ಕೆ.ಎನ್.ಉಮೇಶ್
2೦೦೦ರಲ್ಲಿ ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆ ಸುದಾರಣೆ ಕುರಿತು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ನ್ಯಾಯಮೂರ್ತಿ ವಿ.ಎಸ್.ಮಲಿಮಠ್ ನೇತೃತ್ವದ 6 ಸದಸ್ಯರ ಸಮಿತಿಯು 2003ರಲ್ಲಿ ತನ್ನ ವರದಿ ನೀಡಿತ್ತು.ಆನಂತರ “ಅಪರಾಧ ನ್ಯಾಯ ಕುರಿತು ಕರಡು ರಾಷ್ಟ್ರೀಯ ನೀತಿ” ರೂಪಿಸಲು ರಚಿಸಲಾಗಿದ್ದ ಎನ್.ಆರ್.ಮಾಧವ್ ಮೆನನ್ ನೇತೃತ್ವದ 4 ಸದಸ್ಯರ ಸಮಿತಿಯು 2007ರಲ್ಲಿ ವರದಿ ನೀಡಿದೆ.2006ರಲ್ಲಿ ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟ್ ಪ್ರಕಾಶ್ ಸಿಂಗ್ ಮತ್ತು ಭಾರತ ಸರ್ಕಾರ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ 7 ನಿರ್ದೇಶನಗಳನ್ನು ನೀಡಿತ್ತು.ಈ ಸಮಿತಿಗಳ ಶಿಫಾರಸ್ಸುಗಳೆಲ್ಲವನ್ನು ಒಪ್ಪಲು ಸಾಧ್ಯವಿಲ್ಲದಿದ್ದರೂ ಸಹಾ ಈ ಕುರಿತು ಸರ್ಕಾರದ ನಿಲುಮೆಯನ್ನು ಈ ಮೂರು ಮಸೂದೆಗಳನ್ನು ಮಂಡಿಸುವಾಗ ಸ್ಪಷ್ಟಪಡಿಸಬೇಕಾದ ಹೊಣೆಗಾರಿಕೆ ಸರ್ಕಾರದಾಗಿದೆ
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಳೆಗಾಲ ಅಧಿವೇಶನದ 2023 ಆಗಸ್ಟ್ 9 ರಂದು ಭಾರತದ ಅಪರಾಧ ಕಾನೂನುಗಳ ಕುರಿತು ಇರುವ ಭಾರತೀಯ ದಂಡ ಸಂಹಿತೆ-1860, ದಂಡ ಪ್ರಕ್ರಿಯೆ ಸಂಹಿತೆ – 1973 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ-1872 ಗಳಿಗೆ ಪ್ರತ್ಯೇಕ ಮೂರು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಮಸೂದೆ (BNS), ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮಸೂದೆ(BNSS) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಮಸೂದೆ 2023 ಎಂಬ ಹೆಸರಿನ ಮಸೂದೆಗಳನ್ನು ಮಂಡಿಸಿದ್ದಾರೆ. ಮಸೂದೆ ಮಂಡಿಸುತ್ತಾ ವಸಾಹತುಶಾಹಿ ಕಾಲಾವಧಿ ಕಾನೂನುಗಳನ್ನು ಓವರ್ ಆಯಿಲ್ ಮಾಡಲು ಈ ಮಸೂದೆಗಳನ್ನು ಮಂಡಿಸಲಾಗಿದೆ ಎಂದಿದ್ದಾರೆ.
ಮಸೂದೆಗಳ ಹೆಸರು-ಶೀರ್ಷಿಕೆ ಮತ್ತು ಭಾರತೀಯ ಸಂವಿಧಾನ
ಇಂಗ್ಲೀಷ್ ಭಾಷೆಯಲ್ಲಿ ಐಪಿಸಿ(IPC), ಸಿಆರ್‌ಪಿಸಿ (CRPC), ಎವಿಡೆನ್ಸ್ ಆಕ್ಟ್ (Evidence Act) ಎಂದೇ ಜನಜನಿತವಾಗಿರುವ ಹೆಸರುಗಳನ್ನು ಭಾರತೀಕರಿಸಲಾಗಿದೆ ಎಂದು ಹಿಂದಿ-ಸಂಸ್ಕೃತ ಭಾಷೆಯ ಪದಗಳ ಬಳಸಿ ನಾಮಾಂಕಿತಗೊಳಿಸಲಾಗಿದೆ. ಆದರೆ ಹಿಂದಿಯೇತ್ತರ ಭಾಷಾ ರಾಜ್ಯಗಳಿಗೆ ಈ ಹಿಂದಿ-ಸಂಸ್ಕೃತ ಭಾಷೆಯ ಪದಗಳನ್ನು ಹೇರುವ ಯತ್ನ ನಡೆದಿದೆ.ಅದನ್ನು RSS ನಿಯಂತ್ರಿತ ಬಿಜೆಪಿ ಸರ್ಕಾರ ಮಾಡೇ ಮಾಡುತ್ತದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಆದರೆ ಭಾರತೀಯ ಸಂವಿಧಾನದ ವಿಧಿ 348 “ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳು ಅಂಗೀಕರಿಸುವ ಎಲ್ಲಾ ಕಾಯ್ದೆಗಳ ಅಧಿಕೃತ ಪಠ್ಯಗಳು ಇಂಗ್ಲೀಷ್ ಭಾಷೆಯಲ್ಲಿರಬೇಕು” ಎನ್ನುತ್ತದೆ.
ಈ ಮಸೂದೆಗಳ ವಿಚಾರದಲ್ಲಿ ಇಡೀ ಕಾಯ್ದೆಗಳ ಕಲಂಗಳು ಇಂಗ್ಲೀಷ್ ಭಾಷೆಯಲ್ಲಿದ್ದರೂ ಸಹಾ ಮಸೂದೆಗಳ ಶೀರ್ಷಿಕೆ ಹೆಸರು ಮಾತ್ರ ಹಿಂದಿಸಂಸ್ಕೃತದಲ್ಲಿದೆ. ಇದು ಸಂವಿಧಾನ ವಿಧಿಸುವ ನಿಬಂಧನೆಗೆ ವಿರುದ್ಧವಾಗಿದೆ, ಮಾತ್ರವಲ್ಲ ಸರ್ಕಾರಿ ಭಾಷೆಗಳ ಕಾಯ್ದೆಯ ಉಲ್ಲಂಘನೆಯು ಆಗಿದೆ.
ಭಾರತದಲ್ಲಿ ನ್ಯಾಯಾಲಯಗಳ ಪೂರ್ವ ತೀರ್ಪುಗಳಿಗೆ (Precedants) ಮಾನ್ಯತೆ ನೀಡುವ ಕಾಮನ್ ಲಾ ವ್ಯವಸ್ಥೆಯನ್ನು ಪಾಲಿಸುತ್ತಿದ್ದೇವೆ. ಈ ಎಲ್ಲಾ ಪೂರ್ವ ತೀರ್ಪುಗಳು ಇಂಗ್ಲೀಷ್ ಭಾಷೆಯಲ್ಲಿ ಬರೆದು ಮತ್ತು ದಾಖಲಿಸಲಾಗಿವೆ. ನ್ಯಾಯಾಲಯಗಳಲ್ಲಿ ದಾಖಲಿಸಲಾಗುವ ಅರ್ಜಿಗಳು, ಮಾಡಲಾಗುವ ನಿವೇದನೆ, ವಾದಾಂಶಗಳು ಮತ್ತು ತೀರ್ಪುಗಳಿಗೆ ಕಾನೂನು ಸಹಾ ನಿಕರತೆ ಮತ್ತು ಸ್ಪಷ್ಟತೆಯನ್ನು ಬಯಸುತ್ತದೆ. ಭಾರತೀಯ ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳು ಇಂಗ್ಲೀಷ್ ಭಾಷೆಯಲ್ಲಿ ಇದರ ಅಗತ್ಯಕ್ಕೆ ಅನುಸಾರವಾಗಿ ಅತ್ಯುತ್ತಮವಾಗಿ ಸನ್ನದ್ದಾಗುತ್ತಾ ಬಂದಿದ್ದಾರೆ.
ಭಾರತವನ್ನು ಹಿಂದಿ ಭಾಷೆ ಮಾತ್ರವೇ ಒಂದುಗೂಡಿಸಲು ಕಾರ್ಯನಿರ್ವಹಿಸಬಹುದು ಎಂದು ಕೇಂದ್ರ ಗೃಹ ಸಚಿವರು 2019ರಲ್ಲಿ ಹೇಳಿಕೆ ನೀಡಿದ್ದರು. 2020ರಲ್ಲಿ ನೂತನ ಶಿಕ್ಷಣ ನೀತಿ ರೂಪಿಸಿ ಕೇಂದ್ರ ಸರ್ಕಾರ ಅಂಗೀಕರಿಸಿದೆ.ಅದರಲ್ಲಿ ಹಿಂದಿ ಹೇರಿಕೆಯ ಕಮಟು ರಾಷ್ಟ್ರವ್ಯಾಪಿ ಆವರಿಸಿತ್ತು.ಅದರ ವಿರುದ್ಧ ಹೋರಾಟಗಳು ನಡೆದಿದ್ದವು.
ದಿನನಿತ್ಯ ನ್ಯಾಯಾಲಯಗಳಲ್ಲಿ ಜಪಿಸಬೇಕಾದ ಇದುವರೆಗಿನ ಇಂಗ್ಲೀಷ್ ಭಾಷೆಯ ಕಾಯ್ದೆಗಳನ್ನು ಹಿಂದಿ-ಸಂಸ್ಕೃತ ಭಾಷಾ ಪದಗಳಲ್ಲಿ ಜಪಿಸಬೇಕಾಗಿ ಬರಲಿದೆ.ಇದು ಕೇವಲ ಭಾಷೆಯ ಪ್ರಶ್ನೆಯಲ್ಲ, ಬದಲಾಗಿ ಸಂಸ್ಕೃತಿ ಒಳಗೊಳ್ಳುವಿಕೆ, ವೈವಿಧ್ಯತೆ ಮತ್ತು ಪರಸ್ಪರ ಗೌರವದ ಪ್ರಶ್ನೆಯಾಗಿದೆ.RSS ಬಿಜೆಪಿಯು ತನ್ನ ಅಜೆಂಡಾ ಅನುಸಾರ ತನ್ನ ಎಲ್ಲಾ ನಡೆಗಳಲ್ಲೂ “ಹಿಂದು-ಹಿಂದಿ-ಹಿಂದುಸ್ಥಾನ” ಎಂಬ ಘೋಷಣೆಗೆ ಅನುಸಾರ ಕಾರ್ಯನಿರ್ವಹಿಸುತ್ತಾ ಬಂದಿದೆ.ಅದನ್ನು ಇಲ್ಲೂ ಪ್ರದರ್ಶಿಸುತ್ತಿದೆ.ಈ ನಿಟ್ಟಿನಲ್ಲಿ ಎಂದಿನಂತೆ ಭಾರತೀಯ ಸಂವಿಧಾನಕ್ಕೆ ಅಗತ್ಯ ಗೌರವ, ಬದ್ಧತೆ ತೋರದ ಬಿಜೆಪಿ ಸರ್ಕಾರವು ಈ ಪ್ರಕ್ರಿಯೆಯಲ್ಲೂ ಸಹಾ ತನ್ನ “ಬಹುಸಂಖ್ಯಾವಾದಿ ಸರ್ವಾದಿಕಾರತನ” ವನ್ನು ಪ್ರದರ್ಶಿಸುತ್ತಾ ಬಹುಸಂಖ್ಯಾತರ ಹಿಂದಿ ಭಾಷೆಯನ್ನು ಅಲ್ಪಸಂಖ್ಯಾತ ಹಿಂದಿಯೇತ್ತರರ ಮೇಲೆ ಹೇರಲು ಮುಂದಾಗಿದೆ.ಪ್ರತಿಯೊಂದರಲ್ಲೂ ಹೆಜ್ಜೆ ಹೆಜ್ಜೆಗೂ ಸಂವಿಧಾನದ ಉಲ್ಲಂಘನೆ ಅಥವಾ ಉಪೇಕ್ಷೆಯು ಬಿಜೆಪಿ ಸರ್ಕಾರದ ಕ್ರಮವಾಗಿದೆ.ಅದನ್ನು ಈ ಪ್ರಕ್ರಿಯೆಯಲ್ಲೂ ನೋಡಬಹುದಾಗಿದೆ.
ಅಪರಾಧ ಕಾನೂನು ಹಿನ್ನೆಲೆ, ಪ್ರಸ್ತುತ ಮತ್ತು ಪ್ರಸ್ತಾಪಿತ
ಆಂಗ್ಲರ ಆಡಳಿತವು 1834ರಲ್ಲಿ ಪ್ರಥಮ ಭಾರತೀಯ ಕಾನೂನು ಆಯೋಗವನ್ನು ಲಾರ್ಡ್ ಥಾಮಸ್.ಬಿ.ಮಕಾಲೆ ಅಧ್ಯಕ್ಷತೆಯಲ್ಲಿ ಅಂದಿನ ನ್ಯಾಯಾಲಯಗಳ ವ್ಯಾಪ್ತಿ, ಅಧಿಕಾರ ಮತ್ತು ನಿಯಮಗಳು ಮತ್ತು ಪೋಲಿಸ್ ವ್ಯವಸ್ಥೆ ಹಾಗೂ ಭಾರತದಲ್ಲಿ ಜಾರಿಯಲ್ಲಿದ್ದ ಕಾನೂನುಗಳ ಕುರಿತು ಪರಿಶೀಲಿಸಲು ರಚಿಸಿತ್ತು.
ಆಯೋಗದ ಸಲಹೆಯಂತೆ ಭಾರತೀಯ ದಂಡ ಸಂಹಿತೆ (IPC) 1860, ಅನ್ನು ರೂಪಿಸಿ ಜಾರಿಗೊಳಿಸಲಾಗಿತ್ತು. ಆನಂತರ 2,3,4ನೇ ಭಾರತೀಯ ಕಾನೂನು ಆಯೋಗದ ಶಿಫಾರಸ್ಸಿನ ನಂತರ ದಂಡ ಪ್ರಕ್ರಿಯೆ ಸಂಹಿತೆ (CrPC)-1898, ಸಾಕ್ಷ್ಯ ಕಾಯ್ದೆ-1872 ಗಳನ್ನು ಸಹಾ ರೂಪಿಸಿ ಜಾರಿಗೊಳಿಸಲಾಗಿತ್ತು. ಈ ಮೂರು ಪ್ರಧಾನ ಕಾಯ್ದೆಗಳ ಜೊತೆ ಹಲವಾರು ಶಾಸನಗಳು ಮತ್ತು ೩ ಕಾಯ್ದೆಗಳಿಗೆ ಹಲವು ತಿದ್ದುಪಡಿಗಳ ಮೂಲಕ ರೂಪಿಸಿದ್ದ ಶಾಸನಗಳೆ ಭಾರತದ ಕ್ರಿಮಿನಲ್ (ಅಪರಾಧ) ಕಾನೂನಿನ ಆಧಾರಗಳಗಿವೆ.
ಮೇ 2020 ರಲ್ಲಿ ಗೃಹ ಸಚಿವಾಲಯವು, ಪ್ರಸ್ತುತ ಅಪರಾಧ ಕಾನೂನುಗಳನ್ನು ಪರಿಶೀಲಿಸಿ, ಸುಧಾರಣೆಗಳನ್ನು ಸೂಚಿಸಲು ಕೋರಿ ರಚಿಸಿದ್ದ ದೆಹಲಿಯ ರಾಷ್ಟ್ರೀಯ ಕಾನೂನು ಶಾಲೆಯ ಉಪಕುಲಪತಿ ರಣಬೀರ್ ಸಿಂಗ್ ನೇತೃತ್ವದ 5 ಜನರ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಈ ಮಸೂದೆಗಳನ್ನು ಸಿದ್ದಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮಸೂದೆ ಸಿದ್ದಪಡಿಸುವ ಮುನ್ನ ಎಂದು ಸಹಾ ಈ ಸಮಿತಿಯ ಶಿಫಾರಸ್ಸುಗಳನ್ನು ವಿಶಾಲ ಸಮಾಲೋಚನೆಗೆ ಒಳಪಡಿಸಿಲ್ಲ.
ಈ ನಡುವೆ 2೦೦೦ರಲ್ಲಿ ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆ ಸುದಾರಣೆ ಕುರಿತು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ನ್ಯಾಯಮೂರ್ತಿ ವಿ.ಎಸ್.ಮಲಿಮಠ್ ನೇತೃತ್ವದ 6 ಸದಸ್ಯರ ಸಮಿತಿಯು 2003ರಲ್ಲಿ ತನ್ನ ವರದಿ ನೀಡಿತ್ತು.ಆನಂತರ “ಅಪರಾಧ ನ್ಯಾಯ ಕುರಿತು ಕರಡು ರಾಷ್ಟ್ರೀಯ ನೀತಿ” ರೂಪಿಸಲು ರಚಿಸಲಾಗಿದ್ದ ಎನ್.ಆರ್.ಮಾಧವ್ ಮೆನನ್ ನೇತೃತ್ವದ 4 ಸದಸ್ಯರ ಸಮಿತಿಯು 2007ರಲ್ಲಿ ವರದಿ ನೀಡಿದೆ.2006ರಲ್ಲಿ ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟ್ ಪ್ರಕಾಶ್ ಸಿಂಗ್ ಮತ್ತು ಭಾರತ ಸರ್ಕಾರ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ 7 ನಿರ್ದೇಶನಗಳನ್ನು ನೀಡಿತ್ತು.ಈ ಸಮಿತಿಗಳ ಶಿಫಾರಸ್ಸುಗಳೆಲ್ಲವನ್ನು ಒಪ್ಪಲು ಸಾಧ್ಯವಿಲ್ಲದಿದ್ದರೂ ಸಹಾ ಈ ಕುರಿತು ಸರ್ಕಾರದ ನಿಲುಮೆಯನ್ನು ಈ ಮೂರು ಮಸೂದೆಗಳನ್ನು ಮಂಡಿಸುವಾಗ ಸ್ಪಷ್ಟಪಡಿಸಬೇಕಾದ ಹೊಣೆಗಾರಿಕೆ ಸರ್ಕಾರದಾಗಿದೆ.ಆದರೆ ಈ ಯಾವುದರ ಬಗ್ಗೆಯು ಕೇಂದ್ರ ಸರ್ಕಾರವಾಗಲಿ ಅಥವಾ ಗೃಹ ಸಚಿವರಾಗಲಿ ತುಟಿ ಬಿಚ್ಚಿಲ್ಲ. ಬದಲಾಗಿ 2020ರಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದ ಸಮಿತಿ ಯಾವುದರಲ್ಲಿ ಬಿಜೆಪಿಯ ರಾಜ್ಯ ಸಭಾ ಸದಸ್ಯರಾದ ಮಹೇಶ್ ಜೇತ್ಮಾಲಾನಿ ಪ್ರಧಾನ ಪಾತ್ರ ವಹಿಸಿದ್ದಾರೆ.ಅದರ ಶಿಫಾರಸ್ಸಿನಂತೆ ಮಸೂದೆ ರೂಪಿಸಿರುವುದಾಗಿ ಹೇಳಲಾಗಿದೆ.ಸಮಿತಿಯ ಶಿಫಾರಸ್ಸುಗಳನ್ನು ಮಾತ್ರ ಬಹಿರಂಗ ಪಡಿಸಿಲ್ಲ.
ಆದರೆ ಗೃಹ ಸಚಿವರು ಸದನದಲ್ಲಿ ನೀಡಿರುವ ಮೌಖಿಕ ಹೇಳಿಗೂ ಮತ್ತು ಮಂಡಿಸಲಾದ 3 ಮಸೂದೆಗಳ ಉದ್ದೇಶಗಳು ಮತ್ತು ಕಾರಣಗಳಲ್ಲಿ ಲಿಖಿತವಾಗಿ ಪ್ರಸ್ತಾಪಿಸಿರುವ ಅಂಶಗಳ ನಡುವೆ ಅಂತರವಿದೆ.ತರಾತುರಿಯಲ್ಲಿ ಮಂಡಿಸಲಾದ ಮಸೂದೆಗಳನ್ನು ಅಧಿವೇಶನವು ಸ್ಥಾಯಿ ಸಮಿತಿಗೆ ಒಪ್ಪಿಸಿದೆ. ಆದರೆ ಅದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸ್ಥಾಯಿ ಸಮಿತಿಯಲ್ಲ, ಬದಲಾಗಿ ಗೃಹ ಸಚಿವಾಲಯದಡಿಯ ಸ್ಥಾಯಿ ಸಮಿತಿಯಾಗಿದೆ.
ಐಪಿಸಿಯಲ್ಲಿ ಪ್ರಸ್ತುತು 511 ಕಲಂಗಳಿದ್ದರೆ, ನೂತನ ಬಿಎನ್‌ಎಸ್ ಮಸೂದೆಯು 356 ಕಲಂಗಳನ್ನು ಹೊಂದಿದೆ.ಸಮಾನ ರೂಪದ ಹಲವು ಕಲಂಗಳನ್ನು ಸೇರಿಸಿ ಒಂದೇ ಕಲಂ ಅಡಿ ತರಲಾಗಿದೆ.28 ಕಲಂಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.8 ಕಲಂಗಳನ್ನು ನೂತನವಾಗಿ ಸೇರಿಸಿ 175 ಕಲಂಗಳಿಗೆ ಸಣ್ಣಪುಟ್ಟ ತಿದ್ದುಪಡಿ ಮಾಡಲಾಗಿದೆ.
ಆರ್‌ಪಿಸಿ ಯಲ್ಲಿ ಪ್ರಸ್ತುತು 56 ಬಗೆಯ 484 ಕಲಂಗಳು ಇದ್ದಾವೆ. ಇದೀಗ ಅದನ್ನು 533 ಕಲಂಗಳಿಗೆ ಹೆಚ್ಚಿಸಲಾಗಿದೆ.ಹಾಲಿ ಕಲಂಗಳನ್ನು ನೂತನ 9 ಕಲಂಗಳ ಮೂಲಕ ಮಸೂದೆಯಲ್ಲಿ ಬದಲಾಯಿಸಲಾಗಿದೆ.160 ಕಲಂಗಳಿಗೆ ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ, ಶೇಕಡ 90 ರಷ್ಟು ಹಾಲಿ ಕಲಂಗಳನ್ನು ಉಳಿಸಿಕೊಳ್ಳಲಾಗಿದೆ.
ಎವಿಡೆನ್ಸ್ ಆಕ್ಟ್ನಲ್ಲಿ ಹಾಲಿ 166 ಕಲಂಗಳಿದ್ದರೆ ಅವುಗಳನ್ನು ನೂತನ ಮಸೂದೆಯಲ್ಲಿ 170 ಕಲಂಗಳಿಗೆ ಹೆಚ್ಚಿಸಲಾಗಿದೆ.ಕೇವಲ 5 ಕಲಂಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.ಒಂದು ಕಲಂ ಅನ್ನು ನೂತನವಾಗಿ ಸೇರಿಸಿದ್ದರೆ, 23 ಕಲಂಗಳಿಗೆ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ.
ಸಾಮಾನ್ಯ ಮನುಷ್ಯನ ಜೀವನವನ್ನು ಸುಲಲಿತಗೊಳಿಸಲು
ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು, ಕಾನೂನು ಪ್ರಕ್ರಿಯೆಯನ್ನು ಸರಳಗೊಳಿಸಲು ಆ ಮೂಲಕ ಸಾಮಾನ್ಯ ಮನುಷ್ಯನ ಜೀವನವನ್ನು ಸುಲಲಿತಗೊಳಿಸಲು ಪ್ರಸಕ್ತ ಅಪರಾಧ ಕಾನೂನುಗಳನ್ನು ಪರಿಕ್ಷರಿಸುವುದು ಅಗತ್ಯವಾಗಿದೆ ಎಂದು ಭಾರತೀಯ ನ್ಯಾಯ ಸಂಹಿತೆ ಮಸೂದೆ 2023ರ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ಹೇಳಲಾಗಿದೆ. ಸಮಕಾಲೀನ ಪರಿಸ್ಥಿತಿಗೆ ಕಾನೂನನ್ನು ಪ್ರಸ್ತುತಗೊಳಿಸಿ ಸಾಮಾನ್ಯ ಮನುಷ್ಯನಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಈ ಮಸೂದೆ ರೂಪಿಸಲಾಗಿದೆ ಎನ್ನಲಾಗಿದೆ.ಸಮಕಾಲೀನ ಅಗತ್ಯಗಳು ಮತ್ತು ಜನತೆಯ ಆಶಯಗಳನ್ನು ಗಮನದಲ್ಲಿರಿಸಿ, ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ, ನಾಗರೀಕ ಕೇಂದ್ರಿತ ಮತ್ತು ನಾಗರೀಕರ ಜೀವನ ಮತ್ತು ಸ್ವತಂತ್ರ್ಯವನ್ನು ಖಾತ್ರಿಪಡಿಸಲು ಕಾನೂನು ಸಂರಚನೆಯನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.
ಪ್ರಥಮ ಬಾರಿಗೆ ಸಣ್ಣಪುಟ್ಟ ಅಪರಾಧಗಳಿಗೆ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ವಿಧಿಸಲಾಗಿದೆ.ಮಹಿಳೆ ಮತ್ತು ಮಕ್ಕಳು, ಹತ್ಯೆ ಮತ್ತು ಪ್ರಭುತ್ವದ ವಿರುದ್ಧ ಅಪರಾಧಗಳಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ.ಅಪರಾಧಗಳನ್ನು ಲಿಂಗ ತಟಸ್ಥಗೊಳಿಸಲಾಗಿದೆ.ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನಿರೋಧಕ (deterrent) ಶಿಕ್ಷೆಯೊಂದಿಗೆ ನೂತನ ಸಂಘಟಿತ ಅಪರಾಧ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಅಪರಾಧಗಳೆಂದು ಸೇರಿಸಲಾಗಿದೆ ಎಂದಿದ್ದಾರೆ.ಪ್ರತ್ಯೇಕತೆಯ ಕೃತ್ಯಗಳನ್ನು ಸಶಸ್ತ್ರ ಬಂಡಾಯ, ಪ್ರತ್ಯೇಕಗೊಳಿಸುವ ಚಟುವಟಿಕೆಗಳು, ಪ್ರತ್ಯೇಕಗೊಳ್ಳುವ ಚಟುವಟಿಕೆ ಅಥವಾ ಭಾರತದ ಸಾರ್ವಭೌಮತೆ ಅಥವಾ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯ ಒಡ್ಡುವ ಕೃತ್ಯಗಳನ್ನು ನೂತನ ಅಪರಾಧಗಳೆಂದು ಸೇರಿಸಲಾಗಿದೆ. ಹಾಗೆಯೇ ವಿವಿಧ ಅಪರಾಧಗಳಿಗೆ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದಿದೆ.
ದೇಶ ದ್ರೋಹದ ಕಲಂ
ಮೇಲಿನ ಉದ್ದೇಶಗಳಿಗಾಗಿ ಮಸೂದೆ ರೂಪಿಸಲಾಗಿದೆ ಎಂದು ಲಿಖಿತವಾಗಿ ಹೇಳಲಾಗಿರುವಾಗ, ಮಂಡನೆಯ ವೇಳೆ “ದೇಶದ್ರೋಹ” (Sedition) ಕುರಿತು ಅಪರಾಧ IPC ಕಲಂ 1240 ಅನ್ನು ತೆಗೆದು ಹಾಕಲಾಗಿದೆ ಎಂದಿದ್ದಾರೆ ಗೃಹ ಸಚಿವರು.ಆದರೆ ನೂತನ BNSS ಮಸೂದೆಯ ಕಲಂ 150 ರಲ್ಲಿ ಮತ್ತೆ ಅದೇ ಪದಗಳನ್ನು ಉಚ್ಚರಿಸಿ ಅಪರಾಧ ಎಂದು ಪರಿಗಣಿಸಿದ್ದಾರೆ.ಆದರೆ IPC ಅಡಿ ದೇಶ ದ್ರೋಹದ ಆರೋಪಿ, ತಾನು ಆರೋಪಿತ ಅಪರಾಧ ಎಸೆಗಿಲ್ಲ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಹೊಂದಿದ್ದರೆ, BNS ಅಡಿ ಅದನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಸರ್ಕಾರದಾಗಿದೆ.ದೇಶ ದ್ರೋಹದ ಪದ ಮಾತ್ರ ಬಳಕೆಯಾಗಿಲ್ಲ ಅಷ್ಟೆ.
ಭಾರತೀಯ ನಾಗರೀಕರ ಸುರಕ್ಷಾ ಸಂಹಿತೆ ಮಸೂದೆ (BNSS)ಯ ಕಲಂ 127ರಲ್ಲಿ ಮಾತ್ರ ದೇಶ ದ್ರೋಹದ ವಿಚಾರದಲ್ಲಿ ಆರೋಪಿಗಳು ನೀಡಬೇಕಾದ ಸನ್ನಡತೆಯ ಭದ್ರತಾ ಠೇವಣಿ ಕುರಿತು ವಿವರವಿದೆ.
ಇದನ್ನೂ ಓದಿ:ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮರುನಾಮಕರಣಕ್ಕೆ ರಾಷ್ಟ್ರಪತಿ ಮುರ್ಮು ಒಪ್ಪಿಗೆ
ಗೃಹ ಸಚಿವರ ಹೇಳಿಕೆ ಸತ್ಯವಾಗಿದ್ದಲ್ಲಿ BNSS ಕಲಂ 127ರಲ್ಲಿ ಏಕೆ ಮತ್ತೆ ಸೆಡಿಷನ್ ಕೃತ್ಯ ಎಸಗುವವರು ನೀಡಬೇಕಾದ ಭದ್ರತಾ ಠೇವಣಿಯ ಪ್ರಸ್ತಾಪವಿದೆ. BNSSನ ಕಲಂ 150ರಲ್ಲಿ ಏಕೆ ಅದೇ ವಾಕ್ಯಗಳ ಪುನರುಚ್ಚಾರವಿದೆ.ಮಸೂದೆಯ ಹೇಳಿಕೆಯಲ್ಲಿ ಏಕೆ ಭಿನ್ನ ವ್ಯಾಖ್ಯಾನವಿದೆ?ಎಂಬ ಪ್ರಶ್ನೆ ಪ್ರಸ್ತುತವಾಗಿದೆ.
ಜನತೆಯ ಜೀವನ ಸುಲಲಿತಗೊಳಿಸುವ ನೆಪದಲ್ಲಿ ಸಂಘಟಿತ ಅಪರಾಧದ ವ್ಯಾಪ್ತಿಗೆ ಮತ್ತು ಭಯೋತ್ಪಾದಕ ಕೃತ್ಯ ವ್ಯಾಪ್ತಿಗೆ ನ್ಯಾಯಕ್ಕಾಗಿ ನಡೆಯುವ ಸಂಘಟಿತ ಜನ ಚಳುವಳಿ ಮತ್ತು ಅದರ ನಾಯಕರು ಹಾಗೂ ಭಾಗವಹಿಸುವವರನ್ನು ಸೇರಿಸಲು ಅನುವಾಗುವಂತೆ ವ್ಯಾಖ್ಯಾನ ನೀಡಬಹುದಾದ ರೀತಿಯಲ್ಲಿ ಕಲಂ 111(I)(IV) ಮತ್ತು ಕಲಂ 111(6)(a)(II)ಗಳಲ್ಲಿ ಪದ ಬಳಕೆ ಮಾಡಿ ವಾಕ್ಯಗಳನ್ನು ರಚಿಸಲಾಗಿದೆ.
ಸಂಘಟಿತ ಅಪರಾಧ ಮತ್ತು ಭಯೋತ್ಪಾದಕ ಕೃತ್ಯಗಳ ಕುರಿತು ಸಂಘಟಿತ ಅಪರಾಧಗಳ ತಡೆ ಕಾಯ್ದೆ (UAPA)ಯಲ್ಲಿನ ಅಂಶಗಳನ್ನು ಪ್ರಧಾನ ದಂಡ ಸಂಹಿತೆ ವ್ಯಾಪ್ತಿಗೆ BNSS ಮಸೂದೆ ಮೂಲಕ ಒಳಪಡಿಸಿ, ಅದರ ಪರಿಭಾಷೆಗಳನ್ನು ವಿಶಾಲ ಹಾಗೂ ವಿಸ್ತೃತ ವ್ಯಾಖ್ಯಾನಕ್ಕೆ ಆಸ್ಪದಗೊಳಿಸಿ, ಕಾರ್ಯಾಂಗದ ಮೂಲಕ ತನ್ನ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಜನ ಚಳುವಳಿ ಮತ್ತು ರಾಜಕೀಯ ಹೋರಾಟಗಳನ್ನು ನಿಯಂತ್ರಿಸುವ ಅಧಿಕಾರವನ್ನು ಪೋಲಿಸರಿಗೆ ಮಸೂದೆಗಳು ನೀಡಿವೆ. ಇದು ಇಂದಿನ ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಸವಾಲಾಗಿ ಹೊರಹೊಮ್ಮುತ್ತಿರುವ ಜನ ಚಳುವಳಿಯನ್ನು ಸದೆ ಬಡಿಯಲು ಇಂದಿನ ಆಳುವ ವರ್ಗಕ್ಕೆ ಅಗತ್ಯವಿರುವ ಪ್ರಭುತ್ವದ ಮೇಲ್ ರಚನೆ ನ್ಯಾಯ ವ್ಯವಸ್ಥೆ ಮತ್ತು ನ್ಯಾಯ ಶಾಸ್ತçವನ್ನು ನಿಯಂತ್ರಿಸುವ ಪ್ರಜ್ಞಾಪೂರ್ವಕ ಯತ್ನವಾಗಿದೆ.
ಸಮೂಹ ಹತ್ಯಯನ್ನು ಬಿಎನ್‌ಎಸ್ ಕಲಂ 101(2) ಅಡಿ ಅಪರಾಧವಾಗಿ ಪರಿಗಣಿಸಿರುವಾಗಲೇ ತನ್ನ ಕೋಮುವಾದಿ ಅಜೆಂಡಾಗೆ ಪೂರ್ವಕವಾಗಿ ಅದಕ್ಕೆ ಶಿಕ್ಷೆಯನ್ನು ಕೊಲೆಗೆ ಸಮಾನವಾಗಿ ಗಲ್ಲು ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಬದಲು 7
ವರ್ಷಕ್ಕಿಂತ ಕಮ್ಮಿ ಇಲ್ಲದಂತೆ ಜೈಲು ವಾಸದ ಅವಕಾಶವನ್ನು ಗಲ್ಲು ಅಥವಾ ಜೀವಾವಧಿ ಶಿಕ್ಷೆಯ ಜೊತೆ ಆಯ್ಕೆಯಾಗಿ ನ್ಯಾಯಾಧೀಶರ ವಿವೇಚನೆಗೆ ಅವಕಾಶ ನೀಡಿದೆ.
ಕ್ರಿಮಿನಲ್ ಪಿತೂರಿ ಕುರಿತು ಬ್ರಿಟಿಷ್ ಸರ್ಕರದ ಐಪಿಸಿ ಕಲಂ 120 ಮತ್ತು 120ಬಿ ಅನ್ನು ಯತಾವತ್ತಾಗಿ BNS ನ ಕಲಂ 61ರಲ್ಲಿ ಹೊಂದಲಾಗಿದೆ.ವೈವಾಹಿಕ ಮಾನಭಂಗ (ರೇಪ್) ಅನ್ನು ಅಪರಾಧವಾಗಿ ಭಾರತೀಯ ನ್ಯಾಯಾಲಯಗಳು ಪರಿಗಣಿಸಿದ್ದರು ಸಹಾ ಮಸೂದೆಗಳಲ್ಲಿ ಅದನ್ನು ಒಳಗೊಂಡಿಲ್ಲ. ಕ್ರಿಮಿನಲ್ ಮಾನನಷ್ಟ ಅಂಶಗಳನ್ನು ಹಾಗೆ ಉಳಿಸಿಕೊಳ್ಳಲಾಗಿದೆ.
ಐಪಿಸಿ ಅಡಿ ಪರಿಭಾಷೆಗಳಲ್ಲಿ ಕೋರ್ಟ್ ಅನ್ನು ಕೋರ್ಟ್ ಆಫ್ ಜಸ್ಟೀಸ್ (ನ್ಯಾಯದಾನದ ನ್ಯಾಯಾಲಯ) ಎಂದಿದ್ದರೆ,BNSS ನಲ್ಲಿ ಜಸ್ಟೀಸ್ ಪದ ತೆಗೆದು ಕೇವಲ ‘ನ್ಯಾಯಾಲಯ’ (ಕೋರ್ಟ್) ಪದವನ್ನು ಮಾತ್ರ ಕಲಂ 2(4) ರಲ್ಲಿ ನಮೂದಿಸಲಾಗಿದೆ.ಬಿಜೆಪಿ-ಸರ್ಕಾರ ಬಂದ ಮೇಲೆ ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿವೆ. ಆದರೆ ನ್ಯಾಯದಾನ ನೀಡುವಲ್ಲಿ ಸೋತಿವೆ. ಅದನ್ನೇ ಅಯೋಧ್ಯಯ ಬಾಬ್ರಿ ಮಸೀದಿ ಪ್ರಕರಣದಲ್ಲೂ ನೋಡಲಾಗಿತ್ತು. ಅದನ್ನೇ ಸಿಪಿಐ(ಎಂ) “ತೀರ್ಪು ನೀಡಲಾಗಿದೆ, ಆದರೆ ನ್ಯಾಯವನ್ನಲ್ಲ” ಎಂದು ಆಯೋಧ್ಯ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ವಿಶ್ಲೇಷಿಸಿತ್ತು. ಇದೀಗ ಅಂತಹದೆ ದಾರಿಗೆ ಇಡಿ ಅಪರಾಧ ಕಾನೂನು ನ್ಯಾಯಾಲಯವನ್ನು ಕೊಂಡೊಯ್ಯುವ ಯತ್ನವನ್ನು ಮಸೂದೆಗಳ ಮೂಲಕ ಮಾಡಲು ಬಿಜೆಪಿ ಸರ್ಕಾರವು ಹೊರಟಿದೆ.
ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್ ಮತ್ತು ದಂಡ ಪ್ರಕ್ರಿಯೆ ಸಂಹಿತೆ
ದಂಡ ಪ್ರಕ್ರಿಯೆ ಸಂಹಿತೆ 1973 (ಸಿಆರ್‌ಪಿಸಿ) ತಿದ್ದುಪಡಿ ಮಸೂದೆಯನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮಸೂದೆ 2023 ಎಂದು ಮಂಡಿಸಿರುವ ಮಸೂದೆಯ ಉದ್ದೇಶಗಳನ್ನು ಮತ್ತು ಕಾರಣಗಳ ಹೇಳಿಕೆಯಲ್ಲಿ ನಾಗರೀಕ ಕೇಂದ್ರಿತ ದಂಡ ಪ್ರಕ್ರಿಯೆಗಳು ಇಂದಿನ ಅಗತ್ಯ ಎಂದು ಹೇಳಿದೆ.ಜನತೆಯ ಆಶಯಕ್ಕೆ ಪೂರಕವಾಗಿ ಪ್ರಚಲಿತ ಅಗತ್ಯಗಳನ್ನು ಆಧರಿಸಿ ಮಸೂದೆ ಸಿದ್ದಪಡಿಸಿರುವುದಾಗಿ ಹೇಳಿದೆ.
ಸಂವಿಧಾನದ ಪ್ರಜಾಸತ್ತಾತ್ಮಕ ಆಶಯಕ್ಕೆ ಅನುಗುಣವಾಗಿ “ಎಲ್ಲರ ಜೊತೆ, ಎಲ್ಲರ ವಿಕಾಸ್, ಎಲ್ಲರ ವಿಶ್ವಾಸ, ಎಲ್ಲರ ಪ್ರಯಾಸ” ಎಂಬ ತನ್ನ ಘೋಷ ವ್ಯಾಕ್ಯಕ್ಕೆ ಅನುಗುಣವಾಗಿ ಎಲ್ಲಾ ನಾಗರೀಕರಿಗೂ ಕ್ಷಿಪ್ರ ನ್ಯಾಯದಾನಕ್ಕಾಗಿ ತಿದ್ದುಪಡಿ ಮಾಡಲಾಗಿದೆ ಎಂದಿದೆ.
ಡಿಜಿಟಲ್ ಮಾಧ್ಯಮದ ಮೂಲಕ ಸಮನ್ಸ್ ವಾರೆಂಟ್ಸ್ ನೀಡಿಕೆ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿ ವೇಳೆ ಮಹಿಳೆಯರ ಬಂಧನಕ್ಕೆ ಇದ್ದ ನಿರ್ಬಂಧ ತೆರೆವುಗೊಳಿಸಿ, ಮಹಿಳಾ ಸಿಬ್ಬಂದಿಯೊಂದಿಗೆ ಬಂಧಿಸಲು ಅವಕಾಶ ಕಲ್ಪಿಸಿದೆ.ಇದುವರೆಗೆ ಗಂಭೀರ ಆರೋಪದ ಆರೋಪಿಗಳು ಮತ್ತು ಕುಖ್ಯಾತ ಅಪರಾಧಿಗಳಿಗೆ ಮಾತ್ರ ಇದ್ದ ಕೈಕೋಳ ತೊಡಿಸುವ ಪ್ರಕ್ರಿಯೆಯನ್ನು ಸಾಮಾನ್ಯ ಅಪರಾಧದ ಆರೋಪಿಗಳಿಗೂ ತೊಡಿಸಲು ಅವಕಾಶ ಕಲ್ಪಿಸಿದೆ.ಇದುವರೆಗೆ ಇದ್ದ 14 ದಿನಗಳ ಪೊಲೀಸ್ ಕಸ್ಟಡಿ ದಿನಗಳನ್ನು 60 ರಿಂದ 90ದಿನಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಿದೆ. ಭಯೋತ್ಪಾದಕ ಪ್ರಕರಣಗಳಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಇದ್ದ 180 ದಿನಗಳ ಕಾಲಾವಕಾಶವನ್ನು ಸಾಮಾನ್ಯ ಪ್ರಕರಣಗಳಲ್ಲೂ ಕಲ್ಪಿಸಲಾಗಿದೆ.ಸಿಆರ್‌ಪಿಸಿ ಯಲ್ಲಿ ಅದು ಕೇವಲ 90 ದಿನಗಳಿಗೆ ಸೀಮಿತವಾಗಿತ್ತು.ಈ ತಿದ್ದುಪಡಿಗಳ ಮೂಲಕ ಪೋಲಿಸರಿಗೆ ಹೆಚ್ಚು ಅಧಿಕಾರ ನೀಡಲಾಗಿದೆ.ನಕಲಿ ಎನ್‌ಕೌಟರ್‌ಗಳಿಗೂ ಅವಕಾಶವನ್ನು ಸಲೀಸುಗೊಳಿಸಲಾಗಿದೆ.ಇದನ್ನೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇತ್ಯಾದಿ ಎಂದು ಬೊಬ್ಬೆ ಹಾಕುವ ಕೆಲಸವನ್ನು ಗೃಹ ಸಚಿವರು ನಡೆಸಿದ್ದಾರೆ.
ತರಾತುರಿಯ ಮಂಡನೆ
ಎಂತಹ ತರಾತುರಿಯಲ್ಲಿ ಮಸೂದೆಗಳನ್ನು ಮಂಡಿಸಲಾಗಿದೆ ಎಂದರೆ, ಮಸೂದೆಗಳ ಕೊನೆಯಲ್ಲಿ ನೀಡಲಾಗುವ ಕಲಂಗಳ ಕುರಿತು ಟಿಪ್ಪಣಿಯಲ್ಲಿನ ತಪ್ಪುಗಳನ್ನು ತಿದ್ದಲು ಸಮಯಾವಕಾಶ ಇಲ್ಲದಾಗಿದೆ.
ಪರಿಣಾಮವಾಗಿ BNSS ಗೆ ಕಲಂ 220ರ ಟಿಪ್ಪಣಿಯಲ್ಲಿ ೪೯೮ಎ ಎಂದು ನಮೂದಿದೆ.ಆದರೆ BNSS ನಲ್ಲಿ ಇರುವುದೇ ಕೇವಲ 356 ಕಲಂಗಳು ಮಾತ್ರ. ಕಲಂ 498ಎ ಇರುವುದು IPC ಯಲ್ಲಿ ಎಂಬ ತಪ್ಪನ್ನು ತಿದ್ದಲು ಅವಕಾಶವಿಲ್ಲದಷ್ಟು ತರಾತುರಿ ಅಂತೆಯೇ BNSS ನ ಭಾಗ 7 ರಲ್ಲಿ ಪ್ರಭುತ್ವದ ವಿರುದ್ಧದ ಅಪರಾಧಗಳ ಅಧ್ಯಾಯ ಸೂಚಿಯಲ್ಲಿ ಕಲಂ 153ರಲ್ಲಿ ಕಲಂ 151ಮತ್ತು 152 ಎಂದು ಉಲ್ಲೇಖಿಸುವ ಬದಲು ತಪ್ಪಾಗಿ 153ಮತ್ತು 154 ಎಂದು ನಮೂದಿಸಿ ಅದನ್ನೂ ತಿದ್ದುಪಡಿ ಮಾಡದೆ ಏನಾದರೂ ಮಾಡಿ ಮಂಡಿಸಿ ಬಿಡಬೇಕು ಎಂಬ ಆತುರ ಬಿಜೆಪಿ ಸರ್ಕಾರದಾಗಿದೆ.
ಕೇವಲ ಅಪರಾಧ ಕಾನೂನು ಮಾತ್ರವಲ್ಲ
ಇದೇ ಅಧಿವೇಶನದಲ್ಲಿ ಹಲವಾರು ತಿದ್ದುಪಡಿ ಮಸೂದೆಗಳನ್ನು ಮಂಡಿಸಿ ಅವುಗಳನ್ನು ತನಗಿರುವ ಬಹುಮತದಿಂದಾಗಿ ಅಂಗೀಕರಿಸಿಯು ಕೊಂಡಿದೆ.ಅವುಗಳಲ್ಲಿ ಒಂದು ಪ್ರೆಸ್ ಮತ್ತು ನಿಯತಕಾಲಿಕಗಳ ನೊಂದಾವಣಿ ಮಸೂದೆ 2023.ಇದರ ಪ್ರಕಾರ ಯಾವುದೇ ಪತ್ರಿಕೆ, ನಿಯತಕಾಲಿಕ ನೋಂದಾವಣಿಯನ್ನು ರಿಜಿಸ್ಟ್ರಾರ್ ರದ್ದುಗೊಳಿಸಬಹುದು ಮಾತ್ರವಲ್ಲ ಒಂದು ತಿಂಗಳಿಂದ 6 ತಿಂಗಳವರೆಗೆ ಅದರ ಮುದ್ರಣ ಪ್ರಸಾರವನ್ನು ತನ್ನ ವಶಕ್ಕೆ ಪಡೆಯಬಹುದು.ಅದಕ್ಕಾಗಿ ಮಾಡಬೇಕಾಗಿರುವುದು ಕೇವಲ ಅದರ ಪ್ರಕಾಶಕರು, ಸಂಪಾದಕರು ಅಥವಾ ಲೇಖಕರು ಸಂಘಟಿತ ಅಪರಾಧ ಕಾಯ್ದೆಗಳ ಅಡಿ ಶಿಕ್ಷೆಗೆ ಮೇಲಿನ ಅಪರಾಧ ಕಾನೂನು ತಿದ್ದುಪಡಿ ಶಾಸನಗಳ ಮೂಲಕ ಒಳಪಡಿಸಿ, ಪತ್ರಿಕೆಯನ್ನು ವಶಕ್ಕೆ ಪಡೆಯಬಹುದು.
ಒಂದೆಡೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಇಲ್ಲದಾಗಿಸಿ ಜನ ಚಳುವಳಿಗಳನ್ನು ಸಂಘಟಿತ ಅಪರಾಧಗಳಡಿ ತಂದು, ಭಯೋತ್ಪಾದಕರ ಹಣೆ ಪಟ್ಟಿ ಹಚ್ಚಲು ತಿದ್ದುಪಡಿ ಮಾಡುವ ಯತ್ನ ನಡೆದಿರುವಾಗಲೇ, ಜನ ವಿಶ್ವಾಸ ಮಸೂದೆ 2023 ಅನ್ನು ಅಂಗೀಕರಿಸಿ 19 ಸಚಿವಾಲಯ/ಇಲಾಖೆಗಳಿಗೆ ಸಂಬಂಧಿಸಿದ 42 ಕೇಂದ್ರ, ಶಾಸನಗಳಡಿಯ 182ಅಪರಾಧ ಕೃತ್ಯಗಳನ್ನು ನಿರಪರಾಧಿಗೊಳಿಸಿದೆ. 1940ರ ಡಗ್ಸ್ ಮತ್ತು ಕಾಸ್‌ಮೆಟಿಕ್ಸ್ ಕಾಯ್ದೆಗೂ ತಿದ್ದುಪಡಿ ತಂದು ಔಷಧ ಮತ್ತು ಕಾಸ್‌ಮೆಟಿಕ್ಸ್‌ಗಳ ಉತ್ಪಾದನೆ, ವಿತರಣೆ, ಮಾರಾಟಗಳಲ್ಲಿನ ಕೃತ್ಯಗಳಿಗೆ ಸಂಬಂಧಿತ ಅಪರಾಧಗಳನ್ನು ನಿರಪರಾಧಿಗೊಳಿಸಿದೆ.
ಒಂದೆಡೆ ನಾಗರೀಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ತಿದ್ದುಪಡಿಗಳನ್ನು ಅಪರಾಧ ಕಾನೂನುಗಳಿಗೆ ತಂದು, ಗುಂಪು ಹತ್ಯೆಯಿಂದ ಉಂಟಾಗುವ ಕೊಲೆಗೆ ಕಡಿಮೆ ಶಿಕ್ಷೆಗೆ ಅವಕಾಶ ಕಲ್ಪಿಸುವ, ಕಾನೂನು ತಿದ್ದುಪಡಿ ಮಾಡುತ್ತಿರುವಾಗಲೇ, ಕಾರ್ಪೊರೇಟ್ ಬಂಡವಾಳಿಗರ ಇದುವರೆಗಿನ ಅಪರಾಧಿ ಕೃತ್ಯಗಳನ್ನು ನಿರಪರಾಧೀಕರಣಗೊಳಿಸುವ ಯತ್ನವನ್ನು ಬಿಜೆಪಿ ಸರ್ಕಾರ ನಡೆಸಿದೆ. ಈ ಸರ್ಕಾರದ ಪ್ರತಿ ನಡೆಯಲ್ಲೂ ಪ್ರಸ್ತುತ ರಾಷ್ಟçದ ಪ್ರಭುತ್ವದ ಮೇಲೆ ಹಿಡಿತ ಸಾಧಿಸಿರುವ ಕಾರ್ಪೊರೇಟ್ ಕೋಮುವಾದಿ ದುಷ್ಟ ಕೂಟದ ಹಿತವನ್ನು ಮನಗಾಣಬಹುದಾಗಿದೆ.ಅದಕ್ಕಾಗಿ ಭಾರತ ಸಮಾಜದ ಆರ್ಥಿಕ, ಸಾಮಾಜಿಕ, ರಾಜಕೀಯ ಪುನರಚನೆಯನ್ನು ಬಹುಸಂಖ್ಯಾತವಾಗಿ ಸರ್ವಾಧಿಕಾರಿತನದಿಂದ ಮಾಡುತ್ತಿದೆ.ಅದನ್ನು ಭಾರತೀಕರಣದ ನೆಪದಲ್ಲಿ ನಡೆಸಿದೆ.ಅರ್ಥಿಕತೆಯ ಬುನಾದಿಯಲ್ಲಿ ನವಉದಾರವಾದಿ ನೀತಿಗೆ ಪೂರಕ ಪುನರ್ ರಚನೆ ರೂಪಿತವಾಗುತ್ತಿರುವಾಗಲೇ, ಮೇಲ್ ರಚನೆಯ ಕಾನೂನು, ನ್ಯಾಯಾಲಯ, ಕಾರ್ಯಾಂಗ, ಶಾಸಕಾಂಗಗಳಲ್ಲೂ ಪುನರಚನೆ ರೂಪಿಸಲಾಗುತ್ತಿದೆ.ಅದಕ್ಕೆ ಬಿಜೆಪಿ ಸರ್ಕಾರವು ಇಂದಿನ ಆಳುವ ವರ್ಗದ ಪ್ರಬಲ ಅಸ್ತ್ರವಾಗಿ ಒದಗಿ ಬಂದಿದೆ.