ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ಪದಕದ ಬೇಟೆ ಮುಂದಿವರಿದಿದೆ. ಇದೀಗ ಬಂದ ವರದಿಯಂತೆ 10 ಕಿಲೋ ಮೀಟರ್ ವೇಗದ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಮತ್ತು ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಪ್ರಿಯಾಂಕಾ ಗೋಸ್ವಾಮಿ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತಮ ಆರಂಭ ಮಾಡುವ ಮೂಲಕ ಗರಿಷ್ಠ ಸ್ಥಾನಕ್ಕೆ ಏರುವರಿಲ್ಲಿ ಶ್ರಮವಹಿಸಿದ ಪ್ರಿಯಾಂಕಾ ಗೋಸ್ವಾಮಿ 43 ನಿಮಿಷ 38 ಸೆಕೆಂಡ್ ನಲ್ಲಿ ಗುರಿ ತಲುಪಿದರು. ಚಿನ್ನದ ಪದಕ ಪಡೆದ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಅವರು 42 ನಿಮಿಷ 34 ಸೆಕೆಂಡ್ಸ್ ನಲ್ಲಿ ಅಂತಿಮ ಗುರಿ ತಲುಪಿದರು. ಕೀನ್ಯಾದ ವಮುಸ್ಯಿ ಎನ್ ಗಿ ಅವರು ಕಂಚಿನ ಪದಕ ಪಡೆದರು.
ಉತ್ತರ ಪ್ರದೇಶದ ಪ್ರಿಯಾಂಕಾ 2020 ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ 17ನೇ ಸ್ಥಾನ ಗಳಿಸಿದ್ದರು.
ಪುರುಷರ ಸ್ಟೀಪಲ್ ಚೇಸ್ ಪಂದ್ಯದಲ್ಲಿ ಭಾರತದ ಅವಿನಾಶ ಮುಕುಂದ್ ಸಬ್ಲೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ರಾಷ್ಟ್ರೀಯ ದಾಖಲೆಯನ್ನು 9 ನೇ ಬಾರಿಗೆ ಮುರಿದರು. 8:11.20 ರಲ್ಲಿ ಗುರಿ ತಲುಪಿದ ಅವರು ಭಾರತದ ಮೊಟ್ಟಮೊದಲ ಸ್ಟೀಪಲ್ ಚೇಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
27 ವರ್ಷದ ಅವಿನಾಶ ಮುಕುಂದ್ ಸಬ್ಲೆ ಇತ್ತೀಚೆಗೆ ಅಮೆರಿಕದ ಒರೆಗಾನ್‌ನ ಯುಗ್ಯೂನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 3 ಸಾವಿರ ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 11ನೇ ಸ್ಥಾನ ಪಡೆದಿದ್ದರು. ಆ ಕೂಟದಲ್ಲಿ 8 ನಿಮಿಷ 31.75 ಸೆಕೆಂಡ್‌ನಲ್ಲಿ ಗುರಿ ಕ್ರಮಿಸಿದ್ದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿತ್ತು.
ಹರ್ಮಿಂದರ್ ಸಿಂಗ್ ಅವರು 2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾ ಕೂಟದ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಆದರೆ ಮಹಿಳೆಯರ ವಿಭಾಗದಲ್ಲಿ ಯಾರೂ ಇದುವರೆಗೆ ಪದಕ ಗೆದ್ದಿರಲಿಲ್ಲ.
ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಈವರೆಗೂ ನಾಲ್ಕು ಪದಕಗಳನ್ನು ಗೆದ್ದಂತಾಗಿದೆ. ಇದಕ್ಕೂ ಮುನ್ನ ತೇಜಸ್ವಿನ್ ಶಂಕರ್ ಕಂಚು ಹಾಗೂ ಮುರಳಿ ಶ್ರೀಶಂಕರ್ ಪುರುಷರ ಎತ್ತರ ಜಿಗಿತ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಉತ್ತರ ಪ್ರದೇಶದ ಪ್ರಿಯಾಂಕಾ ಗೋಸ್ವಾಮಿ ಮಹಿಳೆಯ 10 ಸಾವಿರ ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಜಯಿಸಿದರು.
ಹಿಮಾ ದಾಸ್ ಅವರು ಮಹಿಳೆಯರ 200 ಮೀ. ಓಟದಲ್ಲಿ ಫೈನಲ್ ಪ್ರವೇಶಿಸಲು ವಿಫಲರಾದರು. ಶುಕ್ರವಾರ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಸ್ಪರ್ಧಿಸಿದ ಅವರು 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಸ್ಥಾನಗಳನ್ನು ಪಡೆದ ನಮೀಬಿಯದ ಕ್ರಿಸ್ಟಿನಾ ಎಂಬೊಮ (22.93 ಸೆ.) ಹಾಗೂ ಆಸ್ಟ್ರೇಲಿಯಾದ ಎಲಾ ಕಾನೊಲಿ (23.41 ಸೆ.) ಫೈನಲ್ ಪ್ರವೇಶಿಸಿದರು.
ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಒಟ್ಟು 28 ಪದಕಗಳು ಗಳಿಸಿದ್ದು, ಒಂಬತ್ತು ಚಿನ್ನ, ಹತ್ತು ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕ ಗೆದ್ದುಕೊಂಡಿದೆ.
54 ಚಿನ್ನದೊಂದಿಗೆ ಒಟ್ಟು 145 ಪದಕ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, 47 ಚಿನ್ನ ಗೆದ್ದಿರುವ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ.