ಸುಧಾ ಆಡುಕಳ, ವಸಂತರಾಜ ಎನ್.ಕೆ
ತಮ್ಮ ವಿದ್ಯಾರ್ಥಿಗಳ ನಡುವೆ ಕನ್ನಡ ಸಾಹಿತ್ಯದ ಓದು ಮೂಲಕ, ಸ್ಥಳಿಯ ಸಮುದಾಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಇಡೀ ರಾಜ್ಯದ ತುಂಬಾ ಸಾವಿರಾರು ವಿದ್ಯಾರ್ಥಿ-ಯುವಜನರಲ್ಲಿ ‘ಸಂವಿಧಾನ ಓದು’ ಮೂಲಕ ಪ್ರಜಾಸತ್ತಾತ್ಮಕ ಸಂಸ್ಕೃತಿ ಕಟ್ಟುವ ಮಾದರಿಯನ್ನು ವಿಠ್ಠಲ ತೋರಿಸಿದ್ದರು ಎಂದು ಪ್ರೊ. ರಾಜೇಂದ್ರ ಚೆನ್ನಿ ಅವರು ಮೇ 7ರಂದು ಕೆರೆಕೋಣದ ಸಹಯಾನ ಅಂಗಳದಲ್ಲಿ ‘ಪ್ರೀತಿ ಪದಗಳ ಸಹಯಾನಿ ವಿಠ್ಠಲ ಭಂಡಾರಿ’ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಹೇಳಿದರು.
ಜೋಪಡಿಗಳ ಮೇಲೆ ಜೆಸಿಬಿ ಯಂತ್ರವೊಂದು ಎರಗಿ ನಾಶಮಾಡುತ್ತಿರುವುದನ್ನು ಸಾಮಾನ್ಯರೂ ಅನುಕೂಲಸ್ಥರೂ ಸುಶಿಕ್ಷಿತರೂ ಸುಮ್ಮನೆ ನಿಂತು ನೋಡುತ್ತಿರುವ ಚಿತ್ರ, ಇಂಗ್ಲೆಂಡಿನ ಪ್ರಧಾನಿ ಜೆಸಿಬಿ ಕಂಪನಿಗೆ ಭೇಟಿ ನೀಡಿ ಜೆಸಿಬಿ ಮೇಲೆ ನಿಂತು ಕೈಬೀಸಿದ ಚಿತ್ರ, ಸಿಎಎ ಪ್ರತಿಭಟನೆಯ ಮೆರವಣಿಗೆಗೆ ಪಿಸ್ತೂಲು ಹಿಡಿದ ಯುವಕನ ಹಿಂದೆ ಕೆಲ ದೂರದಲ್ಲೇ ದೆಹಲಿ ಪೋಲಿಸರ ದೊಡ್ಡ ಪಟಲಾಂ ನಗುತ್ತಾ ನಿಂತಿರುವ ಚಿತ್ರ – ಇವು ಹಿಟ್ಲರನ ಸೈನಿಕರು ಯಹೂದಿ ಹೆಣ್ಣುಮಗಳೊಬ್ಬಳನ್ನು ಬೀದಿಯಲ್ಲಿ ಸೆಳೆದೊಯ್ಯುತ್ತಿರುವಾಗ ಸಾಮಾನ್ಯರೂ ಅನುಕೂಲಸ್ಥರೂ ಸುಶಿಕ್ಷಿತರೂ ಯಾವುದೇ ಭಾವನೆಯಿಲ್ಲದೆ ನೋಡುತ್ತಿರುವ ಚಿತ್ರವನ್ನು ನೆನಪಿಸುತ್ತವೆ, ಪ್ರಜಾಸತ್ತೆ ಕಳೆದು ಹೋಗುತ್ತಿರುವುದನ್ನು ಸೂಚಿಸುತ್ತಿವೆ. ಈ ರೀತಿ ಪ್ರಜಾಸತ್ತೆ ಸಮಾನತೆ ಸೋದರತ್ವ ಗಳಿಲ್ಲದೆ ಟೊಳ್ಳಾಗಿ, ಬರಿಯ ಚುನಾವಣಾ ಪ್ರಜಾಸತ್ತೆಗೆ ಸೀಮಿತಗೊಂಡಿರುವ ವಿದ್ಯಮಾನವನ್ನೂ, ಅದಕ್ಕೆ ಕಾರಣಗಳನ್ನೂ ಚಿಂತಕರಾದ ಪ್ರೊ.ರಾಜೇಂದ್ರ ಚೆನ್ನಿಯವರು ವಿವರಿಸಿದರು. ಪ್ರಜಾಸತ್ತಾತ್ಮಕ ಸಂಸ್ಕೃತಿಯ ಅಭಾವವೇ ಇದಕ್ಕೆ ಮೂಲಕಾರಣ ಎಂದೂ ಅವರು ಗುರುತಿಸಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಕೆರೆಕೋಣದ ಸಹಯಾನ ಅಂಗಳದಲ್ಲಿ ನಡೆದ ‘ಪ್ರೀತಿ ಪದಗಳ ಸಹಯಾನಿ ವಿಠ್ಠಲ ಭಂಡಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗಾಂಧೀಜಿಯವರ ಸ್ವಾತಂತ್ರ್ಯದ ಸಂದೇಶವನ್ನು ಮನೆಮನೆಗೆ ಕೊಂಡೊಯ್ಯುವ ಮೂಲಕ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ರೂಪಿಸಿದವರು ಈ ದೇಶದ ಸಾಮಾಜಿಕ ಕಾರ್ಯಕರ್ತರು. ಅವರು ಸ್ವಾತಂತ್ರ್ಯದ ಮೌಲ್ಯಗಳನ್ನು ತಮ್ಮ ಸ್ಥಳೀಯ ಸಮುದಾಯಗಳಲ್ಲಿ ಜನರ ಪ್ರಜ್ಞೆಯ ಭಾಗವಾಗಿಸಿದರು. ಆದರೆ ಅಂತಹ ಕೆಲಸ ನಮ್ಮ ಸಾಂವಿಧಾನಿಕ ಪ್ರಜಾಸತ್ತೆಯ ಮೌಲ್ಯಗಳ ಸಂದರ್ಭದಲ್ಲಿ ಆಗಲಿಲ್ಲ. ಈ ನಿರ್ವಾತವನ್ನು ಬಲಪಂಥೀಯ ಶಕ್ತಿಗಳು ತುಂಬಿವೆ. ಈ ಪರಿಸ್ಥಿತಿಯನ್ನು ಇಂದಿನ ಸಂದರ್ಭದಲ್ಲಿ ಎದುರಿಸುವ ಬಗೆಯನ್ನು ವಿಠ್ಠಲ ತೋರಿಸಿದ್ದರು. ತಮ್ಮ ವಿದ್ಯಾರ್ಥಿಗಳ ನಡುವೆ ಕನ್ನಡ ಸಾಹಿತ್ಯದ ಓದು ಮೂಲಕ, ಸ್ಥಳಿಯ ಸಮುದಾಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಇಡೀ ರಾಜ್ಯದ ತುಂಬಾ ಸಾವಿರಾರು ವಿದ್ಯಾರ್ಥಿ-ಯುವಜನರಲ್ಲಿ ‘ಸಂವಿಧಾನ ಓದು’ ಮೂಲಕ ಪ್ರಜಾಸತ್ತಾತ್ಮಕ ಸಂಸ್ಕೃತಿ ಕಟ್ಟುವ ಮಾದರಿಯನ್ನು ವಿಠ್ಠಲ ತೋರಿಸಿದ್ದರು ಎಂದು ಚೆನ್ನಿ ಅವರು ಹೇಳಿದರು.
ಇದಕ್ಕೆ ಮೊದಲು ವಿಠ್ಠಲ ಭಂಡಾರಿಯವರ ಸಮಾಧಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಪುಷ್ಪಾರ್ಚನೆಯನೊಂದಿಗೆ ಗೌರವ ನಮನ ಸಲ್ಲಿಸಿದರು. ವಿಠ್ಠಲ ಭಂಡಾರಿಯವರ ನೆನಪಿನ ‘ಪುಸ್ತಕ ಮನೆ’ಯನ್ನು ಅವರು ಉದ್ಘಾಟಿಸಿದರು. ಮೀನಾಕ್ಷಿ ಬಾಳಿಯವರ ಸಂಪಾದಕತ್ವದಲ್ಲಿ ರೂಪುಗೊಂಡ ‘ಪ್ರೀತಿ ಪದಗಳ ಸಹಯಾನಿ ವಿಠ್ಠಲ ಭಂಡಾರಿ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀಪಾದ ಭಟ್ ಅವರ ಸಂಗೀತ ನಿರ್ದೇಶನದಲ್ಲಿ ಸಂವಿಧಾನ ಗೀತೆಯನ್ನು ಹಾಡುವುದರ ಮೂಲಕ ಅದನ್ನು ‘ಸಂವಿಧಾನ ಓದು’ ಕಾರ್ಯಕ್ರಮದ ರೂವಾರಿಯಾಗಿದ್ದ ವಿಠ್ಠಲ ಭಂಡಾರಿಯವರಿಗೆ ಅರ್ಪಿಸುವ ಮೂಲಕ ಸಭಾ ಕಾರ್ಯಕ್ರಮ ಆರಂಭವಾಗಿತ್ತು. ವಿಠ್ಠಲ ಭಂಡಾರಿಯವರ ಬಾಳಸಂಗಾತಿ ಯಮುನಾ ಗಾಂವಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು.
‘ಪ್ರಜಾಸತ್ತೆಯ ಪುನಶ್ಚೇತನ: ಚರಿತ್ರೆ ನಮಗೆ ಹೇಳುವುದೇನು?’
ನಂತರ ವಿಠ್ಠಲ ಭಂಡಾರಿಯವರ ನೆನಪಿನ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವಾಗಿ ಪ್ರೊ. ಜಿ.ಎನ್. ದೇವಿಯವರ ‘ಪ್ರಜಾಸತ್ತೆಯ ಪುನಶ್ಚೇತನದ ನಾಲ್ಕು ಚತುಷ್ಕಗಳು’ ಎಂಬ ವಿಷಯದ ಮೇಲೆ ಮುದ್ರಿತ ಭಾಷಣವನ್ನು ಪ್ರಸಾರ ಮಾಡಲಾಯಿತು. ‘ಪ್ರಜಾಸತ್ತೆಯ ಪುನಶ್ಚೇತನ: ಚರಿತ್ರೆ ನಮಗೆ ಹೇಳುವುದೇನು?’ ಎಂಬ ಮೊದಲ ಚತುಷ್ಕದಲ್ಲಿ ವಿಶ್ವ ಮತ್ತು ಭಾರತದಲ್ಲಿ ಪ್ರಜಾಸತ್ತೆಯ ಬೆಳವಣಿಗೆಯ ಚರಿತ್ರೆ ಮತ್ತು ಇಂದಿನ ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸುತ್ತಾರೆ. ‘ಸಾಮಾಜಿಕ ಕಾರ್ಯಕರ್ತ, ಸರಕಾರೇತರ ಕ್ರಿಯಾಭಾಗಿಗಳು ಮತ್ತು ರಾಷ್ಟ್ರಪ್ರಭುತ್ವ’ ಎಂಬ ಎರಡನೆಯ ಚತುಷ್ಕದಲ್ಲಿ ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ನಾಗರಿಕ ಸಮಾಜದ ಪಾತ್ರದ ಬೆಳವಣಿಗೆ ಇಂದಿನ ಭಾರತದವರೆಗೆ ನಡೆದು ಬಂದ ಹಾದಿಯ ಅವಲೋಕನ ಮಾಡುತ್ತಾರೆ. ‘ಹಲವು ನಾಯಕರುಗಳ ಕುರಿತು: ಭಾರತದ ಭೂತ ಮತ್ತು ಭವಿಷ್ಯ’ ಎಂಬ ಮೂರನೆಯ ಚತುಷ್ಕದಲ್ಲಿ ‘ಭಾರತದ ನಿರ್ಣಾಯಕ ಗುರುತಾದ ಬಹುತ್ವಕ್ಕೆ ಅಂದರೆ ಭಾಷಿಕ, ಸಾಂಸ್ಕೃತಿಕ, ಸಾಮಾಜಿಕ ವೈವಿಧ್ಯತೆಗಳಿಗೆ ಒದಗಿರುವ ಅಪಾಯಗಳನ್ನು ಗುರುತಿಸುತ್ತಾರೆ. ‘ಗತದತ್ತ ಮರುಪಯಣಕ್ಕೆ ಪ್ರಶಿಕ್ಷಣ’ ಎಂಬ ಕೊನೆಯ ಚತುಷ್ಕದಲ್ಲಿ ದೇಶದ ಶೈಕ್ಷಣಿಕ ಇತಿಹಾಸವನ್ನು ಪೂರ್ಣವಾಗಿ ನಿರ್ಲಕ್ಷಿಸಿದ, ತಪ್ಪಾದ ಭಾಷಾ ಪರಿಪ್ರೇಕ್ಷ್ಯದ, ಭಾರತೀಯ ಜ್ಞಾನಮಾದರಿಗಳಿಗೆ ಮರಳುವ ‘ಹೊಸ ಶಿಕ್ಷಣ ನೀತಿ’ಯ ಪೊಳ್ಳುತನವನ್ನು ಬಯಲು ಮಾಡುತ್ತಾರೆ.
ನಾಲ್ಕು ಚತುಷ್ಕಗಳಲ್ಲಿ ಸಾಕಷ್ಟು ನಿರಾಶಾದಾಯಕವಾದ ಇಂದಿನ ಪರಿಸ್ಥಿತಿಯನ್ನು ಪ್ರಸ್ತುತಪಡಿಸಿದರೂ, ಪ್ರಜಾಸತ್ತೆಯ ಭವಿಷ್ಯದ ಕುರಿತು ಪ್ರೊ. ಜಿ.ಎನ್.ದೇವಿ ಅವರು ಈ ಆಶಾದಾಯಕ ಮಾತುಗಳನ್ನು ಹೇಳುತ್ತಾರೆ : “ನಿಸ್ಸಂಶಯವಾಗಿಯೂ ಸ್ವಾನುರಕ್ತ ರಾಷ್ಟ್ರೀಯತೆಯ ವಿಚಾರಗಳಿಗೆ, ಸ್ವಾನುಭೋಗಿ ಆರ್ಥಿಕ ಲಾಭಗಳ ಬಯಕೆಗೆ, ಸ್ವಸಂಪೂರಿತವಾಗುವ ಕ್ಷಿಪ್ರ ಚಲನೆಯ ಮಾಹಿತಿಗಾಗಿನ ಕಡುಮೋಹಕ್ಕೆ ದೊರಕುತ್ತಿರುವ ಮಹತ್ವ ದೀರ್ಘಕಾಲೀನವಾಗುವುದು ಅಸಂಭವ. ನಾವು ವಿಚಾರಗಳ ಚರಿತ್ರೆಯನ್ನು ನಂಬುವುದಾದರೆ, ಇಪ್ಪತ್ತೊಂದನೆಯ ಶತಮಾನವು ಮುಂಬರುವ ದಶಕಗಳಲ್ಲಿ ಮುಂದುವರಿಯುತ್ತಿದ್ದಂತೆ ನ್ಯಾಯ, ಸ್ವಾತಂತ್ರ್ಯ ಮತ್ತು ಜ್ಞಾನದ ಕಲ್ಪನೆಗಳು ಇನ್ನಷ್ಟು ವಿಸ್ತಾರವೂ ಆಳವೂ ಹೆಚ್ಚು ವಿಮೋಚಕವೂ ಆದ ಮನಸ್ಸುಗಳಾಗಿ ಹೊರಹೊಮ್ಮುವುದು ನಿಶ್ಚಿತ. ಅದು ವೈವಿಧ್ಯತೆ ಮತ್ತು ಪರಿಸರದ ಕುರಿತು ಆಳವಾದ ಗೌರವವು ತಳಹದಿಯಾಗುಳ್ಳ ನ್ಯಾಯದ ಹೆಚ್ಚು ಸೂಕ್ಷ್ಮವಾದ ಕಲ್ಪನೆಯ ಮೇಲೆ ನೆಲೆ ನಿಂತ ವಿಸ್ತೃತ ಪ್ರಜಾಪ್ರಭುತ್ವವಾಗಿರುತ್ತದೆ. ಮಾನವನ ಗತಕಾಲದ ಬಗ್ಗೆ ನಮಗಿರುವ ತಿಳಿವಳಿಕೆಯ ಬೆಳಕಿನಲ್ಲಿ ನಮ್ಮ ಕಾಲದ ಚಿಹ್ನೆಗಳನ್ನು ಓದುವುದು ಅಗತ್ಯ”
‘ಕೆರೆಕೋಣ ಮಾದರಿ’
ಕ್ರಿಯಾ ಮಾಧ್ಯಮದ ವಸಂತರಾಜ್ ಎನ್.ಕೆ. ಅವರು ಮಾತನಾಡಿ ಪ್ರಜಾಸತ್ತೆಗೆ ಇಂದು ಒದಗಿರುವ ಅಪಾಯಗಳನ್ನು ಎದುರಿಸಲು ಅಗತ್ಯವಾದ ಪ್ರಜಾಸತ್ತಾತ್ಮಕ ಸಂಸ್ಕೃತಿ ಕಟ್ಟಲು ಪ್ರಗತಿಪರ ಸಾಂಸ್ಕೃತಿಕ ಚಳುವಳಿ ಅಗತ್ಯ ಎಂದರು. ಇದನ್ನು ಕಟ್ಟಲು ವಿಠ್ಠಲ ಬಿಟ್ಟು ಹೋದ ಬಳುವಳಿಯೆಂದರೆ ವಿಶಿಷ್ಟವಾದ ‘ಕೆರೆಕೋಣ ಮಾದರಿ’. ಸ್ಥಳೀಯ ಸಮುದಾಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಅದನ್ನು ತಾಲೂಕು ಜಿಲ್ಲೆ ರಾಜ್ಯ ಮಟ್ಟಕ್ಕೆ ಕೆಳಗಿನಿಂದ ಮೇಲಕ್ಕೆ ವಿಸ್ತರಿಸುವ ವಿಧಾನ, ಸರಕಾರಿ, ಇತರ ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಮಾಜಿಕ-ರಾಜಕೀಯ ಚಳುವಳಿ-ಸಂಘಟನೆಗಳ ಜತೆ ಸಹಯೋಗದ ವಿಧಾನ ಇತ್ಯಾದಿ ‘ಕೆರೆಕೋಣ ಮಾದರಿ’ಯ ವಿಶಿಷ್ಟ ಗುಣಲಕ್ಷಣಗಳು. ನೂರು ‘ಕೆರೆಕೋಣ’ಗಳನ್ನು ಕಟ್ಟುವುದು ಮಾತ್ರ ವಿಠ್ಠಲನಿಗೆ ಸೂಕ್ತ ಶ್ರದ್ಧಾಂಜಲಿಯಾದೀತು ಎಂದು ಅವರು ಅಭಿಪ್ರಾಯಪಟ್ಟರು. ಡಾ. ಎಂ.ಜಿ.ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಶ್ರೀಪಾದ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಧ್ಯಾಹ್ನದ ನಂತರದ ಕಾರ್ಯಕ್ರಮದಲ್ಲಿ ವಿಠ್ಠಲ ಭಂಡಾರಿಯವರು ರಚಿಸಿದ ‘ಸ್ವಾತಂತ್ರ್ಯಾನೂ ಬೇಕು, ಭೂಮಿನೂ ಬೇಕು’, ಸಂಪಾದಿಸಿದ ‘ಮೂರು ಸುತ್ತು ಒಂದು ಗತ್ತು’, ಮಾಧವಿ ಭಂಡಾರಿಯವರು ರಚಿಸಿದ ‘ಪಿಸುದನಿ’ ಮತ್ತು ಡಾ. ಶ್ರೀಪಾದ ಭಟ್ ಬರೆದ ‘ನಟನೆಯ ಕೈಪಿಡಿ’ ಪುಸ್ತಕಗಳನ್ನು ಕಾರ್ಮಿಕ ಸಂಘಟನೆಯ ರಾಷ್ಟ್ರೀಯ ನಾಯಕರಾದ ವಿ.ಜೆ.ಕೆ.ನಾಯರ್ ಅವರು ಬಿಡುಗಡೆಗೊಳಿಸಿದರು. ನಂತರ ವಿಠ್ಠಲ ಸ್ಮರಣೆ ಕಾರ್ಯಕ್ರಮ ನಡೆಯಿತು. ವಿಠ್ಠಲ ಭಂಡಾರಿಯವರ ಒಡನಾಡಿಗಳಾಗಿದ್ದ ವಿಮಲಾ ಕೆ. ಎಸ್., ಕೆ. ಪ್ರಕಾಶ, ಮುನೀರ ಕಾಟಿಪಳ್ಳ, ಅವಿನಾಶ, ರಾಘವೇಂದ್ರ ಸಾಗರ ಮತ್ತು ಮೀನಾಕ್ಷಿ ಬಾಳಿಯವರು ಅವರ ಜತೆಗಿನ ತಮ್ಮ ಆಪ್ತ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಎಲ್ಲರ ಕಣ್ಣಂಚನ್ನು ತೇವವಾಗಿಸಿದರು. ಶ್ರೀಮತಿ ಸುಧಾ ಆಡುಕಳ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರೋಪ ಮಾತುಗಳನ್ನಾಡಿದ ಸಾಹಿತಿ ರಹಮತ್ ತರಿಕೆರೆಯವರು ಇರುವಾಗ ಸಾಮಾನ್ಯ ಹುಡುಗನಂತೆ ಕಾಣುತ್ತಿದ್ದ ವಿಠ್ಠಲ ಎಷ್ಟೊಂದು ಕೆಲಸಗಳನ್ನು ಮಾಡಿದ್ದರು ಮತ್ತು ಎಷ್ಟೊಂದು ಜನರ ಪ್ರೀತಿಯನ್ನು ಗಳಿಸಿದ್ದರೆಂಬುದನ್ನು ನೋಡಿದರೆ ಅಚ್ಛರಿಯಾಗುತ್ತದೆ. ಇಂಥದೊಂದು ಅರ್ಥಪೂರ್ಣವಾದ ಆರ್ದೃವಾದ ಕಾರ್ಯಕ್ರಮವನ್ನು ನಾನು ಹಿಂದೆಂದೂ ಕಂಡಿಲ್ಲ. ಬಹುಬೇಗ ಕಣ್ಮರೆಯಾದ ಅವರ ಕನಸುಗಳನ್ನು ಎಲ್ಲರೂ ನಮ್ಮ ಹೆಗಲ ಮೇಲೆ ಹೊತ್ತು ಸಾಗುವುದೇ ನಾವು ಅವರಿಗೆ ಸಲ್ಲಿಸಬೇಕಾದ ಗೌರವ ಎಂದರು. ಭಂಡಾರಿ ಕುಟುಂಬದ ಸದಸ್ಯರೆಲ್ಲರೂ ಅವರ ನೆನಪುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕದ ದೇವೇಂದ್ರ ಗೌಡ ಅವರು ವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿಠ್ಠಲನಿಗೆ ಪ್ರಿಯವಾಗಿದ್ದ ತಾಳಮದ್ದಲೆಯ ಪ್ರಕಾರದಲ್ಲಿ ‘ಕೃಷ್ಣಸಂಧಾನ’ವನ್ನು ಸಹಯಾನ ತಂಡವು ಪ್ರಸ್ತುತ ಪಡಿಸಿತು.