ಬೆಂಗಳೂರು: ಮತ್ತೆ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ ಎನ್ನಲಾಗಿದೆ.
ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ಆರ್ಥಿಕ ನಷ್ಟದ ಹಿನ್ನಲೆಯಲ್ಲಿ ಕಳೆದ ಬಾರಿ 5 ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾಪ ಇದ್ದರೂ, ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ 3 ರೂಪಾಯಿ ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಆದರೆ, ಈ 3 ರೂಪಾಯಿಯನ್ನು ನೇರವಾಗಿ ರೈತರಿಗೆ ನೀಡುವಂತೆ ಸೂಚಿಸಲಾಗಿತ್ತು. ಇದು ಹಾಲು ಒಕ್ಕೂಟಗಳಿಗೆ ಹೊಡೆತ ನೀಡಿತ್ತು. ಹಾಲು ಒಕ್ಕೂಟಗಳಿಗೆ ಆಗುತ್ತಿದ್ದ, ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಕೆಎಂಎಫ್‌ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಹೀಗಾಗಿ ಈ ಮನವಿ ಬಗ್ಗೆ ಕೆಎಂಎಫ್ ಉನ್ನತ ಮಟ್ಟದಲ್ಲಿ ದರ ಏರಿಕೆಯ ಚರ್ಚೆಗಳು ನಡೆದಿವೆ. ಈ ಕುರಿತು ಸರ್ಕಾರದ ಮುಂದೆ ಪ್ರಸ್ತಾವವನ್ನು ಇಟ್ಟು, ಅಲ್ಲಿಂದ ಒಪ್ಪಿಗೆ ಸಿಕ್ಕರೆ ದರ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Priyank Kharge | ಸುಳ್ಳು ಆರೋಪ ಮಾಡಿದ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರಿಯಾಂಕ್ ಖರ್ಗೆ
ಈ ಕುರಿತು ಜನವರಿಯಲ್ಲಿ 14 ಹಾಲು ಒಕ್ಕೂಟಗಳ ಸಭೆ ಕರೆಯಲು ಕೆಎಂಎಫ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಇಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಿ, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆಯಲ್ಲಿ ಕೆಎಂಎಫ್ ಇದೆ ಎನ್ನಲಾಗಿದೆ. ಸದ್ಯ ಇದು ಚರ್ಚಾ ಹಂತದಲ್ಲಿ ಇರುವುದರಿಂದ ಗ್ರಾಹಕರು ಈ ಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ.
ಕಳೆದ ಆಗಸ್ಟ್‌ನಲ್ಲಿ ನಂದಿನಿ ಹಾಲಿನ ಹಾಗೂ ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಇದು ಜನಸಾಮಾನ್ಯರ ಜೇಬಿಗೆ ಹೊರೆಯಾಗಿ ಪರಿಣಮಿಸಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕೆಎಂಎಫ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ವಿಡಿಯೋ ನೋಡಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್