ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸುವ ಜನವಿರೋದಿ ಸರಕಾರದ ಆದೇಶ ವಾಪಸ್ಸು ಪಡೆದು ICDS ಯೋಜನೆಯ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಬೇಕು ಸಿಪಿಐ(ಎಂ) ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಕುರಿತು ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿಕೆ ನೀಡಿದ್ದು, ಜೂನ್ 11 ರಂದು ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ, ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ 1008 ಸರಕಾರಿ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ನಿರ್ಧರಿಸಿದೆ ಇದು ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಕೃಪಾಕಟಾಕ್ಷದಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು?
ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ನಿಲುಮೆಯನ್ನು ಸಿಪಿಐ(ಎಂ) ಸ್ವಾಗತಿಸುತ್ತದೆ. ಆದರೆ, ಅದೇ ಸಂದರ್ಭದಲ್ಲಿ ಅದನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸಲು ಹೊರಟಿರುವುದು ಮಹಿಳೆಯರ,ದಲಿತರ ಹಾಗು ಎಲ್ಲ ಬಡವರ ವಿರೋಧಿ ನೀತಿಯಾಗಿದೆ ಎಂದು ಸಿಪಿಐ (ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೆ ಶಿಕ್ಷಣ ಇಲಾಖೆ ಮೂಲಕ ಜಾರಿಗೊಳಿಸುತ್ತಿರುವುದನ್ನು ತಡೆದು, ICDS ಯೋಜನೆಯ ಭಾಗವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರದ ಈಗಿನ ನೀತಿಯಂತೆ, ಇನ್ನು ಮುಂದೆ 03-06 ವಯಸ್ಸಿನ ಮಕ್ಕಳ ಬಾಲ್ಯದ ಹಾರೈಕೆ ಮತ್ತು ಬಾಲ ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹಾಗು ಈ ಶಾಲೆಗಳು ವಹಿಸಿಕೊಳ್ಳಲಿವೆ. ಇದರಿಂದ, ಇದುವರೆಗೆ ಈ ಜವಾಬ್ದಾರಿಯನ್ನು ಬಹುತೇಕ ನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರಗಳಿಗೆ ಸಹಜವಾಗಿಯೇ ಬಹೆತೇಕ ಕೆಲಸವಿಲ್ಲದಂತಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ಇದುವರೆಗೆ ವೇತನವಿಲ್ಲದೆ ಗೌರವಧನಕ್ಕೆ ಬಿಟ್ಟಿ ದುಡಿದ ದುರ್ಬಲ ವಿಭಾಗಕ್ಕೆ ಸೇರಿದ ಮಹಿಳಾ ನೌಕರರು ಉದ್ಯೋಗ ಕಳೆದು ಕೊಂಡು ಬೀದಿ ಪಾಲಾಗಲಿದ್ದಾರೆ.
ಅದೇ ರೀತಿ, ಅಂಗನವಾಡಿ ಕೇಂದ್ರಗಳು ಮುಚ್ಚುವುದರಿಂದ, ಬಡ ಮಕ್ಕಳಿಗೆ ಹಾಗು ಬಡ ಗರ್ಭಿಣಿ ಹಾಗು ಬಾಣಂತಿ ಮಹಿಳೆಯರಿಗೆ ದೊರೆಯುತ್ತಿದ್ದ ಪೌಷ್ಠಿಕ ಆಹಾರ ದೊರೆಯದಂತಾಗುತ್ತದೆ. ಈ ಕುರಿತು ಕ್ರಮವಹಿಸಲು ಒಕ್ಕೂಟ ಸರಕಾರ ಈಗಾಗಲೆ ತುದಿಗಾಲ ಮೇಲೆ ನಿಂತಿದೆ. ಮುಂದೆ, ಜನದ್ರೋಹಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ, ಶಿಕ್ಷಣದ ಖಾಸಗೀಕರಣವಾದಾಗ,ಈ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣವು ಖಾಸಗೀಕರಣಗೊಳ್ಳಲಿದೆ ಎಂದಿದ್ದಾರೆ.
ಇದರಿಂದಾಗಿ, ಬಡವರು, ಮಹಿಳೆಯರು,ದಲಿತರು ಮುಖ್ಯವಾಗಿ, ಶಿಕ್ಷಣ, ಉದ್ಯೋಗ ಮತ್ತು ಪೌಷ್ಠಿಕ ಆಹಾರಗಳಿಂದ ವಂಚನೆಗೊಳಗಾಗಲಿದ್ದಾರೆ. ಈ ಮೂಲಕ, ಒಕ್ಕೂಟ ಹಾಗು ರಾಜ್ಯ ಸರ್ಕಾರಗಳು ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಕುತಂತ್ರ ಮಾಡಿರುವುದು ಜನದ್ರೋಹವಾಗಿದೆ.
ಇದು, ಒಂದೆಡೆ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತೇವೆಂದು ಹೇಳಿಕೊಂಡು ಜನಪ್ರಿಯತೆ ಪಡೆಯುವುದು ಹಾಗು ಆ ಮೂಲಕ ಜನತೆಯನ್ನು ಮತ್ತು ನಾಗರಿಕರನ್ನು ಯಾಮಾರಿಸಿ ಇನ್ನೊಂದೆಡೆ, ಬಡವರ,ಮಹಿಳೆಯರ ಹಾಗು ದಲಿತರಿಗೆ ಇಲ್ಲಿಯವರೆಗೆ ಕಲ್ಪಿಸಿಕೊಡಲಾಗಿದ್ದ ಶಿಕ್ಷಣ ಹಾಗು ಉದ್ಯೋಗ ಮತ್ತು ಪೌಷ್ಠಿಕ ಆಹಾರ ಪಡೆಯುವ ಹಕ್ಕುಗಳನ್ನು ಅವರಿಂದ ಕಿತ್ತುಕೊಳ್ಳುವುದು ಇದರ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಬಡ ಜನತೆ,ದಲಿತ ಹಾಗು ಮಹಿಳಾ ಸಮುದಾಯವು ಸರಕಾರದ ಈ ಆದೇಶದಿಂದ ವಂಚನೆಗೊಳಗಾಗಲಿದ್ದಾರೆ.
ಆದ್ದರಿಂದ, ಬಡವರ ಹಾಗು ದಲಿತರು ಮತ್ತು ಮಹಿಳೆಯರ ವಿರೋಧಿಯಾದ ಈ ದುರುದ್ದೇಶ ಪೂರಿತ ಈ ಆದೇಶವನ್ನು, ರಾಜ್ಯ ಸರ್ಕಾರ ಈ ಕೂಡಲೆ ಹಿಂಪಡೆಯುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕದ ಜಿಲ್ಲಾ ಮತ್ತು ತಾಲ್ಲೂಕ ಕೇಂದ್ರಗಳಲ್ಲಿ ಜೂನ್ 18 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ನೋಡಿ: ನಿರಂಜನ 100 : ಬದುಕು ಬರಹ ಕುರಿತು ಮಹಾಂತೇಶ್ ಜೀವಣ್ಣವರ್ ಮಾತುಗಳು Janashakthi Media