ರಾಜೀವ್‌ ತಾರಾನಾಥರ ಗುಂಗಿನಲ್ಲಿ

ಟಿ ಎಸ್ ವೇಣುಗೋಪಾಲ್

ಕೆಲ ವರ್ಷಗಳ ಹಿಂದೆರಾಜೀವ್‌ತಾರಾನಾಥರ ಮನೆಗೆ ಹೋದಾಗಯಾವುದೋ ಮಲೆಯಾಳಂ ಪತ್ರಿಕೆಯೊಂದಕ್ಕೆ ಸಂದರ್ಶನ ನಡೆಯುತ್ತಿತ್ತು. ಶಾಸ್ತ್ರೀಯ ಸಂಗೀತದ ಬಗ್ಗೆ ವಿವರಿಸುತ್ತಿದ್ದರು,“ಶಾಸ್ತ್ರೀಯ ಸಂಗೀತದಲ್ಲಿ ಸಂಗೀತಗಾರ ಹಾಗೂ ಕೇಳುಗನ ನಡುವೆ ಒಂದು ಟ್ರಾನ್‌ಸ್ಯಾಕ್ಷನ್ನಿನಲ್ಲಿ ನಡೆಯುತ್ತದೆ. ನೀವು ನೂರು ರೂಪಾಯಿ ಕೊಟ್ಟು ಒಂದು  ಪೆನ್ನು ಕೊಂಡರೆ ಅದರ ಬೆಲೆ ನೂರು ರೂಪಾಯಿ ಅಂತ ಇಬ್ಬರೂ ಒಪ್ಪಿಕೊಂಡು ವ್ಯಾಪಾರ ಮಾಡುತ್ತಿರುತ್ತೇವೆ. ಪೆನ್ನು ಹೇಗಿರುತ್ತದೆ ಅನ್ನುವ ಅರಿವು ನಿಮಗಿರುತ್ತದೆ. ಅವನು ಪೆನ್ನು ಕೊಡದೆ ಬೇರೇನೊ ಕೊಟ್ಟರೆ ಅದು ಪೆನ್ನಲ್ಲ ಅಂತ ಹೇಳುವ ಹಕ್ಕು ನಿಮಗಿರುತ್ತದೆ. ಈ ಟ್ರಾನ್‌ಸ್ಯಾಕ್ಷನ್ನಿನಲ್ಲಿ ನೂರು ರೂಪಾಯಿ ಅನ್ನೊಂದು ಒಂದು ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಶಾಸ್ತ್ರೀಯ ಸಂಗೀತದಲ್ಲ್ಲೂ ಹಾಗೆಯೇ. ಇದರಲ್ಲಿಇಬ್ಬರಿಗೂ ಒಂದು ಹಕ್ಕು ಇರುತ್ತದೆ. ಸಂಗೀತಗಾರ ಒಂದುರಾಗವನ್ನು ಹಾಡಿದರೆ ಅದು ಕೇಳುಗ ಮತ್ತ ಕಲಾವಿದ ಇಬ್ಬರಿಗೂ ಗೊತ್ತಿರುತ್ತದೆ. ಅದನ್ನು ನೀನು ಸರಿಯಾಗಿ ಹಾಡಲಿಲ್ಲ ಅಂತ ಹೇಳುವ ಹಕ್ಕು ಕೇಳುಗನಿಗೆ ಇರುತ್ತದೆ. ಆದರೆ ಒಬ್ಬ ಸಿನಿಮಾ ಗಾಯಕ ಹಾಡಿದರೆ ಅದನ್ನು ಪ್ರಶ್ನಿಸುವ ಹಕ್ಕು ಕೇಳುಗನಿಗೆ ಇರೋಲ್ಲ. ನೀವು ಅದನ್ನುಇಷ್ಟ ಪಡಬಹುದು ಅಥವಾ ಪಡದೇ ಇರಬಹುದು. ಆದರೆ ನೀನು ಹೀಗೆ ಹಾಡಬಾರದು ಅಂತ ಹೇಳುವ ಹಕ್ಕು ಕೇಳುಗನಿಗೆ ಇರೋದಿಲ್ಲ.”

ತಾರಾನಾಥರಿಗೆ ಸಿನಿಮಾ ಸಂಗೀತದಲ್ಲೂ ಸಾಕಷ್ಟು ಪರಿಶ್ರಮವಿತ್ತು. ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಹಲವಕ್ಕೆ ಪ್ರಶಸ್ತಿಯೂ ಬಂದಿತ್ತು. ಆದರೆಅವರದೃಷ್ಟಿಯಲ್ಲಿ ಶಾಸ್ತ್ರೀಯ ಸಂಗೀತಗಾರರು ಸಿನಿಮಾಕ್ಕೆ ಸಂಗೀತ ನೀಡುವಾಗ ಅವರಿಗೆ ಕೆಲವು ಮಿತಿಗಳಿರುತ್ತವೆ.

“ಶಾಸ್ತ್ರೀಯ ಸಂಗೀತಗಾರರಿಗೆ ಒಂದು ವಾದ್ಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿಯೇ ಅವರು ನೀಡುವ ಸಿನಿಮಾ ಸಂಗೀತದಲ್ಲಿ ಆ ವಾದ್ಯ ಪ್ರಧಾನವಾಗಿ ಕಾಣುತ್ತೆ. ಉದಾಹರಣೆಗೆ ಪಂಡಿತ್‌ ರವಿಶಂಕರ್ ಸಂಯೋಜಿಸಿದಾಗ ಸಿತಾರ್, ಖಾನ್ ಸಾಹೇಬರು ಸಂಯೋಜಿಸಿದಾಗ ಸರೋದ್ ಪ್ರಧಾನವಾಗಿಕಾಣುತ್ತದೆ. ಆದರೆ ಇಳೆಯರಾಜ, ಎ ಆರ್ ರೆಹಮಾನ್‌ ಅಥವಾ ಹಂಸಲೇಖ ಹಾಗಲ್ಲ. ಅವರು ಸ್ಟುಡಿಯೋದಲ್ಲೇ ಬೆಳೆದವರು. ಅವರಿಗೆ ಹಲವು ವಾದ್ಯಗಳ ವಿಭಿನ್ನ ಸಾಧ್ಯತೆಗಳು ಗೊತ್ತಿರುತ್ತದೆ. ಹಾಗಾಗಿ ಸಿನಿಮಾಕ್ಕೆ ಅವರು ನೀಡುವ ಸಂಗೀತ ತುಂಬಾ ದೊಡ್ಡದು. ಎ ಆರ್ ರೆಹಮಾನ್ ನಮಗಿಂತ ನೂರುಪಟ್ಟು ಮುಂದಿದ್ದಾರೆ. ಅವರು ಸಿನಿಮಾಗಳಿಗೆ ನೀಡುವ ಸಂಗೀತ ನೋಡಿ. ಅದರ ರೇಂಜ್ ಮತ್ತು ವೈವಿಧ್ಯ ಅಪಾರ. ಅವರು ಬೆಳೆದದ್ದು ಸ್ಟುಡಿಯೋದಲ್ಲಿ. ಅವರಿಗೆ ವಿಭಿನ್ನ ವಾದ್ಯಗಳ ಸಾಧ್ಯತೆಗಳು ಅರ್ಥವಾಗಿರುತ್ತದೆ. ಅವರು ಸಂಗೀತ ನಿರ್ದೇಶನ ಹ್ಯಾಗೆ ಮಾಡ್ತಾರೆ ಅಂತ ನೋಡಿ ಕಲಿತಿರ್ತಾರೆ  ಹಾಗಾಗಿ ಅದರಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮಗೆ ಬೇರೆ ವಾದ್ಯಗಳ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ಸಾಮರ್ಥ್ಯ ತುಂಬಾ ಕಡಿಮೆ. ಸೊನ್ನೆ ಎನ್ನಬಹುದು. ”ಅಂದರೆ ಶಾಸ್ತ್ರೀಯ  ಸಂಗೀತಗಾರರಿಗೆ ಅವರ ಸಾಮರ್ಥ್ಯವೇ ದೌರ್ಬಲ್ಯವಾಗಿ ಬಿಟ್ಟಿರುತ್ತದೆ.

ರಾಜೀವ್‌ ತಾರಾನಾಥರಿಗೆ ತಾವು ಸಂಗೀತದಲ್ಲಿ ಮಾಡಿರುವ ಪ್ರಯೋಗಗಳಲ್ಲಿ ಕೆಲವು ಸಂತೋಷಕೊಟ್ಟಿವೆ. ಕೆಲವು ಪ್ರಯೋಗಗಳ ಬಗ್ಗೆ ಈಗ ಬೇರೆ ರೀತಿಯಲ್ಲಿ ಮಾಡಬಹುದಿತ್ತು ಅನಿಸುತ್ತಿದೆ. ಉದಾಹರಣೆಗೆ ಸಂಸ್ಕಾರದಲ್ಲಿ ಬೇರೆ ಬೇರೆ ಪಾತ್ರಗಳಿಗೆ ಬೇರೆ ಬೇರೆ ವಾದ್ಯಗಳನ್ನು ಬಳಸಲು ಪ್ರಯತ್ನಿಸಿದ್ದಾರೆ. ಆ ಬಗ್ಗೆ ಹೇಳುತ್ತಾ “ದಲಿತರಿಗೆ ಒಂದು ವಾದ್ಯವನ್ನು ಐಡೆಂಟಿಫೈ ಮಾಡಬಹುದು. ಆದರೆ ಬ್ರಾಹ್ಮಣರಿಗೆ ಯಾವ ವಾದ್ಯ ಹಾಕಲಿ? ದಟ್ ವಾಸ್ ಮೈ ಡಿಫೀಟ್. ತಮಟೆ ಹೊಡೆದು ಕೊಂಡು, ದಮಡಿ ನುಡಿಸಿಕೊಂಡು ಬಂದರು ಅಂದ ತಕ್ಷಣ ಅದು ಸ್ಪಷ್ಟ. ಆದರೆ ಬ್ರಾಹ್ಮಣರು ಬಂದರೆ ಏನು ಮಾಡೋದು? ಗಂಟೆ ಹೊಡೆಯೋದಾ? ಗಂಟೆ ಬ್ರಾಹ್ಮಣರೂ ಹೊಡೀತಾರೆ, ದಸರಾ ಆನೆಯೂ  ಹೊಡೀತದೆ. ಅದು ಅಲ್ಲಿ ನನ್ನ ಸಮಸ್ಯೆ. ನಾನು ಹಾಕಿದ್ದೇ ಸೌಂಡ್. ಆಗ ನಾನು ಸರೋದ್ ಹಾಕಿದೆ. ಇವೆಲ್ಲಾ ಮಾಡಿದೆ. ಆದರೆ ಇವೆಲ್ಲಾ ಇನ್‌ಎಕ್ಸ್ಪರ್ಟ್  ಅನಿಸುತ್ತೆ. ಈಗ ಸಂಸ್ಕಾರ ಸಿಕ್ಕಿದರೆ ಆ ಸಂಗೀತವನ್ನು ಪೂರ್ತಿತೆಗೆದು ಬೇರೇನೆ ಮಾಡುತ್ತಿದ್ದೆ” ಅಂದರು. ಅವರು ಸಿನಿಮಾದಲ್ಲಿ ಹೊಸ ಅಲೆಯೊಂದಿಗೆ ಗುರುತಿಸಿಕೊಂಡಿದ್ದರು. ಅದರಿಂದ ಹಿಂದೆ ಸರಿದರು. “ನಾನು ಹಿಂದೆ ಸರಿಯಲಿಲ್ಲ  ಅವರು ಕರೆಯೋದು ನಿಲ್ಲಿಸಿದರು ಅಷ್ಟೆ” ಅಂತ ಒಮ್ಮೆಅಂದಿದ್ದರು.

ಸಾಹಿತ್ಯದಲ್ಲೂ ಅವರಿಗೆ ಮೊದಲಿನಿಂದಲೂ ಅಷ್ಟೇ ಆಸಕ್ತಿ ಇತ್ತು.ಅವರಿಗೆ ಇಂಗ್ಲೀಷ್ ಸಾಹಿತ್ಯದಲ್ಲಿ ಅಪಾರ ಪರಿಣತಿ ಸಾಧ್ಯವಾಗಿತ್ತು. ಅದರ ಕಲಿಕೆ ಕ್ರಿಟಿಕಲ್‌ ಸೆನ್ಸಿಬಿಲಿಟಿಯನ್ನು ಬೇಡುತ್ತಿತ್ತು. ಆ ವಿಷಯದಲ್ಲಿ ರಾಜೀವರದ್ದು ಎತ್ತಿದ ಕೈ. ಆದರೆ ಸಂಗೀತದಲ್ಲಿ ಅದಕ್ಕೆ ಅವಕಾಶವೇ ಇಲ್ಲ. “ಅಲ್ಲಿ ಗುರುವಿನ ಗುಲಾಮನಾಗಬೇಕು. ಆಗ ಗುರು ಹೇಳಿಕೊಟ್ಟಿದ್ದು ಸಿಗುತ್ತದೆ. ಅವರು ಹೇಳಿಕೊಟ್ಟಿದ್ದು ನಿಮ್ಮೊಳಗೆ ಬರುತ್ತಾ ಹೋಗುತ್ತದೆ. ಬೆಳೆದು ಗಿಡವಾಗುತ್ತದೆ. ಮರ ಆಗುತ್ತದೆ. ಕೊನೆಗೆ ಹಣ್ಣು ಬಿಡುತ್ತದೆ.” ಎನ್ನುವುದನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರು. ಅವರದೃಷ್ಟಿಯಲ್ಲಿ ಶಾಸ್ತ್ರೀಯ ಸಂಗೀತಗಾರಹಾಗೂ ಪಾಶ್ಚಾತ್ಯ ಸಾಹಿತ್ಯದಲ್ಲಿ ಪರಂಪರೆಯನ್ನು ನೋಡುವಕ್ರಮದಲ್ಲಿ ವ್ಯತ್ಯಾಸವಿತ್ತು. ಅದನ್ನು ವಿವರಿಸುವುದಕ್ಕೆಅವರು ಸಾಮಾನ್ಯವಾಗಿ ಕಾಳಿದಾಸನ ರಘುವಂಶದ “ಸೂರ್ಯನಿಂದ ಪ್ರಾರಂಭವಾದ ಈ ಮಹಾನ್‌ ಕುಲದ ಚರಿತ್ರೆಯನ್ನು ಬರೆಯಲು ಹೊರಟಿರುವ ಅಲ್ಪಮತಿ ನಾನು” ಎನ್ನುವ ಮಾತನ್ನುಉಲ್ಲೇಖಿಸುತ್ತಿದ್ದರು. ಮುಂದುವರಿಯುತ್ತಾ ಕಾಳಿದಾಸನು “ಸಣ್ಣದೋಣಿಯಲ್ಲಿ ಸಾಗರವನ್ನುದಾಟಲು ಹೊರಟ ಮೂರ್ಖನಂತೆ ನಾನು, ನಾನೊಬ್ಬ ಆಸೆಬುರುಕ ಕುಬ್ಜ” ಅನ್ನುವ ಮೂಲಕ ತಾನೆಷ್ಟು ಸಣ್ಣವನು ಅನ್ನುವ ವಿನಯವನ್ನು ವ್ಯಕ್ತಪಡಿಸುತ್ತಾನೆ. ಜೊತೆಗೆ ಈ ಕ್ಷೇತ್ರದಲ್ಲಿ ಇವನಿಗಿಂತ ಮೊದಲೇ ಎಷ್ಟೋ ಕೆಲಸವಾಗಿದೆ ಅನ್ನುವ ಅರಿವೂ ಅವನಿಗಿದೆ. ಹಾಗಾಗಿಯೇ ಅವನು “ನಾನೇನಿದ್ದರೂ ಈ ಸುಂದರವಾದ ಮುತ್ತು, ಮಾಣಿಕ್ಯ ಹಾಗೂ ವಜ್ರಗಳನ್ನು ಪೋಣಿಸಿ, ಹಾರಮಾಡಲು ಬಳಸುವ ದಾರವಿದ್ದಂತೆ” ಅನ್ನುತ್ತಾನೆ. ಈ ಅರಿವಿನಿಂದಲೇ ಅವನಿಗೆ ವಿನಯವೂ ಸಾಧ್ಯವಾಗಿರುವುದು. ಇಂತಹ ವಿನಯವನ್ನು ಬಹುತೇಕ ಶಾಸ್ತ್ರೀಯ ಸಂಗೀತಗಾರರಲ್ಲಿ ಕಾಣಬಹುದು ಅನ್ನುತ್ತಾರೆ ರಾಜೀವ್‌ತಾರಾನಾಥ್. ಅಂದರೆ ಕಾಳಿದಾಸ ಹಾಗೂ ಶಾಸ್ತ್ರೀಯ ಸಂಗೀತಗಾರರಲ್ಲಿ ತಮ್ಮ ಪುರಾತನರನ್ನು ಒಪ್ಪಿಕೊಂಡು ಮುಂದುವರಿಸುವ ಪರಂಪರೆಯಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ನಿರಾಕರಣೆಯ ಪ್ರವೃತ್ತಿಯನ್ನುಕಾಣಬಹುದು. 16ನೇ ಶತಮಾನದಿಂದ ಪ್ರಾರಂಭವಾಗುವ ಇಂಗ್ಲೀಷ್ ವಿಮರ್ಶೆಯ ಪರಂಪರೆಯಲ್ಲಿ ಪ್ರತಿಯೊಬ್ಬ ಹೊಸ ವಿಮರ್ಶಕನೂ ತನ್ನ ಹಿಂದಿನ ವಿಮರ್ಶಕರ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸುತ್ತಾ, ಅವುಗಳನ್ನು ನಿರಾಕರಿಸಿಕೊಂಡು ಬಂದಿದ್ದಾರೆ. ಈಗಾಗಲೇ ಆಗಿರುವ ಕೆಲಸವನ್ನು ನಿರಾಕರಿಸಿಬಿಟ್ಟು, ಅದಕ್ಕೆ ಸಂಬಂಧಿಸಿದಂತೆ ನಿಮ್ಮ ಓದು ಮತ್ತು ಪ್ರತಿಕ್ರಿಯೆಯನ್ನು ಬದಲಿಸಿ ಕೊಂಡು ಬಿಟ್ಟರೆ ಕೆಲಸ ಮಾಡುವುದಕ್ಕೆ ತುಂಬಾ ಅವಕಾಶ ವಿರುತ್ತದೆ. ಹಿಂದಿನದನ್ನುಒಪ್ಪಿಕೊಂಡಾಗ ಮುಂದುವರಿಯುವುದು ಸವಾಲಿನ ಕೆಲಸ. ಆಗ ಪರಂಪರಾಗತವಾಗಿ ಬಂದಿರುವಜ್ಞಾನ ಮತ್ತು ಸೃಜನಶೀಲ ಪ್ರಕ್ರಿಯೆ ಇವೆರಡರ ನಡುವಿನ ಮುಖಾಮುಖಿ ರೋಮಾಂಚಕ ಹಾಗೂ ಸವಾಲಿನ ವಿಷಯ.

ಸಂಗೀತ, ಸಾಹಿತ್ಯ, ಭಾಷೆ ಇತ್ಯಾದಿಗಳ ವಿಷಯದಲ್ಲಿಅವರದ್ದೇ ಆದ ಆಲೋಚನೆಗಳಿದ್ದವು. ಸಂಗೀತ ಹಾಗೂ ಸಾಹಿತ್ಯ ಎರಡನ್ನೂ ಆಳವಾಗಿ ಪ್ರೀತಿಸುತ್ತಿದ್ದರೂ, ಎರಡರಲ್ಲೂ ಔತ್ತಮ್ಯ ಸಾಧ್ಯವಾಗಿದ್ದರೂ ಅವರಿಗೆ ಒಂದು ಮಾಧ್ಯಮವಾಗಿ ಒದಗಿ  ಬಂದದ್ದು ಸಂಗೀತ ಮಾತ್ರ. “ನನ್ನಇಡೀ ಭಾರತದ ಕಲ್ಪನೆಯನ್ನು ಹಿಡಿದಿಡ ಬಲ್ಲ ಹಾಗೂ ಸೃಷ್ಟಿಸಬಲ್ಲ ಮಾಧ್ಯಮ ಸಂಗೀತ.” ಇವರ ಸಾಹಿತ್ಯದೊಂದಿಗಿನ “ಪ್ರೇಮಪ್ರಸಂಗ ಕೆಲವು ಪ್ರಿಯವಾದ ನೆನೆಸುವಂತಹ ನವಿರಾದ, ಗಾಢ ಒಳನೋಟಗಳನ್ನೊಳಗೊಂಡ ಕ್ಷಣಗಳನ್ನು ನೀಡಿತ್ತು. . . .” ಆದರೆ ಅವರಿಗೆ“ಸಣ್ಣಕಲ್ಲು ಹರಳಿನಿಂದ ಹಿಡಿದು ಸಮಗ್ರ ಭಾರತಕ್ಕೆ ಸ್ಪಂದಿಸುವ ಸಾಧ್ಯತೆಯನ್ನು ನೀಡಿದ್ದುಇವರಿಗೆಅಲಿ ಅಕ್ಬರ್‌ಖಾನರಿಂದ ಹರಿದು ಬಂದಿದ್ದಸಂಗೀತ.”

ಅವರ ಬದುಕಿನ ಭಾಗವಾಗಿಬಿಟ್ಟಿದ್ದ ಸಂಗೀತ ಸಾಹಿತ್ಯಗಳೆರಡನ್ನೂ ಪೋಷಿಸುವ ವಾತಾವರಣ ಮನೆಯಲ್ಲೇ ಇತ್ತು. ತಂದೆ ಪಂಡಿತ್‌ ತಾರಾನಾಥರು ಮತ್ತು ತಾಯಿ ಸುಮತೀಬಾಯಿ ಭಾಷೆಗಳು, ಕಲೆಗಳು, ಸಂಗೀತ ಎಲ್ಲಾ ನಿರಂತರವಾಗಿ ಹರಿಯುತ್ತಿರುವಂತೆ ನೋಡಿಕೊಂಡಿದ್ದರು. ರಾಜೀವ್‌ಅವರ ತಂದೆ ಪಂಡಿತ್‌ ತಾರಾನಾಥರು ಒಂದು ರೀತಿ ಲಿಯೊನಾರ್ದೋ ದವಿನ್ಚಿ ಇದ್ದ ಹಾಗೆ. ತಬಲವಾದಕರು, ಗಾಯಕರು, ಸ್ವಾತಂತ್ರ್ಯ ಯೋಧರು, ಸಮಾಜ ಸುಧಾರಕರು, ಅಲೋಪತಿ, ಆಯುರ್ವೇದ, ಯುನಾನಿ ವೈದ್ಯರು ಎಲ್ಲವೂ ಆಗಿದ್ದರು. ತಬಲಾ ಚೆನ್ನಾಗಿ ಅಭ್ಯಾಸ ಮಾಡಿದರೆ ಬೆರಳುಗಳ ಸಂವೇದನೆ ಸೂಕ್ಷ್ಮವಾಗಿ, ನಾಡಿಪರೀಕ್ಷೆಗೆ ಅನುಕೂಲವಾಗುತ್ತದೆ ಅಂತ ನಂಬಿದ್ದರು. ಆ ನಂಬಿಕೆಯಿಂದಲೇ ರಾಜೀವತಾರಾನಾಥರು ಸಂಗೀತದ ಮೂಲಕ ಆಯುರ್ವೇದದಲ್ಲಿ ಪರಿಣತಿ ಸಾಧಿಸಬೇಕೆಂಬ ಇಚ್ಛೆಇತ್ತು. ಹಾಗಾಗಿ ಮೂರನೇ ವಯಸ್ಸಿನಿಂದಲೇ ಅವರಿಗೆತ ಬಲಾ ಕಲಿಯಲು ಹಚ್ಚಿದ್ದರು. ಅವರೇ ಇವರ ಮೊದಲ ಗುರು. “ಸ್ವರಶುದ್ಧತೆ, ರಾಗಭಾವ ಹಾಗೂ ಸ್ವಾನುಭಾವ” ಸಂಗೀತದಲ್ಲಿ ತುಂಬಾ ಮುಖ್ಯ ಅಂತ ಕಲಿಸಿದವರು. ಸಂಗೀತ ಜೀವನದ ಅಂಗವಾಗಿಯೇ ಬಂದು ಬಿಟ್ಟಿತ್ತು. ಚಿತ್ರ ಸಂಗೀತದ ಬಗ್ಗೆ ಮಡಿವಂತಿಕೆಯ ಭಾವನೆ ಇದ್ದ ಆ ಸಮಯದಲ್ಲೂ ಪಂಡಿತ ತಾರಾನಾಥರು ಅದನ್ನು ಸಹಾನುಭೂತಿಯಿಂದ ನೋಡುತ್ತಿದ್ದರು. ಜೊತೆಗೆ ಜನಪ್ರಿಯ ಸಂಗೀತದ ಮಟ್ಟುಗಳಲ್ಲಿ ಹಾಡು ರಚಿಸುತ್ತಿದ್ದರು. ಭಜನೆಗಳನ್ನು ಹಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದ ಬಾಲಗಂಧರ್ವ, ಸೈಗಲ್‌ ಇವರ ಲಘುಸಂಗೀತವನ್ನು ರಾಜೀವರಿಗೂ ಕೇಳಿಸಿದ್ದರು. ಸಿನಿಮಾಗಳನ್ನು ತೋರಿಸಿದ್ರು. ಅಮೇಲೆ ರಾಜೀವ್‌ತಾರಾನಾಥ್‌ಕೂಡ ಸಿನಿಮಾ ಹಾಡುಗಳನ್ನು ಹಾಡುವುದಕ್ಕೆ ಪ್ರಾರಂಭಿಸಿದ್ದರು. ತಲತ್ ಮೆಹಮೂದ್‌ ಇವರ ಹಾಡನ್ನು ಕೇಳಿ ಬೊಂಬಾಯಿಗೆ ಬಾ ಅಂತಕರೆದರು. ತಾರಾನಾಥರು ಹಿನ್ನಲೆ ಗಾಯಕರಾಗಬೇಕೆಂದು ಆಸೆ ಪಟ್ಟಿದ್ದರು. ಆದರೆ ಮಧ್ಯದಲ್ಲಿ ಅಲಿ ಅಕ್ಬರ್‌ಖಾನರ  ಸರೋದ್  ಕೇಳಿ  ಅದಕ್ಕೆ ಮರುಳಾಗಿ ಅದರ ಬೆನ್ನು ಹತ್ತಿದರು.

ತಾರಾನಾಥರಿಗೆ ಖಾನ್ ಸಾಹೇಬರು ಬೆರಳು ಮಡಿಸುವುದರಿಂದ ಸರೋದ್ ಪಾಠವನ್ನು ಹೇಳಿಕೊಟ್ಟರು. ತಾರಾನಾಥರು ಲೋಕದ ಪರಿವೆಯೇ ಇಲ್ಲದೆ ಹತ್ತು ಹನ್ನೆರೆಡು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಔತ್ತಮ್ಯ ಸಾಧಿಸಬೇಕು ಅನ್ನುವ ಬಯಕೆ ತೀವ್ರವಾಗಿತ್ತು. ಅದು ಯಮ ಸಾಧನತೆಯನ್ನು ಬೇಡುತ್ತಿತ್ತು. “ನನ್ನತಲೆಯಲ್ಲಿ ಬಂದು ಹೋಗುವ ಎಲ್ಲಾ ಆಲೋಚನೆಗಳು ಕೈಯಲ್ಲಿ ಬರೋದಕ್ಕೆ ಸಾಧ್ಯ ಆಗಬೇಕು. ನನ್ನ ಮನಸ್ಸಿನ ಕಲ್ಪನೆಗಳು ಬೆರಳಿಗೆ ಬಂದು, ಬೆರಳುಗಳೇ ನನ್ನ ಕಲ್ಪನೆಗಳಾಗಿಬಿಡಬೇಕು. ನೀವು ಹೆಚ್ಚೆಚ್ಚು ಸಾಧಿಸಿದಷ್ಟೂ ನಿಮ್ಮ ಕಲ್ಪನೆಗಳು ಹೆಚ್ಚೆಚ್ಚು ಗರಿಗೆದರಿಕೊಂಡು ಬೆಳೆಯುತ್ತಾ ಹೋಗುತ್ತವೆ! ಏಕೆಂದರೆ ನಮ್ಮ ಕಲ್ಪನೆಗಳು ಯಾವಾಗಲೂ ನಮಗಿರುವ ನುಡಿಸುವಅಥವಾ ಹಾಡುವ ಸಾಮರ್ಥ್ಯಕ್ಕೆ ಸೀಮಿತಗೊಂಡಿರುತ್ತವೆ. ಇದಕ್ಕಾಗಿಯೇ ನಾವು ಅಭ್ಯಾಸ ಮಾಡುವುದು. ಹೆಚ್ಚೆಚ್ಚು ಕಲಿತು, ಸಾಧನೆ ಮಾಡಿದಂತೆಲ್ಲಾ ನಿಮ್ಮ ಬೆರಳುಗಳು ಹೆಚ್ಚೆಚ್ಚು ಕೌಶಲವನ್ನು, ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಬೆರಳುಗಳ ಸಾಧ್ಯತೆಗಳೂ ಹೆಚ್ಚುತ್ತವೆ. ಸಾಮರ್ಥ್ಯ ಹೆಚ್ಚಾದಂತೆ, ಕಲ್ಪನೆಗಳು ಬೆಳೆಯುತ್ತವೆ. ನೀವು ಔತ್ತಮ್ಯದಕಡೆಗೆ ಹೋದಷ್ಟೂ ಹೆಚ್ಚೆಚ್ಚು ಕಾಣಿಸಲು ಪ್ರಾರಂಭವಾಗುತ್ತದೆ. ಒಂದು ಇನ್ನೊಂದನ್ನು ಹೆಚ್ಚಿಸುತ್ತದೆ. ಇನ್ನಷ್ಟನ್ನು ಕಾಣುವತವಕ ಉಂಟಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ. ಈ ಕ್ರಿಯೆಯೇ ತುಂಬುತೃಪ್ತಿಯನ್ನು, ಒಂದು ಪೂರ್ಣತೆಯ ಭಾವವನ್ನು ತಂದುಕೊಡುವಂಥದ್ದು. ನಾವೆಲ್ಲಾ ಹಾತೊರೆಯುವುದು ಈ ಔತ್ತಮ್ಯಕ್ಕಾಗಿಯೇ. ಕಾಳಿದಾಸ, ಶೇಕ್ಸ್ಪಿಯರ್‌ ಎಲ್ಲಾ ಬಯಸಿದ್ದು ಈ ಔತ್ತಮ್ಯವನ್ನೇಕಣ್ರೀ  ಸ್ವಂತಿಕೆಯನ್ನಲ್ಲ”

ಸಂಗೀತದಲ್ಲಿ ನಾವು ಹುಡುಕೋದು ಹೊಸತನವನಲ್ಲ. ಹದ. ಹೊಸತನ ಹೊಸತನವಾಗಿ ಉಳಿಯೋದಿಲ್ಲ. ಹೊಸತನ ನೋಡಿದ ಮೇಲೆ ಇನ್ನೊಂದು ನೋಟಕ್ಕೆಅದು ಹೊಸತನವಾಗಿರೋದಿಲ್ಲ. ಆದರೆ ಜೀವನವಿಡೀ ಹದ ಮಾಡ್ತಾರ‍್ತೀವಿ. ನಮ್ಮಅಜ್ಜಿ ಮಾಡಿದಅದೇ ಸಾರು, ನಮ್ಮಗುರು ನುಡಿಸೋಅದೇರಾಗ, ನಾನು ನುಡಿಸುತ್ತಾಇರೋಅದೇರಾಗ, ಅದನ್ನು ಹದಗೊಳಿಸುತ್ತಾ ಹದಗೊಳಿಸ್ತಾ, ಹೋಗ್ತೀವಿ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮಹಾನ್‌ಕಲಾಕಾರತಂತ್ರಗಾರಿಕೆ ಹಾಗೂ ರಾಗವಿಸ್ತರಣೆಗಳ ಸಾಧ್ಯತೆಗಳನ್ನು ಇನ್ನೂ ಬೆಳೆಸುತ್ತಾನೆ. ಪ್ರತಿ ಸಂಗೀತಗಾರನ ಸಾಧನೆಗಳು ಅವನ ಮುಂದಿನ ಪೀಳಿಗೆಯ ಪಠ್ಯಕ್ರಮಆಗುತ್ತಾ ಹೋಗುತ್ತದೆ. ಬದಲಾವಣೆ ತುಂಬಾ ಸೂಕ್ಷ್ಮವಾಗುತ್ತಾ ಹೋಗುತ್ತದೆ. ಅದರಿಂದಾಗಿಯೇ ಯಮನ್‌ ಕಲ್ಯಾಣಿ ಅಥವಾ ದರ್ಬಾರಿ  ಎಷ್ಟು ಸಲ ಹಾಡಿದರೂ, ನುಡಿಸಿದರೂ  ಹೊಸತಾಗೇ  ಉಳಿಯುತ್ತದೆ.

ರಾಜೀವರ ತಾರಾನಾಥರ ಸಂಗೀತ, ಚಿಂತನೆ ನಮ್ಮ ಹಾಗೂ ಮುಂದಿನ ತಲೆಮಾರಿಗೆ ಪಠ್ಯವಾಗಿ ಉಳಿಯುತ್ತದೆ.

 

Donate Janashakthi Media

Leave a Reply

Your email address will not be published. Required fields are marked *