ತುಮಕೂರು : ಡಿಸ್ಮಿಸಲ್- ಇಂಕ್ರಿಮೆಂಟ್ ಕಡಿತ- ವಿಪರೀತ ದಂಡಗಳು- ಕೆಲಸದ ಒತ್ತಡ ಹೆಚ್ಚಳ ವಿರೋಧಿಸಿ ಜುಲೈ- 6 ತುಮಕೂರಿನಲ್ಲಿ ಸಾರಿಗೆ ನೌಕರರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರ(ಸಿಐಟಿಯು ಸಂಯೋಜಿತ) ಸಂಘದ ರಾಜ್ಯಾಧ್ಯಕ್ಷ ಎಚ್.ಡಿ. ರೆವಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ 107000 ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಸಂಘಗಳೊಂದಿಗೆ ಚರ್ಚೆ ಮಾಡಿ ಬೇಡಿಕೆಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಸರ್ಕಾರ ಮತ್ತು ಆಡಳಿತವರ್ಗಗಳು ಮಾಡಲೇ ಇಲ್ಲ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ನಡೆಸಲಾಯಿತು. ಎಸ್ಮಾ ಕಾಯಿದೆಯನ್ನು ಜಾರಿ ಮಾಡಿ ಧಮನಕಾರಿ ನೀತಿಗಳನ್ನು ಅನುಸರಿಸಿದರು. ಡಿಸೆಂಬರ್ 2020 ಮತ್ತು ಏಪ್ರಿಲ್- 2021 ನಡೆದ 15 ದಿವಸಗಳ ಮುಷ್ಕರದ ವೇಳೆ ಕಾರ್ಮಿಕರ ಬೇಡಿಕೆಗಳನ್ನು ಚರ್ಚೆ ಮಾಡಿ ಬಗೆಹರಿಸಲಿಲ್ಲ. ಬದಲಾಗಿ ಸಾವಿರಾರು ಕಾರ್ಮಿಕರ ವರ್ಗಾವಣೆ- ಡಿಸ್ಮಿಸಲ್ ಗಳು- ಲಕ್ಷ ಕಾರ್ಮಿಕರಿಂದ ಹತ್ತಾರು ಕೋಟಿ ದಂಡ- ಪೋಲಿಸ್ ಮೊಕದ್ದಮ್ಮೆ ಹಾಕಿಸಿ ಧಮನಕಾರಿ ಧೋರಣೆ ಅನುಸರಿಸಿದರು. 2030 ರೊಳಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ತಂದು ಖಾಸಗೀಕರಣ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಾರಿಗೆ ಮುಷ್ಕರ ಪರಿಹಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಒತ್ತಾಯ
ಸಾರಿಗೆ ಕಾರ್ಮಿಕರಿಗೆ 1-1-2020 ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಅದರ ಬಗ್ಗೆ ಕಾರ್ಮಿಕ ಸಂಘಗಳೊಂದಿಗೆ ಇಲ್ಲಿಯವರೆಗೆ ಚರ್ಚಿಸಲೇ ಇಲ್ಲ. ಕಾರ್ಮಿಕರ ಮೇಲೆ ಸೇಡಿನ ಮನೋಭಾವನೆ ಇಟ್ಟುಕೊಂಡು ವೇತನ ಪರಿಷ್ಕರಣೆ ಮಾಡಲಿಲ್ಲ. ಈ ವೇಳೆ ನಿಗಮಗಳಲ್ಲಿನ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜುಲೈ-2022 ವೇತನ ಪರಿಷ್ಕರಣೆ ಮತ್ತಿತರೆ ಸೌಲಭ್ಯಗಳು ಹಾಗೂ ಸಾರಿಗೆ ನಿಗಮಗಳನ್ನು ರಕ್ಷಿಸುವ ಬೇಡಿಕೆಗಳನ್ನು ಕೊಟ್ಟೆವು. ನಂತರ ಚಳುವಳಿ ನಡೆಸಿದೆವು. ಅಂತಿಮವಾಗಿ ಮಾರ್ಚ- 2023 ರಲ್ಲಿ ಮುಷ್ಕರ ನಡೆಸುವುದಾಗಿ ತೀರ್ಮಾನಿಸಲಾಯಿತು. ಆಗ, ಸರ್ಕಾರ ಜಂಟಿ ಕ್ರಿಯಾ ಸಮಿತಿಯ ಜೊತೆ ಮಾತುಕತೆ ನಡೆಸಿ ಶೇ.15 ಹೆಚ್ಚಳ ಮಾಡಿ ಮಾರ್ಚ- 2023 ರಿಂದ ಜಾರಿಗೆ ತಂದಿದೆ ಎಂದರು.
1-1-2020 ರಿಂದ 28-02-2023 ರವರೆಗೆ 28 ತಿಂಗಳ ಕಾಲ ಅರಿಯರ್ಸ್ ನೀಡಿಲ್ಲ. ಇತರೆ 15 ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿಲಿಲ್ಲ. ಇದರಿಂದ ಸಾರಿಗೆ ಕಾರ್ಮಿಕರ ಮೇಲೆ
ನಡೆಯುತ್ತಿರುವ ದೌರ್ಜನ್ಯ ಆಡಳಿತ- ಕಿರುಕುಳಗಳು- ಕೆಲಸದ ಒತ್ತಡಗಳು- ಸೇವಾಸೌಲಭ್ಯಗಳಿಗೆ ಪರಿಹಾರ ದೊರೆತಿಲ್ಲ. ವಿಭಾಗಿಯ ಮಟ್ಟದಲ್ಲಿ ಡಿಸ್ಮಿಸಲ್- ಕಾರ್ಮಿಕರ ಶೋಷಣೆ- ಕಿರುಕುಳ- ಇಂಕ್ರಿಮೆಂಟ್ ಕಡಿತ- ವಿಪರೀತ ದಂಡ ಹಾಕುವುದು- ಬಾರ್ ಡ್ಯೂಟಿ ಹೆಸರಿನಲ್ಲಿ ತೀವ್ರವಾದ ಕೆಲಸದ ಒತ್ತಡಗಳು ಹೆಚ್ಚಳವಾಗಿವೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗದ ಯಾವುದೇ ಹಂತದಲ್ಲಿ ಚರ್ಚೆ ಮಾಡುವ ಪದ್ದತಿಯೇ ಇಲ್ಲ. ಕಾರ್ಮಿಕರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳು ಇಲ್ಲವಾಗಿವೆ. ಕಾರ್ಮಿಕರು ಪ್ರಶ್ನಿಸಿದರೆ ವಿಶೇಷ ವರದಿ ಪಡೆದು ತೀವ್ರವಾದ ಕ್ರಮಗಳನ್ನು ಜರುಗಿಸುತ್ತಾರೆ ಎಂದು ತಿಳಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ಅನ್ವಯಿಸುವ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ತುಮಕೂರು ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣ ಮಟ್ಟದ ಬಿಡಿಬಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಅಗಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಷ್ಟೆಲ್ಲಾ ತೊಂದರೆಗಳು ಇದ್ದರು ಸಹ ವಾಹನಗಳ ದುರಸ್ಥಿ ಮಾಡಲು ವಿಪರೀತ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಶಿರಾ ಘಟಕದಲ್ಲಿ ಕೆಲಸ ಮಾಡುವ 4 ತಾಂತ್ರಿಕ ಸಿಬ್ಬಂದಿಗಳಿಗೆ ಕೆಲಸ ಮಾಡಿದ ದಿವಸವೇ ಮೆಮೋ ಕೊಟ್ಟು ವಿಚಾರಣೆಯೂ ಇಲ್ಲದೆ 1 ವರ್ಷ ಅವಧಿಗೆ ಇಂಕ್ರಿಮೆಂಟ್ ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ
ಸಿಐಟಿಯು ಸಂಘದ ಉಪಾದ್ಯಕ್ಷರಾದ ಶ್ರೀ ಪಿ.ಮೋಹನ್ ದಾಸ್ ರವರು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಆತನ ಮೇಲೆ ಅಂದಿನ ದಿವಸವೇ ಮತ್ತೊಂದು
ಮೆಮೋ ಕೊಡಿಸಿ ಸೇಡಿನ ಕ್ರಮವಾಗಿ ಶಿಕ್ಷಿಸಲು ವಿಚಾರಣೆ ನಡೆಸುತ್ತಿದ್ದಾರೆ. ಶಿರಾ ಘಟಕದ ಚಾರ್ಜಮನ್ ಆದ ಶ್ರೀ ಹೇಮಂತ ಕುಮಾರ್ ರವರು ತಾಂತ್ರಿಕ ಸಿಬ್ಬಂದಿಗಳಿಗೆ ಮೆಮೋ ನೀಡಿ ಇಂಕ್ರಿಮೆಂಟ್ ಕಡಿತ ಮಾಡಿಸುತ್ತೇನೆ ಅಂತ ಧಮಕಿ ಹಾಕುತ್ತಾರಂತೆ. ಇಂಕ್ರಿಮೆಂಟ್ ಕಡಿತ ಮಾಡಿಸೋದು- ಮಾಡೊದು ನೀರು ಕುಡಿದಷ್ಟು ಸರಳ ಮಾಡಿಕೊಂಡಿದ್ದಾರೆ. ಇಂತಹ ದೌರ್ಜನ್ಯದ ಆಡಳತವನ್ನು ಖಂಡಿಸುತ್ತೇವೆ. ವಾಹನಗಳಿಗೆ ಅಳವಡಿಸುವ ಮುಂದಿನ ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಅದು ಗುಣಮಟ್ಟದ ಗ್ಲಾಸ್ ಆಗದೆ ಇರಬಹುದು. ಅದರೆ ಇದಕ್ಕೆ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ರೂ. 4500 ದಿಂದ 6000 ದವರೆಗೆ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುತ್ತಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ತುಮಕೂರು ವಿಭಾಗೀಯ ಕಛೇರಿ ಮುಂದೆ ಜುಲೈ 06 ರಂದು ಬೆಳಿಗ್ಗೆ 10:30 ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರೇವಪ್ಪ ಅವರ ಹೇಳಿಕೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷ ಎ.ಆರ್. ದೇವರಾಜು, ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಶಮಿಉಲ್ಲಾ, ಜಿಲ್ಲಾ ಖಜಾಂಚಿ ಕೆ.ರಾಜಣ್ಣ ಬೆಂಬಲಿಸಿದ್ದಾರೆ.