ಸಿಧಿ : ಬಿಜೆಪಿ ಶಾಸಕನ ವಿರುದ್ಧ ಪೋಸ್ಟ್ ಹಾಕಿದ್ದ ರಂಗಭೂಮಿ ಕಲಾವಿದ ನೀರಜ್ ಕುಂದರ್ ಬಂಧನದ ಸುದ್ದಿಯನ್ನು ಮಾಡಲು ತೆರಳಿದ್ದ ಪತ್ರಕರ್ತರನ್ನು ಪೊಲೀಸರು ಅರೆ ಬೆತ್ತಲೆಯಾಗಿ ಠಾಣೆಯಲ್ಲಿ ಕೂಡಿ ಹಾಕಿ ಅವಮಾನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಏಪ್ರಿಲ್ 2ರಂದು ಈ ಘಟನೆ ನಡೆದಿದ್ದು, ಎಂಟು ಮಂದಿಯನ್ನು ಬಂಧಿಸಿರುವ ಪೊಲೀಸರು ಅವರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಸ್ವತಃ ಪತ್ರಕರ್ತನೇ ಮಾಹಿತಿ ನೀಡಿದ್ದಾನೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಫೋಟೋಗಳು ವೈರಲ್ ಆದ ನಂತರ ವಿಚಾರ ಬೆಳಕಿಗೆ ಬಂದಿದೆ.
ನಡೆದಿದ್ದೇನು? : ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ರಂಗಭೂಮಿ ಕಲಾವಿದ ನೀರಜ್ ಕುಂದರ್ ಎಂಬುವರನ್ನು ಕೊತ್ವಾಲಿ ಪೊಲೀಸರು ಬಂಧಿಸಿದ್ದರು. ನೀರಜ್ ಕುಂದರ್ ಬಂಧನವನ್ನು ಖಂಡಿಸಿ, ಇತರ ರಂಗಭೂಮಿ ಕಲಾವಿದರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದ್ದರು. ಈ ಪ್ರತಿಭಟನೆಯನ್ನು ವರದಿ ಮಾಡಲು ಸ್ಥಳೀಯ ಚಾನೆಲ್ನಲ್ಲಿ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಮತ್ತು ತನ್ನದೇ ಯುಟ್ಯೂಬ್ ಚಾನೆಲ್ ಹೊಂದಿರುವ ಕನಿಷ್ಕ್ ತಿವಾರಿ ತಮ್ಮ ಕ್ಯಾಮೆರಾಮನ್ನೊಂದಿಗೆ ತೆರಳಿದ್ದರು.
ಘಟನೆಯ ವರದಿ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರು ಮತ್ತು ಪತ್ರಕರ್ತರನ್ನು ಬಂಧಿಸಿದ್ದಾರೆ. ನಂತರ ಅವರನ್ನು ಸುಮಾರು 18 ಗಂಟೆಗಳ ಕಾಲ ಲಾಕಪ್‍ನಲ್ಲಿ ಇರಿಸಲಾಗಿದ್ದು, ಥಳಿಸಿ, ಎಲ್ಲರ ಬಟ್ಟೆಗಳನ್ನು ಬಿಚ್ಚಿಸಿ, ಅರೆ ನಗ್ನವಾಗಿಸಲಾಗಿದೆ. ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ಒಂದು ದಿನದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆತ್ತಲೆ ಮೆರವಣಿಗೆ ಮಾಡುವ ಬೆದರಿಕೆ : ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಕನಿಷ್ಕ್ ತಿವಾರಿ, ‘ಪೊಲೀಸ್ ಠಾಣೆಯ ಉಸ್ತುವಾರಿಯಾಗಿರುವ ಅಭಿಷೇಕ್ ಸಿಂಗ್ ಪರಿಹಾರ್ ಅವರು ಶಾಸಕ ಕೇದಾರ್ನಾಥ್ ಶುಕ್ಲಾ ವಿರುದ್ಧ ವರದಿ ಮಾಡಿದರೆ ನನ್ನನ್ನು ಮತ್ತು ಇತರರನ್ನು ನಗರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ನಮ್ಮನ್ನು ಬಂಧಿಸಲಾಗಿದ್ದು, ಬಟ್ಟೆಗಳನ್ನು ತೆಗೆಯುವಂತೆ ಮಾಡಿದ್ದಾರೆ. ಮರುದಿನ ಸಂಜೆ 6 ಗಂಟೆಯವರೆಗೆ ಥಳಿಸಿ, ಕಿರುಕುಳ ನೀಡಲಾಗಿದೆ’ ಎಂದಿದ್ದಾರೆ.’ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಅಭಿಷೇಕ್ ಸಿಂಗ್ ಪರಿಹಾರ್ ಅವರು ಕ್ಲಿಕ್ಕಿಸಿದ್ದಾರೆ. ಫೋಟೋದಲ್ಲಿರುವುದು ನಾನು ಮತ್ತು ನನ್ನ ಕ್ಯಾಮೆರಾಮನ್ ಹಾಗೂ ಉಳಿದವರು ರಂಗಭೂಮಿ ಕಲಾವಿದರು ಹಾಗೂ ಆರ್ಟಿಐ ಕಾರ್ಯಕರ್ತರಾಗಿದ್ದಾರೆ.
ಸ್ಥಳೀಯ ಶಾಸಕ ಕೇದಾರನಾಥ್ ಶುಕ್ಲಾ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ ಕುಂದರ್ ಅವರನ್ನು ಬಂಧಿಸಲಾಗಿದೆ. ಕುಂದರ್ ಬಂಧನವನ್ನು ವಿರೋಧಿಸಿ ಇತರ ರಂಗಭೂಮಿ ಕಲಾವಿದರು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯನ್ನು ವರದಿ ಮಾಡಲು ನಾನು ಸ್ಥಳಕ್ಕೆ ತೆರಳಿದ್ದೆ ಎಂದು ಕನಿಷ್ಕ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸೀಧಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಕುಮಾರ್, ‘ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿದ್ದು, ಪೊಲೀಸರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಬಾರದು ಎಂದು ಮನವಿ ಮಾಡಿದರೂ ಅವರು ಕೇಳಲಿಲ್ಲ. ಆದ್ದರಿಂದ ತಡರಾತ್ರಿ ಅವರನ್ನು ಬಂಧಿಸಲಾಗಿದೆ. ವೈರಲ್ ಆಗಿರುವ ಫೋಟೋ ಬಗ್ಗೆಯೂ ತಿಳಿದಿದ್ದು, ಆ ಫೋಟೋ ಯಾವಾಗ ತೆಗೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪತ್ರಕರ್ತರನ್ನು ಅವಮಾನಿಸಿದ ಪೊಲೀಸರ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಪೊಲೀಸರ ಮೇಲೆ ಕ್ರಮ ಜರುಗಿಸುವಂತೆ ಪತ್ರಕರ್ತರ ಸಂಘಟನೆಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.