ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತಾ ಕಾನೂನನ್ನು ವಿರೋಧಿಸಿ ಟ್ರಕ್ ಮತ್ತು ಬಸ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು, ಸತತ ಎರಡನೇ ದಿನವೂ ರಾಷ್ಟ್ರದಾದ್ಯಂತ ಪ್ರಯಾಣಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಪ್ರತಿಭಟನೆಯ ಪರಿಣಾಮವಾಗಿ ದೇಶಾದ್ಯಂತದ ವಿವಿಧ ನಗರಗಳ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಬಸ್ ನಿರ್ವಾಹಕರು ಮತ್ತು ಚಾಲಕರು ಸಹ ಮುಷ್ಕರದಲ್ಲಿ ತೊಡಗಿದ್ದರಿಂದ ಪ್ರಯಾಣಿಕರು ಕೂಡಾ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಟ್ರಕ್ ಮುಷ್ಕರದಿಂದಾಗಿ ಪೆಟ್ರೋಲ್, ತರಕಾರಿಗಳು, ಹಣ್ಣುಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಯ ಮೇಲೆಯೂ ಪರಿಣಾಮ ಬೀರಿದೆ. ಪ್ರತಿಭಟನೆ ಕೈಬಿಡದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದ್ದು, ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ವಿಳಂಬವಾದರೆ ಬಿಜೆಪಿಗೆ ನೆರವು | ಕಾಂಗ್ರೆಸ್‌ಗೆ ಪ್ರಕಾಶ್ ಅಂಬೇಡ್ಕರ್ ಚಾಟಿ
ಟ್ರಕ್ ಮತ್ತು ಬಸ್ ಚಾಲಕರ ಜೊತೆಗೆ ಪೆಟ್ರೋಲ್ ಪಂಪ್‌ಗಳು ಕೂಡಾ ಪ್ರತಿಭಟನೆಗೆ ಕೈಜೋಡಿಸಿದೆ. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿರುದ್ಧ ಅವರು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ನಿಬಂಧನೆಗಳು ಹೊಂದಿದ್ದು, ಅದರಲ್ಲಿ ಹಿಟ್-ಅಂಡ್-ರನ್ ಪ್ರಕರಣಗಳಲ್ಲಿನ ಹೊಸ ದಂಡದ ಕ್ರಮಗಳು ಚಾಲಕರಲ್ಲಿ ಆತಂಕ ಹೆಚ್ಚಿಸಿವೆ.
ಹಿಟ್ ಆಂಡ್ ರನ್ ಮತ್ತು ಮಾರಣಾಂತಿಕ ಅಪಘಾತಗಳನ್ನು ವರದಿ ಮಾಡದೆ ಇದ್ದರೆ ಸುಮಾರು 10 ವರ್ಷಗಳ ಜೈಲು ಶಿಕ್ಷೆಯ ಬಗ್ಗೆ ಇದರಲ್ಲಿ ಸೇರಿಸಲಾಗಿದೆ. ದೇಶದಲ್ಲಿ ಈ ಹಿಂದೆ ಇದ್ದ ಕಾನೂನಿನ ಅಡಿಯಲ್ಲಿ, ಚಾಲಕರ ವಿರುದ್ಧ IPC ಸೆಕ್ಷನ್ 304A (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿತ್ತು. ಹೊಸ ನಿಬಂಧನೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾನಿರತ ಚಾಲಕರು ಒತ್ತಾಯಿಸುತ್ತಿದ್ದು, ಕಠಿಣ ದಂಡವು ತಮ್ಮ ಜೀವನೋಪಾಯಕ್ಕೆ ಅಪಾಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ನಾಲ್ವರ ಗುಂಡಿಕ್ಕಿ ಹತ್ಯೆ, 5 ಜಿಲ್ಲೆಗಳಲ್ಲಿ ಕರ್ಫ್ಯೂ
ಬುಲಂದ್‌ಶಹರ್‌ನ NH-34 ನಲ್ಲಿ, ಚಾಲಕರ ಗುಂಪು ರಸ್ತೆಯಲ್ಲಿ ಜಮಾಯಿಸಿ ಕಾನೂನನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ರಸ್ತೆ ತಡೆ ಮಾಡಿದ್ದಾರೆ ಎಂದು TOI ವರದಿ ಮಾಡಿದೆ. ಈ ವೇಳೆ ಮಾತನಾಡಿದ 46 ವರ್ಷದ ಟ್ರಕ್ ಚಾಲಕ ಜಗತ್ ಪಾಲ್ ಶರ್ಮಾ ಅವರು, “ನಾವು ಕೇವಲ 10,000-12,000 ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಿದ್ದೇವೆ. ಹೀಗಿರುವಾಗ ಲಕ್ಷಗಟ್ಟಲೆ ದಂಡ ಕಟ್ಟಲು ಹೇಗೆ ಸಾಧ್ಯ? ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ನಾವು ಇತರ ಕೆಲವು ಕೆಲಸಗಳತ್ತ ಹೊರಳಬೇಕಾಗುತ್ತದೆ. ಈ ಕಾನೂನು ನಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ” ಎಂದು ಹೇಳಿದ್ದಾರೆ.
ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ಅಪಘಾತ ನಡೆದರೆ ಚಾಲಕರ ಮೇಲೆ ಅಲ್ಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಾರೆ. ಒಂದು ವೇಳೆ ಅವರು ಓಡಿಹೋದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಒಕ್ಕೂಟಗಳು ಮತ್ತು ಚಾಲಕರು ಆತಂಕ ವ್ಯಕ್ತಪಡಿಸಿವೆ. ಕಾನೂನನ್ನು ತಿದ್ದುಪಡಿ ಮಾಡುವ ಮೊದಲು ಮಧ್ಯಸ್ಥಗಾರರೊಂದಿಗೆ ಕೂಡಾ ಸರ್ಕಾರ ಸಮಾಲೋಚನೆ ನಡೆಸಬೇಕಿತ್ತು ಎಂದು ಅವರು ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಕಾನೂನಿನ ನ್ಯೂನತೆಗಳನ್ನು ಎತ್ತಿ ತೋರಿಸಿರುವ ಅವರು, ಸಾರಿಗೆದಾರರು ಮತ್ತು ಚಾಲಕರು ದೇಶದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ವಿಡಿಯೊ ನೋಡಿ: ಮೃಣಾಲ್ ಸೆನ್ 100 : ಒಕ ಊರಿ ಕಥಾ ದಲ್ಲಿ ಕಾಣುವ ತೆಲಂಗಾಣ ಊಳಿಗಮಾನ್ಯ ವ್ಯವಸ್ಥೆ Janashakthi Media