ಡಾ|| ಕೆ. ಸುಶೀಲಾ
ಭಾರತದಲ್ಲಿ `ಪ್ರತಿಜೀವಕ’ಗಳಿಗೆ ಪ್ರತಿರೋಧ ತೋರಿಸುವ ರೋಗಾಣುಗಳ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. `ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್’ ಪ್ರಕಾರ ದೇಶದಲ್ಲಿ ರೋಗಾಣುಗಳನ್ನು ನಾಶಪಡಿಸುವ ಪ್ರತಿಜೀವಕಗಳ ಸಾಮರ್ಥ್ಯ ಪ್ರತಿಶತ 15 ರಷ್ಟು ಕಡಿತಗೊಂಡಿದೆ. ಬಡ ದೇಶಗಳಲ್ಲಿ ಇಂದು ಪ್ರತೀ ಒಂದು ಲಕ್ಷ ಸಾವಿನಲ್ಲಿ ಇಪ್ಪತ್ತನಾಲ್ಕು ಸಾವುಗಳು ಈ ಸಮಸ್ಯೆಯಿಂದ ಆಗುತ್ತಿದ್ದರೆ, ಮುಂದುವರಿದ ದೇಶಗಳಲ್ಲಿ ಪ್ರತೀ ಒಂದು ಲಕ್ಷ ಸಾವಿನಲ್ಲಿ 13 ಸಾವುಗಳಿಗೆ ಈ ಸಮಸ್ಯೆ ಕಾರಣವಾಗಿದೆ. ಲ್ಯಾನ್ಸೆಟ್ ವೈದ್ಯಕೀಯ ಸಂಚಿಕೆಯ ಪ್ರಕಾರ 2019ರಲ್ಲಿ ಇಡೀ ಪ್ರಪಂಚದಲ್ಲಿ ಒಟ್ಟು 12.7 ಲಕ್ಷ ಸಾವು ಈ ಸಮಸ್ಯೆ ಕಾರಣವಾಗಿದೆ. ಈ ಸಮಸ್ಯೆಯ ವ್ಯಾಪ್ತಿ, ಮೂಲಕಾರಣಗಳು ಮತ್ತು ಪರಿಹಾರಗಳ ಕುರಿತ ಲೇಖನ.
ಕೆಲವು ಕಾಲದ ಹಿಂದೆ `ಪ್ರತಿಜೀವಕ’ (ಆ್ಯಂಟಿಬಯೋಟಿಕ್ಸ್) ಗಳಿಗೆ ಸುಲಭದಲ್ಲಿ ಶರಣಾಗಿ ಸೋಲೊಪ್ಪಿಕೊಳ್ಳುತ್ತಿದ್ದ ರೋಗಕಾರಕ ಬ್ಯಾಕ್ಟಿರಿಯಾ ಹಾಗೂ ಫಂಗಸ್ ಗಳು ಸಾವಕಾಶವಾಗಿ ಅವುಗಳಿಗೆ ಪ್ರಬಲ `ಪ್ರತಿರೋಧ’ ಒಡ್ಡಲು ಪ್ರಾರಂಭಿಸಿವೆ. ಹೀಗಾಗಿ ಇಂದು ಹಲವು ಜೀವ ರಕ್ಷಕ ಪ್ರತಿಜೀವಕಗಳ ಪ್ರಾಬಲ್ಯ ಕುಗ್ಗುತ್ತಿದೆ. ನಿರುಪಯೋಗಿಗಳಾಗುತ್ತಿವೆ.
ಭಾರತವೂ ಸೇರಿ ದಕ್ಷಿಣ ಪೂರ್ವ ಏಷಿಯಾ ಹಾಗೂ ಸಬ್ ಸಹಾರನ್ ಆಫ್ರಿಕಾದ ಬಡ ದೇಶಗಳ ವೈದ್ಯಕೀಯ ಸೇವೆಯಲ್ಲಿ ಈ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ಕಾಡುತ್ತಿದ್ದರೂ ಇತರ ಮುಂದುವರಿದ ದೇಶಗಳ ವೈದ್ಯಕೀಯ ರಂಗವನ್ನೂ ಈ ಸಮಸ್ಯೆ ಬಿಟ್ಟಿಲ್ಲ. ಬಡ ದೇಶಗಳಲ್ಲಿ ಇಂದು ಪ್ರತೀ ಒಂದು ಲಕ್ಷ ಸಾವಿನಲ್ಲಿ ಇಪ್ಪತ್ತನಾಲ್ಕು ಸಾವುಗಳು ಈ ಸಮಸ್ಯೆಯಿಂದ ಆಗುತ್ತಿದ್ದರೆ, ಮುಂದುವರಿದ ದೇಶಗಳಲ್ಲಿ ಪ್ರತೀ ಒಂದು ಲಕ್ಷ ಸಾವಿನಲ್ಲಿ 13 ಸಾವುಗಳಿಗೆ ಈ ಸಮಸ್ಯೆ ಕಾರಣವಾಗಿದೆ. ಲ್ಯಾನ್ಸೆಟ್ ವೈದ್ಯಕೀಯ ಸಂಚಿಕೆಯ ಪ್ರಕಾರ 2019ರಲ್ಲಿ ಇಡೀ ಪ್ರಪಂಚದಲ್ಲಿ ಒಟ್ಟು 12.7 ಲಕ್ಷ ಸಾವು ಈ ಸಮಸ್ಯೆ ಕಾರಣವಾಗಿದೆ.
ಪ್ರತಿಜೀವಕಗಳೆಂದರೇನು?
`ಪ್ರತಿಜೀವಕ’ ಎಂದರೆ ರೋಗಕಾರಕ ಬ್ಯಾಕ್ಟೀರಿಯಾ ಫಂಗಸ್‌ಗಳು ಮಾನವ ಅಥವಾ ಪ್ರಾಣಿಗಳ ದೇಹ ಪ್ರವೇಶಿಸಿ ಅಲ್ಲಿ ರೋಗ ಉತ್ಪತ್ತಿಸಿದಾಗ, ಆ ರೋಗಕಾರಕಗಳನ್ನು ನೇರವಾಗಿ ನಾಶಗೊಳಿಸಿ ಅಥವಾ ಅವುಗಳ ಬೆಳವಣಿಗೆ ಹಾಗೂ ವಂಶಾಭಿವೃದ್ಧಿಯನ್ನು ತಡೆಗಟ್ಟಿ ರೋಗ ಗುಣವಾಗಲು ಸಹಕರಿಸುವ ಪದಾರ್ಥ.
ಇವುಗಳ ಕಾರ್ಯವಿಧಾನ:
(1) ಈ ರೋಗಾಣುಗಳ ಹೊರಕವಚದ ಸಂಯೋಜನೆಯಲ್ಲಿ ಕುಂದುಂಟು ಮಾಡುವ ಕಣದೊಳಗಿನ ದ್ರವ ಸೋರುವಂತೆ ಮಾಡಿ ರೋಗಾಣುವನ್ನು ಕೊಲ್ಲುವುದು.
(2) ರೋಗಾಣುಗಳ ಸಸಾರಜನಕ (ಪೊಟೀಸ್)ದ ಸಂಯೋಜನೆಯಲ್ಲಿ ವ್ಯತ್ಯಯ ಉಂಟು ಮಾಡಿ, ಇದರಿಂದಾಗಿ ಅವುಗಳ ವಂಶಾಭಿವೃದ್ಧಿಯಾಗದಂತೆ ಮಾಡುವುದು.
(3) ಇವುಗಳ ಜೀವನದ ಅತ್ಯಗತ್ಯ ಕ್ರಿಯೆಗಳಿಗೆ ಬೇಕಾದ ಪೋಷಕಾಂಶ (ಉದಾ: ಪೊಲಿಕ್ ಎಸಿಡ್)ಗಳು ದೊರೆಯದಂತೆ ಮಾಡಿ ಅವುಗಳ ವಂಶಾಭಿವೃದ್ಧಿ ತಡೆಗಟ್ಟುವುದು.
ಪ್ರತಿಜೀವಕಗಳ ಮೂಲ – ವಾತಾವರಣದ ಮಣ್ಣಿನಲ್ಲಿನ ಬ್ಯಾಕ್ಟೀರಿಯಾ ಫಂಗಸ್‌ಗಳಿಂದ ಪ್ರಕೃತಿ ಸಹಜವಾಗಿ ಉತ್ಪತ್ತಿಗೊಳ್ಳುವ ರಾಸಾಯನಿಕ.
ಪ್ರತಿಜೀವಕಗಳ ಉತ್ಪಾದನೆ ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ – 1) ನೈಸರ್ಗಿಕವಾಗಿ ಉತ್ಪಾದನೆ 2) ಭಾಗಶಃ ಕೃತಕವಾಗಿ ರಾಸಾಯನಿಕ ಸಂಯೋಜನೆಯಿಂದ 3) ಸಂಪೂರ್ಣ ಕೃತಕ ರಾಸಾಯನಿಕ ಸಂಯೋಜನೆಯಿಂದ. ಮೊತ್ತ ಮೊದಲ ಪ್ರತಿಜೀವಕ `ಪೆನ್ಸಿಲಿನ್’ನ್ನು 1941 ರಲ್ಲಿ `ಅಲೆಕ್ಸಾಂಡರ್ ಫ್ಲೆಮಿಂಗ್ʼ ಎನ್ನುವ ವಿಜ್ಞಾನಿ ಒಂದು ಜಾತಿಯ ಫಂಗಸ್‌ನಿಂದ ಉತ್ಪಾದಿಸಿದ್ದರು. 1944ರಲ್ಲಿ ದೊಡ್ಡ ಪ್ರಮಾಣದಲ್ಲಿ ಇದರ ಉತ್ಪಾದನೆ ಪ್ರಾರಂಭವಾಗಿ ಇದು ಮುಂದಿನ ದಿನಗಳಲ್ಲಿ ಕೋಟ್ಯಾಂತರ ರೋಗಿಗಳ ಪ್ರಾಣ ಉಳಿಸಲು ಸಹಾಯಕವಾಯಿತು.
ಪ್ರತಿಜೀವಕಗಳಲ್ಲಿ ಎರಡು ವಿಧಗಳಿವೆ. 1) ವಿಶಾಲ ವ್ಯಾಪ್ತಿಯವು – ಈ ಗುಂಪಿಗೆ ಸೇರಿದ ಪ್ರತಿಜೀವಕ ಹಲವು ವಿಧದ ರೋಗಾಣುಗಳನ್ನು ನಾಶಗೊಳಿಸಬಲ್ಲವು. 2) ಕಿರು ವ್ಯಾಪ್ತಿಯವು – ಇಲ್ಲಿ ಪ್ರತೀಜೀವಕ ಯಾವುದಾದರು ಒಂದೆರಡು ವಿಧದ ರೋಗಾಣುಗಳನ್ನು ನಾಶಪಡಿಸಬಲ್ಲವು.
ಸುಪರ್ ಬಗ್
ತಮ್ಮ ನಾಶಕ್ಕಾಗಿ ಹಿಂದೆ ಬಳಸುತ್ತಿದ್ದ ಪ್ರತಿಜೀವಕಗಳಿಗೆ ಮುಂದಿನ ದಿನಗಳಲ್ಲಿ ಪ್ರತಿರೋಧ ಬೆಳೆಸಿಕೊಂಡು ಆ ಔಷಧಗಳ ಪರಿಣಾಮದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ರೋಗಾಣುಗಳನ್ನು `ಸುಪರ್ ಬಗ್’ ಎನ್ನುತ್ತಾರೆ. ಇವುಗಳಲ್ಲಿ ಪ್ರಮುಖವಾದ ಕೆಲವು:
ಮನುಷ್ಯ ಮತ್ತು ಪ್ರಾಣಿಗಳ ಕರುಳಿನಲ್ಲಿ ವಾಸಿಸುವ `ಇಕೋಲಿ’, ನ್ಯೂಮೋನಿಯಾವನ್ನುಂಟು ಮಾಡುವ `ಕ್ಲೆಬ್ಸಿಯೆಲ್ಲಾ ನ್ಯೂಮೋನಿಯೆ, ಮಾರಕ `ಸೈಪೈಲೋ ಕೋಕಸ್ ಅರಿಯಸ್’, ಆಸ್ಪತ್ರೆಗಳ `ಕ್ರಿಟಿಕಲ್ ಕೇರ್ ಯುನಿಟ್’ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಶ್ವಾಸಕೋಶವನ್ನು ಘಾಸಿಕೆಗೊಳಿಸುವ ಎಸಿನೆಟೋ ಬ್ಯಾಕ್ಟರ್ ಚಾಮಾನ್ನಿ’.
ಭಾರತದಲ್ಲಿ `ಪ್ರತಿಜೀವಕ’ಗಳಿಗೆ ಪ್ರತಿರೋಧ ತೋರಿಸುವ ರೋಗಾಣುಗಳ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. `ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್’ ಪ್ರಕಾರ ದೇಶದಲ್ಲಿ ರೋಗಾಣುಗಳನ್ನು ನಾಶಪಡಿಸುವ ಪ್ರತಿಜೀವಕಗಳ ಸಾಮರ್ಥ್ಯ ಪ್ರತಿಶತ 15 ರಷ್ಟು ಕಡಿತಗೊಂಡಿದೆ. ಐ.ಸಿ.ಎಂ.ಆರ್. ಈ ಪ್ರತಿಜೀವಕಗಳಿಗೆ ಹೆಚ್ಚುತ್ತಿರುವ ಪ್ರತಿರೋಧದ ಅಧ್ಯಯನಕ್ಕಾಗಿ ಪ್ರತೀ ವರ್ಷ ಒಟ್ಟು 30 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಅಂಕೆ ಸಂಖ್ಯೆಗಳನ್ನು ಸಂಗ್ರಹಿಸುತ್ತದೆ. ಈ ಅಧ್ಯಯನದಲ್ಲಿ ಒಂದು ವಿಷಯÀ ತಿಳಿದು ಬಂತು. ಸಂಪೂರ್ಣ ದೇಹದ ನಂಜಿಗೆ ಒಳಗಾದ ರೋಗಿಗಳ ಚಿಕಿತ್ಸೆಗೆ ಉಪಯೋಗಿಸುತ್ತಿದ್ದ, ಹಲವು ರೋಗಾಣುಗಳಿಗೆ ಮಾರಕವಾಗಿದ್ದ `ಕಾರ್ಬಾಪೆನೆಮ್ಸ್’ ಎನ್ನುವ ಪ್ರತಿಜೀವಕದ ಸಾಮರ್ಥ್ಯ ಬರೇ ಒಂದು ವರ್ಷದೊಳಗೆ 10 ಶೇಕಡಾ ಕಡಿಮೆಯಾಗಿತ್ತು.
ಈ ಅಧ್ಯಯನದಲ್ಲಿ ತಿಳಿದ ಇನ್ನೊಂದು ವಿಷಯವೆಂದರೆ ಒಂದು ಜಾತಿ ರೋಗಾಣುವಿನ ಸೊಂಕಿನಿAದ ಉಂಟಾಗುತ್ತಿದ್ದ ನ್ಯೂಮೋನಿಯಾ, 2016 ರಲ್ಲಿ ಒಂದು ನಿರ್ದಿಷ್ಠ `ಪ್ರತಿಜೀವಕದ’ ಉಪಯೋಗದಿಂದ 65 ಪ್ರತಿಶತ ಗುಣಮುಖವಾಗುತ್ತಿದ್ದರೆ 2021ರಲ್ಲಿ ಈ ಪ್ರಮಾಣ 43 ಶೇಕಡಾ ಕುಸಿದಿತ್ತು. ಅಂದರೆ ಸೂಕ್ಷ್ಮಾಣುಗಳು ತಮ್ಮ ನಾಶಕ್ಕೆ ಬಳಸುವ ನಿರ್ದಿಷ್ಟ `ಪ್ರತಿಜೀವಕ’ಗಳ ದುಷ್ಟರಿಣಾಮದಿಂದ ತಪ್ಪಿಸಿಕೊಳ್ಳಲು ತಮ್ಮ ಕಣದಲ್ಲಿ ಅಗತ್ಯವಾದ ಮಾರ್ಪಾಡು ಮಾಡಿಕೊಳ್ಳುತ್ತಿದ್ದವು. ಹೀಗಾಗಿ ಹಿಂದೆ ನಿರ್ದಿಷ್ಟ `ಪ್ರತಿಜೀವಕ’ಗಳ ಉಪಯೋಗದಿಂದ ಗುಣಪಡಿಸಲು ಸಾಧ್ಯವಾಗುತ್ತಿದ್ದ ಆ ಸೋಂಕುರೋಗಗಳು ದಿನಕಳೆದಂತೆ ಗುಣಪಡಿಸಲಾಗದ ರೋಗಗಳಾಗಿ ಮಾರ್ಪಾಟುಗೊಳ್ಳುತ್ತಿದ್ದವು. ಕೆಲವು ರೋಗಾಣುಗಳು ತಮ್ಮನ್ನು ನಾಶಪಡಿಸಲು ಉಪಯೋಗಿಸುವ ಹಲವು ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಂಡಿದ್ದವು. ಹೀಗಾಗಿ ಹಿಂದೆ ಚಿಕಿತ್ಸೆಯಿಂದ ಸುಲಭದಲ್ಲಿ ಗುಣವಾಗುತ್ತಿದ್ದ ಕಾಯಿಲೆಗಳೇನಕವು ಇಂದು ಜನರಿಗೆ ಮಾರಕವಾಗುತ್ತಿವೆ.
ಈ ಪ್ರತಿರೋಧದ ಬೆಳವಣಿಗೆಗೆ ಕಾರಣಗಳೇನು?
1. ಸಹಜವಾದ ಕಾರಣ : ದೇಹಕ್ಕೆ ರೋಗಾಣು ಪ್ರವೇಶಿಸಿ, ಅಲ್ಲಿ ಅಭಿವೃದ್ಧಿಗೊಂಡಾಗ ದೇಹ ರೋಗಗ್ರಸ್ಥವಾಗುವುದು. ಈ ರೋಗಾಣುಗಳನ್ನು ನಾಶಪಡಿಸಬಲ್ಲ ನಿರ್ಧಿಷ್ಟ `ಪ್ರತಿಜೀವಕ’ಗಳ ಚಿಕಿತ್ಸೆಯಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ರೋಗಾಣುಗಳು ನಾಶಗೊಳ್ಳುತ್ತವೆ. ಆದರೆ ಕೆಲ ಜಾತಿಯ ರೋಗಾಣುಗಳಲ್ಲಿ ಅನುವಂಶೀಯವಾಗಿ ಈ ನಿರ್ದಿಷ್ಟ `ಪ್ರತಿಜೀವಕ’ಕ್ಕೆ ತಮ್ಮ ಕಣದಲ್ಲಿ ಪ್ರತಿರೋಧ ಹೊಂದಿರುವ ಅತ್ಯಲ್ಪ ಪ್ರಮಾಣದ ರೋಗಾಣುಗಳು ಇರಬಹುದು. ಇವುಗಳು ನಾಶಗೊಳ್ಳಲಾರವು. ಹಾಗೂ ದೇಹದಲ್ಲಿ ರೋಗಾಣುಗಳ ಸಾಂದ್ರತೆ ಕುಸಿಯುವುದರಿಂದ ಈ ಪ್ರತಿರೋಧವುಳ್ಳ ರೋಗಾಣುಗಳಿಗೆ ತಮಗೆ ದೊರೆಯುವ ಯಥೇಷ್ಟವಾದ ಜೀವಸತ್ವವನ್ನು ಉಪಯೋಗಿಸಿ ಅಭಿವೃದ್ಧಿಗೊಳ್ಳುವುದು ಸುಲಭವಾಗುವುದು.
2. ಪ್ರತಿಜೀವಕಗಳ ವಿವೇಚನಾ ರಹಿತ ಉಪಯೋಗ : ವಿಶಾಲ ವ್ಯಾಪ್ತಿಯ ಪ್ರತಿ ಜೀವಕಗಳನ್ನು ಗಂಭೀರ ಸ್ವರೂಪದ ಹಾಗೂ ಗುಣಪಡಿಸಲು ಕಷ್ಟವಾದ ರೋಗಾಣುಗಳ ಸೋಂಕಿನ ಚಿಕಿತ್ಸೆಗೆ ಮಾತ್ರ ಉಪಯೋಗಿಸುವುದು ಸೂಕ್ತ. ಆದರೆ ನಮ್ಮ ದೇಶದ ಆಸ್ಪತ್ರೆಗಳಲ್ಲಿ ಪ್ರತಿಜೀವಕಗಳ ಚಿಕಿತ್ಸೆಗೆ ಇದನ್ನು ಉಪಯೋಗಿಸುವ ಪ್ರಮಾಣ ಶೇಕಡಾ 75.
ರೋಗಿಗಳಿಂದ ಗಿಜಿಗುಟ್ಟುವ, ಸ್ವಚ್ಚತೆಯ ಅಭಾವವಿರುವ ಹಲವು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗ, ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲೆಲ್ಲಾ ಒಬ್ಬ ರೋಗಿಯಿಂದ ಇನ್ನೊಬ್ಬರಿಗೆ ಸೋಂಕು ರೋಗ ತಗಲುವ ಸಂಭಾವ ಹೆಚ್ಚು. ಇದರಿಂದಾಗಿ ಕೆಲವು ಜಾತಿಯ ರೋಗಾಣುಗಳು ರೋಗಿಗಳ ದೇಹದ ಮೇಲೆ ದಾಳಿ ಮಾಡುವ ಸಂಭವ ಹೆಚ್ಚು. ಹಾಗಾಗಿ ಹಲವು ಜಾತಿಯ ರೋಗಾಣುಗಳನ್ನು ನಾಶ ಮಾಡಬಲ್ಲ ಒಂದಕ್ಕಿಂತ ಅಧಿಕ ಹಾಗೂ ಬಹಳಷ್ಟು ಬಾರಿ `ವಿಶಾಲ ವ್ಯಾಪ್ತಿಯ’ ಪ್ರತಿಜೀವಕಗಳನ್ನು ಅದರ ಅವಶ್ಯಕತೆ ಇಲ್ಲದಿದ್ದರೂ ವೈದ್ಯರು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಇಲ್ಲಿ ಅವಶ್ಯಕತೆ ಇದೆಯೇ ಎಂದು ಕೂಲಂಕಷವಾಗಿ ರೋಗಿಯನ್ನು ಪರೀಕ್ಷಿಸಲು ಸಮಯದ ಅಬಾವ ಹಾಗೂ ಇತರ ಪರೀಕ್ಷೆಗಳ ಮೂಲಕ ಪತ್ತೆಹಚ್ಚಲು ಇನ್ನಿತರ ಸೌಲಭ್ಯಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಪ್ರತಿಜೀವಕಗಳು ರೋಗಾಣುಗಳನ್ನು ಘಾಸಿಗೊಳಿಸುವ ಸಮಯದಲ್ಲಿ ದೇಹದಲ್ಲಿ ವಾಸಿಸುವ ಸಹಾಯಕ ಸೂಕ್ಷ್ಮಾಣುಗಳನ್ನು ನಾಶಪಡಿಸುವುದು. ಇದು ಇತರ ರೋಗಾಣುಗಳ ಬೆಳವಣಿಗೆಗೆ ಸಹಾಯಕವಾಗುವುದು. ಹೀಗೆ ಪ್ರತಿಜೀವಕಗಳ ಅನಾವಶ್ಯಕ, ಅಸಮರ್ಪಕ ಉಪಯೋಗ ಹಲವು ರೋಗಾಣುಗಳು ಅವುಗಳಿಗೆ ಪ್ರತಿರೋಧ ಬೆಳೆಸಲು ಕಾರಣವಾಗಬಹುದು. `ವೈರಸ್’ಗಳ ಸೋಂಕಿನ ಚಿಕಿತ್ಸೆಯಲ್ಲಿ ಪ್ರತಿಜೀವಕಗಳು ನಿರುಪಯೋಗಿಗಳು. ಆದರೆ ಈ ಸೋಂಕಿನ ಜೊತೆಯಲ್ಲಿ ಬ್ಯಾಕ್ಟಿರಿಯಾದ ಸೋಂಕು ತಗಲಿರಬಹುದೆ ಎನ್ನುವ ಸಂಶಯ ಅಥವಾ ಕೆಲವೊಮ್ಮೆ ರೋಗಿಗಳ ಕೋರಿಕೆಯ ಮೇರೆಗೆ ಪ್ರತಿಜೀವಕಗಳ ಉಪಯೋಗ ಹೆಚ್ಚುತ್ತಿದೆ.
ವೈರಲ್ ಸೋಂಕಿದ ಕೋವಿಡ್-19ರ ಬಹಳಷ್ಟು ರೋಗಿಗಳಿಗೆ ಪ್ರತಿಜೀವಕಗಳನ್ನು ನೀಡಲಾಗಿತ್ತು. ಐ.ಸಿ.ಎಂ.ಆರ್., ಇಂತಹ ಪ್ರತಿಜೀವಕ ಪಡೆದ 17,534 ರೋಗಿಗಳ ರೆಕಾರ್ಡುಗಳನ್ನು ಅಧ್ಯಯನ ಮಾಡಿದಾಗ ಇವರಲ್ಲಿ 50 ಪ್ರತಿಶತ ರೋಗಿಗಳಲ್ಲಿ `ಪ್ರತಿಜೀವಕ’ಗಳಿಗೆ ಪ್ರತಿರೋಧ ಬೆಳೆಸಿದ ಬ್ಯಾಕ್ಟೀರಿಯಾಗಳ ಸೋಂಕು ಕಾಣಿಸಿತ್ತು.
3. ರೋಗಿಗಳಿಂದ ಪ್ರತಿಜೀವಕಗಳ ವಿವೇಚನಾ ರಹಿತ ಉಪಯೋಗ
ವೈದ್ಯರು ಹೇಳಿದಷ್ಟು ಪ್ರಮಾಣದಲ್ಲಿ, ಕಾಲಾವಧಿತನಕ, ಸೂಕ್ತ ಸಮಯದಲ್ಲಿ ಈ ಔಷಧಗಳನ್ನು ತೆಗೆದುಕೊಳ್ಳದೆ ಇರುವುದು. ಇದು ಆರ್ಥಿಕ ಅಡಚಣೆಯಿಂದಿಗಿರಬಹುದು, ಕೆಲಸದಲ್ಲಿ ಈ ಔಷಧಗಳು ಉಂಟು ಮಾಡುವ ತೊಂದರೆ (ಉದಾ:- ಅಲರ್ಜಿ, ವಾಕರಿಕೆ, ವಾಂತಿ, ಭೇಧಿ ಮುಂತಾದವುಗಳು) ಯಿಂದಾಗಿರಬಹುದು ಅಥವಾ ನಿರ್ಲಕ್ಷದಿಂದಾಗಿರಬಹುದು. ಆಗ ರೋಗಿಯ ದೇಹದಲ್ಲಿ ಔಷಧದ ಪ್ರಮಾಣ ರೋಗಾಣುವಿನ ನಾಶಕ್ಕೆ ಬೇಕಾದ ಸೂಕ್ತ ಮಟ್ಟದಲ್ಲಿ ಇರಲಾರದು. ಇದು ರೋಗಾಣುವಿಗೆ ಈ ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಳ್ಳಲು ಸದವಕಾಶ ನೀಡುವುದು.
ಪ್ರತಿರೋಧ ಬೆಳೆಸುವುದನ್ನು ತಡೆಗಟ್ಟುವ ಬಗ್ಗೆ ಹೇಗೆ?
1) ನಮ್ಮ ದೇಶದಲ್ಲಿ ಸೋಂಕು ರೋಗಗಳ ಪ್ರಮಾಣ ಅಧಿಕವಾಗಿದೆ. ಈ ರೋಗಗಳನ್ನು ಹತೋಟಿಯಲ್ಲಿಡುವ ಜವಾಬ್ದಾರಿ ಸರ್ಕಾರ, ವೈದ್ಯಕೀಯ ಕ್ಷೇತ್ರ ಹಾಗೂ ಪ್ರಜೆಗಳ ಮೇಲಿದೆ.
ಸರ್ಕಾರ ಈ ರೋಗಗಳ ಹತೋಟಿಗೆ ಬೇಕಾದ ಸೂಕ್ತ ಯೋಜನೆಗಳನ್ನು ರಚಿಸಿ ಅವುಗಳನ್ನು ಅನುಷ್ಟಾನಗೊಳಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡುವುದು ಅವಶ್ಯಕ.
ವೈದ್ಯಕೀಯ ಸೇವೆ ಬರೀ ರೋಗ ಚಿಕಿತ್ಸೆಗೆ ನೀಡಿದಷ್ಟೇ ಪ್ರಾಮುಖ್ಯತೆ ರೋಗ ತಡೆಗಟ್ಟುವ ಸೇವೆಗೂ ನೀಡಿದಾಗ ಸಮಾಜದ ಜನರ ಆರೋಗ್ಯದ ಮಟ್ಟ ಏರುವುದು. ಇತರ ರೋಗಗಳಂತೆ ಸೋಂಕು ರೋಗವೂ ಹತೋಟಿಗೆ ಬರುವುದು. ಜನ ಸಾಮಾನ್ಯರು ಈ ಸೋಂಕು ರೋಗ ಬಾರದಂತೆ ವೈಯಕ್ತಿಕ ಹಾಗೂ ಸಾರ್ವಜನಿಕ ಶುಚಿತ್ವ ಕಾಪಾಡುವುದು, ರೋಗ ತಡೆಗಟ್ಟುವ ಸೂಕ್ತ ಕ್ರಮಗಳನ್ನು (ಲಸಿಕೆಯ ಉಪಯೋಗ, ಸೋಂಕು ಪರರಿಗೆ ಹರಡದಂತೆ ಸೂಕ್ತ ಎಚ್ಚರಿಕೆ ಮುಂತಾದವುಗಳು) ಅನುಸರಿಸುವುದು ಅಗತ್ಯ.
2) ಪ್ರತಿಜೀವಕಗಳ ಸೂಕ್ತ ಉಪಯೋಗ – ಇದು ವೈದ್ಯಕೀಯ ವೃತ್ತಿನಿರತರ ಹಾಗೂ ರೋಗಿಗಳ ಜವಾಬ್ದಾರಿ.
3) ಉತ್ತಮ ಪರಿಣಾಮ ನೀಡುವ, ಉಪಯೋಗಿಸುವ ರೋಗಿಗಳಲ್ಲಿ ಇತರ ತೊಂದರೆ ಉಂಟು ಮಾಡದ, ಆರ್ಥಿಕವಾಗಿ ಅಗ್ಗದ, ಸುಲಭವಾಗಿ ಉಪಯೋಗಿಸಲು ಸಾಧ್ಯವಾಗುವಂತಹ ಹೊಸ `ಪ್ರತಿಜೀವಕಗಳ’ ಅವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು.