ಪ್ರಜಾಪ್ರಭುತ್ವ ಚುನಾವಣೆಗೆ ಸೀಮಿತವಾಗಿ, ಅದೂ ಅರ್ಥಹೀನವಾಗುತ್ತಿದೆಯೇ? ಭಾಗ -೨

– ಪ್ರೊ. ಎಂ.ಚಂದ್ರ ಪೂಜಾರಿ

.ಚುನಾವಣೆ ಪ್ರಜಾಪ್ರಭುತ್ವದ ಒಂದು ಅಂಗ ಮಾತ್ರ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ಆರಂಭ, ಬೆಳವಣಿಗೆ, ಅಂತ್ಯ ಎಲ್ಲವೂ ಚುನಾವಣೆಯೇ ಅಗಿದೆ. ಪ್ರಜಾಪ್ರಭುತ್ವ ಚುನಾವಣೆಗೆ ಸೀಮಿತವಾಗಿ ಹಲವು ದಶಕಗಳಾಗಿವೆ. ಅಂದರೆ ಪ್ರಜಾಪ್ರಭುತ್ವದ ಇತರ ಅಂಗಗಳಾದ ನ್ಯಾಯಾಂಗ, ಮಾಧ್ಯಮ, ಕಾರ್ಯಾಂಗಗಳು ಅರ್ಥ ಕಳೆದುಕೊಂಡು ದಶಕಗಳಾಗಿವೆ. ಇಂತಹ ಸಂದರ್ಭದಲ್ಲಿ ಸಮರ್ಪಕವಾಗಿ ನಡೆಯುವ ಚುನಾವಣೆಗಳು ಮಾತ್ರ ಪ್ರಜಾಪ್ರಭುತ್ವವನ್ನು ಭಾಗಶಃ ಜೀವಂತ ಇರಿಸಲು ಸಾಧ್ಯ. ಅಂದರೆ ಸಮಾಜದ ಎಲ್ಲ ವರ್ಗದ ಜನರಿಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾದರೆ ಮಾತ್ರ ಚುನಾವಣೆಗಳು ಸಮಪರ್ಕವಾಗಿ ನಡೆಯುತ್ತಿದೆ ಎನ್ನಬಹುದು. ಇಲ್ಲವಾದರೆ ಅಧಿಕಾರ ಕೆಲವರಲ್ಲೇ ಕ್ರೋಢೀಕರಣಗೊಂಡು ಅವರು ಪ್ರಜಾಪ್ರಭುತ್ವದ ಹೆಸರಲ್ಲಿ ತಮ್ಮ ಗುಂಪಿನ ಆಸಕ್ತಿಗಳನ್ನು ವೃದ್ಧಿಸಿಕೊಳ್ಳಬಹುದು. ದಿನಗೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಸಣ್ಣಪುಟ್ಟ ಕೃಷಿಕರು, ವ್ಯಾಪಾರಿಗಳು, ಉದ್ದಿಮೆದಾರರು ಇವರೇ ನಮ್ಮ ಸಮಾಜದ ಬಹುತೇಕರು. ಇವರೆಲ್ಲ ನಮ್ಮಲ್ಲಿ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲು ಅವಕಾಶ ಇದೆಯೇ? ಎನ್ನುವ ಪ್ರಶ್ನೆ ಸುತ್ತಾ ಈ ಲೇಖನದ ಚರ್ಚೆ ಇದೆ. ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಲೇಖನದ ಚರ್ಚೆಯನ್ನು ಬೆಳೆÀಸಲಾಗಿದೆ. ಈ ಲೇಖನ ಎರಡು ಭಾಗಗಳಲ್ಲಿದೆ. ಇದು ಭಾಗ-೨. ಭಾಗ-೧ ರಲ್ಲಿ ಈ ವಿಷಯದ ಪಕ್ಷಗಳ ತತ್ವ ಸಿದ್ಧಾಂತಗಳು, ಮತದಾರರ ಪಾತ್ರ, ಸಾಮಾಜಿಕ-ಆರ್ಥಿಕ-ರಾಜಕೀಯ ಮೆಜಾರಿಟಿ-ಮೈನಾರಿಟಿ – ಈ ಆಯಾಮಗಳ ಕುರಿತು ಚರ್ಚಿಸಿದ್ದರು.

ರಾಜಕೀಯ ಆಯ್ಕೆಗಳು : ರಾಜಕೀಯ ಪ್ರತಿನಿಧಿತ್ವದ ದೃಷ್ಟಿಯಿಂದ ಜನರ ಮುಂದೆ ಎರಡು ಮೂರು ಆಯ್ಕೆಗಳಿವೆ. ಒಂದು, ಬಲಾಢ್ಯರ ಆರ್ಥಿಕ ಹಿತಾಸಕ್ತಿಯನ್ನು ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿಪಾದಿಸುವ ಬಿಜೆಪಿ ಪಕ್ಷ. ಎರಡು, ಬಲಾಢ್ಯರ ಹಿತಾಸಕ್ತಿಯನ್ನು ಆದರೆ ಪ್ರಗತಿಪರ ಮೌಲ್ಯಗಳನ್ನು ಅರೆಬರೆಯಾಗಿ ಪ್ರತಿಪಾದಿಸುವ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು. ಮೂರು, ತಳಸ್ತರದ ಜನರ ಆರ್ಥಿಕ ಹಿತಾಸಕ್ತಿಯನ್ನು ಮತ್ತು ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುವ ಕಮ್ಯುನಿಸ್ಟ್ ಪಕ್ಷಗಳು. ಬಿಜೆಪಿ ಧರ್ಮದ ನೆಲೆಯಲ್ಲಿ ಮತಯಾಚನೆ ಮಾಡುತ್ತದೆ. ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಜಾತಿ ನೆಲೆಯಲ್ಲಿ ಮತಯಾಚನೆ ಮಾಡುತ್ತಿವೆ. ಕಮ್ಯುನಿಸ್ಟ್ ಪಕ್ಷಗಳು ಆರ್ಥಿಕ ನೆಲೆಯಲ್ಲಿ ಮತಯಾಚನೆ ಮಾಡುತ್ತಿವೆ. ಬಲಾಢ್ಯರ ಆರ್ಥಿಕ ಹಿತಾಸಕ್ತಿಯನ್ನು ಪ್ರತಿನಿಧಿಸುವ

ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಸ್ವಾಧೀನ ಹೆಚ್ಚಿನ ಸಂಪನ್ಮೂಲ ಇದೆ. ಸಂಪನ್ಮೂಲದ ಒಡೆತನ ಇಂದಿನ ಚುನಾವಣೆ ಗೆಲ್ಲಲು ಅತೀ ಅವಶ್ಯವೆಂದು ಈ ಹಿಂದೆ ನೋಡಿದ್ದೇವೆ. ಇದೇ ಸಂಪನ್ಮೂಲದ ಬಲದಿಂದ ಜಾತಿ, ಧರ್ಮಗಳ ಮೆಜಾರಿಟಿ ಮೈನಾರಿಟಿಗಳೇ ಮುಖ್ಯ ಎಂದು ಈ ಪಕ್ಷಗಳು ಜನರನ್ನು ನಂಬಿಸುತ್ತಿದ್ದಾರೆ. ಹೀಗೆ ಜಾತಿ, ಧರ್ಮಗಳ ಬಗ್ಗೆ ಮಾತಾಡುವ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಹೆಚ್ಚು ಜನಪ್ರಿಯವಾಗಿವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಈ ಪಕ್ಷಗಳು ಸಫಲವಾಗಿ. ಆರ್ಥಿಕ ಮೆಜಾರಿಟಿ ಮೈನಾರಿಟಿಗಳ ಬಗ್ಗೆ ಮಾತಾಡುವ ಕಮ್ಯುನಿಸ್ಟರು ಹಿಂದಕ್ಕೆ ಸರಿದಿದ್ದಾರೆ. ಅಂದರೆ ಎಲ್ಲ ಜಾತಿ, ಧರ್ಮಗಳಿಂದಲೂ ಪ್ರತಿನಿಧಿಗಳಿದ್ದಾರೆ. ಆದರೆ ಯಾವುದೇ ಜಾತಿ, ಧರ್ಮದಿಂದ ಸಣ್ಣ, ಅತೀ ಸಣ್ಣ ಕೃಷಿಕ ಅಥವಾ ವ್ಯಾಪಾರಿ ಅಥವಾ ಉದ್ದಿಮೆದಾರರು ಅಥವಾ ಕಾರ್ಮಿಕರು, ದಿನಗೂಲಿ ನೌಕರರು ಪ್ರತಿನಿಧಿಗಳಾಗುವುದಿಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಸಫಲತೆಗೆ ಮತ್ತು ಕಮ್ಯುನಿಸ್ಟ್ರು ವಿಫಲತೆಗೆ ಕೇವಲ ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಮೇಲೆ ಈ ಪಕ್ಷಗಳು ಫೋಕಸ್ ಮಾಡುವುದು ಮಾತ್ರ ಕಾರಣವಲ್ಲ. ಬಹುಮುಖ್ಯ ಇತರ ಕಾರಣಗಳಿವೆ.

ಒಂದು, ಪ್ರಜಾಪ್ರಭುತ್ವವನ್ನು ಚುನಾವಣೆಗೆ ಸೀಮಿತಗೊಳಿಸಿರುವುದು, ಎರಡು, ಆ ಚುನಾವಣೆಗಳನ್ನೂ ಒಂದು ಸಣ್ಣ ರೂಲಿಂಗ್ ಕ್ಲಾಸ್ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವುದು, ಮೂರು, ಪ್ರಜಾಪ್ರಭುತ್ವದ ಇತರ ಅಂಗಗಳು – ಮುಖ್ಯವಾಗಿ ಮಾಧ್ಯಮ ಮತ್ತು ನ್ಯಾಯಾಂಗಗಳು ತಮ್ಮ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿರುವುದು ಮುಖ್ಯ ಕಾರಣಗಳು. ಮೇಲಿನ ಪುಟಗಳಲ್ಲಿ ಪ್ರಜಾಪ್ರಭುತ್ವ ಚುನಾವಣೆಗೆ ಸೀಮಿತಗೊಂಡಿರುವುದು ಮತ್ತು ಅದು ಕೂಡ ಸಂಪೂರ್ಣವಾಗಿ ದುಡ್ಡಿನ ಬಲದ ಮೇಲೆ ನಿಂತಿರುವುದನ್ನು ನೋಡಿದ್ದೇವೆ. ಮಾಧ್ಯಮ ಮತ್ತು ನ್ಯಾಯಾಂಗದ ಸೋಲು ಕೂಡ ಪ್ರಜಾಪ್ರಭುತ್ವದ ಸೋಲಿಗೆ ಕಾರಣವಾಗಿರುವುದರ ಕಿರುಚಿತ್ರಣವನ್ನ ಮುಂದಿನ ಭಾಗದಲ್ಲಿ ನೋಡಬಹುದು.

ಮಾಧ್ಯಮ ಇಂದು ಉದ್ದಿಮೆಗಳ ಸ್ವಾಧೀನ ಇದೆ. ಮಾಧ್ಯಮ ಉದ್ದಿಮೆ ನಡೆಸುವವರು ಕೂಡ ಇತರ ಉದ್ದಿಮೆಗಳ ಶೇರುಗಳನ್ನು ಹೊಂದಿದ್ದಾರೆ ಅಥವಾ ಇತರ ಉದ್ದಿಮೆಗಳು ತಮ್ಮ ಶೇರುಗಳನ್ನು ಮಾಧ್ಯಮ ನಡೆಸುವ ಉದ್ದಿಮೆಗಳಿಗೆ ನೀಡುತ್ತವೆ. ಈ ಕೊಡುಕೊಳ್ಳುವ ವ್ಯವಹಾರದ ಉದ್ದೇಶ ಮಾಧ್ಯಮ ನಡೆಸುವ ಉದ್ದಿಮೆ ತಾನು ಶೇರುದಾರರಾಗಿರುವ ಉದ್ದಿಮೆ ಬಗ್ಗೆ ಸಕರಾತ್ಮಕ ಚಿತ್ರಣವನ್ನೇ ಬಿಂಬಿಸುತ್ತಿರಬೇಕೆನ್ನುವುದು. ಉದ್ದಿಮೆಗಳು ಮಾಧ್ಯಮ ನಡೆಸುವುದು ಅಥವಾ ಮಾಧ್ಯಮ ನಡೆಸುವ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇತರ ಉದ್ದಿಮೆಗಳ ಶೇರುಗಳನ್ನು ಹೊಂದುವುದು ಒಂದೇ ಪರಿಣಾಮವನ್ನು ಸೃಷ್ಟಿಸುತ್ತದೆ. ಅದೇನೆಂದರೆ ಮಾಧ್ಯಮ ನಡೆಸುವವರು ಸರಕಾರವನ್ನು ಎದುರು ಹಾಕಿಕೊಳ್ಳುವ ಸ್ಥಿತಿ ಇಲ್ಲ. ತಮ್ಮ ಮಾಧ್ಯಮ ಮತ್ತು ಮಾಧ್ಯಮೇತರ ಉದ್ದಿಮೆಗಳ ರಕ್ಷಣೆಗೆ ಅವರಿಗೆ ಸರಕಾರದ ಕೃಪೆ ಅಗತ್ಯ ಇದೆ. ಸರಕಾರವನ್ನು ಎದುರು ಹಾಕಿಕೊಂಡರೆ ಅಥವಾ ಸರಕಾರದ ನೀತಿಗಳನ್ನು ಕಟುವಾಗಿ ಟೀಕೆ ಮಾಡಿದರೆ ತಮ್ಮ ೫೦ ಕೋಟಿ ವಿನಿಯೋಜನೆಯ ಮಾಧ್ಯಮದಿಂದಾಗಿ ಅವರು ೫೦೦ ಕೋಟಿ ಮಾಧ್ಯಮೇತರ ವಿನಿಯೋಜನೆಯನ್ನು ಬಲಿಕೊಡಬೇಕಾಗುತ್ತದೆ.

ಇನ್ನು ಚುನಾವಣೆಯ ದೃಷ್ಟಿಯಿಂದ ಮಾಧ್ಯಮದ ಪಾತ್ರವನ್ನು ಗಮನಿಸಿದರೆ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಜನರಿಗೆ ಪರಿಚಯಿಸುವ ಜವಾಬ್ದಾರಿಯನ್ನು ಮಾಧ್ಯಮ ಹೊಂದಿದೆ. ವಿವಿಧ ಪಕ್ಷಗಳು ಮತ್ತು ಅವುಗಳ ತತ್ತ÷್ವ ಸಿದ್ಧಾಂತಗಳು, ಪಕ್ಷಗಳ ಆರ್ಥಿಕ ಸಾಮಾಜಿಕ ನಿಲುವುಗಳು, ಅಧಿಕಾರಕ್ಕೆ ಬಂದರೆ ಅವು ತರಬಹುದಾದ ನೀತಿಗಳು ಇತ್ಯಾದಿಗಳ ಬಗ್ಗೆ ಮಾಧ್ಯಮಗಳು ಚರ್ಚಿಸಬೇಕು. ಅಷ್ಟು ಮಾತ್ರವಲ್ಲ ಸ್ಪರ್ಧಿಸುವ ಅಭ್ಯರ್ಥಿಗಳು ಅವರ ಶಿಕ್ಷಣ, ಸಮಾಜ ಸೇವೆ ಮಾಡಿದ ಅನುಭವ, ಆಸ್ತಿಪಾಸ್ತಿ, ಕ್ರಿಮಿನಲ್ ಹಿನ್ನೆಲೆ ಇತ್ಯಾದಿಗಳ ಬಗ್ಗೆ ಮಾಧ್ಯಮಗಳು ಚರ್ಚಿಸಬೇಕು. ಇವೆಲ್ಲವನ್ನು ಮಾಧ್ಯಮ ಚರ್ಚಿಸಿದರೆ ಕಡಿಮೆ ಶಿಕ್ಷಣ, ಕಡಿಮೆ ಸಮಾಜ ಸೇವೆ, ಅತೀ ಹೆಚ್ಚು ಕೋಟ್ಯಧೀಶರು, ಕ್ರಿಮಿನಲ್ ಹಿನ್ನೆಲೆವುಳ್ಳ ಅಭ್ಯರ್ಥಿಗಳಿರುವ ಪಕ್ಷ ಮತ್ತು ಹೆಚ್ಚು ಶಿಕ್ಷಣ, ಹೆಚ್ಚು ಸಮಾಜ ಸೇವೆ, ತಳಸ್ತರದ ಹಿನ್ನೆಲೆಯಿಂದ ಬಂದ ಅಭ್ಯರ್ಥಿಗಳಿರುವ ಪಕ್ಷ ಯಾವುದೆನ್ನುವ ಚಿತ್ರಣ ಜನರಿಗೆ ಲಭ್ಯವಾಗುತ್ತದೆ. ತಮ್ಮ ಆಸಕ್ತಿಯನ್ನು ರಕ್ಷಿಸುವ ಪಕ್ಷ ಮತ್ತು ಅಭ್ಯರ್ಥಿಯನ್ನು ಗುರುತಿಸಲು ಈ ಮಾಹಿತಿ ಸಹಕರಿಸುತ್ತದೆ. ಆದರೆ ಇವು ಯಾವುವು ಮಾಧ್ಯಮಗಳಲ್ಲಿ ಚರ್ಚಿಸಲ್ಪಡುವುದಿಲ್ಲ. ಅತೀ ಹೆಚ್ಚು ಚುನಾವಣ ಫಂಡ್ ಇರುವ ಪಕ್ಷ ಮತ್ತು ಅಭ್ಯರ್ಥಿ ಮಾಧ್ಯಮದ ಬಹುಭಾಗವನ್ನು ಅಕ್ರಮಿಸಿಕೊಳ್ಳುತ್ತಾರೆ. ದಿನನಿತ್ಯ ಮಾಧ್ಯಮದಲ್ಲಿ ಬರುವುದರಿಂದ ಇವರೇ ಜನಪ್ರಿಯ ನಾಯಕರೆನ್ನುವ ತೀರ್ಮಾನಕ್ಕೆ ಬರುತ್ತಾರೆ. ಇಂತಹ ಸ್ಥಿತಿ ಯೋಗ್ಯರನ್ನು ಮೂಲೆಗುಂಪು ಮಾಡಿ ಆಯೋಗ್ಯರನ್ನು ಚುನಾಯಿಸುವ ಸ್ಥಿತಿ ನಿರ್ಮಾಣ ಮಾಡುತ್ತದೆ.

ಚುನಾವಣೆಯಲ್ಲಿ ನಡೆಯುವ ಹಣದ ಪ್ರಭಾವವನ್ನು ಕುಗ್ಗಿಸುವ ಸಾಮರ್ಥ್ಯ ನ್ಯಾಯಾಂಗಕ್ಕೆ ಇದೆ. ಆದರೆ ನ್ಯಾಯಾಂಗ ಈ ದಿಶೆಯಲ್ಲಿ ಸಲಹೆ ಕೊಡುವುದು ಬಿಟ್ಟರೆ ಹಣದ ಪ್ರಭಾವವನ್ನು ನಿಷೇಧಿಸುವು ದೃಢ ಆದೇಶಗಳನ್ನು ನೀಡಿಲ್ಲ. ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಕಡಿಮೆ ಮಾಡಲು ಮಾತ್ರ ನ್ಯಾಯಾಂಗ ವಿಫಲಗೊಂಡಿರುವುದಲ್ಲ; ಸಾಮಾನ್ಯರಿಗೆ ನ್ಯಾಯ ನೀಡಲು ನ್ಯಾಯಾಂಗ ವಿಫಲಗೊಂಡಿದೆ. ಜೈಲಲ್ಲಿರುವ ಖೈದಿಗಳಲ್ಲಿ ಮುಕ್ಕಾಲು ಭಾಗ ಖೈದಿಗಳು ವಿಚಾರಣಪೂರ್ವ ಖೈದಿಗಳು. ಅಂದರೆ ಅವರ ಅಪರಾಧ ಏನೆಂದು ತೀರ್ಮಾನ ಆಗುವ ಮುನ್ನವೇ ಅವರು ಆರೇಳು ವರ್ಷ ಜೈಲಲ್ಲಿ ಕೊಳೆಯುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ವಿಚಾರಣಪೂರ್ವ ಖೈದಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ. ಅಂದರೆ ಅವರಲ್ಲಿ ಬಹುತೇಕರು ದಲಿತ, ಬುಡಕಟ್ಟು, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಹಿನ್ನೆಲೆಯಿಂದ ಬಂದವರು. ಜೊತೆಗೆ ಅವರಿಗೆ ವಕೀಲರನ್ನು ನೇಮಕ ಮಾಡಲು, ಕೋರ್ಟ್ ಫೀ ಕಟ್ಟಲು, ಜಾಮೀನು ನೀಡಲು ಶಕ್ತಿ ಇಲ್ಲದ ಕಾರಣ ವರ್ಷಾನುಗಟ್ಟಲೆ ಜೈಲಲ್ಲಿ ಕೊಳೆಯುತ್ತಿದ್ದಾರೆ

ಶತಮಾನಗಳಿಂದ ಶೋಷಣೆ ಅನುಭವಿಸುವವರನ್ನು ಸಣ್ಣಪುಟ್ಟ ಅಪರಾಧಗಳಿಗೆ ವರ್ಷಾನುಗಟ್ಟಲೆ ಶಿಕ್ಷಿಸುವ ಮೂಲಕ ಸರಕಾರ ಏನು ಸಂದೇಶ ರವಾನಿಸುತ್ತಿದೆ? ವರ್ತಮಾನದಲ್ಲಿರುವ ಏಣಿಶ್ರೇಣಿಗಳನ್ನು ಮತ್ತು ಅವು ಸೃಷ್ಟಿಸುವ ಆರ್ಥಿಕ, ರಾಜಕೀಯ ವ್ಯಸ್ಥೆಯನ್ನು ಒಪ್ಪಿಕೊಂಡಿ ಬದುಕುವುದು ಬಿಟ್ಟರೆ ನಿಮಗೆ ಬೇರೆ ದಾರಿ ಇಲ್ಲ ಎನ್ನುವ ಸಂದೇಶವನ್ನು ರವಾನಿಸುತ್ತದೆ. ಇವರು ವ್ಯವಸ್ಥೆಯನ್ನು ಪ್ರಶ್ನಿಸುವುದು ಅಥವಾ ಬದಲೀ ವ್ಯವಸ್ಥೆ ಬಗ್ಗೆ ಆಲೋಚಿಸುವುದು ಹೇಗೆ? ಬದಲೀ ವ್ಯವಸ್ಥೆ ಬಗ್ಗೆ ಆಲೋಚಿಸಲು ಸಾಧ್ಯವಾಗದಿದ್ದರೆ ಇವರ ಆಸಕ್ತಿಯನ್ನು ಪ್ರತಿನಿಧಿಸುವ ಪಕ್ಷದ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇವೆಲ್ಲವೂ ಒಂದು ಕಡೆಯಲ್ಲಿ ಬಲಾಢ್ಯರ ಹಿತಾಸಕ್ತಿಯನ್ನು ರಕ್ಷಿಸುವ ಪಕ್ಷಗಳಿಗೆ ಅನುಕೂಲವಾದರೆ ಮತ್ತೊಂಡೆಯಲ್ಲಿ ಬಲಹೀನರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಪಕ್ಷಗಳಿಗೆ ಅನನುಕೂಲವಾಗುತ್ತವೆ.

ಸಮರೋಪ

ಲೇಖನದಲ್ಲಿ ನಮ್ಮ ಪ್ರಜಾಪ್ರಭುತ್ವ ಚುನಾವಣೆಗೆ ಸಿಮೀತವಾಗಿರುವುದು ಮತ್ತು ಈ ಚುನಾವಣೆ ಕೂಡ ದುಡ್ಡಿನ ಬಲದಿಂದಲೇ ನಡೆಯುವುದರ ಕಿರು ಚಿತ್ರಣ ನೀಡಿದ್ದೇನೆ. ದುಡ್ಡಿನ ಬಲದಿಂದಲೇ ನಡೆಯುವ ಚುನಾವಣೆ ಪ್ರಜಾಪ್ರಭುತ್ವನ್ನು ಮಾತ್ರ ಕುಂಠಿಸಿರುವುದಲ್ಲ, ಜನರ ಮುಂದಿರುವ ರಾಜಕೀಯ ಆಯ್ಕೆಯನ್ನು ಕುಂಠಿಸಿದೆ. ಸಾಮಾಜಿಕ ಮೇಜಾರಿಟಿ ಮತ್ತು ಮೈನಾರಿಟಿಗಳನ್ನು ಮಾತ್ರ ಮುಂದಿಕ್ಕಿ ಆರ್ಥಿಕ ಮೆಜಾರಿಟಿ ಮೈನಾರಿಟಿಗಳು ಮುಂಚೂಣಿಗೆ ಬರದಂತೆ ನೋಡಿಕೊಂಡಿದೆ. ಇಂತಹ ಸ್ಥಿತಿಗೆ ದುಡ್ಡಿನ ಪ್ರಭಾವದ ಜೊತೆಗೆ ಮಾಧ್ಯಮ ಹಾಗು ನ್ಯಾಯಾಂಗಗಳು ಅವುಗಳ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವುದು ಕೂಡ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳು ಒಂದು ಸಣ್ಣ ರೂಲಿಂಗ್ ಕ್ಲಾಸನ್ನು ರೂಪಿಸುತ್ತಿವೆ. ಸಾಮಾಜಿಕ ಮೆಜಾರಿಟಿಗೆ ಮಮತ್ವ ನೀಡುವ ಎಲ್ಲ ಲಿಬರಲ್ ಪಕ್ಷಗಳಲ್ಲೂ ಇದೇ ರೂಲಿಂಗ್ ಕ್ಲಾಸ್ ಕಾರುಬಾರು ಮಾಡುತ್ತಿದೆ. ಇದೇ ಕಾರಣದಿಂದ ಎಲ್ಲ ಲಿಬರಲ್ ಪಕ್ಷಗಳ ಆರ್ಥಿಕ ನೀತಿಗಳು ಹೆಚ್ಚು ಕಡಿಮೆ ಒಂದೇ ಇದೆ.

ಅನುಕೂಲಸ್ಥರಿಂದ ಹೆಚ್ಚು ತೆರಿಗೆ ಸಂಗ್ರಹಿಸುವ ಬದಲು ಅನನುಕೂಲಸ್ಥರಿಂದ ಹೆಚ್ಚು ತೆರಿಗೆ ಸಂಗ್ರಹಿಸುವುದು, ಬಜೆಟ್ ಕೊರತೆಯನ್ನು ಸರಕಾರ ಸಾಲ ಮಾಡಿ ತುಂಬಿಸುವುದು, ಈ ಸಾಲವನ್ನು ಸರಕಾರಿ ಬಾಂಡ್ ಮೂಲಕ ಇದೇ ಅನುಕೂಲಸ್ಥರಿಂದ ಹೆಚ್ಚು ಬಡ್ಡಿ ನೀಡಿ ಪಡೆಯುವುದು, ಭೂಮಿ, ಪ್ರಾಕೃತಿಕ ಸಂಪನ್ಮೂಲಗಳನ್ನು ಅತ್ಯಂತ ಕಡಿಮೆ ಬೆಲೆಗೆ ಅನುಕೂಲಸ್ಥರಿಗೆ ಮಾರಾಟ ಮಾಡುವುದು, ಕಾರ್ಮಿಕ ಕಾಯಿದೆಯನ್ನು ಸಡಿಲಗೊಳಿಸುವುದು, ಉದ್ದಿಮೆಗಳಿಗೆ ಕಡಿಮೆ ಬಡ್ಡಿಗೆ ಸರಕಾರಿ ಬ್ಯಾಂಕ್‌ಗಳ ಸಾಲ ನೀಡುವುದು, ಅವರು ಸಾಲ ಕಟ್ಟದಿದ್ದರೆ ಸಾಲ ಮನ್ನಾ ಮಾಡುವುದು, ಶಿಕ್ಷಣ, ಆರೋಗ್ಯ ಇತ್ಯಾದಿ ಮೂಲ ಸೌಕರ್ಯಗಳ ಮೇಲೆ ಸರಕಾರ ವಿನಿಯೋಜನೆ ಕಡಿಮೆ ಮಾಡುವುದು, ಇವೇ ಮೂಲಕಸೌಕರ್ಯಗಳನ್ನು ನೀಡುವ ಜವಾಬ್ದಾರಿಯನ್ನು ಇದೇ ಅನುಕೂಲಸ್ಥರ ಸ್ವಾಧೀನ ನೀಡುವುದು, ಅವರು ಇವೇ ಮೂಲಸೌಕರ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಂಪತ್ತು ಸಂಗ್ರಹಿಸುವುದು ಇತ್ಯಾದಿ ಆರ್ಥಿಕ ನೀತಿಗಳ ಮೂಲಕ ಸಂಪನ್ಮೂಲ ಒಂದು ಸಣ್ಣ ವರ್ಗದಲ್ಲಿ ಸಂಪತ್ತು ಕ್ರೋಢೀಕರಣಗಳ್ಳುವ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತಿವೆ. ಇಂತಹ ನೀತಿಗಳಿಂದ ಸಂಪನ್ಮೂಲ ಕೆಲವರಲ್ಲೇ ಕ್ರೋಢೀಕರಣಗೊಳ್ಳುತ್ತದೆ. ಬಹುತೇಕರ ಬದುಕು ದುಸ್ತರವಾಗುತ್ತದೆ. ಬಹುತೇಕರ ಆರ್ಥಿಕ ಸಂಕಷ್ಟಗಳಿಗೆ ಮತ್ತೊಂದು ಜಾತಿ, ಧರ್ಮವೇ ಕಾರಣವೆಂದು ಒಪ್ಪಿಸುವುದು ಜಾತಿ, ಧರ್ಮಗಳೇ ಕಾರುಬಾರು ಮಾಡುವ ರಾಜಕೀಯ ಪರಿಸರದಲ್ಲಿ ಸುಲಭವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *