ಬೆಂಗಳೂರು :ವಿಕೃತ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣನ ಬಂಧನವಾಗಿದೆ. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲಾಯಿತು.
ಜರ್ಮನಿಯಿಂದ ಪ್ರಜ್ವಲ್ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ. ಲುಫ್ತಾನ್ಸಾ ಏರ್ಲೈನ್ಸ್ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ. ಇನ್ನು ಪ್ರಜ್ವಲ್ ಇದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದು ಎಮಿಗ್ರೇಷನ್ ಬಳಿಗೆ ಕರೆತಂದರು.
ಏರ್ಪೋರ್ಟ್ನಲ್ಲಿ ಪ್ರಜ್ವಲ್ನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು, ನೇರವಾಗಿ ಎಸ್‌ಐಟಿ ಕಚೇರಿಗೆ ಕರೆದುಕೊಂಡು ಬಂದರು. ಬಳಿಕ ಎಸ್‌ಐಟಿ ಕಚೇರಿಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸಿ, ಅಧಿಕೃತವಾಗಿ ಬಂಧನ ಮಾಡಿದರು.
ಸುಮಾರು 34 ದಿನಗಳಿಂದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ಗಾಗಿ ಹುಡುಕಾಟ ನಡೆಸಿದ್ದರು. ಅವರ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ಸೇರಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದು, ಅವರ ವಿರುದ್ಧ ಬಂಧನ ವಾರಂಟ್ ಕೂಡ ಜಾರಿ ಮಾಡಲಾಗಿದೆ. ಇಂಟರ್‌ಪೋಲ್ ಮೂಲಕ ಸಿಬಿಐ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಅನ್ನು ಕೂಡ ಜಾರಿ ಮಾಡಿತ್ತು. ಎಸ್‌ಐಟಿಯಿಂದ ಎರಡು ರೆಗ್ಯುಲರ್ ನೋಟಿಸ್ ಕೂಡ ಜಾರಿಯಾಗಿದೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ಹಾಜರಾಗುವುದಾಗಿ ಹೇಳಿದ್ದ ಪ್ರಜ್ವಲ್ ಅವರ 2.57 ನಿಮಿಷಗಳ ವಿಡಿಯೋವನ್ನು ಸೋಮವಾರ ಬಿಡುಗಡೆ ಮಾಡಿದ್ದರು. ಗುರುವಾರ ಮಧ್ಯಾಹ್ನ ಮ್ಯೂನಿಚ್‌ನಿಂದ ವಿಮಾನದಲ್ಲಿ ಶುಕ್ರವಾರ ಬೆಳಗಿನ ಜಾವ 12.46 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.