮೂಲಕ ಬರುವ ಸಲಹೆಗಳನ್ನು ಪರಿಗಣಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಪ್ರದರ್ಶನ ಉದ್ಘಾಟಿಸಿದ ನಂತರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಗ್ಲೋಬಲ್ ಅರ್ಬನ್ ಮೊಬಿಲಿಟಿಯ ಉಪ ನಿರ್ದೇಶಕರು ಮತ್ತು ಆರೋಗ್ಯ ಮತ್ತು ರಸ್ತೆ ಸುರಕ್ಷತೆಯ ನಿರ್ದೇಶಕರು, ಸುಸ್ಥಿರ ನಗರಗಳಿಗಾಗಿ ಡಬ್ಲ್ಯುಆರ್‌ಐ ರಾಸ್ ಸೆಂಟರ್‌ನ ಕ್ಲೌಡಿಯಾ ಆಡ್ರಿಯಾಜೋಲಾ ಸ್ಟೀಲ್, ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್ ವೈಟಲ್ ಸ್ಟ್ರಾಟಜೀಸ್ (ರಸ್ತೆ ಸುರಕ್ಷತೆ) ಹಿರಿಯ ವ್ಯವಸ್ಥಾಪಕ ಲೀವಾಂಟಾ ಮಿಲ್ಲರ್, ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಇದ್ದರು.
ರಸ್ತೆ ಸಮಸ್ಯೆಗಳಿಗೆ ಸರಳ ವಿನ್ಯಾಸಗಳು
- ರಸ್ತೆಗಳ ಮಧ್ಯದ ಸ್ಥಳವನ್ನು ‘ಆಶ್ರಯ ದ್ವೀಪ’ವಾಗಿ ನಿರ್ಮಿಸುವುದು
- ಸ್ಪೀಡ್ ಹಂಪ್‌ಗಳ ನಿರ್ಮಾಣ
- ರಸ್ತೆ ಮಾರ್ಕಿಂಗ್ ಮಾಡುವುದು.
- ರಸ್ತೆಯ ಮಧ್ಯಭಾಗದಲ್ಲಿ ಪಾದಚಾರಿಗಳು ನಿಲ್ಲಲು ವ್ಯವಸ್ಥೆ
- ನಾಗರಿಕರ ಅನುಕೂಲಕ್ಕಾಗಿ ಸೂಚನಾ ಫಲಕಗಳ ಅಳವಡಿಕೆ
- ಎತ್ತರದ ಪಾದಚಾರಿ ಕ್ರಾಸಿಂಗ್ ನಿರ್ಮಿಸುವುದು
- ಬಹು ಉಪಯೋಗದ ‘ಸೈಡ್ ವಾಕ್‌ಝೋನ್’ ನಿರ್ಮಿಸುವುದು
- ಕಾಂಪ್ಯಾಕ್ಟ್ ಇಂಟರ್ ಸೆಕ್ಷನ್‌ಗಳ ನಿರ್ಮಾಣ
- ವಾಹನಗಳ ವೇಗ ನಿಯಂತ್ರಿಸಲು ರಂಬಲ್ ಸ್ಟ್ರಿಪ್ಸ್ ಅಳವಡಿಕೆ
- ಬಸ್ ತಂಗುದಾಣಗಳ ನಿರ್ಮಾಣ
ರಸ್ತೆ–ಬೀದಿಗಳ ಬಗ್ಗೆ ನಾಗರಿಕರ ಪ್ರತಿಕ್ರಿಯೆ
‘ನೀವು ಏನು ಯೋಚಿಸುತ್ತೀರಿ ಎಂದು ಹೇಳಿ? ಬೆಂಗಳೂರಿನ ಬೀದಿಗಳಲ್ಲಿ ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಾವು ಏನು ಮಾಡಬಹುದು?’ ಎಂದು ಪ್ರದರ್ಶನದ ದೊಡ್ಡ ಫಲಕದಲ್ಲಿ ನಾಗರಿಕರ ಸಲಹೆ ಆಹ್ವಾನಿಸಲಾಗಿತ್ತು. ಆ ಫಲಕದ ಮೇಲೆ ನಾಗರಿಕರು ಬರೆದಿರುವ ಕೆಲವು ಸಲಹೆಗಳು ಹೀಗಿವೆ… ಬಸ್ ತಂಗುದಾಣಗಳಲ್ಲಿ ರಸ್ತೆ ದಾಟಲು ಸುರಕ್ಷಿತ ವ್ಯವಸ್ಥೆ ಇರಲಿ ಸಂಚಾರ ದಟ್ಟಣೆ ನಿಯಂತ್ರಿಸುವುದು ಉತ್ತಮ ಬಸ್ ತಂಗುದಾಣಗಳನ್ನು ಜನರು ಬಳಸಲು ಇಷ್ಷಪಡುವಂತೆ ಸುಂದರಗೊಳಿಸಿ ಪಾದಚಾರಿ ಮಾರ್ಗಗಳಲ್ಲಿ ಹಸಿರೀಕರಣ ಹೆಚ್ಚಲಿ ದಯವಿಟ್ಟು ರಸ್ತೆಗಳನ್ನು ಸ್ವಚ್ಛವಾಗಿಡಿ ಸಿ.ಸಿ. ಟಿ.ವಿ ಕ್ಯಾಮೆರಾಗಳು ಹೆಚ್ಚಾಗಲಿ ಮೊದಲು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ರಸ್ತೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನಗರ ಅಭಿವೃದ್ಧಿಗೆ ಸಮರ್ಪಕ ಯೋಜನೆ ರೂಪಿಸಿ ಭ್ರಷ್ಟಾಚಾರವನ್ನು ಮೊದಲು ಕಡಿಮೆ ಮಾಡಿ. ಬಿಬಿಎಂಪಿ
ವಿಡಿಯೋ ನೋಡಿ:ಕೊಡಗು : ಹಾಡಿ ಜನರಿಗೆ ಬದುಕಿನ ಗ್ಯಾರಂಟಿ ಬೇಕಿದೆ Janashakthi Media