ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾಗೇಡು ಹತ್ಯೆ ಪ್ರಕರಣವನ್ನು ಖಂಡಿಸಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಶುಕ್ರವಾರ (ಡಿ.26) ಸಂಜೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು.
ಡಿಸೆಂಬರ್ 21 ರಂದು ಆಕೆ ಗರ್ಭಿಣಿಯಿದ್ದಾಗಲೇ ಅವಳ ತಂದೆ ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ, ಆಕೆಯ ಗಂಡ ಮತ್ತವನ ತಂದೆತಾಯಿಗಳ ಮೇಲೂ ದೈಹಿಕವಾಗಿ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಲಿಂಗಾಯಿತ ಸಮುದಾಯದ ಯುವತಿ ಮಾನ್ಯ ಎಂಬಾಕೆ ವಿವೇಕಾನಂದ ಎನ್ನುವ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದ ಕಾರಣ ಕೃತ್ಯವನ್ನು ಖಂಡಿಸುವ ಜೊತೆಗೆ, ಮರ್ಯಾದೆಗೇಡು ಹತ್ಯೆಗಳ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಇದನ್ನೂ ಓದಿ : ಬೆಂಗಳೂರು | ಕನ್ನಡ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ಸಿಐಐಎಲ್‌ನಿಂದ ಅನ್ಯಾಯ
ಸ್ವಂತ ಮಗಳ ಜೀವ ತೆಗೆಯುವುದು ಜಾತಿ ವ್ಯವಸ್ಥೆಯ ಕ್ರೌರ್ಯ. ಇಂತಹ ಕೃತ್ಯಗಳು ಸಂವಿಧಾನದ ಆಶಯವಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಮೌಲ್ಯಗಳಿಗೆ ಹೊಡೆತ ನೀಡುತ್ತವೆ ಎಂದು ಕಿಡಿಕಾರಿದ್ದಾರೆ. “ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಹತ್ಯೆಗಳಲ್ಲಿ ಯಾವ ಗೌರವದ ವಿಚಾರವೂ ಇಲ್ಲ. ಇದೊಂದು ಜಾತಿಗ್ರಸ್ತ ಸಮಾಜ ಎಸಗುವ ಕ್ರೂರ ಕೊಲೆಯಷ್ಟೇ. ಈ ಹತ್ಯೆಗಳು ಜಾತಿ ಮತ್ತು ಪಿತೃಪ್ರಭುತ್ವ ಸಮಾಜದ ಸಾಧನಗಳಾಗಿವೆ. ಭಯ ಮತ್ತು ಭಯೋತ್ಪಾದನೆಯ ಮೂಲಕ ಜಾತಿ ವ್ಯವಸ್ಥೆಯನ್ನು ಹೇರುವ, ಮಹಿಳೆಯರ ದೇಹ ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸಲು ನಿರಂತರವಾಗಿ ಯತ್ನಿಸಲಾಗುತ್ತಿದೆ ಎಂದು ಅಗ್ರಹಿಸಿದರು.
ಮರ್ಯಾದೆಗೇಡು ಹತ್ಯೆಗಳು ಮತ್ತು ಜಾತಿ ದೌರ್ಜನ್ಯಗಳನ್ನು ತಡೆಗಟ್ಟಲು, ಪರಿಹಾರ ಕ್ರಮಗಳನ್ನು ರೂಪಿಸಲು ಹಾಗೂ ಶಿಕ್ಷಾರ್ಹ ಕ್ರಮಗಳನ್ನು ಜಾರಿಗೊಳಿಸಲು ನ್ಯಾಯಾಲಯವು ಸರ್ಕಾರಗಳಿಗೆ ಸೂಚನೆ ನೀಡಿದೆ. ಆದರೆ, ಜಾತಿ ರಾಜಕಾರಣದಲ್ಲಿ ಮುಳುಗಿರುವ ಸರ್ಕಾರಗಳು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿವೆ. ಪರಿಣಾಮ, ಇಂತಹ ಹೇಯ ಕೃತ್ಯಗಳು ನಡೆಯುತ್ತಿವೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮರ್ಯಾದೆಗೇಡು ಹತ್ಯೆಗಳು ಕಠಿಣ ಶಿಕ್ಷೆಗೆ ಅರ್ಹವಾದ ಅನಾಗರಿಕ ಮತ್ತು ನಾಚಿಕೆಗೇಡಿನ ಕೊಲೆ ಕೃತ್ಯಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಾತಿ ವ್ಯವಸ್ಥೆಯು ಭಾರತಕ್ಕೆ ಎದುರಾಗಿರುವ ಶಾಪವಾಗಿದೆ. ಅಂತರ್ಜಾತಿ ವಿವಾಹಗಳು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಂವಿಧಾನದ ಆಶಯವನ್ನು ಬಲಪಡಿಸುತ್ತವೆ ಎಂಬುದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದರು ಇನ್ನೂ ಈ ಕೃತ್ಯಗಳು ನಿಲ್ಲುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ದಸಂಸ ಒಕ್ಕೂಟ, ದಲಿತ ಸಂಘರ್ಷ ಸಮಿತಿ (ಸಂಯೋಜಕ), ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ, ತಮಟೆ ಮೀಡಿಯಾ, ಎಐಎಸ್‌ಎ, ಸ್ಲಂ ಜನಾಂದೋಲನ – ಕರ್ನಾಟಕ, ಸ್ಲಂ ಜನರ ಸಂಘಟನೆ – ಕರ್ನಾಟಕ, ಜನವಾದಿ ಮಹಿಳಾ ಸಂಘಟನೆ, ಬಯಲು ಬಳಗ, ಎಐಸಿಸಿಟಿಯು, ಎಐಎಂಎಸ್‌ಎಸ್, ಎಐಪಿಡಬ್ಲ್ಯೂಎ, ಎನ್‌ಎಫ್‌ಐಡಬ್ಲ್ಯೂ, ಬಹುತ್ವ ಕರ್ನಾಟಕ, ನಾವೆದ್ದು ನಿಲ್ಲದಿದ್ದರೆ, ಎಸ್‌ಎಫ್‌ಐ, ಡಿಎಚ್‌ಎಸ್, ಗಮನ ಮಹಿಳಾ ಸಮೂಹ, ಪಿ.ಯು.ಸಿ.ಎಲ್ – ಕರ್ನಾಟಕ , ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು:
- ಮಾನ್ಯ ಅವರ ಪತಿಯ ಕುಟುಂಬಕ್ಕೆ ಸರ್ಕಾರವು ರಕ್ಷಣೆ ಮತ್ತು ಪರಿಹಾರ ನೀಡಬೇಕು.
- ವಿವೇಕಾನಂದ ಅವರ ಬದುಕಿನ ಖಾತ್ರಿಗಾಗಿ ಅವರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು.
- ಪ್ರಕರಣದಲ್ಲಿ ಸರ್ಕಾರವು ನ್ಯಾಯಯುತ, ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕೃತ್ಯ ಎಸಗಿದ
- ಕೃತ್ಯಕ್ಕೆ ಪ್ರೋತ್ಸಾಹ ನೀಡಿದ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
- ರಾಜ್ಯ ಸರ್ಕಾರವು ಸಾರ್ವಜನಿಕ ಸಮಾಲೋಚನೆ ಸೇರಿದಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು.
- ಇದರಲ್ಲಿ ಮರ್ಯಾದೆಗೇಡು ಅಪರಾಧಗಳನ್ನು ತಡೆಗಟ್ಟುವಿಕೆ, ಸಂತ್ರಸ್ತರ ರಕ್ಷಣೆ, ಸಾಕ್ಷಿಗಳ ರಕ್ಷಣೆ, ಪರಿಹಾರ
- ಕ್ರಮಗಳು ಹಾಗೂ ವಿವಾಹ ಆಯ್ಕೆಯ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ದೃಢೀಕರಿಸಲು ಮತ್ತು ರಕ್ಷಿಸಲು ಅಗತ್ಯ ಕ್ರಮಗಳನ್ನು ಒಳಗೊಂಡಿರಬೇಕು.
- ಮರ್ಯಾದೆಗೇಡು ಹತ್ಯೆಗಳ ತಡೆಗೆ ಸಂಬಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಜಾತಿ ಆಧಾರಿತ ಹಿಂಸೆ ಮತ್ತು ಪಿತೃಪ್ರಧಾನ ಧೋರಣೆಗಳು ಎದುರಿಸಲು ಮತ್ತು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸಲು ಪೊಲೀಸ್, ಸ್ಥಳೀಯ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
- ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದ ಆಶಯಗಳನ್ನು ಖಾತ್ರಿಪಡಿಸಲು ಸರ್ಕಾರಗಳು ಜಾತಿಯ ಸಂಪೂರ್ಣ ನಿರ್ಮೂಲನೆಗೆ ಮುಂದಾಗಬೇಕು.
ಇದನ್ನೂ ನೋಡಿ : ‘ಮರ್ಯಾದೆಗೇಡು ಹತ್ಯೆ’ ಮರ್ಯಾದೆ ಉಳಿಸಿಕೊಳ್ಳಲಿ ಸರ್ಕಾರ!? ಕೆ.ಎಸ್.ವಿಮಲಾ, ಗುರುರಾಜ ದೇಸಾಯಿ ಮಾತುಕತೆ Janashakthi
