ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದ ವಿವಿದೆಡೆ ಹಲವು ತಿಂಗಳು ಕುಂಟುತ್ತಾ ಸಾಗುತ್ತಿರುವ ಈ ಅಭಿಯಾನದ ಮತ್ತೊಂದು ಲೋಪ ಎದುರಾಗಿದೆ.
ಮೇ ತಿಂಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು ಲಸಿಕೆಗಳಲ್ಲಿ ಕೇವಲ ಶೇಕಡಾ 17 ರಷ್ಟು ಲಸಿಕೆಯನ್ನು ಬಳಕೆ ಮಾಡಿವೆ ಎಂಬ ಗಂಭೀರ ಆರೋಪ ಎದುರಾಗಿದೆ. ಈ ಬಗ್ಗೆ ಸರ್ಕಾರ ಅಂಕಿಅಂಶಗಳು ಬಿಡುಗಡೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳು ಒಟ್ಟಾರೆಯಾಗಿ 1.29 ಕೋಟಿ ಲಸಿಕೆಯನ್ನು ಖರೀದಿಸಿದ್ದರೂ ಸಹ, ಕೇವಲ 22 ಲಕ್ಷ ಮಾತ್ರ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದರಂತೆ ಖಾಸಗಿ ಆಸ್ಪತ್ರೆಗಳು ಅಪಾರ ಪ್ರಮಾಣದಲ್ಲಿ ಲಸಿಕೆಯನ್ನು ಬಳಕೆ ಮಾಡದೆ ಹಾಗೆಯೇ ಶೇಖರಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಇದನ್ನು ಓದಿ: ಬೃಹತ್ ಒಂಭತ್ತು ಖಾಸಗಿ ಆಸ್ಪತ್ರೆಗಳ ಬಳಿ ಶೇಕಡಾ 50ರಷ್ಟು ಕೋವಿಡ್ ಲಸಿಕೆ
ಆರೋಗ್ಯ ಸಚಿವಾಲಯವು ಜೂನ್ 04 ರಂದು ಪತ್ರಿಕಾ ಪ್ರಕಟಣೆ ನೀಡಿದ್ದು, ಸಚಿವಾಳಯದ ಪ್ರಕಾರ ಮೇ ತಿಂಗಳಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ ಲಸಿಕೆಯನ್ನು ಹಂಚಿಕೆ ಮಾಡಲಾಗಿತ್ತು. ಅಂದರೆ, ಕೇಂದ್ರ ಸರಕಾರಕ್ಕೆ ಶೇಕಡಾ 50ರಷ್ಟು, ರಾಜ್ಯ ಸರಕಾರಕ್ಕೆ ಶೇಕಡಾ 25ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 25ರಷ್ಟು ಲಸಿಕೆ ಖರೀದಿಗೆ ಅವಕಾಶ ಕಲ್ಪಸಲಾಗಿತ್ತು,
ಈ ಪೈಕಿ ಮೇ ತಿಂಗಳ ವರದಿ ಪ್ರಕಾರ ಖಾಸಗಿ ಆಸ್ಪತ್ರೆಗಳಿಗಾಗಿ ಮಾತ್ರ ಮೀಸಲಾಗಿದ್ದ 1.85 ಕೋಟಿ ಲಸಿಕೆಗಳಲ್ಲಿ ಖಾಸಗಿ ಆಸ್ಪತ್ರೆಗಳು 1.29 ಕೋಟಿ ಲಸಿಕೆಯನ್ನು ಮಾತ್ರ ಖರೀದಿ ಮಾಡಿದ್ದವು ಮತ್ತು ಅವುಗಳಲ್ಲಿ ಕೇವಲ 22 ಲಕ್ಷ ಪ್ರಮಾಣದ ಲಸಿಕೆಯನ್ನು ಮಾತ್ರ ಬಳಸಿವೆ ಎಂದು ತಿಳಿದು ಬಂದಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳ ಲಸಿಕೆ ವಿತರಣೆಯಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತಿರುವುದು ಒಂದು ಕಡೆಯಾದರೆ, ಲಸಿಕೆಯ ಬಗ್ಗೆ ಆತಂಕ ಹೊಂದಿರುವ ಜನರು ಲಸಿಕೆ ಪಡೆಯದಿರಲು ಕಾರಣವಾಗಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ-ದುಬಾರಿ ಶುಲ್ಕ ವಿಧಿಸುವವರ ಮೇಲೆ ಕ್ರಮಕೈಗೊಳ್ಳಲು ಪ್ರತಿಭಟನೆ
“ಕೆಲವು ಮಾಧ್ಯಮ ವರದಿಗಳು ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 25 ಡೋಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿದೆ, ಆದರೆ ಅವು ಒಟ್ಟು ಲಸಿಕೆಯಲ್ಲಿ ಶೇಕಡಾ 7.5 ಮಾತ್ರ ಖಾಸಗಿ ಆಸ್ಪತ್ರೆ ಹೊಂದಿದೆ. ಈ ವರದಿಗಳು ನಿಖರವಾಗಿಲ್ಲ ಮತ್ತು ಲಭ್ಯವಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗುವುದಿಲ್ಲ” ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಲಾಭದಾಯಕ ಆರೋಪದ ಮಧ್ಯೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದರವನ್ನು ಪರಿಷ್ಕರಿಸಿದ ಕೇಂದ್ರ ಸರಕಾರ ಈ ತಿಂಗಳ ಆರಂಭದಲ್ಲಿ ನಿಗದಿತವಾದ ದರವನ್ನು ಪ್ರಕಟಿಸಿತು. ಕೆಲವು ದಿನಗಳ ಹಿಂದೆ ಬಂದ ವರದಿಯ ಪ್ರಕಾರ ಖಾಸಗಿ ಆಸ್ಪತ್ರೆಗೆ ಲಸಿಕೆ ವಿತರಣೆಯಲ್ಲೂ ಅಸಮಾನತೆಯಾಗಿದೆ ಎದ್ದು ಕಾಣುತ್ತಿದ್ದವು. ಅದರಲ್ಲೂ ದೇಶದ 9 ಅತ್ಯಂತ ಖಾಸಗಿ ಆಸ್ಪತ್ರಗಳ ಬಳಿ ಖಾಸಗಿ ಆಸ್ಪತ್ರೆಗಳಿಗೆ ಮೀಸಲಾಗಿದ್ದ ಲಸಿಕೆ ಪ್ರಮಾಣದಲ್ಲಿ ಶೇಕಡಾ 50 ರಷ್ಟು ಲಸಿಕೆಯನ್ನು ಈ ಒಂಭತ್ತು ಆಸ್ಪತ್ರೆಗಳ ಇರುವ ಆರೋಪ ಕೇಳಿ ಬಂದಿದ್ದವು.
ಇದನ್ನು ಓದಿ: ಕೋವಿಡ್ ಚಿಕಿತ್ಸೆಗಾಗಿ ಬಳಸಲಾಗುವ ಕೆಲವು ಸಾಮಗ್ರಿಗಳ ಮೇಲೆ ಶೇಕಡಾ 5ರಷ್ಟು ತೆರಿಗೆ ಕಡಿತ
ಕೇಂದ್ರ ಸರಕಾರ ಪ್ರಕಟಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ ವಿತರಣೆಗೆ ಕೋವಿಶೀಲ್ಡ್ ಲಸಿಕೆಗೆ 780 ರೂ. , ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಗೆ 1,145 ಮತ್ತು ಕೊವಾಕ್ಸಿನ್‌ಗೆ 1,410 ನಿಗದಿಪಡಿಸಲಾಗಿದೆ. ಇದರಲ್ಲಿ ತೆರಿಗೆಗಳು ಮತ್ತು ಆಸ್ಪತ್ರೆಗಳ ಸೇವಾ ಶುಲ್ಕ 150 ರೂಪಾಯಿ ಸಹ ಸೇರಿದೆ.
ಅಲ್ಲದೆ, ಸದ್ಯ ಲಸಿಕೆ ಹಂಚಿಕೆಯಲ್ಲಿ ರಾಜ್ಯ ಸರಕಾರ ಖರೀದಿಯ ಶೇಕಡಾ 25ರಷ್ಟು ರದ್ದುಪಡಿಸಿದ್ದು, ಶೇಕಡಾ 75ರಷ್ಟು ಲಸಿಕೆಯನ್ನು ಕೇಂದ್ರ ಸರಕಾರವೇ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ. ಜೂನ್ 21 ರಿಂದ ಇಡೀ ದೇಶವ್ಯಾಪಿ ಉಚಿತ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಣೆ ನೀಡಿದ್ದರು.