ಅಮೆರಿಕೆಯ ಪಾರ್ಲಿಮೆಂಟರಿ ಸಮಿತಿಯು ನೀಡಿರುವ ವರದಿಯು ವಿದೇಶೀ ಸಂಸ್ಥೆಗಳೆಲ್ಲವೂ ಉತ್ತಮ ಆಡಳಿತ ತಂತ್ರಗಳನ್ನು ಅನುಸರಿಸುತ್ತಿದ್ದವು ಎಂದು ಹೇಳಲಾಗದು ಎಂಬುದನ್ನು ತೋರಿಸಿದೆ. ಇದಲ್ಲದೆ ಈ ವಿದೇಶೀ ಸಂಸ್ಥೆಗಳು ತಮ್ಮ ಹಣವನ್ನು ಅತೀ ಹೆಚ್ಚು ಪ್ರತಿಫಲ ನೀಡುವ ಹೆಚ್ಚು ಅವಧಿಗೆ ಕಾಯದೇ ಬಹುಬೇಗ ಲಾಭ ನೀಡುವ ಅವಿಶ್ವಾಸಾರ್ಹ ಯೋಜನೆಗಳಲ್ಲಿ ತೊಡಗಿಸುತ್ತವೆ. ಹೀಗೆ ವಿದೇಶೀ ನೇರ ಬಂಡವಾಳವು ತನ್ನೊಂದಿಗೆ ತೀವ್ರ ಸ್ಪರ್ಧೆಯನ್ನು ಮಾತ್ರವಲ್ಲ, ದೇಶ ನಿರ್ಮಾಣದ ರಾಷ್ಟ್ರೀಯ ಕಾರ್ಯಯೋಜನೆಗೆ ತದ್ವಿರುದ್ಧವಾಗಿ ಲಾಭವೇ ಪ್ರಧಾನವಾದ ಹೂಡಿಕೆಗಳ ಪ್ರತಿನಿಧಿಗಳನ್ನೂ ತರುತ್ತವೆ. ಹಾಗಾಗಿ ವ್ಯಕ್ತಿಗತ ನೆಲೆಯಲ್ಲಿ ಖಾಸಗಿ ನಷ್ಟವನ್ನು ಮಾತ್ರವಲ್ಲ, ದೇಶದ ಜನತೆಯ ಒಳಿತಿಗಾಗಿ ಹಣಕಾಸು ಹೂಡುವ ನಿರ್ದೇಶನ ಕೊಡುವ ಸರ್ಕಾರದ ಅಧಿಕಾರವನ್ನೂ ನಷ್ಟಗೊಳಿಸುತ್ತದೆ. ಖಾಸಗಿ ಒಡೆತನದ ಅಪಾಯ ಮತ್ತು ಸಾರ್ವಜನಿಕ ಒಡೆತನದ ಲಾಭಗಳು ವಿಮೆಯಲ್ಲಿ ವಿದೇಶೀ ನೇರ ಬಂಡವಾಳದ ಹೂಡಿಕೆಯನ್ನು ಒಂದು ಅವಿವೇಕದ ನಡೆಯನ್ನಾಗಿಸುತ್ತದೆ.
ಪ್ರೊ. ಸಿ.ಪಿ. ಚಂದ್ರಶೇಖರ್
ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳವನ್ನು ಶೇ.49 ರಿಂದ ಶೇ.74 ಕ್ಕೆ ಹೆಚ್ಚಿಸಲು ಅನುವು ಮಾಡಿಕೊಡಲು ವಿಮಾ ಮಸೂದೆ 1938ಕ್ಕೆ ಸೂಕ್ತ ತಿದ್ದುಪಡಿಗೆ ಮಂತ್ರಿಮಂಡಳವು ಅನುಮೋದನೆ ನೀಡುವುದರೊಂದಿಗೆ ಭಾರತದ ವಿಮಾ ಉದ್ದಿಮೆಯ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ಕಡಿತ ಮಾಡುವ ಮುಂದಿನ ಹಂತದ ಪ್ರಕ್ರಿಯೆಯು ಜಾರಿಯಾಗುತ್ತಿದೆ. ಈ ಮಸೂದೆಯು ಅಂಗೀಕಾರವಾಗಿ ಜಾರಿಯಾದಲ್ಲಿ ಭಾರತದ ಬಹುತೇಕ ವಿಮಾಸಂಸ್ಥೆಗಳಲ್ಲಿ ವಿದೇಶೀ ನೇರ ಬಂಡವಾಳಕ್ಕೆ ಹೆಚ್ಚಿನ ನಿಯಂತ್ರಣ ದೊರೆಯುತ್ತದೆ.
ಬಹುಶಃ ಒಂದು ವಿಧದ ಆರ್ಥಿಕ ರಾಷ್ಟ್ರೀಯತಾವಾದ ಮಂಡಿಸುವ ಸ್ವದೇಶೀ ಜಾಗರಣ ಮಂಚ್‌ನಂತಹ ಸಂಸ್ಥೆಗಳನ್ನು ಸಮಾಧಾನಪಡಿಸಲು, ಇಂತಹ ವಿದೇಶೀ ನಿಯಂತ್ರಣದ ಸಂಸ್ಥೆಗಳ ಮೇಲುಸ್ತುವಾರಿಯನ್ನು ಸ್ಥಳೀಯ ಖಾಸಗಿ ಪಾಲುದಾರರು/ಸಂಸ್ಥೆಗಳು ನಡೆಸುತ್ತವೆ ಎಂದು ಹಣಕಾಸು ಮಂತ್ರಿಗಳು ಭರವಸೆ ನೀಡಿದ್ದಾರೆ. ಹಾಗಾಗಿ ಅವರು ‘ಹಿತರಕ್ಷಣಾ’ ಕ್ರಮಗಳಾಗಿ “ಆಡಳಿತದ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಹುತೇಕ ನಿರ್ದೇಶಕರು ಭಾರತದಲ್ಲೇ ನೆಲೆಸಿರುವ ಭಾರತೀಯರಾಗಿರುತ್ತಾರೆ. ಕೊನೆ ಪಕ್ಷ ಶೇ.50ರಷ್ಟು ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ” ಮತ್ತು ಲಾಭದ (ಇನ್ನೂ ನಿಗದಿಯಾಗದಿರುವ) ಒಂದು ಅಂಶವನ್ನು ಮೀಸಲು ಧನವಾಗಿಡಲು ಆರ್ಥಿಕ ನಿಯಮವಿರುತ್ತದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಬಂಡವಾಳ ಹಿಂತೆಗೆತದಿಂದ ಖಾಸಗೀಕರಣದತ್ತ
ವಿದೇಶೀ ನೇರ ಬಂಡವಾಳ ಹೆಚ್ಚಳದ ಈ ಪ್ರಸ್ತಾಪದ ಜೊತೆ ಜೊತೆಗೇ, ಸಾರ್ವಜನಿಕ ವಲಯದ (ಕನಿಷ್ಠ ಒಂದು) ಸಾಮಾನ್ಯ ವಿಮಾ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಮತ್ತು ಗೌರವಾನ್ವಿತ ಭಾರತೀಯ ಜೀವ ವಿಮಾ ನಿಗಮದ ಶೇರುಗಳ ಆರಂಭಿಕ ಸಾರ್ವಜನಿಕ ಮಾರಾಟಕ್ಕೆ ತೆರೆಯುವ (ಐ.ಪಿ.ಒ.) ಪ್ರಸ್ತಾಪವನ್ನೂ ಮಾಡಲಾಗಿದೆ.
ಸಾಮಾನ್ಯ ವಿಮಾ ಸಂಸ್ಥೆಯ ಬಂಡವಾಳ ಹಿಂತೆಗೆತದ ಬದಲಿಗೆ ನೇರವಾಗಿ ಖಾಸಗೀಕರಣವೆಂದೇ ಹೇಳಿರುವುದು ಬದಲಾದ ದೃಷ್ಟಿಕೋನವನ್ನು ಸೂಚಿಸುತ್ತದೆ. ಬಂಡವಾಳ ಹಿಂತೆಗೆತದಲ್ಲಿ ಎರಡು ಪ್ರಮುಖ ಲಕ್ಷಣಗಳಿದ್ದವು. ಮೊದಲನೆಯದೆಂದರೆ, ಸಾರ್ವಜನಿಕ ಸಂಸ್ಥೆಯ ಶೇರುಗಳ ಮಾರಾಟದ ನಂತರವೂ ಆ ಸಂಸ್ಥೆಯ ವ್ಯವಹಾರದ ಮೇಲೆ ಸರ್ಕಾರದ ನಿಯಂತ್ರಣ ಮುಂದುವರೆಯುತ್ತಿತ್ತು. ಈ ಮೂಲಕ ಸಂಸ್ಥೆಯನ್ನು ಮುನ್ನಡೆಸುವ ಆಡಳಿತ ಮಂಡಳಿ ಮತ್ತು ನಿಯಂತ್ರಿಸುವ ಸರ್ಕಾರವನ್ನು, ಈ ಎರಡರ ಮೇಲೂ ಅಲ್ಪಸಂಖ್ಯೆಯ ಬಂಡವಾಳದಾರರು ಸ್ವಲ್ಪಮಟ್ಟಿನ ಕಣ್ಣಾವಲಿಡುವ ಸಾಧ್ಯತೆಯ ಮೂಲಕ ಶಿಸ್ತುಬದ್ಧಗೊಳಿಸಲು ಇದು ಅವಕಾಶ ಕಲ್ಪಿಸುತ್ತದೆ ಎಂಬ ವಾದವಿತ್ತು. ಈಗ ಇದನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ಶೇರುಗಳ ಮಾರಾಟವು ಸಾಲರಹಿತವಾಗಿ ಬಂಡವಾಳ ಸಂಗ್ರಹಿಸಿ ಯಾವುದೇ ವಿತ್ತೀಯ ಕೊರತೆ ಇಲ್ಲದೆ ಆಯವ್ಯಯ ಪಟ್ಟಿಯ ಖರ್ಚುಗಳನ್ನು ತೂಗಿಸುವ ದಾರಿಯಾಗಿಯಷ್ಟೇ ಕಾಣಲಾಗುತ್ತಿದೆ. ಖಂಡಿತವಾಗಿಯೂ ವಿಮಾ ಸಂಸ್ಥೆಗಳನ್ನು ಸಾರಾಸಗಾಟಾಗಿ ಮಾರಾಟ ಮಾಡುವ ಈ ಕ್ರಮವು, ಭಾಗಶಃ ಆರ್ಥಿಕ ವಲಯದಲ್ಲಿ ಲಾಭ ಮಾಡಿಕೊಳ್ಳಬೇಕೆನ್ನುವ ಕಾರ್ಪೊರೇಟ್ ದೊರೆಗಳನ್ನು ಸಂಪ್ರೀತಿಗೊಳಿಸುವ ಕ್ರಮವಾಗಿದ್ದರೂ, ಮೂಲತಃ ತನ್ನ ಖರ್ಚುಗಳನ್ನು ಸರಿತೂಗಿಸಲು ಹಣಕಾಸು ಒಗ್ಗೂಡಿಸುವದೇ ಅದರ ಪ್ರಮುಖ ಉದ್ದೇಶ.
ಈಗ ದೇಶದಲ್ಲಿ ಭಾರತೀಯ ಜೀವವಿಮಾ ನಿಗಮವಲ್ಲದೆ 23 ಖಾಸಗಿ ಜೀವ ವಿಮಾ ಸಂಸ್ಥೆಗಳು ಹಾಗು ಸರ್ಕಾರಿ ಸ್ವಾಮ್ಯದ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳಲ್ಲದೇ 30 ಖಾಸಗಿ ಸಾಮಾನ್ಯ ವಿಮಾ ಸಂಸ್ಥೆಗಳಿವೆ. ವಿಮಾ ಉದಾರೀಕರಣದ ಭಾಗವಾಗಿ ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳದ ಭಾಗವಹಿಸುವಿಕೆಗೆ ಅವಕಾಶ ಮಾಡಿರುವುದರಿಂದ ಬಹುತೇಕ ಖಾಸಗೀ ವಿಮಾ ಸಂಸ್ಥೆಗಳಲ್ಲಿ ವಿದೇಶಿ ಸಹಭಾಗಿತ್ವವಿದೆ. ಹಾಗಾಗಿ ಈ ಹೊಸನೀತಿಯು ಈ ವಿದೇಶೀ ಪಾಲುದಾರರು ಮೊದಲಿಗೆ ಅಸ್ತಿತ್ವದಲ್ಲಿರುವ ತಮ್ಮ ಸಂಸ್ಥೆಗಳಲ್ಲಿ ಒಡೆತನದಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ಮತ್ತು ತದನಂತರ ಒಟ್ಟು ವಿಮಾ ವ್ಯವಹಾರದಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
ನಿಬಂಧನೆಯ ವಿಧಾನದಲ್ಲಿ ಬದಲಾವಣೆ
ಹೆಚ್ಚುತ್ತಿರುವ ಖಾಸಗೀಕರಣದ ಜೊತೆಗೆ, ವಿಮಾ ಉದ್ದಿಮೆಯ ನಿಬಂಧನೆಯ (ರೆಗ್ಯುಲೇಶನ್) ವಿಧಾನದಲ್ಲೂ ಬದಲಾವಣೆ ಬಂದಿದೆ. ಸಾರ್ವಜನಿಕ ಕ್ಷೇತ್ರದ ಜೀವನ ಮತ್ತು ಸಾಮಾನ್ಯ ವಿಮಾ ಕಂಪನಿಗಳ ಮೂಲಕ ಸರ್ಕಾರದ ನೇರ ನಿಯಂತ್ರಣದ ಬದಲಿಗೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಎ) ವಿಧಿಸುವ ನಿಯಮಗಳು, ಮಾರ್ಗ ಸೂಚಿಗಳು ಮತ್ತು ಅಗತ್ಯ ಬಂಡವಾಳದ ಲಭ್ಯತೆಗಳಿಗೆ (ಕ್ಯಾಪಿಟಲ್ ಅಡೆಕ್ವಸಿ ರಿಕ್ವಯರ್ ಮೆಂಟ್ಸ್) ಅನುಸಾರವಾಗಿ ವಿಮಾ ಉದ್ದಿಮೆಯು ಸ್ವ-ನಿಬಂಧನೆಯತ್ತ ಹೊರಳುತ್ತಿದೆ. ಉದಾಹರಣೆಗೆ ವಿಮಾ ಸಂಸ್ಥೆಯ ಮಿಗುತಾಯದ – ಅಂದರೆ ಆಸ್ತಿಯು ಅದರ ಸಾಲಕ್ಕಿಂತ ಹೆಚ್ಚಿರುವ ಮೊತ್ತದ – ಒಂದು ಭಾಗವನ್ನು “ಸಾಲ್ವೆನ್ಸಿ ಮಾರ್ಜಿನ್” ಎಂದು ಸಂಸ್ಥೆಯು ಮೀಸಲು ನಿಧಿಯಲ್ಲಿಡಬೇಕು ಎಂಬ ಮಾರ್ಗಸೂಚಿಯಲ್ಲಿ, ಅಗತ್ಯ ಬಂಡವಾಳದ ಲಭ್ಯತೆಯ ನಿಯಮ ಬಿಂಬಿತವಾಗುತ್ತದೆ ಎಂದು ಹೇಳಲಾಗಿದೆ.
ವಿಮೆಯಲ್ಲಿ ಹಣಹೂಡುವ ಜನತೆಗೆ ಭದ್ರತೆ ಒದಗಿಸಲು ಈ ಸಣ್ಣ ‘ಹಿತರಕ್ಷಣಾ’ ಕ್ರಮದಿಂದ ಸಾಧ್ಯವಾಗುತ್ತದೆ ಎಂದು ನಂಬಲು ಸಾಧ್ಯವಿಲ್ಲ ವಿಮಾ ಉದ್ದಿಮೆಯಲ್ಲಿ ಖಾಸಗಿಯವರ ಅಧಿಪತ್ಯದಿಂದ ಉಂಟಾಗುವ ಅನಾಹುತಗಳಿಗೆ ಸಾಕಷ್ಟು ಉದಾಹರಣೆಗಳಿವೆ. ವಿಮೆಯು ಕಣ್ಣಿಗೆ ಕಾಣದ ಯಾವುದೇ ಅನಿಶ್ಚಿತತೆಗಳನ್ನು ಕಡಿಮೆ ಮಾಡುವ ಒಪ್ಪಂದವಾಗಿದ್ದು, ಅಂತಹ ಸಂದರ್ಭದಲ್ಲಿ ನೆರವಿಗೆ ಬರುವ ಒಂದು ಭರವಸೆಯನ್ನಷ್ಟೇ ವಿಮೆ ಉದ್ದಿಮೆಯು ಮಾರುತ್ತದೆ. ಹಾಗಾಗಿ ವಿಮಾದಾರರು ಅನಿಶ್ಚಿತತೆಗಳಾದ ಅಪಘಾತ, ಬೆಂಕಿ, ಕಳ್ಳತನ, ಖಾಯಿಲೆ ಇಲ್ಲವೆ ಸಾವುಂಟಾದಾಗ ತನ್ನ ಅವಲಂಬಿತರಿಗೆ ನೆರವಾಗಲು ವಿಮಾ ಕಂತುಗಳನ್ನು ಭರಿಸುತ್ತಾರೆ. ಹಾಗಾಗಿ ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಅವಘಡ ಸಂಭವಿಸಿದರೆ, ವಿಮಾ ಸಂಸ್ಥೆಯು ತನ್ನಿಂದ ಸ್ವೀಕರಿಸಿದ ಪ್ರೀಮಿಯಂಗೆ ಅನುಗುಣವಾಗಿ ಭರವಸೆ ನೀಡಿರುವಂತೆ ನಿರ್ಧಿಷ್ಟ ಮೊತ್ತ ನೀಡುತ್ತದೆ ಎಂಬ ಬಗ್ಗೆ ವಿಮಾದಾರನಿಗೆ ಆ ವಿಮಾ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ಇರಲೇಬೇಕು. ವಿಮೆ ಹೊಂದ ಬಯಸುವ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯ ಆಧಾರದಲ್ಲಿ ವಿಮಾ ಸಂಸ್ಥೆಯು ಈ ಮೊತ್ತವನ್ನು ತೊಡಗಿಸುತ್ತದೆ. ಸ್ವೀಕರಿಸಿದ ವಿಮೆಯ ಪ್ರೀಮಿಯಂನ ಹೂಡಿಕೆಯ ಸಾಧ್ಯತೆ ಮತ್ತು ಅದರಿಂದ ಗಳಿಸುವ ಗಳಿಕೆಯ ಮೊತ್ತದ ಆಧಾರದಲ್ಲಿ, ವಿಮಾ ಸಂಸ್ಥೆಯು ತನ್ನ ಭರವಸೆಯನ್ನು ಈಡೇರಿಸುವುದು ಸಾಧ್ಯವೊ ಇಲ್ಲವೊ ಎಂಬುದನ್ನು ನಿರ್ಧರಿಸುತ್ತದೆ. ಇದಕ್ಕೆ ಹಲವಾರು ಮಾಹಿತಿಗಳ ಅಗತ್ಯವಿದ್ದು ಈ ಮಾಹಿತಿಗಳೂ ಸಂಪೂರ್ಣ ರೀತಿಯಲ್ಲಿ ನಿಖರವಾಗಿ ಲಭ್ಯವಿಲ್ಲದಿರುವುದರಿಂದ ಈ ಉದ್ದಿಮೆಯಲ್ಲಿ ಬಹಳವೇ ಅಪಾಯಗಳಿವೆ.
“ಈಡೇರದ ಭರವಸೆಗಳು” ಮತ್ತು ಎ.ಐ.ಜಿ. ಹಗರಣ
ಹಲವಾರು ಖಾಸಗೀ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮತ್ತು ಸ್ವರ್ಧಿಸುತ್ತಿರುವಾಗ, ಅದಕ್ಕೆ ತಕ್ಕಂತೆ ಈ ಅಪಾಯಗಳೂ ಹೆಚ್ಚಾಗಲಿವೆ. ಸ್ವರ್ಧಾತ್ಮಕವಾಗಿ ಕೆಲಸ ಮಾಡಬೇಕೆಂದು ಈ ಸಂಸ್ಥೆಗಳು ಪ್ರೀಮಿಯಂ ದರವನ್ನು ಅತೀ ಕಡಿತಗೊಳಿಸಬಹುದು. ಪಾಲಿಸಿದಾರನ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ದುಡುಕಬಹುದು ಮತ್ತು ತಮ್ಮ ಹಣಕಾಸನ್ನು ಹೆಚ್ಚಿನ ಲಾಭ ಕೊಡುವ ಹೆಚ್ಚು ಅಪಾಯಕಾರಿ ಯೋಜನೆಗಳಲ್ಲಿ ತೊಡಗಿಸಬಹುದು. ಅಮೆರಿಕದಂತಹ ಅತ್ಯಂತ ಸ್ವರ್ಧಾತ್ಮಕ ವಿಮಾ ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ದಾಖಲಾಗಿರುವ ವೈಫಲ್ಯಗಳು ಆಶ್ಚರ್ಯಕರವೇನಲ್ಲ. 1990ರಲ್ಲೆ ಅಮೆರಿಕದ ಪ್ರತಿನಿಧಿ ಸಭೆಯ (ಪಾರ್ಲಿಮೆಂಟ್ ಕೆಳಸದನ) “ವಿಮೆ” ಯ ಮೇಲಿನ ಉಪಸಮಿತಿಯು ತನ್ನ “ಈಡೇರದ ಭರವಸೆಗಳು” ಎಂಬ ವರದಿಯಲ್ಲಿ ವಿಫಲವಾದ ಎಷ್ಟೋ ವಿಮಾ ಸಂಸ್ಥೆಗಳು (ಎಷ್ಟೋ ಪ್ರಸಿದ್ಧ ವಿಮಾ ಸಂಸ್ಥೆಗಳೂ ಸೇರಿದಂತೆ) “ತ್ವರಿತ ವಿಸ್ತರಣೆ, ಸಾಮಾನ್ಯ ಪ್ರತಿನಿಧಿಗಳ ಮೇಲೆ ಅತಿ ಅವಲಂಬನೆ, ಅತಿಯಾದ ಮತ್ತು ಸಂಕೀರ್ಣ ಮರು ವಿಮೆ(ರಿ-ಇನ್ಶೂರೆನ್ಸ್) ವ್ಯವಸ್ಥೆ, ತೀವ್ರ ಇಳಿತದ ಪ್ರೀಮಿಯಂ ದರ, ಸುಳ್ಳು ವರದಿಗಳು, ಬೇಜವಾಬ್ದಾರಿಯ ಆಡಳಿತ, ವಂಚನೆ ಅದಕ್ಷತೆ ಮತ್ತು ದುರಾಸೆ” ಇವುಗಳಿಂದ ಕೂಡಿದ್ದವು ಎಂದು ನಮೂದಿಸಿದೆ. ಇದರಲ್ಲಿ ಕೆಲಸ ಮಾಡಿರುವ ಮುಖ್ಯ ಅಂಶವೆಂದರೆ ವಿಮಾ ಸಂಸ್ಥೆ ಮತ್ತು ಪಾಲಿಸಿದಾರರು, ನೌಕರರು ಮತ್ತು ಸಾರ್ವಜನಿಕರ ದೀರ್ಘಕಾಲೀನ ಹಿತಾಸಕ್ತಿಗಿಂತ ತಕ್ಷಣದ ತೀವ್ರಗತಿಯ ಲಾಭ ಗಳಿಸುವ ಆತುರ.
ಇದು ಯಾವುದೇ ಬದಲಾವಣೆಯಿಲ್ಲದೆ ಹೀಗೇ ಮುಂದುವರೆದಿದೆ ಎಂಬುದನ್ನು 2008 ರಲ್ಲಿ ಅಮೆರಿಕೆಯ ಬಹುದೊಡ್ಡ ವಿಮಾ ಸಂಸ್ಥೆಯಾದ ಅಮೆರಿಕನ್ ಇಂಟರ್ ನ್ಯಾಷನಲ್ ಗ್ರೂಪ್ (ಎ.ಐ.ಜಿ) ಸಂಸ್ಥೆಯು ದಿವಾಳಿಯಾಯಿತು ಮತ್ತು ಸರ್ಕಾರ 18 ಕೋಟಿ ಡಾಲರ್‌ಗಳ ಸಹಾಯಧನ ನೀಡಿ ಉಳಿಸಬೇಕಾಯಿತು ಎಂಬ ಅಂಶವು ದೃಢಪಡಿಸುತ್ತದೆ. ಮಾರುಕಟ್ಟೆ ಬಂಡವಾಳದ ಗಾತ್ರವನ್ನು ಪರಿಗಣಿಸಿದರೆ ಎ.ಐ.ಜಿ ವಿಶ್ವದ ಅತಿದೊಡ್ಡ ವಿಮಾ ಸಂಸ್ಥೆಯಾಗಿತ್ತು. ಅದು ಬ್ಯಾಂಕುಗಳ ನಿಶ್ಚಿತ ಆದಾಯಗಳ ಸೆಕ್ಯೂರಿಟಿಗಳ ಮೇಲೆ ವಿಮೆ ಮಾಡಿಸುತ್ತಿತ್ತು. ಈ ಸೆಕ್ಯೂರಿಟಿಗಳ ಮಾರುಕಟ್ಟೆಯಲ್ಲಾದ ಇಳಿತದಿಂದಾಗಿ ಎ.ಐ.ಜಿ ತೀವ್ರ ನಷ್ಟವನ್ನನುಭವಿಸಿದೆ. ಇವು ಆಗಬಹುದಾದ ನಷ್ಟದ ವಿರುದ್ಧ ರಕ್ಷಣೆ ನೀಡುವ ನೇರ ವಿಮಾ ಯೋಜನೆಗಳಾಗಿರಲಿಲ್ಲ. ಇವು ಕಾನೂನುಗಳ ನಿರ್ಬಂಧವನ್ನು ಮೀರಿ, ಅಪಾಯಕಾರಿ ಹೂಡುವಿಕೆಯ ಮೂಲಕ ಹೆಚ್ಚಿನ ಆದಾಯಗಳಿಸುವ ಹೂಡಿಕೆಗಳಾಗಿದ್ದವು. ಫೆಡರಲ್ ರಿಸರ್ವ್‌ನ ಮುಖ್ಯಸ್ಥರಾಗಿದ್ದ ಬೆನ್ ಬೇರ್ ನಾಂಕ್ ರವರ ಹೇಳಿಕೆಯಂತೆ ಜನತೆಯ ವಿಮೆಯ ಮೊತ್ತವನ್ನು ಅನಿರ್ಬಂಧಿತವಾದ ಹೆಡ್ಜ್ ಫಂಡ್‌ಗಳಂತಹ ಯೋಜನೆಗಳಲ್ಲಿ ತೊಡಗಿಸಿತ್ತು. ಎ.ಐ.ಜಿ ಇಂತಹ ಹೂಡಿಕೆಗಳ ಮೌಲ್ಯ ಕುಸಿದಾಗ ಅಥವಾ ಶೂನ್ಯವಾದಾಗ, ಅದು ಅರ್ಥ ವ್ಯವಸ್ಥೆಯ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಕಾರಣದಿಂದಾಗಿ ಅದಕ್ಕೆ ಸರ್ಕಾರ ಪರಿಹಾರ ನೀಡಲೇಬೇಕಾಯ್ತು.
ವಿಮೆ ಖಾಸಗೀಕರಣ ವಿದೇಶೀಕರಣ ಅವಿವೇಕದ ನಡೆ
ಅಮೆರಿಕೆಯ ಪಾರ್ಲಿಮೆಂಟರಿ ಸಮಿತಿಯು ನೀಡಿರುವ ವರದಿಯು ವಿದೇಶೀ ಸಂಸ್ಥೆಗಳೆಲ್ಲವೂ ಉತ್ತಮ ಆಡಳಿತ ತಂತ್ರಗಳನ್ನು ಅನುಸರಿಸುತ್ತಿದ್ದವು ಎಂದು ಹೇಳಲಾಗದು ಎಂಬುದನ್ನು ತೋರಿಸಿದೆ. ಇದಲ್ಲದೆ ಈ ವಿದೇಶೀ ಸಂಸ್ಥೆಗಳು ತಮ್ಮ ಹಣವನ್ನು ಅತೀ ಹೆಚ್ಚು ಪ್ರತಿಫಲ ನೀಡುವ (ಯಾವುದೇ ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಯನ್ನು ಇದು ಹೊರತುಪಡಿಸುತ್ತದೆ) ಹೆಚ್ಚು ಅವಧಿಗೆ ಕಾಯದೇ ಬಹು ಬೇಗ ಲಾಭನೀಡುವ “ವಿಶ್ವಾಸಾರ್ಹ” (ಅಂದರೆ ತಮಗೆ ಪರಿಚಯಸ್ಥ ಇತರ ಬಹುರಾಷ್ಟ್ರೀಯ ಸಂಸ್ಥೆಗಳು ನಡೆಸುತ್ತಿರುವ) ಯೋಜನೆಗಳಲ್ಲಿ ತೊಡಗಿಸುತ್ತವೆ. ಹೀಗೆ ವಿದೇಶೀ ನೇರ ಬಂಡವಾಳವು ತನ್ನೊಂದಿಗೆ ತೀವ್ರ ಸ್ವರ್ಧೆಯನ್ನು ಮಾತ್ರವಲ್ಲ, ದೇಶ ನಿರ್ಮಾಣದ ರಾಷ್ಟ್ರೀಯ ಕಾರ್ಯಯೋಜನೆಗೆ ತದ್ವಿರುದ್ಧವಾಗಿ ಲಾಭವೇ ಪ್ರಧಾನವಾದ ಹೂಡಿಕೆಗಳ ಪ್ರತಿನಿಧಿಗಳನ್ನೂ ತರುತ್ತವೆ.
ಹಾಗಾಗಿ, ವ್ಯಕ್ತಿಗತ ನೆಲೆಯಲ್ಲಿ ಖಾಸಗಿ ನಷ್ಟವನ್ನು ಮಾತ್ರವಲ್ಲ, ದೇಶದ ಜನತೆಯ ಒಳಿತಿಗಾಗಿ ಹಣಕಾಸು ಹೂಡುವ ನಿರ್ದೇಶನ ಕೊಡುವ ಸರ್ಕಾರದ ಅಧಿಕಾರವನ್ನೂ ನಷ್ಟಗೊಳಿಸುತ್ತದೆ. ಉದಾಹರಣೆಗೆ ಎಲ್.ಐ.ಸಿ.ಯು ಸರ್ಕಾರದ ವಿವಿಧ ಯೋಜನೆಗಳಿಗೆ ಅತ್ಯಗತ್ಯವಾದ ಬಂಡವಾಳವನ್ನು ಕ್ರೋಢೀಕರಿಸುತ್ತದೆ. ಒಂದು ವೇಳೆ ವಿಮಾ ಸಂಸ್ಥೆಗಳು ನಷ್ಟ ಅನುಭವಿಸಿದರೆ ಸರ್ಕಾರ ಅವುಗಳ ರಕ್ಷಣೆಗೆ ಬರುವುದರಿಂದ ಸಾಮಾಜಿಕ ನಷ್ಟವುಂಟಾಗುತ್ತದೆ. ಖಾಸಗಿ ಒಡೆತನದ ಅಪಾಯ ಮತ್ತು ಸಾರ್ವಜನಿಕ ಒಡೆತನದ ಲಾಭಗಳು ವಿಮೆಯಲ್ಲಿ ವಿದೇಶೀ ನೇರ ಬಂಡವಾಳದ ಹೂಡಿಕೆಯನ್ನು ಒಂದು ಅವಿವೇಕದ ನಡೆಯನ್ನಾಗಿಸುತ್ತದೆ.
ಅನುವಾದ: ಎಸ್.ಕೆ.ಗೀತಾ