ಪ್ರೀತಿ ಮತ್ತು ಚಿಂತನೆಯ ಚಿಲುಮೆ-ಡಾ. ವಿಠ್ಠಲ್ ಭಂಡಾರಿ

ಉತ್ತರ ಕನ್ನಡದ ಸಿದ್ಧಾಪುರದ ಮಹಾತ್ಮಗಾಂಧಿ ಶತಾಬ್ಧಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದ ವಿಠ್ಠಲ್ ಅಲ್ಲಿನ ವಿದ್ಯಾರ್ಥಿಗಳಿಗಾಗಿ, ಕಾಲೇಜಿಗಾಗಿ ಮಾಡಿದ ಕೆಲಸವೂ ಸಣ್ಣದಲ್ಲ. ವಿದ್ಯಾರ್ಥಿಗಳಿಂದ ಜಿಲ್ಲೆಯ ಲೇಖಕರ ಕೃತಿ, ಹಸ್ತಪ್ರತಿ, ಜಾನಪದ ಸಾಹಿತ್ಯ ಸಂಗ್ರಹ, ಜಾನಪದ ಕಲೆಗಳ ಸಂಗ್ರಹ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಹಳ್ಳಿ ಪದಕೋಶ ಎಂಬ ಸುಮಾರು ಐದು ಸಾವಿರ ಪದಗಳ ಕೋಶಗಳನ್ನು ಸಿದ್ಧಪಡಿಸಿದ್ದರೂ ಎಲ್ಲೂ ಪ್ರಚಾರ ಪಡೆಯದೇ ಇನ್ನೂ ಸಾವಿರಾರು ಕೆಲಸ ಬಾಕಿ ಇದೆ. ಆಮೇಲೆ ಅವುಗಳನ್ನು ಪ್ರಕಟಿಸಬೇಕು ಎಂಬ ಯೋಜನೆ ಹೊಂದಿದ್ದ. ಆ ಕಾಲೇಜಿನ ಲೈಬ್ರೆರಿಯ ಒಂದು ಭಾಗವನ್ನು ಜಿಲ್ಲೆಯ ಎಲ್ಲಾ ಲೇಖಕರ ಬರಹಗಳ ಸಂಗ್ರಹಕ್ಕೆ ಮೀಸಲಿರಿಸಿ ಮನೆ ಮನೆಗೆ ಹೋಗಿ ಸಂಗ್ರಹಿಸಲಾಗಿತ್ತು. – ಡಾ. ಸಬಿತಾ ಬನ್ನಾಡಿ

ಎಷ್ಟೆಲ್ಲಾ ಕೆಲಸ ಮಾಡಿಯೂ ಪ್ರಚಾರದಿಂದ ದೂರ ಉಳಿಯುವ ವ್ಯಕ್ತಿಗಳು ಈಗ ಅಪರೂಪದಲ್ಲಿ ಅಪರೂಪ. ಹೀಗೆ ಒಂದು ಸಂಸ್ಥೆಯೇ ತಾನಾಗಿ ದುಡಿದಾತ ಡಾ.ವಿಠ್ಠಲ ಭಂಡಾರಿ. ಕೋವಿಡ್ ಹದ್ದು ಆತನನ್ನು ಅಪಹರಿಸಿದಾಗ ಆತನಿಗೆ ಕೇವಲ ಐವತ್ಮೂರು. ಸದಾ ಒಂದಲ್ಲಾ ಒಂದು ಯೋಜನೆ ತಲೆಯಲ್ಲಿ ಇಟ್ಟುಕೊಂಡು ಅದನ್ನು ಕಾರ್ಯಗತಗೊಳಿಸಲು ದಣಿವಿಲ್ಲದೇ ದುಡಿಯುತ್ತಿದ್ದ ವಿಠ್ಠಲ್, ತೀರಾ ಹತಾಶರಾದವರಲ್ಲಿಯೂ ಭರವಸೆಯ ದಾರಿಯೊಂದನ್ನು ಕಾಣಿಸಬಲ್ಲ ಚೇತನವೇ ಆಗಿದ್ದ.

ವಿಠ್ಠಲ್ ಕನ್ನಡ ಎಂ.ಎ. ಮಾಡಲು ಕುವೆಂಪು ವಿಶ್ವವಿದ್ಯಾಲಯಕ್ಕೆ ಬಂದಾಗಿನಿಂದಲೂ ನನಗೆ ಪರಿಚಯ. ಅಲ್ಲಿಗೆ ಬರುತ್ತಿದ್ದಂತೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಅಷ್ಟು ಪ್ರಬಲವಾಗಿರದಿದ್ದ ಎಸ್.ಎಫ್.ಐ ಸಂಘಟನೆ ಕಟ್ಟುವ, ವಿಶ್ವವಿದ್ಯಾಲಯದಲ್ಲಿ ಕಟ್ಟುವ ಕಾಯಕದಲ್ಲಿ ತಕ್ಷಣವೇ ತೊಡಗಿಕೊಂಡ ಆತನ ಚುರುಕುತನ ನೋಡಿದ್ದೆ. ನಮ್ಮ ಮನೆಯ ಮಕ್ಕಳಂತೆ ಆತ ಮತ್ತು ಆತನ ಗೆಳೆಯ ರಂಗನಾಥ್ ಕುಳಗಟ್ಟಿ ಆಗಿಬಿಟ್ಟಿದ್ದರು. ಮುಂದೆ ಆತ ಸಂಘಟಿಸಿದ ಹಲವು ಕಾರ‍್ಯಕ್ರಮಗಳಲ್ಲಿ ಭಾಗಿಯಾಗಿದ್ದರೂ ಆತನ ಕಾರ‍್ಯಬಾಹುಳ್ಯದ ಬಗೆಗೆ ನನಗೆ ತಿಳಿದಿದ್ದು ಕಡಿಮೆಯೇ. ಅದರಲ್ಲೂ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆತ ಹಮ್ಮಿಕೊಳ್ಳುತ್ತಿದ್ದ ವಿನೂತನ ಯೋಜನೆಗಳನ್ನು ತಿಳಿದಾಗ ಆತನಿಂದ ನಾವು ಕಲಿಯಬೇಕಾದುದು ಎಷ್ಟೊಂದು ಇದೆಯಲ್ಲವೇ ಎಂದು ಅನ್ನಿಸುತ್ತಿದೆ.

2010ರಲ್ಲಿ ತನ್ನ ತಂದೆ ಲೇಖಕ ಡಾ.ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಹೊನ್ನಾವರದ ಬಳಿಯ ಕೆರೆಕೋಣ ಎಂಬ ಹಳ್ಳಿಯಲ್ಲಿ ‘ಸಹಯಾನ’ ಸಂಸ್ಥೆ ಹುಟ್ಟುಹಾಕಿದ. ತಳಜಾತಿ ಮತ್ತು ವರ್ಗದ ಜೀವನಾನುಭವದ ಸಾನ್ನಿಧ್ಯವು ಆರ್.ವಿ.ಭಂಡಾರಿಯವರಲ್ಲಿ ಸದಾ ಅಂತವರಿಗಾಗಿ ದುಡಿಯುವಂತೆ ಪ್ರೇರೇಪಿಸಿತ್ತು. ವಿಠ್ಠಲ್ ಕೂಡಾ ಇದೇ ಆದರ್ಶವನ್ನು ಬಾಳಿದವನು. ಸಹಯಾನವನ್ನು ತನ್ನ ಹಿತೈಷಿ, ಗೆಳೆಯರ ಸಹಕಾರದಲ್ಲಿ ಸ್ಥಾಪಿಸಿದಾಗಲೂ ಇದೇ ಆಶಯ. ಜೊತೆಗೇ ಕಲೆಯ ಸ್ಪರ್ಶ, ಅಭಿರುಚಿಯನ್ನು ಬಿಡದ ಎಚ್ಚರಿಕೆ ಅವನಲ್ಲಿತ್ತು. ತಮ್ಮ ಪುಟ್ಟ ಮನೆ ಮತ್ತು ಸುತ್ತಲಿನ ಜಾಗವನ್ನು ಈ ಸಂಸ್ಥೆಗಾಗಿ ಮೀಸಲಿರಿಸಿ ಅವರ ಕುಟುಂಬವರ್ಗದವರು ತಾವು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವರ್ಷವಿಡೀ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ವಿಚಾರಗೋಷ್ಠಿ, ಸಾಹಿತ್ಯೋತ್ಸವ, ಕವಿಗೋಷ್ಠಿ, ನಾಟಕೋತ್ಸವ, ಮಕ್ಕಳ ಬೇಸಿಗೆ ಶಿಬಿರ, ಜಾನಪದ ಉತ್ಸವ, ಯಕ್ಷಗಾನ ಪ್ರದರ್ಶನ ಹೀಗೆ ಅಸಂಖ್ಯ ಕಾರ್ಯಕ್ರಮಗಳನ್ನು ಅತ್ಯಂತ ಶಿಸ್ತುಬದ್ಧವಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಅಲ್ಲಿ ನಡೆದ ಕಾರ್ಯಕ್ರಮಗಳ ಪಟ್ಟಿನೋಡಿದರೆ ಅಕಾಡೆಮಿಯೋ, ಪರಿಷತ್ತೋ, ವಿಶ್ವವಿದ್ಯಾಲಯವೋ ನಡೆಸಿದ್ದಿರಬಹುದೇ ಎಂದು ಅನುಮಾನ ಬಂದೀತು.

ಇದನ್ನು ಓದಿ: ವಿಠ್ಠಲ್‌ ಭಂಡಾರಿ ಅವರ ಜನಶಕ್ತಿ ಮೀಡಿಯಾದೊಂದಿಗಿನ ಪಯಣ

ಹೊಸ ತಲೆಮಾರನ್ನು ಮೂಲಭಿತ್ತಿಯಾಗಿಸಿಕೊಂಡು – ಸಾಹಿತ್ಯ ಸ್ಪಂದನ: ಹೊಸ ತಲೆಮಾರು, ಮಹಿಳೆ ಮತ್ತು ಹೊಸ ತಲೆಮಾರು, ಮಾಧ್ಯಮ, ಚಳುವಳಿ, ಓದುವ ಸಂಸ್ಕೃತಿ, ಜಾನಪದ, ಅಂಬೇಡ್ಕರ್ ಚಿಂತನೆ, ನಾಡು ನುಡಿಯ ನಿರೂಪಣೆ, ಸಂವಿಧಾನ, ಸಿನೆಮಾ: ಹೊಸ ತಲೆಮಾರು ಮೊದಲಾದ ವಿಚಾರ ಸಂಕಿರಣಗಳು, ಸಾಮಾಜಿಕ ನ್ಯಾಯಕ್ಕಾಗಿ ಸಹಯಾನದ ಅಭಿಯಾನ, ಮಹಿಳೆ ಸಾಂಸ್ಕೃತಿಕ ಅಭಿವ್ಯಕ್ತಿ- ಮಹಿಳಾ ದನಿಗೊಂದು ಸ್ಫೂರ್ತಿ, ಅಂಬೇಡ್ಕರ್-125 ಹೀಗೇ ಮುಂದುವರಿಯುತ್ತದೆ. ನಾಡಿನ ನೂರಾರು ಚಿಂತಕರು ಅಲ್ಲಿಗೆ ಹೋಗಿದ್ದಾರೆ ಹಲವು ನಾಟಕಗಳು ಪ್ರದರ್ಶನಗೊಂಡಿವೆ. ಇದಲ್ಲದೆ ನಾಡಿನಾದ್ಯಂತ ಆಯೋಜಿಸಿದ ವಿಚಾರ ಸಂಕಿರಣಗಳು ಹಲವು. ತೇಜಸ್ವಿ ಓದು ಅಭಿಯಾನ ಕೊನೆಯ ಶಿಬಿರವಾಗಿತ್ತು.

ಇದು ಒಂದು ರೀತಿಯಾದರೆ, ವಿದ್ಯಾರ್ಥಿ ಯುವಜನತೆಗಾಗಿ ‘ಸಂವಿಧಾನ ಓದು’ ಎಂಬ ವಿಶಿಷ್ಠ ಕಾರ್ಯಕ್ರಮವೂ ವಿಠ್ಠಲ್ ಕನಸಿನ ಕೂಸು. ನ್ಯಾಯಮೂರ್ತಿ ನಾಗಮೋಹನ ದಾಸ್ ಅವರನ್ನು ದೆಹಲಿಯಿಂದ ಕರ್ನಾಟಕಕ್ಕೆ ಬರುವಂತೆ ಪ್ರೇರೇಪಿಸಿ 2018ರಿಂದ ಸುಮಾರು ನಾನೂರು ಕಾರ್ಯಕ್ರಮಗಳನ್ನು ಇದುವರೆಗೂ ಆಯೋಜಿಸಲಾಗಿದೆ. ಇದಕ್ಕಾಗಿ ಅವರಿಂದಲೇ ಸಂವಿಧಾನ ಪರಿಚಯದ ಪುಸ್ತಕವೊಂದನ್ನು ಬರೆಸಿ ನಾಡಿನಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಈ ಪುಸ್ತಕ ಬೇರೆ ಭಾಷೆಗಳಿಗೂ ಅನುವಾದವಾಗಿದ್ದು, ಮದುವೆ ಮನೆಯ ತಾಂಬೂಲವಾಗಿಯೂ ಹಲವರು ಹಂಚಿದ್ದಾರೆ. ಕೋವಿಡ್ ಇಲ್ಲದೇ ಹೋಗಿದ್ದಲ್ಲಿ ಬಹುಶಃ ಈ ಕಾರ್ಯಕ್ರಮ ಇಡೀ ಕರ್ನಾಟಕದ ಸುತ್ತಾಟ ಮುಗಿಸಿರುತ್ತಿತ್ತೇನೋ.

ಕಳೆದ ವರ್ಷದ ಲಾಕ್‌ಡೌನ್ ನಿಂದ ಈ ಚಟುವಟಿಕೆಗಳು ನಿಲ್ಲಬಾರದೆಂದು ಜನಶಕ್ತಿ ಮೀಡಿಯಾ ಮೂಲಕ ವಾರದ ಕವಿತೆ, ಪಿಚ್ಚರ್ ಪಯಣ, ಯುವಜನತೆಯ ಸಾಹಿತ್ಯದ ಓದಿಗಾಗಿ ‘ಕೋಶ ಓದು, ದೇಶ ನೋಡು’ ಮೊದಲಾದ ಆನ್‌ಲೈನ್ ಕಾರ್ಯಕ್ರಮ ರೂಪಿಸಿ ಅದು ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ನೋಡುಗರನ್ನು ತಲುಪಿದೆ.

ಇದನ್ನು ಓದಿ: ಹೋರಾಟ ಜೀವಿ ವಿಠ್ಠಲ್‌ ಭಂಡಾರಿ ನಿಧನ

ಉತ್ತರ ಕನ್ನಡದ ಸಿದ್ಧಾಪುರದ ಮಹಾತ್ಮಗಾಂಧಿ ಶತಾಬ್ಧಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದ ವಿಠ್ಠಲ್ ಅಲ್ಲಿನ ವಿದ್ಯಾರ್ಥಿಗಳಿಗಾಗಿ, ಕಾಲೇಜಿಗಾಗಿ ಮಾಡಿದ ಕೆಲಸವೂ ಸಣ್ಣದಲ್ಲ. ವಿದ್ಯಾರ್ಥಿಗಳಿಂದ ಜಿಲ್ಲೆಯ ಲೇಖಕರ ಕೃತಿ, ಹಸ್ತಪ್ರತಿ, ಜಾನಪದ ಸಾಹಿತ್ಯ ಸಂಗ್ರಹ, ಜಾನಪದ ಕಲೆಗಳ ಸಂಗ್ರಹ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಹಳ್ಳಿ ಪದಕೋಶ ಎಂಬ ಸುಮಾರು ಐದು ಸಾವಿರ ಪದಗಳ ಕೋಶಗಳನ್ನು ಸಿದ್ಧಪಡಿಸಿದ್ದರೂ ಎಲ್ಲೂ ಪ್ರಚಾರ ಪಡೆಯದೇ ಇನ್ನೂ ಸಾವಿರಾರು ಕೆಲಸ ಬಾಕಿ ಇದೆ. ಆಮೇಲೆ ಅವುಗಳನ್ನು ಪ್ರಕಟಿಸಬೇಕು ಎಂಬ ಯೋಜನೆ ಹೊಂದಿದ್ದ. ಆ ಕಾಲೇಜಿನ ಲೈಬ್ರೆರಿಯ ಒಂದು ಭಾಗವನ್ನು ಜಿಲ್ಲೆಯ ಎಲ್ಲಾ ಲೇಖಕರ ಬರಹಗಳ ಸಂಗ್ರಹಕ್ಕೆ ಮೀಸಲಿರಿಸಿ ಮನೆ ಮನೆಗೆ ಹೋಗಿ ಸಂಗ್ರಹಿಸಲಾಗಿತ್ತು.

ಭಟ್ಕಳ ಕೋಮುಗಲಭೆಯ ನಂತರ ಈತ ಹುಟ್ಟು ಹಾಕಿದ ‘ಚಿಂತನ ಪುಸ್ತಕ’ ಪ್ರಕಾಶನ ಸೌಹಾರ್ದದ ಧ್ವನಿಯಾಗಿ ಕೆಲಸ ಮಾಡಿದೆ. ನೂರಾರು ಪುಸ್ತಕಗಳನ್ನು ಪ್ರಕಟಿಸಿದೆ. ಸ್ವತಃ ತಾನೇ ಬೀದಿಗಳಲ್ಲಿ, ಬಸ್ ಸ್ಟಾಂಡಿನಲ್ಲಿ ಪುಸ್ತಕ ಮಾರಿದವನು ಇವನು. ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಸಾಕ್ಷರತೆ, ಜಾಗೃತಿಗಾಗಿ ಬೀದಿ ನಾಟಕ, ಚಳುವಳಿ ಮಾಡಿದ ವಿಠ್ಠಲ್ ಆಗಿನಿಂದಲೂ ತಾನು ಹಿಂದೆ, ಕೆಲಸ ಮುಂದೆ ಎಂಬಂತೆ ಇದ್ದವನು. ಸದಾ ಸಾಮಾಜಿಕ ಕಳಕಳಿ, ಹಸಿದವರಿಗಾಗಿ ತಲ್ಲಣ, ಅದನ್ನೆಲ್ಲಾ ತೊಡೆದು ಹಾಕಲು ಎಡಚಿಂತನೆಯ ಅನುಷ್ಠಾನಕ್ಕೆ ಪಣ ತೊಟ್ಟವನಂತೆ ನಿರಂತರ ಕೆಲಸದಲ್ಲಿ ತೊಡಗಿದ ವಿಠ್ಠಲ, ನೂರು ವರ್ಷದಲ್ಲಿ ಮಾಡುವುದನ್ನು ಐವತ್ತರಲ್ಲೇ ಮುಗಿಸಲು ಧಾವಂತ ಬಿದ್ದಂತೆ ಕೆಲಸ ಮಾಡುತ್ತಿದ್ದಾಗ ಎಚ್ಚರಿಸಿದರೆ, ಹೌದು, ಇನ್ನು ಸ್ವಲ್ಪ ವೇಗ ಕಡಿಮೆ ಮಾಡಬೇಕು ಎನ್ನುತ್ತಿದ್ದನಂತೆ.

ಕೋವಿಡ್‌ಗೆ ಈ ಮಾತುಗಳೇನಾದರೂ ಕಿವಿಗೆ ಬಿತ್ತೇ? ಅದು ಹೀಗೆ ಶಾಶ್ವತ ಬ್ರೇಕ್ ಹಾಕುವ ಉಮೇದಿಗೆ ಬಿದ್ದು ಬಿಟ್ಟಿತೇ? ಯಾರಾದರೂ ಊಹಿಸಲೂ ಸಾಧ್ಯವಿಲ್ಲದಂತೆ ‘ಬಂದೇ ಬರುತ್ತೇನೆ’ ಎಂದು ಆಸ್ಪತ್ರೆ ಸೇರಿದ ವಿಠ್ಠಲ್‌ನನ್ನು ಕೋವಿಡ್ ಯಾವ ದಿಕ್ಕಿಗೆ ಎಳೆದೊಯ್ಯಿತು? ಉಮ್ಮಿಯೊಳಗೆ ಬಿದ್ದ ಬೆಂಕಿಯ ಕಿಡಿಯಂತೆ ಆತನ ಅಗಲಿಕೆ ನಮ್ಮನ್ನೆಲ್ಲಾ ದಹಿಸುತ್ತಲೇ ಇದೆ. ವಿಠ್ಠಲ್ ಮಹಾನ್ ಪ್ರೀತಿಯ ವ್ಯಕ್ತಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕವೂ ಕಾಳಜಿ ವಹಿಸುತ್ತಿದ್ದ. ಆತನ ಮರಣದ ದಿನ ಪತ್ನಿ ಯಮುನಾ ಗಾಂವ್ಕರ್, ‘ಹದಿನೇಳು ವರ್ಷಗಳಲ್ಲಿ ಒಂದು ದಿನವೂ ನಾವು ಜಗಳವಾಡಲಿಲ್ಲ. ಜಗಳವಾಡದೇ ತೆರಳಿಬಿಟ್ಟ’ ಎಂದ ಮಾತು ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ. ಸಂಘಟನೆಯ ಕೆಲಸದ ಸಂಗಾತಿಗಳೂ ‘ಕಳೆದ ಮೂವತ್ತು ವರ್ಷಗಳಲ್ಲಿ ಒಂದು ಸಲವೂ ಸಿಟ್ಟಾಗಲಿಲ್ಲ, ಸುಸ್ತು ಎನ್ನಲಿಲ್ಲ’ ಅನ್ನುತ್ತಾರೆ. ಯಾವುದೇ ಒಂದು ಜವಾಬ್ದಾರಿ ನಿರ್ವಹಣೆಯ ಸಂದರ್ಭದಲ್ಲಿ ಇದು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿಯಲ್ಲವೇ ಎಂದು ನನಗೆ ಅಚ್ಚರಿಯಾಗುತ್ತದೆ. ಇನ್ನು ಮುಂದೆ ಇದನ್ನು ನಾನು ಸದಾ ನೆನಪಿಟ್ಟುಕೊಳ್ಳಬೇಕು ಎಂದು ಕೊಳ್ಳುತ್ತಿದ್ದೇನೆ. ವಿಠ್ಠಲ್ ಹೀಗೆ ನಿರ್ಗಮನದಲ್ಲೂ ಇಂತದನ್ನೆಲ್ಲಾ ನಮಗೆ ಕೊಟ್ಟು, ಬಿಟ್ಟು ಹೋಗಿದ್ದಾನೆ. ಆತನ ಕುಟುಂಬ ಎಷ್ಟು ದೊಡ್ಡದು. ಅಕ್ಕಂದಿರಾದ ಮಾಧವಿ ಭಂಡಾರಿ ಮತ್ತು ಅವನ ಪ್ರೀತಿಯ ಇನ್ನಕ್ಕ, ಅವರ ಮಕ್ಕಳು ಮತ್ತದರಾಚೆಗೆ ನೂರಾರು ಜನರು… ಕೋವಿಡ್ ನಿರ್ದಯತೆ ಎಲ್ಲವನ್ನೂ ಮೀರಿಸಿತು. ನಮ್ಮೆಲ್ಲರ ಭುಜದ ಮೇಲಿನ ಭಾರವನ್ನು ಹೆಚ್ಚಿಸಿತು.

Donate Janashakthi Media

Leave a Reply

Your email address will not be published. Required fields are marked *