ಶಕ್ತಿ‌ ಯೋಜನೆಯಿಂದ ಮೆಟ್ರೋಗೆ ಕುತ್ತು ಎಂಬ ಪ್ರಧಾನ ಮಂತ್ರಿಗಳಾದ ಮೋದಿಯ ಹೇಳಿಕೆ ಅವೈಜ್ಞಾನಿಕ

ಬೆಂಗಳೂರು : ಇತ್ತೀಚೆಗೆ ಪ್ರಧಾನಮಂತ್ರಿ ಮೋದಿಯವರು “ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ‌ ಪ್ರಯಾಣ ನೀಡುವುದು ಸರಿಯಲ್ಲ ಇದರಿಂದ ಮೆಟ್ರೋಗೆ ಕುತ್ತು ಬರುತ್ತದೆ” ಎಂಬ ಹೇಳಿಕೆ ಅವೈಜ್ಞಾನಿಕ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಖಾರವಗಿ ಪ್ರತಿಕ್ರಿಯಿಸಿದ್ದಾರೆ.

ಶಕ್ತಿ ಯೋಜನೆಯನ್ನು ಜೂನ್ 11, 2023 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಯಿತು, ಇಂದಿನವರೆಗೆ ಅಂದರೆ ಮೇ 20, 2024 ರವರೆಗೆ ಶಕ್ತಿ ಯೋಜನೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 67.34 ಕೋಟಿ.

ಕಳೆದ ಒಂದು ವರ್ಷದಲ್ಲಿ  ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ ಶೇ.30 ಏರಿಕೆ ಕಂಡಿದೆ. ಜನವರಿ‌ 2023 ರಲ್ಲಿ ಮೆಟ್ರೋ‌ ಪ್ರಯಾಣಿಕರ ಸಂಖ್ಯೆ 1.65 ಕೋಟಿ,‌ ಆದಾಯ  39.15 ಕೋಟಿಯಾಗಿತ್ತು‌, ಅದೇ ಏಪ್ರಿಲ್ 2024 ರಲ್ಲಿ ಪ್ರಯಾಣಿಕರ ಸಂಖ್ಯೆ 2 ಕೋಟಿಗೆ ಏರಿಕೆಯಾಗಿದ್ದು, ಆದಾಯ ರೂ. 51.71 ಕೋಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ

2023 ಕ್ಕೆ ಹೋಲಿಸಿದರೆ 2024 ರಲ್ಲಿ ಒಂದು ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಸರಾಸರಿ 35 ಲಕ್ಷ  ಏರಿಕೆ ಮತ್ತು ಆದಾಯದಲ್ಲಿ ರೂ. 1.10 ಕೋಟಿ ಏರಿಕೆ ಕಂಡಿದೆ‌.

ಈ ಮೇಲಿನ ಅಂಕಿಅಂಶಗಳಿಂದ ಶಕ್ತಿ ಯೋಜನೆಯಿಂದ ಮೆಟ್ರೋಗೆ ಯಾವ ರೀತಿಯಿಂದಲೂ ಧಕ್ಕೆ‌ ಆಗಿಲ್ಲ, ಬದಲಿಗೆ ಮೆಟ್ರೋ  ಪ್ರಯಾಣಿಕರ ಸಂಖ್ಯೆ‌ ಮತ್ತು ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದು ಕಂಡುಬರುತ್ತದೆ.

ಆದ್ದರಿಂದ ಉಚಿತ ಪ್ರಯಾಣ ಯೋಜನೆಯಿಂದ ಮೆಟ್ರೋಗೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ವಿವರಿಸಬೇಕು.

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಹಾಗೂ ಅತ್ಯಂತ ಯಶಸ್ವಿಯಾಗಿ‌ ಜಾರಿಯಾಗಿರುವ ಶಕ್ತಿ ಯೋಜನೆಯನ್ನು ದೂಷಿಸುವ ಇರಾದೆಯೇ ? ಅಥವಾ ಮಾಹಿತಿ ಕೊರತೆಯೋ? ತಿಳಿಯದಾಗಿದೆ.

ಶಕ್ತಿ‌ಯೋಜನೆ ನಂತರ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಹಾಗೂ ಮಹಿಳೆಯರ ಸಬಲೀಕರಣ ಮಹತ್ವದ ಯೋಜನೆಯನ್ನು ಪ್ರಧಾನಮಂತ್ರಿಯಾದವರು ಈ ರೀತಿಯಾಗಿ ಟೀಕಿಸುವುದು ಸಾಧುವಲ್ಲ.

ರಾಜ್ಯದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬಲಿಷ್ಠವಾಗುತ್ತಿವೆ. ಹೊಸ ಹೊಸ ಬಸ್ಸುಗಳ ಸೇರ್ಪಡೆ ,  ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ಹಾಗೂ ದೇಶ ವಿದೇಶಗಳ ಮಾಧ್ಯಮಗಳಲ್ಲಿಯೂ, ಈ‌  ಯೋಜನೆ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿರುವುದು ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ‌.

ಒಟ್ಟಾರೆಯಾಗಿ ಶಕ್ತಿ ಯೋಜನೆಯು  ಪರಿಣಾಮಕಾರಿಯಾಗಿ ಜಾರಿಯಾಗಿ ಸಫಲತೆಯನ್ನು ಕಂಡಿದೆ. ಪ್ರಧಾನಮಂತ್ರಿಗಳು ಪೂರ್ವಾಗ್ರಹ ಪೀಡಿತರಾಗಿ ಯೋಜನೆಯನ್ನು ದೂಷಿಸುವುದು ಸಮಂಜಸವಲ್ಲ.

ಕೇವಲ ಬಿಜೆಪಿ ಘೋಷಿಸುವ ಯೋಜನೆಗಳು ಮಾತ್ರ ಒಳ್ಳೆಯದು ಎಂಬ ಭ್ರಮೆ ಜನರಲ್ಲಿ ಮೂಡಿಸುವಲ್ಲಿ ಮೋದಿಯವರು ಪ್ರಯತ್ನಿಸುತ್ತಿದ್ದಾರೆ ಆದರೆ ಜನರಿಗೆ ಎಲ್ಲಾ ಮಾಹಿತಿಯು ತಿಳಿದಿದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು ನಂತರ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಮರೆತು ಜನರ ಅನುಕೂಲಕ್ಕಾಗಿ ಸರ್ಕಾರಗಳು ಶ್ರಮಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ನೋಡಿ: ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.

Donate Janashakthi Media

Leave a Reply

Your email address will not be published. Required fields are marked *