ನಾ ದಿವಾಕರ
ಭಾರತದಲ್ಲಿ ಪ್ರಜಾತಂತ್ರ ಇನ್ನೂ ಉಸಿರಾಡುತ್ತಿದೆ ಎಂದು ನಿರೂಪಿಸಲಾದರೂ ಜೂನ್ 25ರ ದಿನವನ್ನು ನೆನೆಯಬೇಕಿರುವುದು ದುರಂತ. 1975ರ ಜೂನ್ 25ರಂದು ಅಂದಿನ ಸರ್ಕಾರ ಹೇರಿದ ತುರ್ತುಪರಿಸ್ಥಿತಿ ಈ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದಂತೂ ಹೌದು. ಭಾರತದ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ದೇಶದ ಪ್ರಭುತ್ವ ಭಾರತೀಯ ಸಮಾಜವನ್ನು ಇನ್ನೂ ಹೆಚ್ಚಿನ ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೆ ಪರಾಮರ್ಶಿಸಬೇಕಿತ್ತು. ಆದರೆ 1975 ಈ ದಿಕ್ಕಿನಲ್ಲಿ ಆಲೋಚನೆ ಮಾಡುವ ಎಲ್ಲ ಹಾದಿಗಳನ್ನೂ ಒಮ್ಮೆಲೆ ಮುಚ್ಚಿಹಾಕಿತ್ತು. ಪ್ರಭುತ್ವ ಭಾರತದ ಸಾರ್ವಭೌಮ ಪ್ರಜೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ತುರ್ತುಪರಿಸ್ಥಿತಿ ಒಂದು ಹೊಸ ಮಾರ್ಗಸೂಚಿಯನ್ನು ಆಳುವ ವರ್ಗಗಳಿಗೆ ಒದಗಿಸಿತ್ತು.
1975ರಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದ್ದನ್ನು ಇಂದಿಗೂ ಕರಾಳ ದಿನ ಎಂದೇ ಸ್ಮರಿಸುತ್ತಿದ್ದೇವೆ. ಈ ಕರಾಳ ದಿನವನ್ನು ವಿರೋಧಿಸಿ, ಸೆರೆವಾಸ ಅನುಭವಿಸಿ, ಪ್ರಜೆಗಳ ಪ್ರಜಾತಂತ್ರದ ಕನಸುಗಳನ್ನು ಸಾಕಾರಗೊಳಿಸುವ ಭರವಸೆ ನೀಡಿದ ರಾಜಕೀಯ ಶಕ್ತಿಗಳು ಇಂದು ಅಧಿಕಾರದಲ್ಲಿವೆ. ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಯಾಗಿದೆ ಎಂದು ಬೆನ್ನು ತಟ್ಟಿಕೊಳ್ಳುವ ಒಂದು ಆಡಳಿತ ವ್ಯವಸ್ಥೆಯನ್ನೂ ನಾವು ನೋಡುತ್ತಿದ್ದೇವೆ. ಈ ಆತ್ಮರತಿಯ ಸಮಾಧಾನಕ್ಕಾಗಿ ತುರ್ತುಪರಿಸ್ಥಿತಿಯತ್ತ ನೋಡುತ್ತೇವೆ. ಆದರೆ ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಂದು ಭಾರತದ ಪ್ರಜಾತಂತ್ರ ಆಂತರಿಕವಾಗಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ. ಈ ಅಪಾಯವನ್ನು ಗ್ರಹಿಸಿ ಪ್ರಜೆಗಳಿಗೆ ಮನವರಿಕೆ ಮಾಡಬೇಕಾದ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಇಂದು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು, ಬೆತ್ತಲಾಗಿದೆ.
ತುರ್ತು ಪರಿಸ್ಥಿತಿಯ ಹಿನ್ನೆಲೆ
ತುರ್ತುಪರಿಸ್ಥಿತಿಯ ಸಂದರ್ಭವನ್ನೊಮ್ಮೆ ನೋಡೋಣ. 1967ರ ನಕ್ಸಲ್‍ಬಾರಿ ಚಳುವಳಿ, ಇದರಿಂದ ಪ್ರೇರಿತವಾದ ಭೂ ಹೋರಾಟಗಳು, ಹಸಿರು ಕ್ರಾಂತಿಯ ನಂತರದಲ್ಲೂ ದೇಶವನ್ನು ಕಾಡಿದ ಆಹಾರದ ಸಮಸ್ಯೆ, ಹಸಿವಿನ ಸಮಸ್ಯೆ. 1965 ಮತ್ತು 1971ರ ಎರಡು ಯುದ್ಧಗಳಿಂದಾದ ದುಷ್ಪರಿಣಾಮಗಳು. ಬಂಡವಾಳಹೂಡಿಕೆಯ ಕೊರತೆ, ಗ್ರಾಮೀಣ ಬಡತನ, ನಿರುದ್ಯೋಗ. ಹೆಚ್ಚುತ್ತಿದ್ದ ನಗರೀಕರಣದೊಂದಿಗೇ ತೀವ್ರವಾಗುತ್ತಿದ್ದ ನಗರ ಕೇಂದ್ರಿತ ನಿರುದ್ಯೋಗ, ಗ್ರಾಮೀಣ ಪ್ರದೇಶಗಳಲ್ಲಿದ್ದ ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಔದ್ಯಮಿಕ ಕ್ಷೇತ್ರದ ಹಿನ್ನಡೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ತಲೆದೋರಿದ ಹಣದುಬ್ಬರ ಮತ್ತು ಬೆಲೆ ಏರಿಕೆಯ ಸಮಸ್ಯೆ. ಇಡೀ ಭಾರತದಲ್ಲಿ ಕ್ಷೋಭೆ ಉಂಟುಮಾಡುವಂತಹ ಸನ್ನಿವೇಶಗಳನ್ನು 1970ರ ದಶಕದ ಆರಂಭದಲ್ಲಿ ಕಾಣಬಹುದಿತ್ತು. 1971ರ ಯುದ್ಧದಲ್ಲಿ ಭಾರತ ಸಾಧಿಸಿದ ದಿಗ್ವಿಜಯ ಭಾರತದ ಬಡಜನತೆಯ ಪಾಲಿಗೆ, ಕೂಲಿಕಾರರ ಪಾಲಿಗೆ, ಉದ್ಯೋಗಾವಕಾಶಗಳೇ ಇಲ್ಲದೆ ಬೀದಿ ಪಾಲಾಗುತ್ತಿದ್ದ ಯುವ ಜನತೆಯ ಪಾಲಿಗೆ ಶಾಪವೇ ಆಗಿತ್ತು.
ಏಕೆಂದರೆ ಭಾರತ ಬಾಂಗ್ಲಾ ವಿಭಜನೆ ಮತ್ತು ಯುದ್ದೋನ್ಮಾದದ ವೆಚ್ಚವನ್ನು ಜನತೆಯ ಮೇಲೆ ಹೊರಿಸಿವುದು ಆಳುವವರಿಗೆ ಅನಿವಾರ್ಯವಾಗಿತ್ತು. ಯುದ್ಧ ಎಂದರೆ ಕೇವಲ ಭೌಗೋಳಿಕ ಸಾಮ್ರಾಜ್ಯ ವಿಸ್ತರಣೆಯ ಮಾಧ್ಯಮ ಮಾತ್ರವೇ ಅಲ್ಲ, ಅದು ಜನಸಾಮಾನ್ಯರ ಬದುಕಿನ ಸಂಘರ್ಷವನ್ನು ತಾರಕಕ್ಕೆ ಕೊಂಡೊಯ್ಯುತ್ತದೆ ಎಂಬ ವಾಸ್ತವ ಭಾರತಕ್ಕೆ ಅರಿವಾಗಿದ್ದು 1971ರ ನಂತರವೇ. ಖಾಸಗಿ ಔದ್ಯಮಿಕ ಪ್ರಪಂಚದಲ್ಲಿ ಬಂಡವಾಳ ಕ್ರೋಢೀಕರಣವೇ ಮುಖ್ಯವಾಯಿತೇ ಹೊರತು, ಉದ್ಯೋಗ ಸೃಷ್ಟಿ ಮುಖ್ಯವಾಗಲಿಲ್ಲ. ಬಂಡವಾಳಶಾಹಿಗಳು ತಮ್ಮ ಕ್ರೋಢೀಕೃತ ಸ್ಥಿರಾಸ್ತಿ ಮತ್ತು ಔದ್ಯಮಿಕ ಬಂಡವಾಳವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರ ಬದುಕಿನಿಂದ ದೂರವಾಗತೊಡಗಿದ್ದರು.
ಇದನ್ನು ಓದಿ: ಜಾತಿ ಶ್ರೇಷ್ಠತೆಯ ವ್ಯಸನದಿಂದ ಮುಕ್ತರಾಗಬೇಕಿದೆ
ಪದಾರ್ಥಗಳನ್ನು ಉತ್ಪಾದಿಸುವ ಉದ್ಯಮಕ್ಕಿಂತಲೂ ಭೂಮಿಯೇ ಹೆಚ್ಚಿನ ಲಾಭದಾಯಕ ಬಂಡವಾಳವಾಗುತ್ತದೆ ಎಂದು ಅರಿವಾಗಲು ನಗರೀಕರಣ ಪ್ರಕ್ರಿಯೆ ನೆರವಾಗಿತ್ತು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಗಾಗಿ ನಡೆದ ಹೋರಾಟಗಳನ್ನು ಹತ್ತಿಕ್ಕುತ್ತಲೇ ದೇಶದ ಪ್ರಭುತ್ವ , ನಗರಗಳಲ್ಲಿ ಹೆಚ್ಚಿನ ಬಂಡವಾಳ ಸೃಷ್ಟಿಸುವ ಭೂಮಿಯನ್ನು ಉದ್ಯಮಿಗಳಿಗೆ ಪರಭಾರೆ ಮಾಡುವುದರಲ್ಲಿ ತೊಡಗಿತ್ತು. ಏಕೆಂದರೆ ಮಾರುಕಟ್ಟೆ ವ್ಯವಸ್ಥೆಗೆ ಭೂಮಿ ಮತ್ತು ಅದಕ್ಕೆ ಸಂಬಂಧಿತ ರಿಯಲ್ ಎಸ್ಟೇಟ್ ಉದ್ಯಮ ಹೆಚ್ಚು ಲಾಭದಾಯಕವಾಗಿ ಕಂಡಿತ್ತು. ಕಾರ್ಖಾನೆಗಳಿಂದ ಉಚ್ಚಾಟಿಸಲ್ಪಟ್ಟ ದುಡಿಯುವ ಕೈಗಳು ತಮ್ಮ ಬದುಕು ಸವೆಸಲು ಅನ್ಯ ಮಾರ್ಗಗಳನ್ನು ಅರಸುವಂತಾಗಿತ್ತು. ಇದು ಭಾರತದ ಬಂಡವಾಳ ವ್ಯವಸ್ಥೆಗೆ ಸುಭದ್ರ ಬುನಾದಿ ಹಾಕಿದ ಒಂದು ಪರ್ವ ಎಂದೂ ಹೇಳಬಹುದು.
ಈ ಸಂದರ್ಭದಲ್ಲೇ ಹಸಿರು ಕ್ರಾಂತಿ ಎನ್ನಲಾಗುವ ಕ್ರಾಂತಿಕಾರಿ ಹೆಜ್ಜೆ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಮೌಲ್ಯವನ್ನು ಹೆಚ್ಚಿಸಿತ್ತು. ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಮೂಲಕ ನಗರಾಭಿವೃದ್ಧಿಗೆ ಪೂರಕವಾದ ಮೂಲ ಸೌಕರ್ಯಗಳನ್ನು ಒದಗಿಸುವ ಬಂಡವಾಳದ ರೂಪಾಂತರ ಪ್ರಕ್ರಿಯೆಗೆ ಚಾಲನೆ ದೊರೆತಿದ್ದೂ ಇದೇ ಅವಧಿಯಲ್ಲೇ. ಇತ್ತ ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ಸಮುದಾಯ ತುಂಡು ಭೂಮಿಗಾಗಿ ಹಿಂಸಾತ್ಮಕ ಹೋರಾಟದಲ್ಲಿ ತೊಡಗುವ ಅನಿವಾರ್ಯತೆ ಎದುರಿಸುತ್ತಿದ್ದರೆ ಮತ್ತೊಂದೆಡೆ ಭೂಮಾಲೀಕ ವರ್ಗದ ಒಂದು ಗುಂಪು ನಗರಕೇಂದ್ರಿತ ಬಂಡವಾಳ ಹೂಡಿಕೆಗೆ ಸಜ್ಜಾಗುತ್ತಿದ್ದರು. ಈ ಸಂಘರ್ಷದಲ್ಲಿ ಶೋಷಣೆಗೊಳಗಾದವರು ರೈತರು ಮತ್ತು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದ ಲಕ್ಷಾಂತರ ಕೃಷಿಕ ಕುಟುಂಬಗಳು.
1970ರ ದಶಕದಲ್ಲಿ ಭಾರತ ಸಮಾಜವಾದಿ ಆರ್ಥಿಕ ನೀತಿಯನ್ನೇ ಅವಲಂಬಿಸಿದ್ದರೂ, ನಿಧಾನಗತಿಯಲ್ಲಿ ಬಂಡವಾಳ ವ್ಯವಸ್ಥೆಯ ಸೌಮ್ಯ ಸ್ವರೂಪವೂ ಅನಾವರಣಗೊಳ್ಳುತ್ತಿತ್ತು. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್ ರಾಷ್ಟ್ರೀಕರಣ ಮತ್ತು ಗ್ರಾಮೀಣ ಉದ್ಯಮಗಳು ನೆರವಾಗಿದ್ದವು. ಆದರೆ ಹೊಸದಾಗಿ ರೂಪುಗೊಳ್ಳುತ್ತಿದ್ದ ಔದ್ಯಮಿಕ ಸಾಮ್ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಮಾರ್ಗಗಳು ಸೀಮಿತವಾಗಿದ್ದವು. ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಔದ್ಯಮಿಕ ಜಗತ್ತಿನಲ್ಲಿ ಹೆಚ್ಚಿನ ಆದ್ಯತೆ ಇರಲೂ ಇಲ್ಲ.. ಈ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳು, ಗ್ರಾಮೀಣ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕೃಷಿಚಟುವಟಿಕೆಗಳು ಮತ್ತು ಕೃಷಿ ವಿಸ್ತರಣೆಗೆ ವ್ಯಾಪಕವಾಗಿ ನೆರವಾದದ್ದು ರಾಷ್ಟ್ರೀಕೃತ ಬ್ಯಾಂಕುಗಳು. ಈ ಬ್ಯಾಂಕುಗಳ ಸೌಲಭ್ಯಗಳಿಂದ ವಂಚಿತರಾದ ಗ್ರಾಮೀಣ ಬಡ ಜನತೆ, ಕೃಷಿ ಕಾರ್ಮಿಕರು ಲೇವಾದೇವಿಗಾರರ ಕಾಟದಿಂದ ಪೂರ್ಣ ಮುಕ್ತಿ ಪಡೆಯದಿದ್ದರೂ ಕೊಂಚ ಮಟ್ಟಿಗೆ ರಾಷ್ಟ್ರೀಕೃತ ಬ್ಯಾಂಕುಗಳ ನೆರವಿನಿಂದ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿತ್ತು.
ಇದನ್ನು ಓದಿ: ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ
ಒಂದೆಡೆ ಗ್ರಾಮೀಣ ಪ್ರದೇಶದ ಕೃಷಿ ಭೂಮಿಯ ಕ್ರೋಢೀಕರಣ ಪ್ರಕ್ರಿಯೆ ತೀವ್ರವಾದಂತೆಲ್ಲಾ ಹಳ್ಳಿಗಳಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಹೋಗಿತ್ತು. ನಗರೀಕರಣ ಪ್ರಕ್ರಿಯೆ ತನ್ನದೇ ಆದ ಸಾಮಾಜಿಕ ಸಮಸ್ಯೆಗಳನ್ನೂ ಹುಟ್ಟುಹಾಕಿತ್ತು. ಸಹಜವಾಗಿಯೇ ಔದ್ಯಮಿಕ ಪ್ರಗತಿಯ ಹೊರತಾಗಿಯೂ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗಲಿಲ್ಲ. ಸಾರ್ವಜನಿಕ ಉದ್ದಿಮೆಗಳಲ್ಲಿ ಲಭ್ಯವಾಗುತ್ತಿದ್ದ ಉದ್ಯೋಗಾವಕಾಶಗಳು ಒಂದು ಸೀಮಿತ ಮಧ್ಯಮ ವರ್ಗಗಳ ಬದುಕು ಕಟ್ಟಿಕೊಳ್ಳಲು ನೆರವಾಗಿತ್ತು. ಆದರೆ ಹಳ್ಳಿಗಳಿಂದ ನಗರಗಳಿಗೆ ಬಂದ ಬಡ ಜನತೆಯ ಜೀವನೋಪಾಯದ ಮಾರ್ಗಗಳು ಅನಿಶ್ಚಿತತೆಯಿಂದಲೇ ಕೂಡಿದ್ದವು.
ಈ ಹಿನ್ನೆಲೆಯಲ್ಲೇ 1970ರ ದಶಕದ ಪೂರ್ವಾರ್ಧದಲ್ಲಿ ಜನಾಂದೋಲನಗಳು ಚಾಲನೆ ಪಡೆದುಕೊಂಡವು. ದಲಿತ, ಶೋಷಿತ ಸಮುದಾಯಗಳ ಹಕ್ಕೊತ್ತಾಯಗಳಿಗೆ ಸಾಮಾಜಿಕ ಸ್ಪಂದನೆಯೂ ದೊರೆತಿತ್ತು. ಸಾಂವಿಧಾನಿಕ ಸವಲತ್ತು ಮತ್ತು ಸೌಲಭ್ಯಗಳು ಸಮಾಜದ ಅವಕಾಶವಂಚಿತ ಸಮುದಾಯದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಲ್ಲ ಎನ್ನುವ ಆತಂಕವೂ ಹೆಚ್ಚಾಗಿತ್ತು. ಹಾಗಾಗಿಯೇ ಈ ಕಾಲಘಟ್ಟದ ದಲಿತ ಚಳುವಳಿಗಳು, ಮಹಿಳಾ ಆಂದೋಲನ, ವಿದ್ಯಾರ್ಥಿ ಮತ್ತು ಯುವ ಜನರ ಪ್ರತಿರೋಧದ ದನಿ ಎಲ್ಲವೂ ಜನಸಮೂಹದ ನಡುವೆ ಚಾಲನೆ ಪಡೆದುಕೊಂಡಿದ್ದವು. ನಕ್ಸಲ್‍ಬಾರಿ ಚಳುವಳಿ ಮತ್ತು ಎಡಪಂಥೀಯ ಕಾರ್ಮಿಕ ಚಳುವಳಿಗಳು ಹುಟ್ಟುಹಾಕಿದ ಪ್ರತಿರೋಧದ ನೆಲೆಗಳು ಸಮಾಜದ ಎಲ್ಲ ವರ್ಗಗಳಲ್ಲೂ ಧ್ವನಿಸತೊಡಗಿತ್ತು. ಬ್ಯಾಂಕಿಂಗ್, ವಿಮೆ, ಸಾರಿಗೆ ಮತ್ತು ಔದ್ಯಮಿಕ ಕ್ಷೇತ್ರದಲ್ಲಿ ಸಾರ್ವಜನಿಕ ಉದ್ದಿಮೆಗಳೇ ಪ್ರಧಾನವಾಗಿದ್ದರೂ, ಪರ್ಯಾಯ ನೆಲೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ತನ್ನ ಬೇರುಗಳನ್ನು ಗಟ್ಟಿಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿತ್ತು.
ದೇಶದ ಮೂಲೆ ಮೂಲೆಗಳಲ್ಲೂ ಜನ ಸಾಮಾನ್ಯರು ಆರ್ಥಿಕ ಸಮಾನತೆಗಾಗಿ, ಸಾಮಾಜಿಕ ಘನತೆಗಾಗಿ, ತಮ್ಮ ರಾಜಕೀಯ ಅಸ್ಮಿತೆಗಾಗಿ ಮತ್ತು ಮೂಲತಃ ಜೀವನೋಪಾಯದ ಮಾರ್ಗಗಳಿಗಾಗಿ ಹೋರಾಡಲು ಮುಂದಾಗಿದ್ದು ಈ ಕಾಲಘಟ್ಟದ ಬಹುಮುಖ್ಯ ಬೆಳವಣಿಗೆ. ಎಡಪಂಥೀಯ ಚಳುವಳಿಯಿಂದ ಪ್ರೇರಿತರಾದ ದುಡಿಯುವ ವರ್ಗಗಳು, ನಕ್ಸಲ್‍ಬಾರಿ ಹೋರಾಟದಿಂದ ಸ್ಫೂರ್ತಿ ಪಡೆದ ಗ್ರಾಮೀಣ ಬಡ ಜನತೆ ತಮ್ಮ ಬದುಕುವ ಹಕ್ಕುಗಳಿಗಾಗಿ ಹೋರಾಡಲು ಸಜ್ಜಾದರು. ದಲಿತರು, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಹೋರಾಡಲು ಸಜ್ಜಾದರು. ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದಲ್ಲಿ ನಿಸರ್ಗ ಸಂಪತ್ತು ವಿನಾಶದತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಈ ಸಂಘರ್ಷಗಳು ಪರಿಸರ ಹೋರಾಟಗಳಿಗೂ ವ್ಯಾಪಿಸಿದ್ದು ಸಹಜವೇ ಆಗಿತ್ತು.
ಇದನ್ನು ಓದಿ: ಜೂನ್ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್‌ಕೆಎಂ ಕರೆ
ಈ ಸಾಮಾಜಿಕ ಕ್ಷೋಭೆ ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೇ ನವ ಭಾರತ ಉದಯಿಸಬೇಕಿತ್ತು. ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಸಂಪೂರ್ಣ ಸಮಾಜವಾದವನ್ನು ಸಾಧಿಸಲು ಸಾಧ್ಯವೂ ಇರಲಿಲ್ಲ. ಹಾಗಾಗಿಯೇ ರಾಷ್ಟ್ರೀಕೃತ ಬ್ಯಾಂಕುಗಳೂ ಸಹ ಹಣಕಾಸು ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಔದ್ಯಮಿಕ ವಲಯಕ್ಕೇ ಒದಗಿಸಲು ನಿರ್ಧರಿಸಿದ್ದವು. ಕೃಷಿ, ಕರಕುಶಲ ಉದ್ಯಮ, ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ , ರಸ್ತೆ ಸಾರಿಗೆ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸಾಲದ ಶೇ 40ರಷ್ಟನ್ನು ನಿಗದಿಪಡಿಸಲಾಗಿತ್ತು. ಕೃಷಿ ವಲಯಕ್ಕೇ ಶೇ 17ರಷ್ಟು ಸಾಲ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿತ್ತು. ಇದನ್ನು ಆದ್ಯತಾ ವಲಯದ ಸಾಲಗಳು ಎಂದೂ ವರ್ಗೀಕರಿಸಲಾಗಿತ್ತು. ಇನ್ನುಳಿದ ಶೇ 60ರಷ್ಟು ಸಾಲ ಸೌಲಭ್ಯಗಳು ಆದ್ಯತಾ ವಲಯದ ಹೊರಗಿನ, ಅಂದರೆ ಮೂಲ ಸೌಕರ್ಯಗಳು, ಬೃಹತ್ ಕೈಗಾರಿಕೆಗಳು, ಸೇವಾವಲಯ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೆ ನಿಗದಿಪಡಿಸಲಾಗಿತ್ತು.
ಅಂದರೆ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ ಶೇ 83ರಷ್ಟು ಸಾಲ ಸೌಲಭ್ಯ ಕೃಷಿಯೇತರ ಚಟುವಟಿಕೆಗಳಿಗೆ ಒದಗಿಸಲಾಗಿತ್ತು. ಸಣ್ಣ ಬಂಡವಾಳಿಗರು ಊರ್ಜಿತವಾಗಲು ಇದು ಪೂರಕವಾಗಿದ್ದೇ ಅಲ್ಲದೆ ಬೃಹತ್ ಕೈಗಾರಿಕೆಗಳ ಅಭಿವೃದ್ಧಿಗೂ ನೆರವಾಗಿತ್ತು. ಇದು ಬಂಡವಾಳಶಾಹಿ ಆರ್ಥಿಕತೆಯನ್ನು ಸಮಾಜವಾದಿ ಮಿಶ್ರ ಅರ್ಥಿಕ ವ್ಯವಸ್ಥೆಯ ಮೂಲಕ ಪೋಷಿಸುವ ಒಂದು ವಿಧಾನ ಎಂದೂ ಭಾವಿಸಬಹುದು. ಈ ಸಂದರ್ಭದಲ್ಲಿ ಶೋಷಿತ ಮತ್ತು ಅವಕಾಶವಂಚಿತ ಜನಸಮುದಾಯಗಳ ಜೀವನೋಪಾಯಕ್ಕೆ ನೆರವಾಗುವಂತಹ ಹತ್ತು ಹಲವಾರು ಯೋಜನೆಗಳನ್ನೂ ಹಮ್ಮಿಕೊಳ್ಳಲಾಯಿತು. 20 ಅಂಶದ ಕಾರ್ಯಕ್ರಮ, ಐಆರ್‍ಡಿಪಿ, ಡಿಆರ್‍ಐ, ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ನೆರವು, ಸಹಾಯಧನದ ಮೂಲಕ ಕುಶಲಕರ್ಮಿಗಳಿಗೆ ನೀಡುವ ನೆರವು, ಹೀಗೆ ಈ ಜನಪರ ಎನ್ನಬಹುದಾದ ಯೋಜನೆಗಳು ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದೂ ಸತ್ಯ.
ಆದರೆ ಈ ಯೋಜನೆಗಳು, ಬಡತನ ತೊಲಗಿಸಿ ಎಂಬ ಘೋಷಣೆಗಳು ಜನಸಮೂಹದ ನಡುವೆ ಪ್ರತಿರೋಧದ ಕಿಡಿಗಳನ್ನೂ ತಣ್ಣಗಾಗಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. 1970ರ ದಶಕದ ಆರಂಭದ ದಿನಗಳ ಹೋರಾಟದ ಕಿಚ್ಚು 1980ರ ವೇಳೆಗೆ ನಂದಿಹೋಗಲಾರಂಭಿಸಿತ್ತು ಅಷ್ಟೇ ಅಲ್ಲದೆ 1980ರ ದಶಕದಲ್ಲಿ ಉಲ್ಬಣಿಸಿದ ಮತೀಯ ರಾಜಕಾರಣ, ಮತಾಂಧತೆ ಮತ್ತು ಜಾತಿ ರಾಜಕಾರಣ ಜನಸಾಮಾನ್ಯರ ಮೂಲ ಅವಶ್ಯಕತೆಗಳನ್ನು ನೇಪಥ್ಯಕ್ಕೆ ಸರಿಸಿ, ಅಸ್ಮಿತೆಯ ರಾಜಕಾರಣಕ್ಕೆ ಎಡೆಮಾಡಿಕೊಟ್ಟಿತ್ತು. ಜೀವನ-ಜೀವನೋಪಾಯ-ಬದುಕು ಈ ಸಮೀಕರಣ ಮಾಯವಾಗಿ ಜಾತಿ-ಧರ್ಮ-ರಾಜಕೀಯ ಅಸ್ಮಿತೆಯ ಸಮೀಕರಣ ಚಾಲನೆಗೆ ಬಂದಿತ್ತು.
ಪ್ರತಿರೋಧದ ನೆಲೆಗಳ ಅಸ್ತಿತ್ವ
ಈ ಎರಡು ದಶಕಗಳ ಅವಧಿಯಲ್ಲಿ ಪ್ರಭುತ್ವ ಜನಾಂದೋಲನಗಳನ್ನು ಹತ್ತಿಕ್ಕುವ ಹಲವು ಸಾಧನಗಳನ್ನು ತನ್ನದಾಗಿಸಿಕೊಂಡಿತ್ತು. ಇದಕ್ಕೆ ನಾಂದಿ ಹಾಡಿದ್ದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಮೀಸಾ ಕಾಯ್ದೆ (MISA). ಈ ಆಂತರಿಕ ಭದ್ರತೆಯ ನಿರ್ವಹಣಾ ಕಾಯ್ದೆ .ಪ್ರಭುತ್ವದ ಬಾಹುಗಳನ್ನು ಪುಷ್ಟೀಕರಿಸಿದ ಒಂದು ಅಸ್ತ್ರವಾಗಿ ಪರಿಣಮಿಸಿದರೆ, ಜನಾಂದೋಲನಗಳನ್ನು ದಮನಿಸುವ ಶಸ್ತ್ರವೂ ಆಗಿತ್ತು. ಇಂದು ತುರ್ತುಪರಿಸ್ಥಿತಿಯನ್ನು ನೆನೆದು ಭಾವುಕರಾಗಿ ಪ್ರಜಾತಂತ್ರದ ಮೌಲ್ಯಗಳ ಬಗ್ಗೆ ಎದೆತಟ್ಟಿಕೊಳ್ಳುತ್ತಿರುವ ಆಳುವವರು ಇದೇ ಮೀಸಾ ಕಾಯ್ದೆಯ ಸಂತತಿಯಲ್ಲೇ ಪರಿಷ್ಕೃತವಾಗಿ ರೂಪುಗೊಂಡಿರುವ, ಇನ್ನೂ ಹೆಚ್ಚು ಭೀಕರ ಎನಿಸಿರುವ ಯುಎಪಿಎ ಕಾಯ್ದೆಯ ಆರಾಧಕರಾಗಿರುವುದನ್ನೂ ಗಮನಿಸಬೇಕಿದೆ.
ತುರ್ತುಪರಿಸ್ಥಿತಿ ಭಾರತೀಯ ಪ್ರಭುತ್ವವನ್ನು ಬಲಪಡಿಸಿದ ಒಂದು ಸಂದರ್ಭವಾಗಿ ಪರಿಣಮಿಸಿತ್ತು. 1980ರ ನಂತರದ ರಾಜಕೀಯ ಪಲ್ಲಟಗಳು, ವಿಪ್ಲವಕಾರಿ ಬೆಳವಣಿಗೆಗಳು ಮತ್ತು ಸಮಾಜೋ ಸಾಂಸ್ಕೃತಿಕ ವ್ಯತ್ಯಯಗಳ ನಡುವೆಯೇ ಹುಟ್ಟಿಕೊಂಡ ಟಾಡಾ, ಯುಎಪಿಎ ಮುಂತಾದ ಕರಾಳ ಶಾಸನಗಳ ಮೂಲ ಬೇರುಗಳನ್ನು ನಾವು ತುರ್ತುಪರಿಸ್ಥಿತಿಯಲ್ಲೇ ಕಂಡುಕೊಳ್ಳಬೇಕಿದೆ. ಅಂದು ಸಂವಿಧಾನ ತಿದ್ದುಪಡಿಯ ಮೂಲಕ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು, ಇಂದು ಸಂವಿಧಾನದ ಚೌಕಟ್ಟಿನಲ್ಲೇ ಈ ಹಕ್ಕುಗಳ ದಮನವಾಗುತ್ತಿದೆ, ಕರಾಳ ಶಾಸನಗಳ ಮೂಲಕ. ಎಷ್ಟೇ ಕರಾಳ ಪರ್ವ ಎನಿಸಿದರೂ ತುರ್ತುಪರಿಸ್ಥಿತಿಯಲ್ಲಿ ನಮಗೆ “ದೇಶದ್ರೋಹ” ಕಂಡಿರಲಿಲ್ಲ. ರಾಜದ್ರೋಹ ಕಾಯ್ದೆಯ ಸೆಕ್ಷನ್ 124ಎ ಬಳಕೆಯಾಗಿರಲಿಲ್ಲ. ಇಂದು ಸಂವಿಧಾನ ದಿನವನ್ನು ಸಂಭ್ರಮದಿಂದ ಆಚರಿಸುವ ಭಾರತದಲ್ಲಿ ಈ ಪದ ಆಳುವ ವರ್ಗಗಳ ನಿತ್ಯ ಮಂತ್ರವಾಗಿದೆ.
ಇದನ್ನು ಓದಿ: “ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ” ಜೂನ್ 26 ಕ್ಕೆ ರಾಜಭವನ ಚಲೋ
ಮೂಲತಃ ದುಡಿಯುವ ವರ್ಗಗಳ, ಶ್ರಮಜೀವಿಗಳ, ಶೋಷಿತ ಮತ್ತು ಅವಕಾಶವಂಚಿತ ಸಮುದಾಯಗಳ ಹಕ್ಕೊತ್ತಾಯಗಳ ಹೋರಾಟಗಳನ್ನು ಹತ್ತಿಕ್ಕುವುದು ಬಂಡವಾಳಶಾಹಿ ವ್ಯವಸ್ಥೆಯ ಉದ್ದೇಶವಾಗಿತ್ತು ಎನ್ನುವುದನ್ನು 1970-80ರ ದಶಕದ ಆಡಳಿತ ನೀತಿಗಳಿಂದ ಸುಲಭವಾಗಿ ಗ್ರಹಿಸಬಹುದು. ತುರ್ತುಪರಿಸ್ಥಿತಿಯೂ ಇದರ ಒಂದು ಭಾಗ. ಹಾಗಾಗಿಯೇ ತುರ್ತುಪರಿಸ್ಥಿತಿಯನ್ನು ವಿರೋಧಿಸುತ್ತಲೇ ಆಧಿಪತ್ಯ ರಾಜಕಾರಣದಲ್ಲಿ ನೆಲೆ ಕಂಡುಕೊಂಡ ಯಾವುದೇ ಬಂಢವಾಳಶಾಹಿ ರಾಜಕೀಯ ಪಕ್ಷಗಳು, ಬಿಜೆಪಿಯನ್ನೂ ಸೇರಿದಂತೆ, ಭಾರತದ ಶೋಷಿತ ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡುವ ಇಚ್ಚಾಶಕ್ತಿಯನ್ನೇ ತೋರಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಿ ತಾತ್ಕಾಲಿಕ ಶಮನಗೊಳಿಸುವ ಯೋಜನೆಗಳಿವೆಯೇ ಹೊರತು, ಸಾರ್ವಭೌಮ ಪ್ರಜೆಗಳು ಬಯಸುವ ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ಒಂದೇ ಒಂದು ರಾಜಕೀಯ ಪ್ರಣಾಳಿಕೆಯನ್ನೂ ಕಾಣಲಾಗುತ್ತಿಲ್ಲ.
ಔದ್ಯಮಿಕ ಕ್ರಾಂತಿಯ ನಾಲ್ಕನೆಯ ಹಂತದಲ್ಲಿರುವ #ಆತ್ಮನಿರ್ಭರ ಭಾರತದಲ್ಲಿ ಶ್ರಮಜೀವಿ ವರ್ಗಗಳ ಪ್ರತಿರೋಧದ ದನಿಗಳು ನಿತ್ಯ ದಮನಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಈ ಇತಿಹಾಸದ ಹೆಜ್ಜೆಗಳನ್ನು ನಾವು ಗುರುತಿಸಬೇಕಾಗುತ್ತದೆ. ಸಂಪತ್ತಿನ ಕ್ರೋಢೀಕರಣ ಮತ್ತು ಸೌಲಭ್ಯ-ಸವಲತ್ತುಗಳ ಹಂಚಿಕೆ ಸಮಾಜವಾದ ಎನಿಸಿಕೊಳ್ಳುವುದಿಲ್ಲ. ಸಂಪತ್ತಿನ ಸಮಪಾಲು ಹಂಚಿಕೆ ನೈಜ ಸಮಾಜವಾದವನ್ನು ರೂಪಿಸುತ್ತದೆ. ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ಇದು ಸಾಧ್ಯವೇ ಆಗದಂತಹ ಆಡಳಿತ ವ್ಯವಸ್ಥೆಯನ್ನು ಬಂಡವಾಳಶಾಹಿ ವ್ಯವಸ್ಥೆ ಭಾರತದಲ್ಲೂ ರೂಪಿಸಿದೆ. ಈ ವ್ಯವಸ್ಥೆಯ ವಿರುದ್ಧ ರೂಪುಗೊಳ್ಳುವ ಯಾವುದೇ ಹೋರಾಟವೂ ತಾರ್ಕಿಕ ಅಂತ್ಯ ತಲುಪಲಾಗದಂತಹ ಕಾನೂನು ವ್ಯವಸ್ಥೆಯನ್ನು, ಶಾಸನಬದ್ಧವಾಗಿಯೇ ರೂಪಿಸಲಾಗಿದೆ. ಭಾರತದ ಬಂಡವಾಳಶಾಹಿ ರಾಜಕೀಯ ಪಕ್ಷಗಳು ಈ ವ್ಯವಸ್ಥೆಯ ತಳಪಾಯವನ್ನು ಇನ್ನೂ ಗಟ್ಟಿಗೊಳಿಸಲು ಪೈಪೋಟಿ ನಡೆಸುತ್ತಿವೆ.
ಹಾಗಾಗಿಯೇ ಪರಿಸರ ರಕ್ಷಣೆ, ನದಿ ಮೂಲಗಳ ರಕ್ಷಣೆ, ಅರಣ್ಯ ರಕ್ಷಣೆ ಮತ್ತು ದುಡಿಮೆಯ ಮೂಲಗಳ ರಕ್ಷಣೆ, ನೆಲ ಮತ್ತು ಜಲದ ರಕ್ಷಣೆ ಇವೆಲ್ಲವೂ ಪ್ರತಿರೋಧದ ದನಿಗಳಿಗೆ ಮೂಲ ನೆಲೆಯಾಗಿ ಪರಿಣಮಿಸಿವೆ. ಈ ಪ್ರತಿರೋಧದ ದನಿಗಳನ್ನು ಅಡಗಿಸಲು ಭಾರತದ ಪ್ರಭುತ್ವ ಕರಾಳ ಶಾಸನಗಳ ಮೊರೆ ಹೋಗುತ್ತದೆ. ಏಳು ತಿಂಗಳುಗಳ ನಿರಂತರ ಹೋರಾಟದ ನಂತರವೂ ಈ ದೇಶದ ರೈತರ ದನಿಯನ್ನು ಆಲಿಸಲು ಪ್ರಭುತ್ವ ಮುಂದೆಬರದಿರುವುದು ಇದನ್ನೇ ಸೂಚಿಸುತ್ತದೆ. ಬೌದ್ಧಿಕವಾಗಿ ನಿಷ್ಕ್ರಿಯವಾಗುತ್ತಿರುವ ಹಿತವಲಯದಲ್ಲಿರುವ ಒಂದು ಬೃಹತ್ ಮಧ್ಯಮ ವರ್ಗ ಈ ಭೌಗೋಳಿಕ ದೇಶಪ್ರೇಮದ ಸುಳಿಗೆ ಸಿಲುಕಿದೆ. ತುರ್ತುಪರಿಸ್ಥಿತಿಯನ್ನು ನೆನೆದು ಮರುಗುವ ಮುನ್ನ, ಈ ದೇಶದ ಬಂಡವಾಳಶಾಹಿ ವ್ಯವಸ್ಥೆಗೆ ಅದು ನೀಡಿರುವ ಅಮೂಲ್ಯ ಕೊಡುಗೆಯನ್ನು ಗಮನಿಸಿದರೆ, ಬಹುಶಃ “ಅಘೋಷಿತ ತುರ್ತುಪರಿಸ್ಥಿತಿ”ಯ ಅರ್ಥ ಹೊಳೆಯಬಹುದು.
ಭಾರತದ ಶೋಷಿತ, ಅವಕಾಶವಂಚಿತ ಸಮುದಾಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನೂ ಸದ್ದಿಲ್ಲದೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ಪ್ರಜಾತಂತ್ರ-ಸಂವಿಧಾನ ಮತ್ತು ಮಾನವನ ಬದುಕುವ ಹಕ್ಕುಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಪ್ರಜೆಗಳಿಂದಲೇ ಚುನಾಯಿತವಾದ ಸರ್ಕಾರ ರಾಜಕೀಯ ಪ್ರಜಾತಂತ್ರದ ಸೂಚಕವಷ್ಟೇ. ನೈಜ ಪ್ರಜಾತಂತ್ರ ಇರಬೇಕಾದುದು ಈ ದೇಶದ ಸಾರ್ವಭೌಮ ಪ್ರಜೆಗಳ ನಿತ್ಯ ಬದುಕಿನಲ್ಲಿ. ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ. ಇದು ಅಪಾಯದಲ್ಲಿದೆ. ಬಂಡವಾಳಶಾಹಿಯನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಹಣಕಾಸು ಬಂಡವಾಳ ವ್ಯವಸ್ಥೆಯನ್ನು ಪೋಷಿಸಲು ಬದ್ಧವಾಗಿವೆ. ಶೋಷಿತ ಶ್ರಮಜೀವಿ ವರ್ಗಗಳಿಗೆ ಪರ್ಯಾಯ ರಾಜಕಾರಣದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಎಡಪಂಥೀಯ ಮತ್ತು ಪ್ರಜಾತಾಂತ್ರಿಕ ಪಕ್ಷಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನದ ಮೂಲಕ ಯೋಚಿಸುವುದು ಒಳಿತು.