ಪೆಟ್ರೋಲ್ ದರ ಏರಿಕೆ ಮತ್ತು ಜಿಜೆಪಿ ನಾಯಕರ ಕಪಟತನದ ಪ್ರತಿಭಟನೆ

– ಸಿ.ಸಿದ್ದಯ್ಯ

ನಿಜವಾಗಿಯೂ ಬಿಜೆಪಿ ನಾಯಕರು ಜನರ ಸಂಕಷ್ಟಗಳಿಗೆ ಮರುಗುತ್ತಿದ್ದಾರೆಯೇ? ಪೆಟ್ರೋಲ್,  ಡೀಸಲ್ ಬೆಲೆ ಏರಿಕೆ ಜನರನ್ನು ಭಾದಿಸುತ್ತಿವೆ ಎಂದು ಇವರಿಗೆ ನಿಜವಾಗಿಯೂ ಅನಿಸುತ್ತಿದೆಯೇ? ಖಂಡಿತಾ ಇಲ್ಲ. ಬಿಜೆಪಿಯವರಿಗೆ ಆ ರೀತಿ ಅನಿಸಿದ್ದರೆ, ಹತ್ತು ವರ್ಷಗಳಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲಿಯಂ ಪದಾರ್ಥಗಳ ಮೇಲೆ ವಿಪರೀತ ತೆರಿಗೆ ಹೆಚ್ಚಳ ಮಾಡಿದಾಗ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದ ಸಂದರ್ಭದಲ್ಲಿಯೂ, ರಷ್ಯಾ-ಉಕ್ರೇನ್ ನಡುವಿನ ಬಿಗುವಿನ ವಾತಾವರಣದಿಂದಾಗಿ ರಷ್ಯಾ ತೈಲವನ್ನು ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಂಡರೂ, ಅದರ ಇಳಿಕೆಯ ಲಾಭವನ್ನು ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸದಿದ್ದಾಗ…. ಇಂತಹ ಯಾವುದೇ ಸಂದರ್ಭದಲ್ಲಿಯೂ ಬಿಜೆಪಿ ಒಮ್ಮೆಯೂ ಪ್ರತಿಭಟನೆ ಮಾಡಲಿಲ್ಲ. ಕನಿಷ್ಟ ಪಕ್ಷ, ಇದು ಜನರಿಗೆ ಹೊರೆಯಾಗುತ್ತದೆ ಎಂದು ಬಾಯಿಮಾತಿಗಾದರೂ ರಾಜ್ಯದ ಬಿಜೆಪಿ ನಾಯಕರು ಹೇಳಲಿಲ್ಲ.

ರಾಜ್ಯದ ಕಾಂಗ್ರೆಸ್ ಸರ್ಕಾರ ಜೂನ್ 15 ರಂದು  ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ರೂ. 3 ಮತ್ತು ರೂ. 3.02 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಹೆಚ್ಚಿಸಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕ್ರಮವಾಗಿ ಶೇ.29.84 ಮತ್ತು ಶೇ.18.44 ಕ್ಕೆ ಹೆಚ್ಚಿದೆ. ಇದರ ನಂತರ ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್‌  ಗೆ 102.86 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌  ಗೆ 88.94 ರೂ. ಅಗಿದೆ.

ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯದ ಜನತೆಯ ಮೇಲೆ ಬಿಜೆಪಿಯವರಿಗೆ ಇದ್ದಕ್ಕಿದ್ದಂತೆ ಕನಿಕರ ಹುಟ್ಟಿಕೊಂಡಿದೆ.  ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ಬಿಜೆಪಿ ದ್ವನಿ ಎತ್ತಿದೆ, ರಾಜ್ಯದ ಹಲವೆಡೆಗಳಲ್ಲಿ ಪ್ರತಿಭಟನೆಯನ್ನೂ ಮಾಡಿದೆ. ಈ ತೆರಿಗೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ನಾಯಕ ಆರ್. ಅಶೋಕ ಅವರು ಎಂದಿನ ತಮ್ಮದೇ ‘ಶೈಲಿ’ಯಲ್ಲಿ ”ಕಾಂಗ್ರೆಸ್ಸಿನವರು ಜನರ ತಲೆ ಮೇಲೆ ಚಪ್ಪಡಿ ಕಲ್ಲನ್ನೇ ಹಾಕಿದ್ದಾರೆ, ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಜಾಸ್ತಿ ಆಗುತ್ತದೆ, ಸಿದ್ದರಾಮಯ್ಯನಿಗೆ ಮಾನ, ಮರ್ಯಾದೆ ಏನಾದರೂ ಇದೆಯಾ?….” ಹೀಗೆ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಬಿಜೆಪಿಯ ಇತರೆ ಕೆಲ ನಾಯಕರ ಮಾತುಗಳೂ ಇದೇ ದಾಟಿಯಲ್ಲಿದ್ದವು. ರಾಜ್ಯ ಸರ್ಕಾರವನ್ನು ಈ ರೀತಿ ದೂರುವಾಗ ಇವರ ಮುಖದಲ್ಲಿ ಆಕ್ರೋಶ ಎದ್ದು ಕಾಣುತ್ತಿತ್ತು. ಜನರ ಸಂಕಷ್ಟಗಳು ಬಿಜೆಪಿ ನಾಯಕರನ್ನು ಎಷ್ಟೊಂದು ತಟ್ಟಿದೆ ಅನಿಸುವಂತಿತ್ತು ಇವರ ಮಾತುಗಳು ಮತ್ತು ಹಾವಭಾವಗಳು!!!

ಇದರಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗಿ ಸರಕುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ, ರಸ್ತೆ ಪ್ರಯಾಣ ದರ ಏರಿಕೆಗೆ ಕಾರಣವಾಗುತ್ತದೆ, ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೆಲ್ಲವೂ ಸತ್ಯ. ಆದರೆ, ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 50 ಸಾವಿರ ಕೋಟಿ ರೂಪಾಯಿ ಹಣ ಬೇಕಾಗುತ್ತದೆ. ಇದನ್ನು ಸರಿದೂಗಿಸಲು ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಆದಾಯ ಕ್ರೋಡೀಕರಿಸಲು ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ, ರಾಜ್ಯ ಸರ್ಕಾರದ ಯೋಜನೆಗಳಿಗೆ ಹಣದ ಕೊರತೆಯಾಗದಂತೆ, ಸಂಪನ್ಮೂಲ ಕ್ರೋಢೀಕರಣ ಹೇಗೆಂಬುದರ ಬಗ್ಗೆ ಸಲಹೆ ನೀಡಬೇಕಿರುವುದು ವಿರೋಧ ಪಕ್ಷಗಳಿರಬೇಕಾದ ನಿಜವಾದ ಕಾಳಜಿ. ಆದರೆ, ಈ ಮಾತನಾಡುವಾಗಲೂ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಾಯಕರು ಟೀಕಿಸುತ್ತಾರೆ!!

ಮಾರ್ಕ್ಸ್ ವಾದಿ ಕಮ್ಯೂನಿಸ್ಟ್  ಪಕ್ಷ (ಸಿಪಿಎಂ) ಹೇಳುವಂತೆ, ಜನಸಾಮಾನ್ಯರ ಕೊಳ್ಳುವ ಶಕ್ತಿ ಅಲ್ಪ ಮಟ್ಟಿಗಾದರೂ ವೃದ್ಧಿಸಬೇಕಾದರೆ, ಜನರ ಬದುಕಿಗೆ ಒಂದಷ್ಟು ನೆರವಾಗುತ್ತಿರುವ ‘ಗ್ಯಾರಂಟಿ’ಗಳು ಮುಂದುವರಿಯಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಮತ್ತು ಅನುದಾನಗಳನ್ನು ಒತ್ತಡದ ಪಡೆಯುವ ಮೂಲಕ ಮತ್ತು ತೆರಿಗೆ ಸಂಗ್ರಹದಲ್ಲಿನ ಸೋರಿಕೆ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ಮೂಲಕ ಸರ್ಕಾರಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು.

ಬಿಜೆಪಿ ಹೋರಾಟದಲ್ಲಿ ಪ್ರಮಾಣಿಕತೆ ಇದೆಯೇ?

ವಿರೋಧ ಪಕ್ಷಗಳು ಸರ್ಕಾರದ ಜನವಿರೋಧಿ ಕ್ರಮಗಳನ್ನು ವಿರೋಧಿಸುವುದು ಸರಿಯಾದ ವಿಧಾನವೇ ಆಗಿದೆ. ಆದರೆ, ಬಿಜೆಪಿಯವರ ಈ ಹೋರಾಟದಲ್ಲಿ ನಿಜವಾಗಿಯೂ ಪ್ರಮಾಣಿಕತೆ ಇದೆಯೇ? ಬೆಲೆ ಏರಿಕೆಯಿಂದ ತ್ತರಿಸುತ್ತಿರುವ ರಾಜ್ಯದ ಜನರ ನೋವನ್ನು ನಿಜವಾಗಿಯೂ ಅರಿತು, ಜನರನ್ನು ಅದರಿಂದ ಬಿಡುಗಡೆ ಮಾಡಬೇಕು ಎಂಬ ನಿಜವಾದ ಕಾಳಜಿ ಬಿಜೆಪಿಯವರಿಗೆ ಇದೆಯೇ? ಕಳೆದ ಹತ್ತು ವರ್ಷಗಳಿಂದ ಬೆಲೆ ಏರಿಕೆ ವಿರುದ್ದ ಹೋರಾಟ ನಡೆಸದ ಬಿಜೆಪಿಗೆ ಈಗ ಲೋಕಸಭಾ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಕಳೆದುಕೊಂಡ ನಂತರ ಜ್ಞಾನೋಧಯವಾಯಿತೆ? ಅಥವಾ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿದ್ದು ಮಾತ್ರವೇ ಜನತೆಗೆ ಹೊರೆ, ಬಿಜೆಪಿ ಆಡಳಿತದ ಕೇಂದ್ರ ಅಥವಾ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿನ ಸಂದರ್ಭದಲ್ಲಿ ಆದ ಬೆಲೆ ಏರಿಕೆ ರಾಜ್ಯದ ಜನತೆಗೆ ಹೊರೆಯಲ್ಲವೆ?

ಬಿಜೆಪಿಯವರಿಗೆ ಖಂಡಿತವಾಗಿಯೂ ಜನಪರ ಖಾಳಜಿ ಇಲ್ಲ. ಅಂತಹ ಕಾಳಜಿ ಅವರಿಗಿದ್ದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಏರಿಕೆಯ ವಿರುದ್ದ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ  ಮೋದಿ ಸರ್ಕಾರ ಹಲವು ಪಟ್ಟು ತೆರಿಗೆ ಹೆಚ್ಚಳ ಮಾಡಿ ಬೆಲೆ ಏರಿಕೆಗೆ ಕಾರಣವಾದಾಗ, ಅಡುಗೆ ಅನಿಲದ ಬೆಲೆ ಮೂರು ಪಟ್ಟು ಹೆಚ್ಚಾದಾಗ ರಾಜ್ಯದ ಬಿಜೆಪಿ ನಾಯಕರು ಒಂದೇ ಒಂದು ದ್ವನಿ ಎತ್ತಲಿಲ್ಲವೇಕೆ? ಮೋದಿ ಸರ್ಕಾರದ ತೆರಿಗೆ ಹೆಚ್ಚಳ ಮತ್ತು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಹೆಚ್ಚಳವನ್ನು ಬಿಜೆಪಿಯವರು ಸಮರ್ಥಿಸಿಕೊಂಡಿದ್ದನ್ನು ನೋಡಿದ್ದೇವೆ. ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳದ ವಿರುದ್ದ ಹೋರಾಟ ನಡೆಸುವ ಇದೇ ಸಂದರ್ಭದಲ್ಲಿಯೇ ಟೋಲ್ ರಸ್ತೆಗಳಲ್ಲಿ ಟೋಲ್ ದರವನ್ನು ಶೇ. 5 ರಷ್ಟು ಏರಿಕೆ ಮಾಡಿರುವ ಬಗ್ಗೆ ಬಿಜಪಿ ನಾಯಕರು ಮಾತನಾಡಲಿಲ್ಲ.

ಕಚ್ಚಾ ತೈಲದ ಬೆಲೆ ಇಳಿದರೂ ಇಲ್ಲಿ ಇಳಿಕೆಯಾಗಲಿಲ್ಲ

ಕಚ್ಚಾ ತೈಲದ ಆಮದು ಬೆಲೆ ಪ್ರಪಂಚದಾದ್ಯಂತ ಕುಸಿಯುತ್ತಿರುವ ಸಮಯದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಾಸ್ತವವಾಗಿ ಇಂಧನದ ಮೇಲಿನ ತೆರಿಗೆಯನ್ನು ಹೆಚ್ಚಿಸಿತು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿಯೂ ಸಹ, ಆಮದು ಮಾಡಿಕೊಂಡ ಅಗ್ಗದ ರಷ್ಯಾದ ಕಚ್ಚಾ ತೈಲದ ಪ್ರಯೋಜನಗಳನ್ನು ಇಂಧನದ ಚಿಲ್ಲರೆ ಮಾರಾಟದ ಬೆಲೆಗೆ ವರ್ಗಾಯಿಸಲಾಗಿಲ್ಲ. ಇದು ಒಟ್ಟಾರೆ ಹಣದುಬ್ಬರ ದರವನ್ನು ನಿರಂತರವಾಗಿ ಹೆಚ್ಚುವಂತೆ ಮಾಡಿತು. ಜನವರಿ 2014 ರಿಂದ ಜನವರಿ 2023 ರವರೆಗೆ ಶೇಕಡಾವಾರು ಆಧಾರದ ಮೇಲೆ ಲೆಕ್ಕಹಾಕಲಾದ ರಾಜ್ಯ ಸರ್ಕಾರದ ವ್ಯಾಟ್‌ಗಿಂತ ಕೇಂದ್ರೀಯ ಅಬಕಾರಿ ಸುಂಕಗಳು ಹೆಚ್ಚಿನ ಪಾಲನ್ನು ಹೊಂದಿವೆ.

ರೂ. 3.56 ಇದ್ದ ಅಬಕಾರಿ ಸುಂಕ 31.83 ಕ್ಕೆ ಏರಿತ್ತು

2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಲೀಟರ್  ಗೆ ರೂ 9.48 ಮತ್ತು ಡೀಸೆಲ್ ಮೇಲೆ ರೂ 3.56 ಆಗಿತ್ತು, ಅದು ಮೇ 2020 ರಲ್ಲಿ ಕ್ರಮವಾಗಿ ರೂ 32.98 ಮತ್ತು ರೂ 31.83 ರ ವರೆಗೂ ಏರಿತ್ತು. ಅಂದರೆ, 2020ರ ಆಗಸ್ಟ್  ವರೆಗಿನ 6 ವರ್ಷಗಳ ಮೋದಿ ಆಡಳಿತದಲ್ಲಿ ಪೆಟ್ರೋಲ್  ಮೇಲಿನ ಅಬಕಾರಿ ಸುಂಕವನ್ನು ಹಿಂದಿನದಕ್ಕಿಂತ 23.50 ರೂ. ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 28.27 ರೂಪಾಯಿ ಹೆಚ್ಚಳ ಮಾಡಲಾಗಿತ್ತು.

ಆಗಸ್ಟ್ 2022 ರಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಸಂಸತ್ತಿಗೆ ನೀಡಿದ ಲಿಖಿತ ಉತ್ತರದ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 13 ರೂಪಾಯಿ ಮತ್ತು 16 ರೂಪಾಯಿಗಳನ್ನು ನವೆಂಬರ್ 2021 ಮತ್ತು ಮೇ 2022 ರ ನಡುವೆ ಕಡಿತಗೊಳಿಸಲಾಯಿತು.

ಇದನ್ನು ಓದಿ : ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮುಖ್ಯಮಂತ್ರಿ ಸಹಮತ

ಸಚಿವರ ಉತ್ತರದ ಪ್ರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2022 ರ ಆಗಸ್ಟ್  ನಲ್ಲಿ ಲೀಟರ್  ಗೆ 19.90 ರೂ ಮತ್ತು ಡೀಸೆಲ್ ಮೇಲೆ 15.80 ರೂ. ಇತ್ತು. ಅಬಕಾರಿ ಸುಂಕ ಕಡಿತದ ಹೊರತಾಗಿಯೂ, ಕಳೆದ 10 ವರ್ಷಗಳ ಹಿಂದಿನ ಅಬಕಾರಿ ತೆರಿಗೆ (9.48 ರೂ.)ಗಿಂತ ಪೆಟ್ರೋಲ್  ಮೇಲೆ 10.42 ರೂ. ಹಾಗೂ ಡೀಸೆಲ್  ಮೇಲೆ (3.56 ರೂ.) 12.24 ರೂ. ಹೆಚ್ಚಾಗಿದೆ. ಅಬಕಾರಿ ಸುಂಕವನ್ನು ಪೆಟ್ರೋಲ್  ಮತ್ತು ಡೀಸೆಲ್  ನ ಮೂಲಬೆಲೆಗೆ ನಿಗದಿ ಮಾಡುವುದರಿಂದ ರಾಜ್ಯ ಸರ್ಕಾರಗಳು ಶೇಕಡಾವಾರು ವಿಧಿಸುವ ವ್ಯಾಟ್ ಸಹಾ ಹೆಚ್ಚಾಗುತ್ತದೆ.

ಅಂತರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಎಂದಿದ್ದರು

ಸುಮಾರು ಒಂದು ದಶಕದ ಹಿಂದೆ ಪೆಟ್ರೋಲಿಯಂ ಪದಾರ್ಥಗಳ ಮೇಲಿದ್ದ ಸರ್ಕಾರದ ನಿಯಂತ್ರಣ ಹಿಂಪಡೆದು, ಅವುಗಳ ದರ ನಿಗದಿಯನ್ನು ತೈಲ ಕಂಪನಿಗಳಿಗೆ ಬಿಟ್ಟಾಗ ಸರ್ಕಾರ ಹೇಳಿದ್ದು ಹೀಗೆ: “ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ದೇಶದಲ್ಲಿನ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಯಾ ಉತ್ಪನ್ನಗಳ ಬೆಲೆಗೆ ಸಂಬಂಧಿಸಿವೆ.”

ಆದರೆ, ಮೋದಿ ಸರ್ಕಾರ ಮಾಡಿದ್ದೇ ಬೇರೆ. ಅಂತರಾಷ್ಟ್ರೀಯ ತೈಲ ಬೆಲೆಯಲ್ಲಿನ ಆ ಕುಸಿತದ ಲಾಭ ಜನರಿಗೆ ತಲುವುದನ್ನು ತಡೆದ ಮೋದಿ ಸರ್ಕಾರವು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತು. ಕೇಂದ್ರ ಸರ್ಕಾರವು ನವೆಂಬರ್ 2014 ಮತ್ತು ಜನವರಿ 2016 ರ ನಡುವೆ 10 ಸಂದರ್ಭಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕುಸಿದಾಗ, ಸರ್ಕಾರ ಇವುಗಳ ಮೇಲೆ ತೆರಿಗೆ ಹೆಚ್ಚಳ ಮಾಡುವ ಮೂಲಕ, ಕುಸಿತದ ಲಾಭ ಗ್ರಾಹಕರಿಗೆ ಸಿಗದಂತೆ ಮಾಡುವುದೇಕೆ ಎಂಬ ಜನರ ಪ್ರಶ್ನೆಗೂ ಸರ್ಕಾರದ ಬಳಿ ಸಿದ್ದ ಉತ್ತರವಿದೆ. ಸಚಿವರು ಹೀಗೆ ಹೇಳುತ್ತಾರೆ: “ಈ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ದರಗಳನ್ನು ಅಗತ್ಯವಿರುವಾಗ ಮತ್ತು ಅಗತ್ಯವಿದ್ದಾಗ ಮಾಪನಾಂಕ ನಿರ್ಣಯಿಸುವ ಮೂಲಕ ಸರ್ಕಾರವು ಮಧ್ಯಪ್ರವೇಶಿಸಿದೆ” ಈ ಮಾತುಗಳಲ್ಲಿ ಎಷ್ಟೊಂದು ವಂಚನೆ ಅಡಗಿದೆಯಲ್ಲವೇ?

ಕೊರೋನಾ ಸಂದರ್ಭದಲ್ಲಿ ಹೆಚ್ಚಳ !!

ಇನ್ನೂ ದುಖಃಕರ ಸಂಗತಿಯೆಂದರೆ, ಕೋವಿಡ್-19 ರ ಸಾಂಕ್ರಾಮಿಕ ರೋಗದಿಂದ ಇಡೀ ದೇಶದ ಜನತೆ ಸಂಕಷ್ಟ ಎದುರಿಸುತ್ತಿದ್ದಾಗ, ಅಂದರೆ ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರ 2020 ರಲ್ಲಿ ಅಂತರಾಷ್ಟ್ರೀಯ ತೈಲ ಬೆಲೆಗಳು ಕುಸಿದಿದ್ದ ಅವಧಿಯಲ್ಲೇ ಮೋದಿ ಸರ್ಕಾರವು, 2020 ರ ಮಾರ್ಚ್ ಮತ್ತು ಮೇ ನಡುವೆ ಎರಡು ಕಂತುಗಳಲ್ಲಿ ಪೆಟ್ರೋಲ್ ಮೇಲೆ 13 ರೂಪಾಯಿ ಮತ್ತು ಡೀಸೆಲ್ ಮೇಲೆ 16 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿತು. ಆ ಮೂಲಕ ಪೆಟ್ರೋಲ್  ಮತ್ತು ಡೀಸೆಲ್  ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿತು. ಕೊರೋನಾ ಸಾಂಕ್ರಾಮಿಕ ಅವಧಿಗೂ ಮುನ್ನ ಜುಲೈ 2019 ರಲ್ಲಿ ಪ್ರತಿ ಲೀಟರ್‌ಗೆ ತಲಾ 2 ರೂ ಹೆಚ್ಚಿಸಲಾಗಿತ್ತು. ಇದೂ ಸೇರಿದಂತೆ ಕೇವಲ 10 ತಿಂಗಳ ಅವಧಿಯಲ್ಲಿ ಪೆಟ್ರೋಲ್  ಮತ್ತು ಡೀಸೆಲ್  ಮೇಲೆ ಕ್ರಮವಾಗಿ 15 ರೂ. ಮತ್ತು 18 ರೂ. ಹೆಚ್ಚಳ ಮಾಡಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳು ವಿಧಿಸುವ ಶೇಕಡಾವಾರು ವ್ಯಾಟ್ ತೆರಿಗೆಯೂ ಹೆಚ್ಚಳವಾಗಿದೆ.

2021-22ರಲ್ಲಿ 4.92 ಲಕ್ಷ ಕೋಟಿ ಗಳಿಕೆ

ಕೇಂದ್ರ ಸರ್ಕಾರವು 2014-15ನೇ ಹಣಕಾಸು ವರ್ಷದಲ್ಲಿ ಸುಂಕ ಮತ್ತು ತೆರಿಗೆಗಳಲ್ಲಿ ಪೆಟ್ರೋಲಿಯಂ ವಲಯದಿಂದ  ರೂ. 1.72 ಲಕ್ಷ ಕೋಟಿ ಗಳಿಸಿದ್ದರೆ, ಇದು 2021-22 ರಲ್ಲಿ ರೂ. 4.92 ಲಕ್ಷ ಕೋಟಿಗೆ ಏರಿದೆ ಎಂದು ಸಚಿವರು ಸಂಸತ್ತಿನಲ್ಲಿ ಹೇಳಿದರು. ಅಂದರೆ, ಮೋದಿ ಅಧಿಕಾರಕ್ಕೆ ಬಂದ ವರ್ಷದಲ್ಲಿ ಪೆಟ್ರೋಲಿಯಂ ತೆರಿಗೆಗಳಿಂದ ಕೇಂದ್ರ ಸರ್ಕಾರ ಗಳಿಸಿದ್ದಕ್ಕಿಂತಲೂ  ರೂ. 3.20 ಲಕ್ಷ ಕೋಟಿ ಹೆಚ್ಚು ಗಳಿಕೆ ಯನ್ನು 2021-22 ರ ಒಂದು ವರ್ಷದಲ್ಲಿ ಮಾಡಿದೆ.

ಇದೆಲ್ಲವೂ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೆಚ್ಚು ಮಾಡುವ ಮೂಲಕ ಕೇಂದ್ರ ಸರ್ಕಾರದ ಖಜಾನೆ ತುಂಬಿಸಿಕೊಂಡಿತು. ಜನಸಾಮಾನ್ಯರನ್ನು ಸುಲಿಗೆ ಮಾಡುವ ಸರ್ಕಾರದ ಇಂತಹ ನೀತಿಗಳಿಗೆ, ಭಾರತ ಸರ್ಕಾರದ ಮುಕ್ತ ಆರ್ಥಿಕ ನೀತಿಗಳು, ಬಂಡವಾಳಗಾರರ ಪರವಾದ ನೀತಿಗಳು ಕಾರಣ. ಮತ್ತು ಇಂತಹ ಜನವಿರೋಧಿ ನೀತಿಗಳನ್ನು ವಿರೋದಿಸದೆ ಅವುಗಳನ್ನು ತಾನೂ ಅನುಸರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೂ ಕಾರಣ. ಇಂತಹ ನವ ಉದಾರವಾದಿ ನೀತಿಗಳ ವಿರುದ್ಧ ದ್ವನಿ ಎತ್ತಿ ಹೋರಾಡದೆ, ಈ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸದೆ, ಜನಸಾಮಾನ್ಯರು ಅಧಿಕ ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕಚ್ಚಾ ತೈಲದ ಆಮದು ಬೆಲೆ ಪ್ರಪಂಚದಾದ್ಯಂತ ಕುಸಿಯುತ್ತಿರುವ ಸಮಯದಲ್ಲಿ ಮೋದಿ ಸರ್ಕಾರವು ವಾಸ್ತವವಾಗಿ ಇಂಧನದ ಮೇಲಿನ ತೆರಿಗೆಯನ್ನು ಹೆಚ್ಚಿಸಿತು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿಯೂ, ಆಮದು ಮಾಡಿಕೊಂಡ ಅಗ್ಗದ ರಷ್ಯಾದ ಕಚ್ಚಾ ತೈಲದ ಪ್ರಯೋಜನಗಳನ್ನು ಇಂಧನದ ಚಿಲ್ಲರೆ ಮಾರಾಟದ ಬೆಲೆಗೆ ವರ್ಗಾಯಿಸಲಾಗಿಲ್ಲ. ಇದು ಒಟ್ಟಾರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರ ದರವನ್ನು ನಿರಂತರವಾಗಿ ಹೆಚ್ಚುವಂತೆ ಮಾಡಿತು.

ಇದನ್ನು ನೋಡಿ : ಅಂಗನವಾಡಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ – ಲಕ್ಷ್ಮೀ ಹೆಬ್ಬಾಳ್ಕರ್Janashakthi Media

Donate Janashakthi Media

Leave a Reply

Your email address will not be published. Required fields are marked *