ನವೆಂಬರ್ 26,2020 ರಂದು ಪ್ರಾರಂಭವಾದ ಅಭೂತಪೂರ್ವ ಕಿಸಾನ್ ಹೋರಾಟವು ನಿನ್ನೆ ಮೂರು ತಿಂಗಳುಗಳನ್ನು ದಾಟಿ ಮುಂದುವರೆಯುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿದೊಡ್ಡ, ದೀರ್ಘ ಮತ್ತು ಅತ್ಯಂತ ಶಕ್ತಿಶಾಲಿ ರಾಷ್ಟ್ರವ್ಯಾಪಿ ರೈತರ ಹೋರಾಟವಾಗಿದೆ. ಈ ಹೋರಾಟವು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಇವುಗಳಲ್ಲಿ ಪ್ರಮುಖವಾಗಿ ಏಳು ಅಂಶಗಳ ಇದನ್ನು ಐತಿಹಾಸಿಕವಾಗಿಸಿದೆ ಎಂದು ಈ ಹೋರಾಟದ ಒಬ್ಬ ಪ್ರಮುಖ ಮುಖಂಡರೂ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷರೂ ಆಗಿರುವ ಅಶೋಕ ಧವಳೆ ಹೇಳಿದ್ದಾರೆ.
ಮೊದಲನೆಯದಾಗಿ, ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಇದರ ನೇತೃತ್ವ ವಹಿಸಿವೆ, ಅವು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವೇದಿಕೆಯಡಿಯಲ್ಲಿ ಒಂದಾಗಿದ್ದಾರೆ. ರೈತರ ಎಲ್ಲಾ ವಿಭಾಗಗಳು ಒಟ್ಟುಗೂಡಿವೆ.
ಎರಡನೆಯದಾಗಿ, ಇದು ಅಶ್ರುವಾಯು ಶೆಲ್ ಗಳು, ಜಲ ಫಿರಂಗಿಗಳು, ಲಾಠಿ ಪ್ರಹಾರಗಳ ಭಾರಿ ದಮನವನ್ನು ಎದುರಿಸಿದೆ ಮತ್ತು ಜನವರಿ 26 ರಂದು ಸರ್ಕಾರ ಪ್ರಾಯೋಜಿಸಿದ ಹಿಂಸಾಚಾರದ ನಂತರ, ರೈತರನ್ನು ಮನಬಂದಂತೆ ಬಂಧಿಸುವುದು, ರೈತ ಮುಖಂಡರ ವಿರುದ್ಧ ಎಫ್‌ಐಆರ್, ಮತ್ತು ರೈತರ ಹೋರಾಟವನ್ನು ಬೆಂಬಲಿಸಿದ ಪ್ರಖ್ಯಾತ ಪತ್ರಕರ್ತರು ಮತ್ತು ಹವಾಮಾನ ಕಾರ್ಯಕರ್ತರ ಬಂಧನ, ಇಡಿ ನ್ಯೂಸ್‌ಕ್ಲಿಕ್‌ನಂತಹ ಸ್ವತಂತ್ರ ಸುದ್ದಿ ಪೋರ್ಟಲ್‌ಗಳ ಮೇಲೆ ದಾಳಿಗಳ ಸ್ವರೂಪದಲ್ಲಿಯೂ ದಾಳಿಗಳನ್ನು ಎದುರಿಸಿ ಮುಂದುವರೆಯುತ್ತಿದೆ.
ಮೂರನೆಯದಾಗಿ, ಸತತವಾಗಿ ಅಪಪ್ರಚಾರಗಳು, ನಿಂದನೆಗಳ ಮೂಲಕ ಇದರ ಹೆಸರುಗೆಡಿಸಲು ಪ್ರಯತ್ನಿಸಲಾಗಿದೆ; ಖಲಿಸ್ತಾನಿಗಳು, ಮಾವೋವಾದಿಗಳು, ನಕ್ಸಲರು ಮತ್ತು ಪಾಕಿಸ್ತಾನ ಮತ್ತು ಚೀನಾದಿಂದ ಪ್ರಚೋದಿಸಲ್ಪಟ್ಟಿದೆ ಎಂದೆಲ್ಲಾ ಆರೋಪಿಸಲಾಗಿದೆ. ಆದರೆ ಅದು ಇವನ್ನೆಲ್ಲ ಎದುರಿಸಿ ನಿಂತಿದೆ.
ನಾಲ್ಕನೆಯದಾಗಿ, ಲಕ್ಷಾಂತರ ರೈತರು 90ದಿನಗಳಿಂದ ದಿಲ್ಲಿಗೆ ಮುತ್ತಿಗೆ ಹಾಕಿದರೂ, ಅದು ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕವಾಗಿದೆ. ಈ ಹೋರಾಟದಲ್ಲಿ ಈವರೆಗೆ 250 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಗಣರಾಜ್ಯೋತ್ಸವದ ಜನವರಿ 26 ರಂದು ಹರಿಯಬಿಟ್ಟ ಹಿಂಸಾಚಾರದ ಕ್ರಿಮಿನಲ್ ಪಿತೂರಿಯನ್ನು ಕೂಡ ಇದು ಯಶಸ್ವಿಯಾಗಿ ಎದುರಿಸಿದೆ.
ಐದನೆಯದಾಗಿ, ಇದು ಸಂಪೂರ್ಣವಾಗಿ ಜಾತ್ಯತೀತವಾಗಿದೆ. ಭಾರತದಾದ್ಯಂತ ಎಲ್ಲಾ ಧರ್ಮಗಳಿಗೆ ಸೇರಿದ, ಎಲ್ಲಾ ಜಾತಿಗಳ ಮತ್ತು ಎಲ್ಲಾ ಭಾಷೆಗಳನ್ನಾಡುವ ರೈತರು ಈ ಹೋರಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಪ್ರಭುತ್ವಕ್ಕೆ ಈ ಹೋರಾಟವನ್ನು ನಿಗ್ರಹಿಸುವುದು ಬಹಳ ಕಷ್ಟಕರವಾಗಿದೆ.
ಆರನೆಯದಾಗಿ, ಡಿಸೆಂಬರ್ 8 ರಂದು ಭಾರತ್ ಬಂದ್ ನ ಅಭೂತಪೂರ್ವ ಯಶಸ್ಸಿನ ನಂತರ, ಕಾರ್ಮಿಕ ವರ್ಗ ಮತ್ತು ಸಮಾಜದ ಇತರ ಎಲ್ಲ ವಿಭಾಗಗಳ ಹೆಚ್ಚಿನ ಬೆಂಬಲದೊಂದಿಗೆ, ಇದು ಜನರ ಹೋರಾಟವಾಗುತ್ತಿದೆ.
ಏಳನೇ ಮತ್ತು ಅತ್ಯಂತ ಮುಖ್ಯವಾದದ್ದು, ಈ ಹೋರಾಟವು ಕೇಂದ್ರ ಸರ್ಕಾರ ಮತ್ತು ದೇಶೀ ಮತ್ತು ವಿದೇಶಿ ಕಾರ್ಪೊರೇಟ್ ಲಾಬಿಯ ನಡುವಿನ ಭ್ರಷ್ಟ ಸಂಬಂಧವನ್ನು ನೇರವಾಗಿ ಗುರುತಿಸಿ ದಾಳಿ ಮಾಡಿದೆ, ಇದನ್ನು ಅಂಬಾನಿ ಮತ್ತು ಅದಾನಿ ಸಂಕೇತಿಸಿದ್ದಾರೆ. ಅಂಬಾನಿ ಮತ್ತು ಅದಾನಿ ಉತ್ಪನ್ನಗಳು ಮತ್ತು ಸೇವೆಗಳನ್ನು ಬಹಿಷ್ಕರಿಸಲು ಮೊದಲ ಬಾರಿಗೆ ರಾಷ್ಟ್ರವ್ಯಾಪಿ ಕರೆ ನೀಡಲಾಗಿದೆ. ತನ್ನ ಮೂರು ಪ್ರಮುಖ ಬೇಡಿಕೆಗಳ ಮೂಲಕ, ರೈತರ ಈ ಐತಿಹಾಸಿಕ ವರ್ಗ ಹೋರಾಟವು ನವ-ಉದಾರವಾದಿ ನೀತಿಗಳ ಮೇಲೆಯೇ ನೇರವಾಗಿ ದಾಳಿ ಮಾಡಿದೆ.