ಆಸ್ತಿಯ ಹಕ್ಕುಗಳೂ ಮತ್ತು ಸಾಂಕ್ರಾಮಿಕ ಸಾವುಗಳೂ

ಲಸಿಕೆಗಳ ಒಟ್ಟಾರೆ ಕೊರತೆಯು ಕೃತಕವಾದದ್ದು. ಈ ಕೊರತೆಯ ಪರಿಣಾಮವಾಗಿ ಒಂದು ಗುಂಪಿನ ಜನರ ಜೀವನವನ್ನು ಇನ್ನೊಂದು ಗುಂಪಿನ ಜನರ ಜೀವನದ ವಿರುದ್ಧ ನಿಲ್ಲಿಸಲಾಗುತ್ತಿದೆ. ಒಂದು ಗುಂಪಿನ ಜನರ ಖಾಸಗಿ ಆಸ್ತಿ-ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಲಸಿಕೆಗಳ ಉತ್ಪಾದನೆಯ ಹೆಚ್ಚಳವನ್ನು ತಡೆಹಿಡಿಯಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಜನರು ಮತ್ತು ಜನರ ನಡುವಿನ ಪ್ರಶ್ನೆಯಲ್ಲ, ಆದರೆ ಜನರು ಮತ್ತು ಲಾಭಗಳ ವಿರುದ್ಧದ ಒಂದು ಪ್ರಶ್ನೆ. ಗಮನಾರ್ಹವಾದ ವಿಷಯವೆಂದರೆ, ಮುಂದುವರಿದ ದೇಶಗಳಲ್ಲಿನ ಜನರು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ – ಪ್ರೊ. ಪ್ರಭಾತ್ ಪಟ್ನಾಯಕ್

ಇದ್ದದ್ದನ್ನು ಇದ್ದ ಹಾಗೆ ಹೇಳಲೇ ಬೇಕು. ಮಾನವಕುಲವನ್ನು ಇಂದು ನಿರ್ನಾಮಗೊಳಿಸಲು ತೊಡಗಿರುವ ಕೊರೊನಾ ವೈರಸ್ ಎಂಬ ಶತ್ರು ಏಕಾಂಗಿಯಲ್ಲ. ಈ ಶತ್ರುವಿಗೊಬ್ಬ ಬಲಶಾಲಿಯಾದ ಮಿತ್ರನೂ ಇದ್ದಾನೆ. ಈ ಮಿತ್ರ ಯಾರೆಂದರೆ, ಸಾಂಸ್ಥಿಕ ಸ್ವರೂಪದ ಬಂಡವಾಳಶಾಹಿ ಆಸ್ತಿ ಹಕ್ಕುಗಳು. ಜಗತ್ಪ್ರಸಿದ್ಧ ‘ದಿ ಎಕನಾಮಿಸ್ಟ್’ ಪತ್ರಿಕೆಯ ಅಂದಾಜಿನ ಪ್ರಕಾರ, ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಪ್ರಪಂಚದಾದ್ಯಂತ ಇಲ್ಲಿಯವರೆಗೆ ಸತ್ತವರ ಸಂಖ್ಯೆಯು ಅಧಿಕೃತವಾಗಿ ಹೇಳಲಾಗುತ್ತಿರುವ ಮೂವ್ವತ್ತು ಲಕ್ಷವಲ್ಲ, ಬದಲಿಗೆ, ಸುಮಾರು ಒಂದು ಕೋಟಿಯಷ್ಟು. ವೈರಸ್ ಹಾವಳಿ ಇನ್ನೂ ಅಂತ್ಯಗೊಂಡಿಲ್ಲ. ಆದ್ದರಿಂದ. ಇದು ಅಂತಿಮ ಸಂಖ್ಯೆಯಲ್ಲ. ಹಾಗಾಗಿ, ಅದರ ಮಾರಣಾಂತಿಕ ಯಾತ್ರೆಯನ್ನು ಕೊನೆಗೊಳಿಸಬಹುದಾದ ಏಕೈಕ ಮಾರ್ಗವೆಂದರೆ ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವ ಕ್ರಮವೇ.

ಐಎಂಎಫ್ ಸೇರಿದಂತೆ ಎಲ್ಲರೂ ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಒಪ್ಪುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ವೈರಸ್ ಬಲಿ ತೆಗೆದುಕೊಳ್ಳುವ ಮೊದಲೇ ಈ ಸಾರ್ವತ್ರಿಕ ಲಸಿಕೆ ಸಾಕಾರಗೊಳ್ಳಬೇಕು ಎಂದಾದರೆ, ಕೋಟಿ ಕೋಟಿ ಲಸಿಕೆಗಳನ್ನು ಉತ್ಪಾದಿಸಬೇಕಾಗುತ್ತದೆ. ವಿಶ್ವದಲ್ಲಿ ಎಲ್ಲರಿಗೂ ಲಸಿಕೆ ಹಾಕಲು ಬೇಕಾಗುವಷ್ಟು ಬೃಹತ್ ಪ್ರಮಾಣದ ಲಸಿಕೆಗಳ ಉತ್ಪಾದನೆಗೆ ಅವುಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಔಷಧ ಕಂಪನಿಗಳೇ ಅಡ್ಡಿಯಾಗಿವೆ. ಈಗ ಬಳಕೆಯಲ್ಲಿರುವ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಬಹುಪಾಲು ಸಾರ್ವಜನಿಕ ಹಣದ ನೆರವನ್ನೇ ಬಳಸಿರುವ ಈ ಕೆಲವು ಬಹುರಾಷ್ಟ್ರೀಯ ಔಷಧ ಕಂಪನಿಗಳು ಈ ಲಸಿಕೆಗಳ ಮೇಲೆ ತಾವು ಹೊಂದಿರುವ ಬೌದ್ಧಿಕ ಆಸ್ತಿ ಹಕ್ಕುಗಳ ಏಕಸ್ವಾಮ್ಯದ ಕತೆ ಹೇಳುತ್ತವೆ. ಲಸಿಕೆ ಉತ್ಪಾದಿಸಲು ಕೇವಲ ತಾವಷ್ಟೇ  ಮಾಡಿರದ ಹೂಡಿಕೆಯನ್ನು ಹಿಂಪಡೆಯುವ ಹೆಸರಿನಲ್ಲಿ ಮಾನವ ಕಷ್ಟಕೋಟಲೆಯನ್ನು ತಮ್ಮ ಲಾಭದಾಹಕ್ಕಾಗಿ ಬಳಸಿಕೊಳ್ಳಲು ಈ ಔಷಧ ಕಂಪನಿಗಳಿಗೆ ಎಳ್ಳಷ್ಟೂ ಅಳುಕಿಲ್ಲ.

ಇದನ್ನು ಓದಿ: ವ್ಯಾಕ್ಸಿನ್ ಎಂಬ ಉಸಿರು ನಿರಾಕರಿಸುತ್ತಿರುವ ಸರ್ಕಾರ!!

ಲಸಿಕೆಗಳ ಮೇಲೆ ಔಷಧ ಕಂಪನಿಗಳು ಹೊಂದಿರುವ ಪೇಟೆಂಟ್ ಹಕ್ಕುಗಳ ಅಧಿಕಾರವನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಒಪ್ಪಿರುವುದು ಒಂದು ಮಹತ್ವದ ಬೆಳವಣಿಗೆ. ಆದರೆ, ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯರಲ್ಲಿ ಈ ಬಗ್ಗೆ ಸರ್ವಾನುಮತವಿಲ್ಲದಿದ್ದರೆ, ಅದನ್ನು ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ. ಈಗಾಗಲೇ ಯುರೋಪಿನ ಬಂಡವಾಳಶಾಹಿ ಸರ್ಕಾರಗಳು ಹಕ್ಕುಗಳನ್ನು ಬಿಟ್ಟುಕೊಡುವ ಕ್ರಮವನ್ನು ವಿರೋಧಿಸುವಲ್ಲಿ ತಮ್ಮ ತಮ್ಮ ದೇಶಗಳ ಬಹುರಾಷ್ಟ್ರೀಯ ಔಷಧ ಕಂಪನಿಗಳ ಹಿಂದೆ ಬಲವಾಗಿ ನಿಂತಿವೆ.

ಪೇಟೆಂಟ್ ಹಕ್ಕುಗಳ ತೊಡರುಗಳು ಅಡ್ಡ ಬರದಿದ್ದರೆ ಲಭ್ಯವಿರುವ ಲಸಿಕೆಗಳ ಉತ್ಪಾದನಾ ಸೌಲಭ್ಯವನ್ನು ಪೂರ್ಣವಾಗಿ ಬಳಸಿಕೊಂಡು ವಿಶ್ವದ ಜನಸಂಖ್ಯೆಯ ಶೇಕಡಾ 60ರಷ್ಟು ಜನರಿಗೆ ಈ ವರ್ಷದ ಅಂತ್ಯದೊಳಗೆ ಲಸಿಕೆ ಹಾಕಬಹುದು ಎಂಬ ಒಂದು ಅಂದಾಜಿದೆ. ಈ ಕಾರ್ಯವು ಈಡೇರಿದಲ್ಲಿ ವೈರಸ್‌ನ ಹತ್ಯಾಕಾಂಡವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಬಹುದು. ಆದರೆ, ಜರ್ಮನಿ ಮತ್ತು ಇತರ ದೇಶಗಳು ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವ ಕ್ರಮವನ್ನೂ ಸಹ ದೃಢವಾಗಿ ವಿರೋಧಿಸುತ್ತಿರುವುದರಿಂದಾಗಿ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ನಡೆಯುತ್ತಿರುವ ಮಾತುಕತೆಗಳು ವರ್ಷಾಂತ್ಯದವರೆಗೂ ಲಂಬಿಸುತ್ತವೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, 2022ರ ಅಂತ್ಯದ ವೇಳೆಗೆ ಇಡೀ ವಿಶ್ವಕ್ಕೆ ಲಸಿಕೆ ಹಾಕಬೇಕೆಂಬ ಪ್ರಸ್ತಾಪವನ್ನು ಜಿ-7 ಶೃಂಗಸಭೆಯ ಮುಂದೆ ಇಡಲು ಹವಣಿಸಿದ್ದರು. ಒಂದು ವೇಳೆ ಈ ಪ್ರಸ್ತಾಪವನ್ನು ಜಿ-7 ಒಪ್ಪಿದರೂ ಸಹ ಮತ್ತು ಅದನ್ನು ಸಾಧಿಸಿದರೂ ಸಹ, ಮಧ್ಯಂತರದ ಅವಧಿಯಲ್ಲೇ ಲಕ್ಷಾಂತರ ಮಂದಿ ಸಾಂಕ್ರಾಮಿಕದಿಂದ ಸಾಯುತ್ತಾರೆ. ಹಾಗಾಗಿ, ಬಹಳ ಮುಖ್ಯವಾದ ಅಂಶವೆಂದರೆ, ಬೌದ್ಧಿಕ ಆಸ್ತಿಯ ಖಾಸಗಿ ಹಕ್ಕುಗಳನ್ನು ತಾತ್ಕಾಲಿಕವಾಗಿ ಮೊಟುಕುಗೊಳಿಸಿ ಜನರ ಪ್ರಾಣ ಉಳಿಸುವುದು ಈಗ ಬಹಳ ಮುಖ್ಯವಾದ ಕಾರ್ಯವಾಗುತ್ತದೆ.

ಈ ವಿಷಯವು ಒಂದು ಮೂಲಭೂತ ತತ್ವವನ್ನು ಒಳಗೊಂಡಿದೆ: ಒಬ್ಬ ಭಾರತೀಯ ಅಥವಾ ಆಫ್ರಿಕನ್ ಅಥವಾ ಲ್ಯಾಟಿನ್ ಅಮೇರಿಕನ್ ವ್ಯಕ್ತಿಯ ಜೀವಿಸುವ ಹಕ್ಕು ಯಾವ ರೀತಿಯಲ್ಲಿ ಒಬ್ಬ ಯುರೋಪಿಯನ್ ಅಥವಾ ಅಮೇರಿಕನ್ ವ್ಯಕ್ತಿಯ ಜೀವಿಸುವ ಹಕ್ಕಿಗಿಂತ ಭಿನ್ನವಾಗಿದೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಬಯಸುವ ಯಾವುದೇ ಸಹಕಾರವು, ಒಂದು ಬಡ ದೇಶದ ವ್ಯಕ್ತಿಯ ಜೀವನವು ಶ್ರೀಮಂತ ದೇಶದ ವ್ಯಕ್ತಿಯ ಜೀವನದಷ್ಟೇ ಅಮೂಲ್ಯವಾದದ್ದು ಎಂಬ ಮೂಲಭೂತ ಭಾವನೆಯನ್ನು ಆಧರಿಸಿರಬೇಕು.

ಇಲ್ಲಿಯವರೆಗೆ ಉತ್ಪಾದಿಸಿದ ಲಸಿಕೆಗಳ ಬಹು ದೊಡ್ಡ ಭಾಗವನ್ನು ಬಂಡವಾಳಶಾಹಿ ದೇಶಗಳು ಖರೀದಿಸಿ ಇಟ್ಟುಕೊಂಡಿರುವ ಕ್ರಮವನ್ನು ಅನೇಕರು “ಲಸಿಕೆ ವರ್ಣಭೇದ ನೀತಿ” ಎಂದು ವರ್ಣಿಸಿದ್ದಾರೆ. ಹಾಗಾಗಿ, ಮೂರನೇ ಜಗತ್ತಿನ ದೇಶಗಳಿಗೆ ಕೊಳ್ಳಲೂ ಲಸಿಕೆಗಳು ಲಭ್ಯವಿಲ್ಲ. ಉದಾಹರಣೆಗೆ, ಏಪ್ರಿಲ್ ಅಂತ್ಯದ ವೇಳೆಗೆ, ಅಮೆರಿಕಾದ ಜನಸಂಖ್ಯೆಯ ಶೇಕಡಾ 40ರಷ್ಟು ಮತ್ತು ಯೂರೋಪಿನ ಶೇಕಡಾ 20ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದರೆ, ಆಫ್ರಿಕಾದಲ್ಲಿ ಕೇವಲ ಶೇಕಡಾ ಎರಡರಷ್ಟು ಮಾತ್ರ ಮತ್ತು ಭಾರತದಲ್ಲಿ, ಇಲ್ಲಿಯವರೆಗೆ, ಕೇವಲ ಶೇಕಡಾ ಮೂರರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಮುಂದುವರಿದ ದೇಶಗಳು ಇಲ್ಲಿಯವರೆಗೆ ಮಾತ್ರವಲ್ಲ, ಭವಿಷ್ಯದ ನಿರೀಕ್ಷಿತ ಉಪಯೋಗಕ್ಕಾಗಿ, ಉತ್ಪಾದನೆಯ ಬಹುಪಾಲು ಲಸಿಕೆಗಳನ್ನು ಜೋಪಾನ ಮಾಡಿಕೊಂಡಿವೆ.

ಇದನ್ನು ಓದಿ: ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!

ಈ ಲಸಿಕೆ ವರ್ಣಭೇದ ನೀತಿಯಲ್ಲಿ ಎರಡು ಅಂಶಗಳಿವೆ. ಇವೆರಡೂ ಮೆಟ್ರೋಪಾಲಿಟನ್ ಬಂಡವಾಳಶಾಹಿಯೊಂದಿಗೆ ಸಂಬಂಧ ಹೊಂದಿವೆ. ಮೊದಲನೆಯದು, ಪೇಟೆಂಟ್ ಆಧಾರಿತ ಏಕಸ್ವಾಮ್ಯ ನಿರ್ಬಂಧಗಳಿಂದಾದ ಲಸಿಕೆಗಳ ಅಸಮರ್ಪಕ ಪ್ರಮಾಣದ ಉತ್ಪಾದನೆಯ ಬಹು ದೊಡ್ಡ ಭಾಗವನ್ನು ಮುಂದುವರಿದ ದೇಶಗಳೇ ಖರೀದಿಸಿವೆ. ಈ ವಿದ್ಯಮಾನವು ಆಸ್ತಿ ಹಕ್ಕುಗಳೊಂದಿಗೆ ತಳುಕು ಹಾಕಿಕೊಂಡಿದೆ. ಎರಡನೆಯದು, ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಿಗೆ ಹೋಲಿಸಿದರೆ ಮೂರನೇ ಜಗತ್ತಿನ ದೇಶಗಳಲ್ಲಿ ಲಸಿಕೆ ಕಾರ್ಯಕ್ರಮಗಳಿಗೆ ಹಣಕಾಸಿನ ಕೊರತೆ ಅಡ್ಡಿಯಾಗುತ್ತದೆ. ಮುಂದುವರೆದ ದೇಶಗಳು ಮತ್ತು ಮೂರನೆಯ ಜಗತ್ತಿನ ದೇಶಗಳ ನಡುವಿನ ಈ ದ್ವಂದ್ವವು ಕೆಲವು ಸಮಯದಿಂದಲೂ ಕಾಣಿಸಿಕೊಳ್ಳುತ್ತಿದೆ: ಸಾಂಕ್ರಾಮಿಕದ ಸಮಯದಲ್ಲಿ ಅನೇಕ ಮುಂದುವರಿದ ದೇಶಗಳಲ್ಲಿ ಜನರಿಗೆ ದೊರೆತ ನೆರವು/ಬೆಂಬಲವು ಬಜೆಟ್‌ನ ಶೇಕಡಾ 20ರಷ್ಟಿದ್ದರೆ, ಮೂರನೆಯ ಜಗತ್ತಿನ ದೇಶಗಳಲ್ಲಿ ಅದು ಕೇವಲ ಶೇಕಡಾ ಎರಡರ ಆಸುಪಾಸಿನಲ್ಲಿದೆ. ಲಸಿಕೆಗೆ ಒದಗಿಸಿದ ಸಬ್ಸಿಡಿಯ ವಿಷಯದಲ್ಲೂ ಇದೇ ದ್ವಂದ್ವವನ್ನು ಕಾಣಬಹುದು. ಮುಂದುವರಿದ ದೇಶಗಳಲ್ಲಿ ಜನರಿಗೆ ಲಸಿಕೆಗಳು ಉಚಿತವಾಗಿ ದೊರಕಿದರೆ, ಮೂರನೆಯ ಜಗತ್ತಿನ ದೇಶಗಳಲ್ಲಿ ಲಸಿಕೆಗಳ ಬೆಲೆಗಳು ಬಡವರಿಗೆ ಕೈಗೆಟುಕದ ಮಟ್ಟದಲ್ಲಿವೆ. ಹಾಗಾಗಿ ಅವರು ಲಸಿಕೆ ಚುಚ್ಚಿಸಿಕೊಳ್ಳುವ ಸಾಧ್ಯತೆಗಳು ಕಡಿಮೆಯೇ.

ವಿಪರ್ಯಾಸವೆಂದರೆ, ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವ ಕ್ರಮವನ್ನು ಒಪ್ಪುವ ಇದೇ ಐಎಂಎಫ್, ಮೂರನೇ ಜಗತ್ತಿನ ದೇಶಗಳಿಗೆ ಸಾಲ ಕೊಡುವಾಗ ಅಥವಾ ಅವರ ಹಳೆಯ ಸಾಲಗಳನ್ನು ನವೀಕರಿಸುವ ಸಂದರ್ಭಗಳಲ್ಲಿ ಮಿತವ್ಯಯ ಕ್ರಮಗಳನ್ನು ಪಾಲಿಸಬೇಕೆಂಬ ಒಂದು ಷರತ್ತನ್ನು ಹೇರುತ್ತದೆ. ಹಾಗಾಗಿ, ಲಸಿಕೆ ವರ್ಣಭೇದ ನೀತಿಯ ಈ ಎರಡನೇ ಅಂಶವು ಹಣಕಾಸು ಬಂಡವಾಳವು ಹೊಂದಿರುವ ಹಿಡಿತಕ್ಕೆ ಸಂಬಂಧಿಸುತ್ತದೆ. ಈ ಹಣಕಾಸು ಬಂಡವಾಳವು ತನ್ನ ಸ್ವಂತ ಹಿತಾಸಕ್ತಿಗಳನ್ನು ಹೊರತುಪಡಿಸಿ, ಸರ್ಕಾರದ ಯಾವುದೇ ಕ್ರಿಯಾಶೀಲತೆಯನ್ನು ವಿರೋಧಿಸುತ್ತದೆ. ಐಎಂಎಫ್ ಮತ್ತು ಹಣಕಾಸು ಬಂಡವಾಳಗಳ ಮನೋಭಾವದ ಬಗ್ಗೆ ಮಾತನಾಡುವ ಈ ಸಂದರ್ಭದಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ, ಎಲ್ಲರಿಗೂ ಉಚಿತ ಲಸಿಕೆಗಳನ್ನು ಒದಗಿಸಲು ಸರ್ಕಾರ ಹಿಂಜರಿಯುತ್ತಿರುವುದು ಐಎಂಎಫ್ ಹೇರಿದ ಮಿತವ್ಯಯದ ಷರತ್ತಿನಿಂದಾಗಿ ಅಲ್ಲ, ಬದಲಿಗೆ, ಅದು ಮೋದಿ ಸರ್ಕಾರದ ನಿರ್ದಯ ಮತ್ತು ದಬ್ಬಾಳಿಕೆಯ ಮನೋಭಾವದಿಂದಾಗಿ ಎಂದು ಹೇಳಲಡ್ಡಿಯಿಲ್ಲ.

ಇದನ್ನು ಓದಿ: ಕೋವಿಡ್‌-19: ಲಸಿಕೆಯೇ ಅಂತಿಮ ಅಸ್ತ್ರ

ಒಂದು ಅಂದಾಜಿನ ಪ್ರಕಾರ, ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸುಮಾರು $50 ಬಿಲಿಯನ್‌ಗಿಂತ ಹೆಚ್ಚು ವೆಚ್ಚವಾಗಲಾರದು. ಅಷ್ಟು ಹಣವನ್ನು ಮುಂದುವರೆದ ಬಂಡವಾಳಶಾಹಿ ದೇಶಗಳು ಸುಲಭವಾಗಿ ಹೊಂದಿಸಬಹುದು ಮತ್ತು ಅದನ್ನು ಮರುಪಾವತಿ ಇಲ್ಲದ ಒಂದು ವರ್ಗಾವಣೆಯಾಗಿ ಮೂರನೇ ಜಗತ್ತಿನ ದೇಶಗಳಿಗೆ ನೀಡಬಹುದು. ವಿಪರ್ಯಾಸವೆಂದರೆ, “ಎಲ್ಲರೂ ಕ್ಷೇಮವಾಗಿರದ ಹೊರತು ಯಾರೂ ಕ್ಷೇಮವಲ್ಲ” ಎಂಬ ಹಳಸಲು ಸತ್ಯವನ್ನು ಜಿಗುಪ್ಸೆ ಬರುವ ಮಟ್ಟಿಗೆ ಕಿಸಬಾಯಿ ದಾಸರಂತೆ ಎಲ್ಲರೂ ಹಾಡುತ್ತಾರಾದರೂ, ಅಂತಹ ಕ್ರಮವನ್ನು ಜಾರಿಗೊಳಿಸುವ ಯಾವ ಸೂಚನೆಯೂ ಗೋಚರಿಸುತ್ತಿಲ್ಲ.

ಪೇಟೆಂಟ್ ಹಕ್ಕುಗಳ ಅಧಿಕಾರವನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವುದು ತಕ್ಷಣವೇ ಶಕ್ಯವಲ್ಲದಿದ್ದರೆ, ಕಡ್ಡಾಯ ಲೈಸೆನ್ಸಿಂಗ್ ಮೂಲಕವೂ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಬಹುದು. ಇಂತಹ ಉದ್ದೇಶಗಳಿಗಾಗಿಯೇ “ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಂದರ್ಭ” ಎಂಬ ಒಂದು ನಿಬಂಧನೆಯನ್ನು ವಿಶ್ವ ವ್ಯಾಪರ ಸಂಸ್ಥೆಯು ಕಲ್ಪಿಸಿದೆ. ಈ ನಿಯಮವನ್ನು ಬಳಸಿಕೊಳ್ಳಲು ಪ್ರಸ್ತುತ ಪರಿಸ್ಥಿತಿಯು ಅತ್ಯಂತ ಸೂಕ್ತವೂ ಹೌದು ಮತ್ತು ಅರ್ಹವೂ ಹೌದು. ಭಾರತದ ಪೇಟೆಂಟ್ ಕಾಯ್ದೆಯ 16ನೇ ಅಧ್ಯಾಯವನ್ನು “ಟ್ರಿಪ್ಸ್-ಸಂಗತ” ವಾಗಿರುವಂತೆ ಮಾಡಲಾಗಿರುವ ತಿದ್ದುಪಡಿಯು ಕಡ್ಡಾಯ ಲೈಸೆನ್ಸ್ ನೀಡುವ ಅವಕಾಶವನ್ನೂ ಕಲ್ಪಿಸಿದೆ.

ಕಡ್ಡಾಯ ಲೈಸೆನ್ಸಿಂಗ್ ಮತ್ತು ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವುದು ಈ ಎರಡೂ ಕ್ರಮಗಳ ಸದ್ಯದ ಉದ್ದೇಶ ಒಂದೇ. ಒಂದು “ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಂದರ್ಭ”ದಲ್ಲಿ, ಲಸಿಕೆಗಳ ಉತ್ಪಾದನೆಯನ್ನು ಘನವಾಗಿ ವಿಸ್ತರಿಸಬೇಕಾದ ಅವಶ್ಯಕತೆ ಇರುವಾಗ, ಮೂಲ ಪೇಟೆಂಟ್‌ದಾರರು ತಮಗೆ ತೋಚಿದಾಗ ಲಸಿಕೆಗಳನ್ನು ಉತ್ಪಾದಿಸುವವರೆಗೂ ಜಗತ್ತು ಕಾಯಲು ಸಾಧ್ಯವಿಲ್ಲ. ಪರಿಸ್ಥಿತಿ ಹಾಗಿದ್ದರೂ ಸಹ, ಬಹುರಾಷ್ಟ್ರೀಯ ಔಷಧ ಕಂಪನಿಗಳು ಮತ್ತು ಅವುಗಳನ್ನು ಬೆಂಬಲಿಸುವ ಬಂಡವಾಳಶಾಹಿ ದೇಶಗಳ ಸರ್ಕಾರಗಳು ಮಾತ್ರವಲ್ಲದೆ, ಪೇಟೆಂಟ್-ಮನ್ನಾವನ್ನು ಬೆಂಬಲಿಸುವ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳ ನಡುವೆ ಕಡ್ಡಾಯ ಲೈಸೆನ್ಸಿಂಗ್ ಬಗ್ಗೆ ಹೆಚ್ಚಿನ ವಿರೋಧವಿದೆ. ಕುತೂಹಲಕಾರಿ ಸಂಗತಿಯೆಂದರೆ, ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವಂತೆ ಬೇರೆ ಬೇರೆ ದೇಶಗಳನ್ನು ದಕ್ಷಿಣ ಆಫ್ರಿಕಾದ ಜೊತೆಗೂಡಿ ಕೋರಿದ್ದ ಇದೇ ಭಾರತ ಸರ್ಕಾರವು ಯಾವ ಅಳುಕೂ ಇಲ್ಲದೆ ಇದೇ ಕಡ್ಡಾಯ ಲೈಸೆನ್ಸಿಂಗ್ ಕ್ರಮವನ್ನು ತಳ್ಳಿಹಾಕಿದೆ. ಅದರ “ಚಿಂತಕರ ಚಾವಡಿ” ಎಂದೇ ಕರೆಯಲಾದ ನೀತಿ ಆಯೋಗವು ಈ ವಿಚಾರವನ್ನು ಸಾರ್ವಜನಿಕವಾಗಿಯೇ ತಳ್ಳಿಹಾಕಿದೆ.

ಇದನ್ನು ಓದಿ: ಸಮಾಜವಾದ ಮಾತ್ರವೇ ಮೋದಿಯನ್ನು ಸೋಲಿಸಬಲ್ಲದು

ಪರಿಸ್ಥಿತಿ ಹೀಗಿರಬೇಕು ಏಕೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಕಡ್ಡಾಯ ಲೈಸೆನ್ಸಿಂಗ್‌ನಂತಹ ಒಂದು ಏಕಪಕ್ಷೀಯ ಕ್ರಮವನ್ನು ಕೈಗೊಂಡಾಗ ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಮತ್ತು ಅವುಗಳ ಹಿಂದೆ ನಿಂತಿರುವ ಮುಂದುವರೆದ ದೇಶಗಳ ಸರ್ಕಾರಗಳಿಗೆ ಕೋಪ ಬರುತ್ತದೆ ಎಂಬ ಅಳುಕು ಅಥವಾ ಭಯ ಮೋದಿ ಸರ್ಕಾರದ ಹಿಂಜರಿಕೆಗೆ ಒಂದು ವಿವರಣೆಯಾಗಬಹುದು. ಆದರೆ, ಈ ಭಯ ಅಥವಾ ಅಳುಕಿನ ಪರಿಣಾಮವಾಗಿ ಸಾವಿರಾರು ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಮೋದಿ ಸರ್ಕಾರದ ಪುಕ್ಕುಲುತನವು ಎದ್ದು ಕಾಣುತ್ತದೆ – ರಾಜಧಾನಿ ದೆಹಲಿಯಲ್ಲಿ ಲಸಿಕೆಗಳ ದಾಸ್ತಾನು ಇಂಗಿ ಹೋಗಿ ಈಗ (ಜೂನ್ 7) ಎರಡು ವಾರಗಳಾಗಿವೆ.

ಅಂತರರಾಷ್ಟ್ರೀಯ ಸಹಕಾರದ ಬಗ್ಗೆ ಮನಸ್ಸು ಕರಗುವಂತೆ ಹೇಳುವ ಧರ್ಮೋಪದೇಶದ ಮಾತುಗಳಲ್ಲಿ ಅಥವಾ ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕುವ ಅಗತ್ಯದ ಬಗ್ಗೆ ಹೇಳುವ ಉಪಚಾರದ ಮಾತುಗಳಲ್ಲಿ ತೂಕ ಇದ್ದರೆ, ತಕ್ಷಣವೇ, ಅಂದರೆ ಈ ಮಾತುಗಳನ್ನು ಹೇಳುವ ಸಮಯದಲ್ಲೇ, ಪೇಟೆಂಟ್ ಮನ್ನಾ ಅಥವಾ ಕಡ್ಡಾಯ ಲೈಸೆನ್ಸಿಂಗ್ ಕ್ರಮವನ್ನು ಒತ್ತಾಯಿಸಬೇಕಾಗುತ್ತದೆ. ಏಕೆಂದರೆ, ಈ ವಿಷಯವು ಒಂದು ಮೂಲಭೂತ ತತ್ವವನ್ನು ಒಳಗೊಂಡಿದೆ: ಒಬ್ಬ ಭಾರತೀಯ ಅಥವಾ ಆಫ್ರಿಕನ್ ಅಥವಾ ಲ್ಯಾಟಿನ್ ಅಮೇರಿಕನ್ ವ್ಯಕ್ತಿಯ ಜೀವಿಸುವ ಹಕ್ಕು ಯಾವ ರೀತಿಯಲ್ಲಿ ಒಬ್ಬ ಯುರೋಪಿಯನ್ ಅಥವಾ ಅಮೇರಿಕನ್ ವ್ಯಕ್ತಿಯ ಜೀವಿಸುವ ಹಕ್ಕಿಗಿಂತ ಭಿನ್ನವಾಗಿದೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಬಯಸುವ ಯಾವುದೇ ಸಹಕಾರವು, ಒಂದು ಬಡ ದೇಶದ ವ್ಯಕ್ತಿಯ ಜೀವನವು ಶ್ರೀಮಂತ ದೇಶದ ವ್ಯಕ್ತಿಯ ಜೀವನದಷ್ಟೇ ಅಮೂಲ್ಯವಾದದ್ದು ಎಂಬ ಮೂಲಭೂತ ಭಾವನೆಯನ್ನು ಆಧರಿಸಿರಬೇಕು. ಈ ಭಾವನೆಯನ್ನು ನಿರಾಕರಿಸಿ ಅಂತರರಾಷ್ಟ್ರೀಯ ಸಹಕಾರವನ್ನು ಕೇಳುವುದು ಅನ್ಯಾಯವನ್ನೇ ನ್ಯಾಯವೆಂದು ಸಾಧಿಸುವ ಮೋಸವಾಗುತ್ತದೆ ಅಥವಾ ಒಂದು ವಿತಂಡ ವಾದವಾಗುತ್ತದೆ.

ಯಾವುದೇ ಒಂದು ಸರ್ಕಾರವು ತನ್ನ ಯಾವುದೇ ಅಂತರರಾಷ್ಟ್ರೀಯ ಋಣ ತೀರಿಸುವ ಮೊದಲು ತನ್ನ ದೇಶದ ನಾಗರಿಕರ ಜೀವನಕ್ಕೆ ಆದ್ಯತೆ ನೀಡಬೇಕಾಗುತ್ತದೆ ಎಂಬುದು ಸರಿಯೇ. ಆದರೆ, ಈಗ ಮುಂದುವರಿದ ದೇಶಗಳ ಸರ್ಕಾರಗಳ ಮುಂದಿರುವ ಪ್ರಶ್ನೆ ನಿಜಕ್ಕೂ ತಮ್ಮ ದೇಶದ ನಾಗರಿಕರ ಜೀವನದ ಮತ್ತು ಇತರ ದೇಶಗಳ ನಾಗರಿಕರ ಜೀವನದ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಅದು ಖಾಸಗಿ ಆಸ್ತಿ-ಹಕ್ಕುಗಳನ್ನು ರಕ್ಷಿಸುವ ಅಗತ್ಯದಿಂದ ಉದ್ಭವವಾದ ಪ್ರಶ್ನೆ. ಈ ಅಗತ್ಯದ ಹಿನ್ನೆಲೆಯಲ್ಲಿ ಲಸಿಕೆಗಳ ಒಟ್ಟಾರೆ ಕೊರತೆ ಉಂಟಾಗಿದೆ. ಈ ಕೊರತೆಯು ಕೃತಕವಾದದ್ದು. ಈ ಕೊರತೆಯ ಪರಿಣಾಮವಾಗಿ ಒಂದು ಗುಂಪಿನ ಜನರ ಜೀವನವನ್ನು ಇನ್ನೊಂದು ಗುಂಪಿನ ಜನರ ಜೀವನದ ವಿರುದ್ಧ ನಿಲ್ಲಿಸಲಾಗುತ್ತಿದೆ. ಒಂದು ಗುಂಪಿನ ಜನರ ಖಾಸಗಿ ಆಸ್ತಿ-ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಲಸಿಕೆಗಳ ಉತ್ಪಾದನೆಯ ಹೆಚ್ಚಳವನ್ನು ತಡೆಹಿಡಿಯಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಜನರು ಮತ್ತು ಜನರ ನಡುವಿನ ಪ್ರಶ್ನೆಯಲ್ಲ, ಆದರೆ ಜನರು ಮತ್ತು ಲಾಭಗಳ ವಿರುದ್ಧದ ಒಂದು ಪ್ರಶ್ನೆ.

ಗಮನಾರ್ಹವಾದ ವಿಷಯವೆಂದರೆ, ಮುಂದುವರಿದ ದೇಶಗಳಲ್ಲಿನ ಜನರು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ವಾಸ್ತವವಾಗಿ ಲಸಿಕೆಗಳ ಮೇಲಿನ ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವುದರ ಪರವಾಗಿದ್ದಾರೆ. ಸರ್ಕಾರಗಳು, ಅದರಲ್ಲೂ ವಿಶೇಷವಾಗಿ ಯುರೋಪಿನ ಕೆಲವು ದೇಶಗಳ ಸರ್ಕಾರಗಳು ಈ ಕ್ರಮವನ್ನು ವಿರೋಧಿಸುತ್ತಿವೆ. ಈ ಸರ್ಕಾರಗಳು ವರ್ಗ ಹಿತಾಸಕ್ತಿಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಕಾಳಜಿ ವಹಿಸುತ್ತಿರುವ ಸಂದರ್ಭದಲ್ಲಿ, ಈ ದೇಶಗಳ ಜನ ಸಾಮಾನ್ಯರು ಅಂತರರಾಷ್ಟ್ರೀಯ ಐಕ್ಯತೆಯ ಪರವಾಗಿ ನಿಂತಿರುವುದು ಗಮನಾರ್ಹವಾಗಿದೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *