ಡ್ರಗ್ಸ್ ಜಾಲ ಭೇದಿಸಿ ವಿದ್ಯಾರ್ಥಿ-ಯುವಜನರನ್ನು ರಕ್ಷಿಸಿ

ಬೆಂಗಳೂರು : ರಾಜ್ಯದಲ್ಲಿ ತೆರೆದುಕೊಳ್ಳುತ್ತಿರುವ ಡ್ರಗ್ಸ್ ಜಾಲವು ಮಹಾನಗರದ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದ್ದು ಹಲವಾರು ವಿದ್ಯಾರ್ಥಿಗಳು ಮತ್ತು ಯುವಜನತೆ ಅದಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಜಾಲವನ್ನು ಭೇದಿಸಿ ಅದರಲ್ಲಿ ಸಿಲುಕಿರುವ ಅಮಾಯಕ ವಿದ್ಯಾರ್ಥಿ-ಯುವಜನರನ್ನು ರಕ್ಷಿಸಬೇಕೆಂದು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷ (CPIM) ಬೆಂಗಳೂರು ಜಿಲ್ಲಾ ಸಮಿತಿಗಳು ಸರ್ಕಾರವನ್ನು ಆಗ್ರಹಿಸಿದೆ.

ಡ್ರಗ್ಸ್ ಜಾಲಕ್ಕೆ ಸಿಲುಕಿ ಬಲಿಪಶುಗಳಾಗುತ್ತಿರುವ ತಮ್ಮ ಮಕ್ಕಳನ್ನು ದೂರು ನೀಡಿ ರಕ್ಷಿಸಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಹಲವು ಪೋಷಕರಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಜಾಲದಲ್ಲಿ ಸಿಲುಕಿರುವ ಹಲವು ಅಮಾಯಕ ವಿದ್ಯಾರ್ಥಿ ಯುವಜನರು ಅದರಿಂದ ಹೊರಬರಲಾಗದೆ, ಹೊರಬಂದರೂ ಡ್ರಗ್ಸ್ ಜಾಲದ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗುವ ಅಪಾಯದಲ್ಲಿ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿ-ಯುವಜನರು ಹಾಗೂ ಅವರ ಪೋಷಕರ ನೆರವಿಗೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆ ಕೂಡಲೇ ಧಾವಿಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಸಿಪಿಐ(ಎಂ) ಕಾರ್ಯದರ್ಶಿ ಕೆ.ಎನ್.ಉಮೇಶ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸದರಿ ಕಾನೂನಿನಲ್ಲಿರುವ ಪ್ರಾವದಾನಗಳಿಂದಾಗಿ ದೂರು ನೀಡಿದರೆ ತಮ್ಮ ಮಕ್ಕಳು ಸಹಾ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಕೊಳ್ಳಲಿದ್ದಾರೆ ಎಂಬ ಭಯ ಹಾಗೂ ಆತಂಕದಲ್ಲಿ ಹಲವು ಪೋಷಕರು ದೂರು ನೀಡಲು ಮುಂದಾಗದೆ ಮತ್ತು ಮಕ್ಕಳನ್ನು ಡ್ರಗ್ಸ್ ಜಾಲದಿಂದ ರಕ್ಷಿಸಿಕೊಳ್ಳಲಾಗದೆ ಅಡಕತ್ತರಿಗೆ ಸಿಲುಕಿ ನಲುಗಿದ್ದಾರೆ. ಇಂತಹ ಸಂದರ್ಭಗಳನ್ನು ರಾಜ್ಯ ಸರ್ಕಾರವು ಸೂಕ್ಷವಾಗಿ ಪರಿಗಣಿಸಿ ಅಮಾಯಕ ವಿದ್ಯಾರ್ಥಿ-ಯುವಜನರು ಹಾಗೂ ಪೋಷಕರ ರಕ್ಷಣೆಗೆ ಅಗತ್ಯ ಭರವಸೆ ನೀಡುವ ಮೂಲಕ ಡ್ರಗ್ಸ್ ಜಾಲವನ್ನು ಭೇದಿಸಲು ಹಾಗೂ ಅದರಿಂದ ಮಹಾನಗರದ ಜನತೆಯನ್ನು ರಕ್ಷಿಸಲು ಅಗತ್ಯ ಕಾರ್ಯವ್ಯೂಹವನ್ನು ರೂಪಿಸಬೇಕು.

ರಾಜ್ಯ ಸರ್ಕಾರ ಹಾಗೂ ಪೋಲಿಸ್ ಇಲಾಖೆಯ ಒಟ್ಟಾರೆ ಗಮನವು ಕೇವಲ ಪ್ರತಿಷ್ಟಿತ ನಟ-ನಟಿಯರ ಕೇಂದ್ರಿತವಾಗಿದ್ದು ಸಾಮಾನ್ಯ ಜನತೆಯು ಸಿಲುಕಿರುವ ಡ್ರಗ್ಸ್ ಜಾಲವು ಅವರ ಗಮನದಿಂದ ಹೊರಗುಳಿಯುವ ಅಪಾಯವನ್ನು ರಾಜ್ಯ ಸರ್ಕಾರ ಮನಗಂಡು ಅಗತ್ಯ ಎಚ್ಚರಿಕೆ ವಹಿಸಿ ಕ್ರಮವಹಿಸಬೇಕೆಂದು ಬೆಂಗಳೂರು ಉತ್ತರ ಜಿಲ್ಲಾ ಸಿಪಿಐ(ಎಂ) ಕಾಯ೯ದಶಿ೯, ಎನ್. ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *