ಸುಚಿತ್ರ ಫಿಲ್ಮ್ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ

ಬೆಂಗಳೂರು : ಭಾರತದ ಪ್ರತಿಷ್ಟಿತ ಫಿಲ್ಮ್‌ ಸೊಸೈಟಿಗಳಲ್ಲಿ ಒಂದಾದ ಸುಚಿತ್ರ ಫಿಲ್ಮ್‌ ಸೊಸೈಟಿಯ ಉಳಿವಿಗಾಗಿ ಚಲನಚಿತ್ರ ಕ್ಷೇತ್ರದ ಗಣ್ಯರು, ಸಾಹಿತಿಗಳು, ಕಲಾವಿದರು ಬೆಂಗಳೂರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಇಂದು ಬೆಳಗ್ಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ಸಿನೆಮಾಸಕ್ತರು ಬನಶಂಕರಿಯಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿ ಎದುರು ಜಮಾಯಿಸಿದ್ದರು. ಸುಚಿತ್ರ ಟ್ರಸ್ಟ್ ನಿಂದ ಸುಚಿತ್ರ ಫಿಲ್ಲ್ ಸೊಸೈಟಿಯ ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಸೊಸೈಟಿ ಚಟುವಟಿಕೆಗಳಿಗೆ ಪೂರಕವಾಗಿರಬೇಕಾದ ಟ್ರಸ್ಟ್ ಮಾರಕವಾಗಿ ಪರಿಣಮಿಸಿದೆ. ಇದು ಸರಿಯಲ್ಲ ಎಂದು ಭಿತ್ತಿಪತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರ ಆಗ್ರಹವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ನಿರ್ದೇಶಕ, ಸುಚಿತ್ರ ಫಿಲ್ಮ್ ಸೊಸೈಟಿ ಅಧ್ಯಕ್ಷ ಬೀಸು ಸುರೇಶ್ “ ಪ್ರತಿಭಟನೆ ನಡೆಸಲೇಬೇಕಾದ ಪರಿಸ್ಥಿತಿಯನ್ನು ವಿವರಿಸಿದರು. ಪ್ರತಿಭಟನೆ ಇಲ್ಲದೇ ಮಾತುಕತೆ ಮೂಲಕವೇ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯತ್ನಿಸಲಾಯಿತು. ಆದರೆ ಸುಚಿತ್ರ ಟ್ರಸ್ಟ್ ಅವರ ಸಹಕಾರ ದೊರೆಯಲಿಲ್ಲ ಎಂದರು.

ಟ್ರಸ್ಟ್ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸೊಸೈಟಿಯ ಅಧ್ಯಕ್ಷರು ಟ್ರಸ್ಟ್ ಖಾಯಂ ಸದಸ್ಯರಾಗಿದ್ದರು. ಅವರನ್ನು ಖಾಯಂ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ಆಹ್ವಾನಿತರು ಎಂದು ಬದಲಾಯಿಸಲಾಗಿದೆ. ಇವೆಲ್ಲ ಬದಲಾವಣೆಗಳು ಸೊಸೈಟಿ ಗಮನಕ್ಕೆ ತಾರದೇ ಮಾಡಲಾಗಿದೆ. ಸೊಸೈಟಿ ಕಚೇರಿಯ ಬಾಡಿಗೆ, ಸಭಾಂಗಣದ ಬಾಡಿಗೆಗಳನ್ನು ನಿಲುಕಲಾರದಷ್ಟು ಮೊತ್ತಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.

ಈ ಬೆಳವಣಿಗೆಗಳನ್ನು ಸುಚಿತ್ರ ಫಿಲ್ಮ್ ಸೊಸೈಟಿಯೂ ವಿರೋಧಿಸುತ್ತಾ ಬಂದಿದೆ. ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಸದಸ್ಯರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಡೀಡ್ ನಲ್ಲಿನ ಮಾರ್ಪಾಡುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಹಾಗೂ ಸುಚಿತ್ರ ಫಿಲ್ಮ್ ಸೊಸೈಟಿಯ ಎಲ್ಲ ಹಕ್ಕುಗಳು ಸೊಸೈಟಿಯಲ್ಲಿಯೇ ಉಳಿಯಬೇಕೆಂದು ನಡವಳಿಗಳನ್ನು ಅನುಮೋದಿಲಾಗಿದೆ ಎಂದು ಹೇಳಿದರು.

ಸುಚಿತ್ರ ಫಿಲ್ಮ್ ಸೊಸೈಟಿಯು ವಿಶ್ವದ ಶ್ರೇಷ್ಠ ಸಿನೆಮಾಗಳನ್ನು, ಪ್ರದರ್ಶಿಸುತ್ತಾ, ಚಿತ್ರೋತ್ಸವಗಳನ್ನು, ಸೆಮಿನಾರ್ ಗಳನ್ನು ಆಯೋಜಿಸುತ್ತಾ ಬಂದಿದೆ. ಇದರಿಂದ ಸದಭಿರುಚಿ ಸಿನೆಮಾಗಳ ಪ್ರೇಕ್ಷಕರು ಸಂಖ್ಯೆಯೂ ಹೆಚ್ಚಾಗಲೂ ಸಹಕಾರಿಯಾಗಿದೆ. ಟ್ರಸ್ಟ್ ಕೈಗೊಂಡಿರುವ ತೀರ್ಮಾನಗಳು ಇವೆಲ್ಲ ಚಟುವಟಿಕೆಗಳಿಗೂ ಮಾರಕವಾಗಿ ಪರಿಣಮಿಸಿದೆ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸೊಸೈಟಿ ಸದಸ್ಯರುಗಳು ಇಂಥ ಸ್ಥಿತಿ ಬರಲು ಕಾರಣಗಳನ್ನು ವಿವರಿಸಿದರು. ಸುಚಿತ್ರಾ ಅಕಾಡೆಮಿಯು 2015ರಲ್ಲಿ ಪುರುವಂಕರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಸಿ.ಎಸ್.ಆರ್ ನಿಧಿಯಿಂದ ದೇಣೀಗೆ ಪಡೆದು ಕಟ್ಟಡವನ್ನು ನವೀಕರಣ ಮಾಡಿತು. ಆಗ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ ಎಂದು ಇದ್ದ ಹೆಸರನ್ನು ಪುರವಂಕರ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ ಎಂದು ಬದಲಾಯಿಸಲಾಯಿತು. ಈ ನಂತರ ಸೊಸೈಟಿ ಸ್ವತಂತ್ರ ಅಸ್ತಿತ್ವಕ್ಕೆ ತೊಂದರೆಗಳು ಆರಂಭವಾಗಿವೆ ಎಂದು ಕಾರ್ಯಕಾರಿ ಸಮಿತಿ ಸದಸ್ಯರುಗಳು ಆತಂಕ ವ್ಯಕ್ತಪಡಿಸಿದರು.

2021ರ ಜನವರಿಯಿಂದ ಸುಚಿತ್ರಾ ಫಿಲ್ಮ್ ಸೊಸೂಟಿಯ ಕಚೇರಿ ಬಾಡಿಗೆಯನ್ನು ಪರಿಷ್ಕರಿಸಿ 50 ಸಾವಿರ ಕೊಡಬೇಕೆಂದು ಈ ಹಿಂದೆ ಕಟ್ಟಿದ ಬಾಡಿಗೆ ಹಣದೊಂದಿಗೆ ಪರಿಷ್ಕೃತ ಬಾಡಿಗೆ ಮೊತ್ತದ ಬಾಕಿ ಹಣ ಏಳು ಲಕ್ಷ ಕೊಡಬೇಕೆಂದು ಪತ್ರಮುಖೇನ ಒತ್ತಾಯಿಸಲಾಗುತ್ತಿದೆ. ಕೋವಿಡ್ ಸಂಕಷ್ಟ ಕಾಳದಲ್ಲಿ ನೀಡಿದ್ದ ಎರಡು ಲಕ್ಷ ಮುಂಗಡ ಹಣವನ್ನೂ ಮುರಿದುಕೊಳ್ಳಲಾಗಿದೆ. ಜೊತೆಗೆ ಸೊಸೈಟಿಗೆ ವಕೀಲರ ಮೂಲಕ ನೋಟೀಸ್ ಗಳನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.

ಈ ಎಲ್ಲ ಕಾರಣದಿಂದಾಗಿಯೇ 2021ರ ಏಪ್ರಿಲ್ ನಲ್ಲಿ ವಿಶೇಷ ಸರ್ವ ಸದಸ್ಯರ ಸಭೆ, 2021ರ ನವೆಂಬರ್ ನಲ್ಲಿ ಸಾಮಾನ್ಯ ಸರ್ವ ಸದಸ್ಯರ ಸಭೆಯನ್ನು ಸುಚಿತ್ರಾ ಪ್ರಾಂಗಣದಿಂದ ಹೊರಗೆ ಮಾಡಬೇಕಾದ ದುಸ್ಥಿತಿ ಎದುರಾಯಿತು. ಇಂಥ ನಕಾರಾಥ್ಮಕ ಬೆಳವಣಿಗೆಗಳನ್ನು ತಪ್ಪಿಸಲು ಸುಚಿತ್ರ ಫಿಲ್ಮ್ ಸೊಸೈಟಿ ಅಧ್ಯಕ್ಷರು ಟ್ರಸ್ಟ್ ಶಾಶ್ವತ ಸದಸ್ಯರಾಗಿ ಮುಂದುವರಿಯಬೇಕು, ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಬಾಡಿಗೆದರ ವಿಧಿಸುವುದರ ಬಗ್ಗೆ ಚರ್ಚಿಸಬೇಕು, ಸುಚಿತ್ರ ಟ್ರಸ್ಟ್ ರಚನೆಗೆ ಕಾರಣವಾದ ಸೊಸೈಟಿಯ ಎಲ್ಲ ಚಟುವಟಿಕೆಗಳು ಅಡೆತಡೆ ಇಲ್ಲದೇ ಸುಚಿತ್ರ ಪ್ರಾಂಗಣದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ, ಫಿಲ್ಮ್ ಸೊಸೈಟಿಯು ತನ್ನ ಸುವರ್ಣ ಮಹೋತ್ಸವ ಆಚರಿಸುವ ಸಮಯ. ಇದು ಯಾವುದೇ ಸಮಸ್ಯೆಯಿಲ್ಲದೇ ನಡೆಯಬೇಕಾದರೆ ಟ್ರಸ್ಟ್ ತನ್ನ ನಿಲುವುಗಳಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬೇಕು. ಅದು ಕೈಗೊಳ್ಳುವ ನಿರ್ಣಯಗಳು ಸೊಸೈಟಿ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಖ್ಯಾತ ನಿರ್ದೇಶಕರುಗಳಾದ ಗಿರೀಶ್ ಕಾಸವರವಳ್ಳಿ, ಸುರೇಶ್ ಹೆಬ್ಳೀಕರ್, ಹಿರಿಯ ಪತ್ರಕರ್ತರಾದ ವಿಜಯಮ್ಮ, ಸಮುದಾಯ ಕರ್ನಾಟಕ ಸಂಘಟನೆಯ ಟಿ. ಸುರೇಂದ್ರರಾವ್, ಕೆ.ಎಸ್. ವಿಮಲಾ, ರೈತ ಮುಖಂಡ ವೀರಸಂಗಯ್ಯ ಸೇರಿದಂತೆ ನೂರಕ್ಕೂ ಹೆಚ್ಚುಮಂದಿ ಸಿನಿಮಾಸಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *