ಬೆಂಗಳೂರು: ಜೂನ್ ಅಂತ್ಯ ಸಮೀಪಿಸಿದರೂ ರಾಜ್ಯದಲ್ಲಿ ಉಂಟಾಗಿರುವ ಮಳೆಯ ಕೊರತೆ ಬೆಲೆ ಏರಿಕೆಗೆ ಕಾರಣವಾಗಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ತರಕಾರಿ ಬೆಳೆಗಳು ಒಣಗಿದ್ದು, ಮಾರುಕಟ್ಟೆಗೆ ಸರಬರಾಜು ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.
ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತರಕಾರಿಗಳ ಬೆಲೆ ಗಗನಮುಖಿಯಾಗುತ್ತಿದೆ. ಕೆ ಆರ್ ಮಾರ್ಕೆಟ್ ಸೇರಿದಂತೆ ಮಲ್ಲೇಶ್ವರಂ, ಜಯನಗರ, ರಾಜಾಜಿನಗರ ಇತರೆಡೆಚ ಟೊಮ್ಯಾಟೋ 90-100 ರೂ. ದರದಲ್ಲಿ ಮಾರಾಟವಾಗುತ್ತಿದೆ. ಟೊಮಾಟೋ ಖರೀದಿ ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಕಳೆದೊಂದು ವಾರದಿಂದ ತರಕಾರಿ ಜೊತೆಯಲ್ಲಿ ಬೇಳೆ ಕಾಳುಗಳ ದರದಲ್ಲಿ 10 ರಿಂದ 15 ರೂಪಾಯಿವರೆಗೆ ಏರಿಕೆಯಾಗಿದೆ. ಕೆಲವು ಬೇಳೆಕಾಳುಗಳಲ್ಲಿ 30 ರಿಂದ 40 ರೂಪಾಯಿವರೆಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ತರಕಾರಿಗಳ ಬೆಲೆ ಕೇಳಿ ಜನರು ಒಂದು ಕ್ಷಣ ಗಾಬರಿಯಾಗಿದ್ದಾರೆ.
ಟೊಮೆಟೊ ಬೆಳೆಗೆ ಕರ್ನಾಟಕದಲ್ಲಿಯೇ ದೊಡ್ಡ ಮಾರುಕಟ್ಟೆ ಕೋಲಾರವಾಗಿದೆ. ಇಲ್ಲಿನ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಹೆಚ್ಚಿನ ಸಾಗಾಟ ನಡೆಯುತ್ತಿದೆ. ಇದರಿಂದಾಗಿ ಬೇಡಿಕೆಯೂ ಸಹ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಸರಿಯಾಗಿ ಎರಡು ಮಳೆ ಬಂದರೆ ದರ ಇನ್ನಷ್ಟು ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.
ಬೇಳೆ ಕಾಳುಗಳ ದರ ಹೀಗಿದೆ
ಬೇಳೆ ಕಾಳುಗಳು | ಹಳೆಯ ದರ (ಕೆಜಿ ಪ್ರಮಾಣದಲ್ಲಿ) | ಹೊಸ ದರ (ಕೆಜಿ ಪ್ರಮಾಣದಲ್ಲಿ) |
ಅಕ್ಕಿ | 40 ರೂಪಾಯಿ | 50 ರೂಪಾಯಿ |
ತೊಗರಿ ಬೇಳೆ | 86 ರೂಪಾಯಿ | 140 ರೂಪಾಯಿ |
ಉದ್ದಿನ ಬೇಳೆ | 95 ರೂಪಾಯಿ | 116 ರೂಪಾಯಿ |
ಮಸೂರ್ ದಾಲ್ | 84 ರೂಪಾಯಿ | 125 ರೂಪಾಯಿ |
ಹೆಸರು ಬೇಳೆ | 74 ರೂಪಾಯಿ | 105 ರೂಪಾಯಿ |
ಅರಿಶಿನ ಪುಡಿ | 126 ರೂಪಾಯಿ | 180 ರೂಪಾಯಿ |
ಮೆಣಸಿನ ಪುಡಿ | 186 ರೂಪಾಯಿ | 425 ರೂಪಾಯಿ |
ದನಿಯಾ ಪೌಡರ್ | 150 ರೂಪಾಯಿ | 218 ರೂಪಾಯಿ |
ಪೆಪ್ಪರ್ ಪೌಡರ್ | 380 ರೂಪಾಯಿ | 520 ರೂಪಾಯಿ |
ಬ್ಯಾಡಗಿ ಮೆಣಸಿನಕಾಯಿ | 330 ರೂಪಾಯಿ | 850 ರೂಪಾಯಿ |
ಜೀರಿಗೆ | 350 ರೂಪಾಯಿ | 750 ರೂಪಾಯಿ |
ತರಕಾರಿ ಬೆಲೆ ಹೆಚ್ಚಳ; ಟೊಮೆಟೊ ಬೆಲೆ ಶತಕದ ಅಂಚಿಗೆ ಬಂದಿದೆ. ಇತರ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರಗಳು ಸಹ ಏರಿಕೆ ಕಂಡಿವೆ. ಮಳೆ ಕೊರತೆ ಕಾರಣ ತರಕಾರಿ ಬೆಳೆಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದಾಗಿ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಗೆ ತೊಂದರೆಯಾಗಿ, ದರ ಹೆಚ್ಚಾಗಿದೆ.ಎಂದು ತಿಳಿದು ಬಂದಿದೆ.
ಕಳೆದ ವಾರ ಒಂದು ಕೆಜಿಗೆ 40 ರೂ. ಇದ್ದ ಬದನೇಕಾಯಿ ದರ 80 ರೂ.ಗೆ ತಲುಪಿದೆ. ಕ್ಯಾರೆಟ್ 80 ರೂ. ಆಗಿದೆ. ನುಗ್ಗೆಕಾಯಿ 100 ರಿಂದ 120 ರೂ. ದರದಲ್ಲಿಯೇ ಮುಂದುವರೆದಿದೆ. ಬಿಟ್‌ರೊಟ್, ಹಾಗಲಕಾಯಿ, ಆಲೂಗೆಡ್ಡೆ ದರಗಳು ಸಹ ಏರುತ್ತಲಿವೆ. ಬಟಾಣಿ, ಹುರುಳಿ ಕಾಯಿ ದರವೂ ಹೆಚ್ಚಾಗಿದ್ದು, ನಿಂಬೆಹಣ್ಣಿನ ದರ ಇಳಿಕೆ ಕಂಡಿದೆ.