ಲೂಟಿಕೋರ ಕಾರ್ಪೋರೇಟ್ ಪರ ನೀತಿಗಳೇ ಮುಸ್ಲಿಂ – ನಾಗರೀಕರ ಮೇಲಿನ ದಾಳಿಗಳ ಮೂಲ : ಸಿಪಿಐಎಂ ಆರೋಪ

ಬೆಂಗಳೂರು : ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ಮುಸುಕಿನ ಕೊಲೆಗಡುಕ ಗೂಂಡಾ ಪಡೆ ಇದ್ರಿಶ್ ಪಾಷಾ ಎಂಬ ಬಡ ಕಾರ್ಮಿಕನನ್ನು ಬಲವಂತವಾಗಿ ಕಾಂಪೌಂಡ್ ಒಳಗೆ ಎಳೆದೊಯ್ದು ವಿದ್ಯುತ್ ಶಾಕ್ ಮೂಲಕ ಚಿತ್ರಹಿಂಸೆ ನೀಡಿ ಕಗ್ಗೊಲೆಗೈದಿದೆ. ಈ ಹಿಂದೂ ಮತಾಂಧರ ಕೊಲೆಗಡುಕತನವನ್ನು  ಸಿಪಿಐಎಂ ಬಲವಾಗಿ ಖಂಡಿಸಿದೆ.

ರಾಜ್ಯ ಘಟಕದ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು,  ಕೂಡಲೇ ಈ ಕೊಲೆಗಡುಕರನ್ನು ಬಂಧಿಸಿ ಕಾನೂನಿನ ಕ್ರಮಕ್ಕೆ ಒಳಪಡಿಸಬೇಕೆಂದು ರಾಜ್ಯ ಸರಕಾರ ಮತ್ತು ಉನ್ನತ ಪೋಲೀಸ್ ಅಧಿಕಾರಿಗಳನ್ನು ಒತ್ತಾಯಿಸುವ ಮೂಲಕ ರಾಜ್ಯ ಸರಕಾರ ಕೊಲೆಗೀಡಾದ ಇದ್ರಿಸ್ ಕುಟುಂಬಕ್ಕೆ 25 ಲಕ್ಷ ರೂಗಳು ಮತ್ತು ಒಂದು ಸರಕಾರಿ ಉದ್ಯೋಗ ಒದಗಿಸುವ ಪರಿಹಾರಗಳನ್ನು ಘೋಷಿಸಬೇಕೆಂದು  ಆಗ್ರಹಿಸಿದ್ದಾರೆ.

ದೇಶ ಹಾಗೂ ರಾಜ್ಯದಲ್ಲಿ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಗಳಿಗೆ ಹಾಗೂ ಮುಸ್ಲಿಂ ದ್ವೇಷಕ್ಕೆ ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರ ನೀತಿಗಳೇ ಕಾರಣಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದರ ಭಾಗವಾಗಿಯೇ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರಕಾರಗಳು ಒಂದೆಡೆ ಲೂಟಿಕೋರ ಆರ್ಥಿಕ ನೀತಿಗಳಿಗೆ ಕ್ರಮವಹಿಸುತ್ತಿರುವಾಗಲೇ, ಇನ್ನೊಂದೆಡೆ, ಇಂತಹ ಲೂಟಿಕೋರತನದ ಕಡೆ ಜನತೆ ಗಮನಹರಿಸದಂತೆ, ಅವರ ಗಮನವನ್ನು ಬೇರೆಡೆ ಸೆಳೆಯಲು ದೇಶದ ಹಾಗೂ ರಾಜ್ಯದ ಮತಾಂಧ ಮತ್ತು ಜಾತಿವಾದಿ ಶಕ್ತಿಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ‌. ಇಂತಹ ಲೂಟಿಕೋರ ಮತಾಂಧ, ಜಾತಿವಾದಿ ರಾಜಕಾರಣಕ್ಕೆ, ಬಿಜೆಪಿ, ಆರ್ ಎಸ್ಎಸ್ ಮುಂತಾದ ಹಿಂದುತ್ವವಾದಿ ಹಾಗೂ ಮುಸ್ಲಿಂ ಮತಾಂಧ ಗುಂಡಾ ಸಂಸ್ಥೆಗಳು ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಜೊತೆ ಕೈ ಜೋಡಿಸುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತವೆ. ಇವು ಜನತೆಯನ್ನು ಮತೀಯ ಹಾಗೂ ಜಾತೀಯ ದ್ವೇಷದ ಆಧಾರದಲ್ಲಿ ವಿಭಜಿಸಿ ಲೂಟಿಕೋರತನದ ವಿರುದ್ಧ ಜನತೆ ಒಗ್ಗೂಡದಂತೆ ತಡೆಯುವ, ಚಳುವಳಿಕಾರರನ್ನು ಪ್ರಗತಿಪರರನ್ನು ಬೆದರಿಸುವ ಮತ್ತು ದೇಶದ್ರೋಹಿಗಳೆಂದು ಹೀಗಳೆಯುವ ಮತ್ತು ಕೊಲೆಯಂತಹ ಹೀನ ಕೃತ್ಯಕ್ಕೂ ಕೈ ಹಾಕಿವೆ. ಹೀಗೆ ಲೂಟಿಕೋರರ ಪರವಾಗಿ ವಿಭಜಿಸಿ ಆಳಲು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಲೂಟಿಕೋರತನವನ್ನು ಮರೆ ಮಾಚಲು ಇವು ನೆರವಾಗುತ್ತಿವೆ ಎಂದಿದ್ದಾರೆ.

ಇದನ್ನೂ ಓದಿಮೀಸಲಾತಿ ವಾಪಾಸು ಮುಸ್ಲಿಂ ಧ್ವೇಷದ ಭಾಗ : ಸಿಪಿಐಎಂ ಖಂಡನೆ

ಮುಂದುವರಿದು, ಆರೆಸ್ಸೆಸ್ ಮತ್ತಿತರೆ ಮತಾಂಧ ಗೂಂಡಾ ಪಡೆ ಗೋರಕ್ಷಣೆ, ನೈತಿಕ ಪೋಲೀಸ್ ಗಿರಿ, ಧರ್ಮ ರಕ್ಷಣೆಯ ಹೆಸರಿನಲ್ಲಿ, ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ, ಪ್ರಗತಿಪರರು, ದಲಿತರು ಹಾಗೂ ಮುಸಲ್ಮಾನರನ್ನು ಕೊಲ್ಲುವ‌ ಕ್ರಿಮಿನಲ್ ದುಷ್ಕೃತ್ಯದಲ್ಲಿ ನಿರತವಾಗಿವೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳನ್ನು ನಿಗ್ರಹಿಸಿ ದುಷ್ಕೃತ್ಯವನ್ನು ತಡೆಯುವ ಬದಲು, ಅಂತಹ ಕೆಲಸಗಳಿಗೆ ಕುಮ್ಮಕ್ಕು ದೊರೆಯುವಂತೆ ತಾರತಮ್ಯಕ್ಕೆ ಕ್ರಮವಹಿಸುವ ಮೂಲಕ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ನರಗುಂದ, ದಕ್ಷಿಣ ಕನ್ನಡ ಮುಂತಾದೆಡೆ ಕೊಲ್ಲಲ್ಪಟ್ಡ ಮುಸ್ಲಿಂ ಯುವಜನರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲಿಲ್ಲ ಮಾತ್ರವಲ್ಲಾ, ಕೊಲೆಗಡುಕರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ. ಇಂತಹ ಎಲ್ಲ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದನದ ವ್ಯಾಪಾರಿಗಳ ಮೇಲೆ ದಾಳಿ ಹೆಚ್ಚಾಗಿದೆ :
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದ ನಂತರ ದನದ ವ್ಯಾಪಾರಿಗಳ ಮೇಲೆ ದಾಳಿಗಳು ವಿಪರೀತ ಹೆಚ್ಚಾಗಿವೆ. ಗೋರಕ್ಷಕ ಮುಸುಕಿನ ಮತಾಂಧ ಗೂಂಡಾಗಳು ದಾಳಿ ಮಾಡಿ ಹಲ್ಲೆ ನಡೆಸುವಾಗ ರಾಜ್ಯ ಸರ್ಕಾರದ ಪೊಲೀಸರು ಒಂದೋ ಮೂಕ ಪ್ರೇಕ್ಷಕರಾಗುವುದು ಇಲ್ಲವೇ ದಾಳಿಕೋರರ ಜೊತೆ ಕೈಜೋಡಿಸುವುದು ನಡೆದಿದೆ. ಇದರಿಂದಾಗಿ ದಾಳಿ, ಹಲ್ಲೆ ನಡೆಸುವವರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಇಂತಹ ವ್ಯಕ್ತಿಗಳು ಮತ್ತು ಶಕ್ತಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗಿದೆ. ಇದರ ಮುಂದುವರಿಕೆಯಾಗಿ, ಗೋ ರಕ್ಷಣೆಯ ಮುಸುಕಿನ ಕೊಲೆಗಡುಕರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ಸಮುದಾಯ ರಂಜಾನ್ ಹಬ್ಬದಲ್ಲಿ ತೊಡಗಿರುವಾಗ ಅವರಿಗೆ ನೆರವಾಗುವಂತಹ ಉಡುಗೊರೆ ನೀಡುವ ಬದಲು, ರಾಜ್ಯ ಸರಕಾರ
ಒಂದೆಡೆ ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ 4 ರ ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದೆ. ಇನ್ನೊಂದೆಡೆ ಹಿಂದೂ ಕೊಲೆಗಡುಕ ಮತಾಂದರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಂ ವ್ಯಕ್ತಿಯ ಕಗ್ಗೊಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಅಮಿತ್ ಷಾ ಕಾರ್ಯಕ್ರಮಕ್ಕೆ ಜನರನ್ನು ತರಲು ಸಹಕಾರ ಸಂಘಗಳ ಹಣ ಬಳಕೆ – ಸಿಪಿಐಎಂ ಆರೋಪ

ಬಿಜೆಪಿ – ಆರ್‌ಎಸ್‌ಎಸ್‌ ಮುಸ್ಲಿಂ ದ್ವೇಷದ ರಾಜಕಾರಣವೇ ಪ್ರೇರಣೆಯಾಗಿದೆ : ಈಚೆಗಿನ ಈ ಎರಡು ಘಟನೆಗಳು ಜಗತ್ತಿನ ಮುಂದೆ ನಾಗರೀಕ ಸಮಾಜ ತೀವ್ರ ನಾಚಿಕೆಯಿಂದ ತಲೆ ತಗ್ಗಿಸುವಂಹ ಹೇಯ ದುಷ್ಕೃತ್ಯಗಳಾಗಿವೆ. ಈ ಮತಾಂಧ ಕೊಲೆಗಳು ಹಾಗೂ ರಾಜಕಾರಣವನ್ನು ತಕ್ಷಣವೇ ನಿಲ್ಲಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ. ಮುಸ್ಲಿಂ ಅಲ್ಪ ಸಂಖ್ಯಾತರ ಇಂತಹ ಕೊಲೆಗಡುಕ ದಾಳಿಗಳಿಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಗಳ ಮುಸ್ಲಿಂ ದ್ವೇಷದ ರಾಜಕಾರಣವೇ ಪ್ರೇರಣೆಯಾಗಿದೆ. ರಾಜ್ಯ ಸರಕಾರದ ಅಧಿಕಾರವನ್ನು ಬಳಸಿ ಭಾರತದ ಸಂವಿಧಾನದ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿ, ದಲಿತರು ಹಾಗೂ ರಾಜ್ಯದ ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಆಹಾರದ ಹಕ್ಕು ಹಾಗೂ ರಾಜ್ಯದ ಹೈನುಗಾರರೂ ಸೇರಿದಂತೆ ಈ ಎಲ್ಲರ ಉದ್ಯೋಗ ಹಕ್ಕಿನ ಮೇಲೆ ದಾಳಿ ಮಾಡುವ ಮತ್ತು ಹೈನೋದ್ಯಮ, ಚರ್ಮೋದ್ಯಮ ಹಾಗೂ ಮಾಂಸೋದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ನ್ನು ಅಂಗೀಕರಿಸಿ ಜಾರಿಯಲ್ಲಿಟ್ಟಿರುವುದು ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಕಾಯ್ದೆಗೆ ಕ್ರಮವಹಿಸುತ್ತಿರುವುದು ಕೂಡಾ ಇಂತಹ ಬಡವರ ಮೇಲಿನ ದಾಳಿಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು  ಅರೋಪಿಸಿದ್ದಾರೆ.

ಮೇಲ್ನೋಟಕ್ಕೆ ಈ ಕೊಲೆ ನಡೆಸಿರುವುದು ಆರೆಸ್ಸೆಸ್ ಸಂಘಟನೆಗೆ ಸೇರಿದ ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿ ನೇತೃತ್ವದ ಗೂಂಡಾಪಡೆ ಎಂದು ಕಾಣುತ್ತಿದೆ. ಇದ್ರಿಶ್ ಪಾಷಾ ಜೊತೆ ಇದ್ದ ಇನ್ನಿಬ್ಬರು ಹೇಗೋ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಅವರೂ ಕೊಲೆಯಾಗುತ್ತಿದ್ದರು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ರಾಜ್ಯದಾದ್ಯಂತ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಏಪ್ರಿಲ್‌ 06 ರಂದು ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಲಾಗಿದೆ ಎಂದು ಯು. ಬಸವರಾಜ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *