ನವದೆಹಲಿ: ಭಾರತೀಯ ಸೇನೆಗೆ ಸೇರಲು ಬಯಸುವ ಸಾವಿರಾರು ಮಂದಿಗೆ ತೆಗೆದುಕೊಳ್ಳಲಾಗುವ ಪರೀಕ್ಷಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದ್ದು, ʻಅಗ್ನಿಪಥ್ʼ ಸೇನಾ ನೇಮಕಾತಿ ಮೂಲಕ ಸೇನೆಗೆ ಸೇರಲು ಮೊದಲು ಸಾಮಾನ್ಯ ಪರೀಕ್ಷೆಯನ್ನು ಎದುರಿಸಬೇಕು ಉಳಿದವು ನಂತರದಲ್ಲಿ ಎಂದು ರಕ್ಷಣಾ ವಿಭಾಗ ಮುಖ್ಯಸ್ಥರು ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಬದಲಾವಣೆ ಬಗ್ಗೆ ವಿವರಿಸಿದ್ದಾರೆ.
ಸೇನಾ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ನಾಮನಿರ್ದೇಶಿತ ಕೇಂದ್ರಗಳಲ್ಲಿ ಆನ್‌ಲೈನ್ ಪ್ರಕ್ರಿಯೆ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ತೆಗೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯ ನಂತರ ಆಯ್ಕೆಗಾಗಿ ನಡೆಯುವ ನೇಮಕಾತಿ ರ್‍ಯಾಲಿಗಳಲ್ಲಿ ಭಾಗವಹಿಸಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ತಿಳಿಸಲಾಗಿದೆ.
ಇದನ್ನು ಓದಿ: ʻಅಗ್ನಿಪಥʼ ವೀರರಾಗಲೂ ಬಯಸುವವರಿಗೂ ಹಿಂದಿ, ಇಂಗ್ಲಿಷ್ ನಲ್ಲಿ ಪರೀಕ್ಷೆ: ಪ್ರಾದೇಶಿಕ ಭಾಷೆಗಳ ಕಡೆಗಣನೆ
“ಮುಂಚಿನ ನೇಮಕಾತಿ ಪ್ರಕ್ರಿಯೆಗೆ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು. ಇದರಿಂದ ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗುತ್ತಿತ್ತು. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸುವು ಕಷ್ಟವಾಗುತ್ತಿತ್ತು. ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕಾಗಿತ್ತು. ಗಣನೀಯವಾಗಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿತ್ತು. ಈಗೀನ ಹೊಸ ನೇಮಕಾತಿ ಪ್ರಕ್ರಿಯೆಯಿಂದಾಗಿ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಹೊರೆಯನ್ನು ಸರಾಗಗೊಳಿಸುತ್ತದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸೈನಿಕರ ನೇಮಕಾತಿಗಾಗಿ ಮೂರು ಹಂತಗಳನ್ನು ವಿವರಿಸಲಾಗಿದೆ. ಈ ಹಿಂದೆ, ಅಗ್ನಿಪಥ್ ಮೂಲಕ ಸೇನಾ ನೇಮಕಾತಿ ಪ್ರಕ್ರಿಯೆ ಬೇರೆ ರೀತಿಯಾಗಿತ್ತು. ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದವು ಕೊನೆಯ ಹಂತವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಅರ್ಹತೆ ಪಡೆಯಬೇಕಾಗಿತ್ತು.
ಇದುವರೆಗೆ 19,000 ಅಗ್ನಿಪಥ್ ಮೂಲಕ ಸೇನೆಗೆ ಸೇರ್ಪಡೆಗೊಂಡಿದ್ದು, ಮಾರ್ಚ್ ಮೊದಲ ವಾರದಿಂದ 21,000 ಮಂದಿ ಸೇನೆ ಸೇರಲಿದ್ದಾರೆ. 2023-24ರ ಮುಂದಿನ ನೇಮಕಾತಿಯಲ್ಲಿ ಸೇನೆಗೆ ಸೇರಲು ಸಿದ್ಧವಿರುವ ಸುಮಾರು 40,000 ಅಭ್ಯರ್ಥಿಗಳಿಗೆ ಹೊಸ ನೇಮಕಾತಿ ನಿಯಮಗಳು ಅನ್ವಯಿಸುತ್ತವೆ.
ಹಿಂದಿನ ನೇಮಕಾತಿ ರ್‍ಯಾಲಿಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಸಂಖ್ಯೆಯು ಚಿಕ್ಕ ಪಟ್ಟಣಗಳಲ್ಲಿ 5,000 ದಿಂದ ದೊಡ್ಡ ನಗರಗಳಲ್ಲಿ 1.5 ಲಕ್ಷದವರೆಗೆ ದಾಟಿದೆ. ಹೀಗಾಗಿ ನೇಮಕಾತಿಗಾಗಿ ಬರುವ ಸಾವಿರಾರು ಅಭ್ಯರ್ಥಿಗಳನ್ನು ನಿಭಾಯಿಸಲು ಅಗತ್ಯವಿರುವ ಆಡಳಿತಾತ್ಮಕ ವೆಚ್ಚಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ