ನವದೆಹಲಿ: ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಇತ್ತೀಚೆಗೆ ಮಹಮ್ಮದ್ ಪೈಗಂಬರ್ ಅವರ ಬಗ್ಗೆ, ಧಾರ್ಮಿಕ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಇಂದು (ಜೂನ್ 10) ಮತ್ತೆ ದೇಶದ ವಿವಿದೆಡೆ ಪ್ರತಿಭಟನೆಗಳು ನಡೆದಿದ್ದು, ಹಲವೆಡೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಟಿವಿ ಸಂದರ್ಶನವೊಂದರಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ದೆಹಲಿಯ ಜಾಮಾ ಮಸೀದಿಯ ಹೊರಗೆ ಪ್ರತಿಭಟನೆ ನಡೆದಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ಕೋಲ್ಕತ್ತ ಹಾಗೂ ಹೈದರಾಬಾದ್ನಲ್ಲಿಯೂ ಜನರು ರಸ್ತೆಗಿಳಿಸಿದು ಪ್ರತಿಭಟಿಸಿದ್ದಾರೆ.
ದೆಹಲಿಯ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸುಮಾರು 1,500 ಮಂದಿ ಸೇರಿದ್ದರು. ಪ್ರಾರ್ಥನೆ ಮುಗಿಸಿ ಹೊರಬಂದ ಬಹುತೇಕರು ಪ್ರತಿಭಟನೆ ಆರಂಭಿಸಿದರು ಎಂದು ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.
‘ಎಐಎಂಐಎಂ ಅಥವಾ ಓವೈಸಿ ಅವರ ಜನರು ಪ್ರತಿಭಟನೆ ನಡೆಸುತ್ತಿರಬಹುದು. ಅವರು ಪ್ರತಿಭಟನೆ ನಡೆಸುವುದಾದರೆ ನಡೆಸಲಿ, ನಾವು ಅದಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ದೆಹಲಿ ಜಾಮಾ ಮಸೀದಿ ಶಾಹಿ ಇಮಾಮ್ ಹೇಳಿದ್ದಾರೆ.
ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ರಾಜ್ಯದ ಕಾನ್ಪುರ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ರಾಜ್ಯಾದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕಾನ್ಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಕಳೆದ ವಾರ (ಜೂನ್ 3) ಕಾನ್ಪುರದಲ್ಲಿ ಪ್ರಾರ್ಥನೆಯ ನಂತರ ಹಿಂಸಾತ್ಮಕ ಘಟನೆಗಳು ಜರುಗಿದ್ದವು. ಆದರೆ ಇಂದು ಕೂಡ ಮತ್ತೊಮ್ಮೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿರುವುದು ವರದಿಯಾಗಿವೆ. ಪ್ರಯಾಗರಾಜ್ ಜಿಲ್ಲೆಯ ಅಟಾಲಾ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
ಉತ್ತರ ಪ್ರದೇಶವಲ್ಲದೆ, ದೇಶದ ರಾಜಧಾನಿ ದೆಹಲಿಯಿಂದಲೂ ಹಿಂಸಾತ್ಮಕ ಘರ್ಷಣೆಗಳು ಮತ್ತು ಪ್ರತಿಭಟನೆಗಳ ನಡೆದಿರುವುದು ವರದಿಯಾಗಿದೆ. ಈ ಸಂದರ್ಭದಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಮುಸ್ಲಿಂ ಸಮುದಾಯದಲ್ಲಿ ಈ ಇಬ್ಬರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
ಇಂದು, ಶುಕ್ರವಾರದ ಪ್ರಾರ್ಥನೆಯ ನಂತರ, ಉತ್ತರ ಪ್ರದೇಶದ ಸಹರಾನ್ಪುರ, ಮೊರಾದಾಬಾದ್ ಮತ್ತು ಪ್ರಯಾಗ್ರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಜನರು ಜಮಾಯಿಸಿದರು. ಇದೇ ವೇಳೆ ಅಲ್ಲಾ-ಹು-ಅಕ್ಬರ್ ನಾರಾ-ಎ-ತಕ್ಬೀರ್ ಎಂಬ ಘೋಷಣೆಗಳೂ ಸಹ ಕೇಳಿಬಂದಿವೆ. ಈ ವೇಳೆ ಪೊಲೀಸರು ಜನರ ಮನವೊಲಿಸಲು ಯತ್ನಿಸಿದ್ದು, ಇದು ಕ್ರಮೇಣ ಘರ್ಷಣೆಗೆ ತಿರುಗಿದೆ.
ಪ್ರಯಾಗರಾಜ್ನ ಅತಾಲಾ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮನೆಗಳು, ಅಂಗಡಿ-ಮುಗ್ಗಟ್ಟುಗಳ ಮೇಲ್ಛಾವಣಿಯ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಘಟನೆ ತೀವ್ರಗೊಳ್ಳುತ್ತಿದ್ದಂತೆ, ಆರ್ಎಎಫ್ ಮತ್ತು ಪಿಎಸಿ ಲಾಠಿ ಚಾರ್ಜ್ ಮಾಡಿ ಉದ್ರಿಕ್ತರನ್ನು ಚದುರಿಸಿದ್ದಾರೆ.
#WATCH | Protesters Beaten With Sticks By Cops During Arrest In #UttarPradesh's Prayagraj pic.twitter.com/O2Bt2jxJ20
— NDTV (@ndtv) June 10, 2022
ಸದ್ಯ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾರಿಸಿದ್ದು, ಗುಂಪಿನಲ್ಲಿ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವ ರೀತಿ ಸ್ಥಳೀಯ ಗುಪ್ತಚರ ಘಟಕದ (ಎಲ್ಐಯು) ವೈಫಲ್ಯವನ್ನು ಎತ್ತಿ ತೋರಿಸಿದೆ.
ಪ್ರಯಾಗ್ರಾಜ್ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ. ಡಿಜಿಪಿ ಡಿಎಸ್ ಚೌಹಾಣ್, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಅವರು ಲಕ್ನೋ ಪೊಲೀಸ್ ಹೆಡ್ ಕ್ವಾರ್ಟರ್ ಕಂಟ್ರೋಲ್ ರೂಂನಲ್ಲಿದ್ದಾರೆ.
ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಎಡಿಜಿ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾಕಾರರು ಪ್ರಯಾಗ್ರಾಜ್ನ ಎಡಿಜಿ ಅವರ ವಾಹನವನ್ನು ಜಖಂಗೊಳಿಸಿದ್ದಾರೆ.
ಮಸೀದಿಗಳ ಮುಂದೆ ಮುಸ್ಲಿಂ ಸಮುದಾಯದವರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಜಮ್ಮು, ದೆಹಲಿ, ಲಕ್ನೋ, ಬೆಳಗಾವಿ, ಸಹರನ್ಪೂರ್, ಮೊರಾದಾಬಾದ್ ಸ್ಥಳಗಳಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿವೆ. ಕೆಲವೆಡೆ ಹಿಂಸಾತ್ಮಾಕ ಘರ್ಷಣೆಗಳು ನಡೆದಿವೆ.
ಕೋಲ್ಕತ್ತದಲ್ಲಿ 300ಕ್ಕೂ ಹೆಚ್ಚಿನ ಜನರು ಪ್ರಾರ್ಥನೆ ಬಳಿಕ ಭಿತ್ತಿಪತ್ರಗಳನ್ನು ಹಿಡಿದು ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟಯನ್ನು ನಡೆಸಿದ್ದಾರೆ.
ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಬುರ್ಕಾ ಧರಿಸಿ ಬೀದಿಗಿಳಿದು ಮಹಿಳೆಯರ ಪ್ರತಿಭಟನೆ ನಡೆಸಿದರು. ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಂಐಎಂ ಕಾರ್ಯಕರ್ತರು ನಮಾಜ್ ಮಾಡಿ ವಿಶೇಷ ರೀತಿಯಲ್ಲಿ ಪ್ರತಿಭಟಿಸಿದರು.
ಜಮ್ಮು-ಕಾಶ್ಮೀರದ ವಿವಿಧೆಡೆ ಭಾರಿ ಪ್ರತಿಭಟನೆಗಳು ನಡೆದಿವೆ. ಇದರಿಂದಾಗಿ ಜಮ್ಮುವಿನ ಭದರ್ವಾ,ಕಿಶ್ತ್ವಾರ್ ಭಾಗದ ಕೆಲವು ಕಡೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಭದರ್ವಾ ಪಟ್ಟಣದಲ್ಲಿ ಕೆಲವು ಕಲ್ಲು ತೂರಾಟದ ಘಟನೆಗಳು ನಡೆದಿವೆ. ಕೆಲವರು ನಿರ್ಬಂಧಗಳನ್ನು ಉಲ್ಲಂಘಿಸಿ, ಭದ್ರತೆ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಭಾಗದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಹ ತಡೆ ಹಿಡಿಯಲಾಗಿದೆ.
ಹೈದರಾಬಾದ್ನ ಮೆಕ್ಕಾ ಮಸೀದಿಯ ಹೊರಭಾಗದಲ್ಲಿ ಪ್ರತಿಭಟನೆಗೆ ಜಮಾಯಿಸಿದ್ದ ಜನರನ್ನು ಪೊಲೀಸರು ಮಧ್ಯ ಪ್ರವೇಶಿಸಿ ಚದುರಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಮತ್ತು ಸಿಆರ್ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಪಂಜಾಬ್ನ ಲೂಧಿಯಾನಾದಲ್ಲಿ ಜಾಮಾ ಮಸೀದಿ ಪ್ರತಿಭಟನೆಗೆ ಕರೆಕೊಟ್ಟಿದೆ. ಪಂಜಾಬ್ನ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಪ್ರಕರಣ ದಾಖಲು: ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ವಿರುದ್ಧ ಇಂದು ಮುಜಾಫ್ಫರಪುರ ನಗರದಲ್ಲಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಎಂ. ರಾಜು ನಾಯರ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.
ದೂರಿನಲ್ಲಿ ಸ್ವಾಮಿ ಯತಿ ನರಸಿಂಗಾನಂದ ಅವರನ್ನೂ ಸಹ ಆರೋಪಿಯೆಂದು ಉಲ್ಲೇಖಿಸಲಾಗಿದ್ದು, ಶರ್ಮಾ, ನವೀನ್ ಜಿಂದಾಲ್ ಮತ್ತು ನರಸಿಂಗಾನಂದ ಅವರ ಹೇಳಿಕೆಗಳು ಕೋಮು ಗಲಭೆಗಳಿಗೆ ಪ್ರಚೋದನೆ ನೀಡಲಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.